ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ವೇದಿಕೆಯಲ್ಲೇ ಕುಸಿದು ಇಹಲೋಕ ತ್ಯಜಿಸಿದ ಕಲಾವಿದ

ಬುಧವಾರ ರಾತ್ರಿ ಕಟೀಲು ಸಮೀಪದ ಎಕ್ಕಾರಿನಲ್ಲಿ ನಡೆಯುತ್ತಿದ್ದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನದ ಸಂದರ್ಭದಲ್ಲಿ ಹಿರಿಯ ಕಲಾವಿದ ಗಂಗಯ್ಯ ಶೆಟ್ಟರು ವೇದಿಕೆಯಲ್ಲೇ ಕುಸಿದು ಬಿದ್ದು ನಿಧನರಾದರು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು: ಕಟೀಲು ಮೇಳದ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವ ವೇಳೆಯಲ್ಲೇ ವೇದಿಕೆಯಲ್ಲೇ ಕುಸಿದು ಇಹಲೋಕ ತ್ಯಜಿಸಿದ್ದಾರೆ.

ಬುಧವಾರ ರಾತ್ರಿ ಕಟೀಲು ಸಮೀಪದ ಎಕ್ಕಾರಿನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನವಿತ್ತು . ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರದಲ್ಲಿದ್ದರು.

ಮುಂಜಾನೆ ದುಂಭಿಯನ್ನು ಕೊಲ್ಲಲು ಬಂಡೆಯನ್ನು ಕಡಿಯುವ ಸನ್ನಿವೇಶ ಬಂದಾಗ ಶೆಟ್ಟರು ರಂಗಸ್ಥಳದಲ್ಲೇ ಕುಸಿದು ಬಿದ್ದರು. ಕೂಡಲೇ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.[ಆತ ಆಫ್ರಿಕಾದಲ್ಲಿ ಪೈಲಟ್, ದಕ್ಷಿಣ ಕನ್ನಡದಲ್ಲಿ ದೈವಾರಾಧನೆ ಪಾತ್ರಿ]

Yakshagana artist Gangaiah Shetty dies during his performance

ಅಲ್ಲಿನ ವೈದ್ಯರ ಸಲಹೆಯಂತೆ, ಡಾ.ಪದ್ಮನಾಭ ಕಾಮತರನ್ನು ಸಂಪರ್ಕಿಸಿ , ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿಯಲ್ಲೇ ಮೃತಪಟ್ಟರೆಂದು ಡಾ. ಪದ್ಮನಾಭ ಕಾಮತರು ತಿಳಿಸಿದ್ದಾರೆ. ಸುಮಾರು 47 ವರ್ಷಗಳ ಕಾಲ ಕಟೀಲು ಮೇಳದಲ್ಲೇ ಕಲಾವಿದರಾಗಿದ್ದ ಗಂಗಯ್ಯ ಶೆಟ್ಟರು ಮಹಿಷಾಸುರ ಪಾತ್ರದಲ್ಲಿ ಅಪಾರ ಹೆಸರು ಗಳಿಸಿದ್ದರು. [ವೇಷ ಕಟ್ಟಿ ಕುಣಿಯಲಿದ್ದಾರೆ ಮಂಗಳೂರು ಸುದ್ದಿಮನೆ ಶೂರರು]

1954 ರಲ್ಲಿ ಅಮ್ಮು ಶೆಟ್ಟಿ - ಕಮಲಾ ಶೆಟ್ಟಿ ದಂಪತಿಗಳ ಸುಪುತ್ರರಾಗಿ ಗೇರುಕಟ್ಟೆಯಲ್ಲಿ ಜನಿಸಿದ ಗಂಗಯ್ಯ ಶೆಟ್ಟರು, ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಪಡ್ರೆ ಚಂದುರವರಲ್ಲಿ ಯಕ್ಷಗಾನದ ನಾಟ್ಯ ಕಲಿತರು. 1970 ರಲ್ಲಿ ತಮ್ಮ 16 ನೇ ವಯಸ್ಸಲ್ಲಿ ಯಕ್ಷರಂಗ ಪ್ರವೇಶಿಸಿದರು.

