ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದೂಕಾಲು ಇಂಚಿನ ತ್ರಿಶೂಲದಿಂದ ಏನು ಮಾಡಲು ಸಾಧ್ಯ?: ವಿಚ್‌ಪಿ ಸ್ಪಷ್ಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 15: ಆಯುಧ ಪೂಜೆಯ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಶಸ್ತ್ರ ವಿತರಿಸಿರುವುದು ವಿವಾದಕ್ಕೆ ಎಡೆಮಾಡುತ್ತಿದ್ದಂತೆ, ವಿಶ್ವ ಹಿಂದೂ ಪರಿಷತ್ ಸ್ಪಷ್ಟನೆ ನೀಡಿದೆ.

ಆಯುಧ ಪೂಜೆಯ ಸಂದರ್ಭದಲ್ಲಿ ಉಡುಪಿ, ಮಂಗಳೂರು, ಪುತ್ತೂರಿನಲ್ಲಿ ಸುಮಾರು 150ಕ್ಕೂ ಹೆಚ್ಚು ಕಾರ್ಯಕರ್ತರಿಗೆ ತ್ರಿಶೂಲಾಕಾರದ ಚೂರಿಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವಿತರಣೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ತ್ರಿಶೂಲ ದೀಕ್ಷೆ ಎಂಬ ಹೆಸರನ್ನೂ ಇಟ್ಟಿತ್ತು. ಈ ಕಾರ್ಯಕ್ರಮ ವಿವಾದದ ರೂಪವನ್ನು ಪಡೆಯುತ್ತಿದ್ದಂತೆಯೇ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖರು ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಈ ಕಾರ್ಯಕ್ರಮದಲ್ಲಿ ಯಾವುದೇ ವಿವಾದ ಇಲ್ಲ. ಪ್ರತಿ ವರ್ಷ ಆಯುಧ ಪೂಜೆಯ ದಿನ ಇಡೀ ರಾಷ್ಟ್ರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತನ್ನ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆಯನ್ನು ನೀಡುತ್ತದೆ. ಈ ಬಾರಿಯೂ ನೀಡಿದ್ದೇವೆ.

Mangaluru: Vishwa Hindu Parishad Clarification About Arms Distribution For Activists

ತ್ರಿಶೂಲ ದೀಕ್ಷೆ ಅನ್ನುವುದು ಯಾವುದೇ ಹೊಡೆದಾಟಕ್ಕೆ ನೀಡುವುದಿಲ್ಲ ಅಥವಾ ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ. ತಮ್ಮ ಆತ್ಮರಕ್ಷಣೆಗೆ ಮತ್ತು ಧರ್ಮ ಜಾಗೃತಿಗಾಗಿ ದೀಕ್ಷೆ ಬೋಧನೆ ಮಾಡಲಾಗುತ್ತದೆ. ಮತ್ತು ಆ ತ್ರಿಶೂಲದಿಂದ ಏನೂ ಮಾಡಲು ಸಾಧ್ಯವಿಲ್ಲ. ಅದು ಐದೂಕಾಲು ಇಂಚಿನ ಸ್ಟೀಲ್‌ನಿಂದ ಮಾಡಿದ ತ್ರಿಶೂಲದ ಆಕೃತಿ ಎಂದು ಶರಣ್ ಪಂಪ್ವೆಲ್ ಸ್ಪಷ್ಟನೆ ನೀಡಿದ್ದಾರೆ.

ತ್ರಿಶೂಲ ದೀಕ್ಷೆ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ. ