ಕಾಂಗ್ರೆಸ್ ಮುಖಂಡಗೆ ರಿಲಯನ್ಸ್ ನಿಂದ 1 ಸಾವಿರ ಕೋಟಿ ಮಾನನಷ್ಟ ನೋಟಿಸ್
ಮುಂಬೈ, ಏಪ್ರಿಲ್ 4: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ನಿಂದ ಬುಧವಾರ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿದ್ದಾರೆ. ಅದು ಎಷ್ಟು ಮೊತ್ತಕ್ಕೆ ಗೊತ್ತೆ? ಬರೋಬ್ಬರಿ 1 ಸಾವಿರ ಕೋಟಿ ರುಪಾಯಿಗೆ. ಕಂಪೆನಿ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ನೋಟಿಸ್ ಕಳುಹಿಸಲಾಗಿದೆ.
ಅನಿಲ್ ನೆರವಿಗೆ ಮುಖೇಶ್ ಅಂಬಾನಿ, ದೊಡ್ಡ ವ್ಯವಹಾರದ 10 ಅಂಶಗಳು
ಇದರ ಜತೆಗೆ ಕಂಪೆನಿಯು ಸಂಜಯ್ ವಿರುದ್ಧ ನಿಂದನೆ ಅರ್ಜಿಯನ್ನು ಸಹ ಬಾಂಬೆ ಹೈ ಕೋರ್ಟ್ ನಲ್ಲಿ ದಾಖಲಿಸಲಿದೆ. ಸಾಲದ ಸುಳಿಯಲ್ಲಿರುವ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ನ ಅದಾನಿ ಟ್ರಾನ್ಸ್ ಮಿಷನ್ ಲಿಮಿಟೆಡ್ ಟೇಕ್ ಓವರ್ ಮಾಡುತ್ತಿರುವುದು ಪ್ರಧಾನಮಂತ್ರಿ ಕಾರ್ಯಾಲಯದ ಸೂಚನೆ ಮೇಲೆ. ಅನಿಲ್ ಅಂಬಾನಿಗೆ ಸಹಾಯ ಮಾಡಿಕೊಡುವಂಥ ಡೀಲ್ ಇದು ಎಂದು ಸಂಜಯ್ ಮಂಗಳವಾರ ಆರೋಪಿಸಿದ್ದರು.
"ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಹಾಗೂ ಅದಾನಿ ಮಧ್ಯದ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಹಾಗೂ ಆಧಾರರಹಿತ ಮತ್ತು ಮಾನನಷ್ಟ ಆಗುವಂಥ ಹೇಳಿಕೆಗಳನ್ನು ನಿರುಪಮ್ ನೀಡಿದ್ದಾರೆ. ರಫೇಲ್ ವಿಮಾನ ಖರೀದಿ ವ್ಯವಹಾರದಲ್ಲು ಅಂಥದ್ದೇ ಹೇಳಿಕೆ ನೀಡಿದ್ದಾರೆ" ಎಂದು ಕಂಪೆನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಂಜಯ್ ನಿರುಪಮ್ ಮಾಡಿದ ಆರೋಪಗಳನ್ನು ನೋಟಿಸ್ ಪಡೆದ ಎಪ್ಪತ್ತೆರಡು ಗಂಟೆಯೊಳಗೆ ವಾಪಸ್ ಪಡೆಯಬೇಕು. ಮತ್ತು ಕ್ಷಮಾಪಣೆ ಯಾಚಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.