ಕಟೀಲು ಮೇಳದಲ್ಲೇ ವೃತ್ತಿ ಜೀವನ ಪ್ರಾರಂಭಿಸಿದ ಶೆಟ್ಟರು ಕಟೀಲು ಮೇಳದಲ್ಲಿದ್ದ ಸುಪ್ರಸಿದ್ಧ ಬಣ್ಣದ ವೇಷಧಾರಿ ಕುಟ್ಯಪ್ಪುರವರ ಒಡನಾಟದಲ್ಲಿ ಬಣ್ಣದ ವೇಷದತ್ತ ಹೊರಳಿದರು.

ಮಹಿಷಾಸುರ ಪಾತ್ರದಲ್ಲಿ ಅದ್ಭುತ ಸಿದ್ಧಿ ಗಳಿಸಿದ ಕುಟ್ಯಪ್ಪುರವರಿಂದ ಮಹಿಷಾಸುರ ಹಾಗೂ ಇತರೆ ಬಣ್ಣದ ವೇಷಗಳ ಸೂಕ್ಷ್ಮತೆ ಹಾಗೂ ರಂಗದ ನಡೆಯನ್ನು ಕಲಿತರು. ಮುಂದೆ ಕುಟ್ಯಪ್ಪುರಂತೆ ಮಹಿಷಾಸುರ ಪಾತ್ರದಲ್ಲಿ ಅಪಾರ ಪ್ರಸಿದ್ಧಿ ಪಡೆದರು.

ಕುಂಞಕಣ್ಣ ಮಣಿಯಾಣಿ, ಕುಂಞಣ್ಣ ಶೆಟ್ಟಿ, ಕದ್ರಿ ವಿಷ್ಣು , ಗುಡ್ಡಪ್ಪ ಗೌಡ ತ್ರಿವಿಕ್ರಮ ಶೆಣೈ , ಪಡ್ರೆ ಚಂದು, ಕುಷ್ಟ ಗಾಣಿಗ, ಮುಂತಾದ ಹಿರಿಯ ಕಲಾವಿದರ ಪ್ರಭಾವಕ್ಕೊಳಗಾಗಿ ರಾವಣ, ಮಹಿರಾವಣ, ಕುಂಭಕರ್ಣ, ಕೌಂಡ್ಲೀಕ, ತಾರಕಾಸುರ, ವಜೃದುಂಭಿ, ಅರುಣಾಸುರ, ರಕ್ತಬೀಜ, ಕೌಶಿಕ, ವಾಲಿ, ಮುಂತಾದ ಪಾತ್ರಗಳಲ್ಲಿ ವಿಜೃಂಭಿಸಿದರು .[ಉಮಾಶ್ರೀ ಮೇಡಂ,, ನೀವು ಕಲಾವಿದರಿಗೆ ಮಾಡಿದ ಅಪಮಾನ ಸರಿಯೆ?]

ರಂಗದಲ್ಲಿ ಪಾತ್ರಗಳಿಗೆ ಜೀವ ತುಂಬಿಸುವ ಪ್ರಸ್ತುತಿ ಶೆಟ್ಟರದಾಗಿತ್ತು. ನೂರಾರು ಕಡೆ ಸಂಮಾನ ಪಡೆದಿದ್ದ ಶೆಟ್ಟರ ಅಭಿಮಾನ ಬಳಗವೂ ದೊಡ್ಡದೇ. ನಿನ್ನೆಯ ಅರುಣಾಸುರನ ಪಾತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿದ್ದರು ಎಂದು ಪ್ರೇಕ್ಷಕರು ಹಾಗೂ ಮೇಳದ ಕಲಾವಿದರು ಕಣ್ತುಂಬಿಕೊಂಡು ಹೇಳುತ್ತಾರೆ.

ಪತ್ನಿ, ಸುಪುತ್ರರಾದ ಶಶಿಕಾಂತ , ಮುಕೇಶ್ ಹಾಗೂ ಶ್ರೀನಿಧಿ , ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಶೆಟ್ಟರ ಮರಣ, ಯಕ್ಷರಂಗಕ್ಕೆ ಆಘಾತ ತಂದಿದೆ.

English summary
Gerukatte Gangaiah Shetty. Shetty, well known Yakshagana artist dies on Wednesday, March 22. He was performing a role in Yakshagana that time. The incident took place near Katil
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X