ಮುಂಬೈನಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದ 10 ಕೋಟಿ ದಂಡ ಸಂಗ್ರಹ!
ಮುಂಬೈ, ನವೆಂಬರ್.29: ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸುವುದ ಕಡ್ಡಾಯ. ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುವುದಕ್ಕೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಸಂಗ್ರಹಿಸಿದ ದಂಡದ ಮೊತ್ತವೇ ಸಾಕ್ಷಿ.
ಮಹಾರಾಷ್ಟ್ರದ ಮಹಾನಗರಿ ಮುಂಬೈನಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದಲೇ ಸಂಗ್ರಹಿಸಿದ ದಂಡದ ಮೊತ್ತ 10 ಕೋಟಿ ರೂಪಾಯಿ ದಾಟಿದೆ. ಸಾರ್ವಜನಿಕ ಪ್ರದೇಶಗಳಲ್ಲಿ 4.85 ಲಕ್ಷ ಜನರು ಮಾಸ್ಕ್ ಧರಿಸದ ಕಾರಣಕ್ಕೆ ತಲಾ 200 ರೂಪಾಯಿ ದಂಡವನ್ನು ವಿಧಿಸಲಾಗಿತ್ತು. ಈವರೆಗೂ 10 ಕೋಟಿ 70 ಸಾವಿರ ಹಣವನ್ನು ಸಂಗ್ರಹಿಸಲಾಗಿದೆ.
ಮಾಸ್ಕ್ ಧರಿಸದಿದ್ದರೆ ಕೊವಿಡ್-19 ರೋಗಿಗಳ ಸೇವೆ ಮಾಡಬೇಕು!
ಕಳೆದ ಏಪ್ರಿಲ್ ತಿಂಗಳಿನಿಂದ ಮಾಸ್ಕ್ ಧರಿಸದ ವ್ಯಕ್ತಿಗಳಿಂದ ದಂಡವನ್ನು ವಸೂಲಿ ಮಾಡಲಾಗುತ್ತಿದೆ. ಹಬ್ಬ ಮತ್ತು ಆಚರಣೆ ದಿನಗಳಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕೊವಿಡ್-19 ನಿಯಮ ಉಲ್ಲಂಘಿಸುವ ಜನರ ಮೇಲೆ ನಿಗಾ ವಹಿಸುವುದಕ್ಕಾಗಿಯೇ ವಿಶೇಷ ತಂಡವನ್ನು ರಚಿಸಲಾಗುತ್ತಿತ್ತು.
ದಂಡ ನೀಡಲು ಒಪ್ಪದಿದ್ದರೆ ಸಮುದಾಯದ ಸೇವೆ:
ಕೊರೊನಾವೈರಸ್ ಹರಡುವಿಕೆ ನಡುವೆ ನಿಯಮ ಉಲ್ಲಂಘಿಸಿದ್ದೂ ಅಲ್ಲದೇ ದಂಡ ಪಾವತಿಸಲು ಒಪ್ಪದಿದ್ದರೆ ಅಂಥವರನ್ನು ಸಮುದಾಯದ ಸೇವೆ ಮಾಡುವಂತೆ ಶಿಕ್ಷಿಸಲಾಗುತ್ತಿತ್ತು. ಏಕೆಂದರೆ ಕೊವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಾಗಿವೆ. ಮಹಾಮಾರಿಯಿಂದ ರಕ್ಷಿಸಿಕೊಳ್ಳುವುದಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಬಳಸುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕೂಡಾ ಸಲಹೆ ನೀಡಿದ್ದಾರೆ.
ಪ್ರತಿನಿತ್ಯ ಮಾಸ್ಕ್ ಇಲ್ಲದೇ 15000 ಜನರ ಓಡಾಟ:
ಮುಂಬೈ ಮಹಾನಗರದಲ್ಲಿ ಪ್ರತಿನಿತ್ಯ ಮಾಸ್ಕ್ ಇಲ್ಲದೇ 15000ಕ್ಕೂ ಹೆಚ್ಚು ಜನರು ಸಂಚರಿಸುತ್ತಾರೆ. ಮುಂದಿನ ಮೂರ್ನಾಲ್ಕು ವಾರಗಳಲ್ಲಿ ಮಾಸ್ಕ್ ಧರಿಸದೇ ಕಾನೂನು ಉಲ್ಲಂಘಿಸುವ 10 ಲಕ್ಷಕ್ಕೂ ಹೆಚ್ಚು ಜನರಿಂದ ದಂಡ ವಸೂಲಿ ಮತ್ತು ಶಿಸ್ತುಕ್ರಮ ತೆಗೆದುಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ಬಾಂಬೆ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಹಾಲ್ ತಿಳಿಸಿದ್ದಾರೆ. ಪ್ರತಿನಿತ್ಯ ಮಾಸ್ಕ್ ಇಲ್ಲದೇ ಓಡಾಡುವ ಜನರಿಂದ 200 ರೂಪಾಯಿ, 500 ರೂಪಾಯಿ ದಂಡ ವಸೂಲಿ ಮಾಡಲಾಗುತ್ತಿದೆ. ಆದರೆ ದಂಡ ವಸೂಲಿ ನಮ್ಮ ಉದ್ದೇಶವಲ್ಲ. ಕೊವಿಡ್-19 ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಬೇಕಿದೆ ಎಂದು ಹೇಳಿದ್ದಾರೆ.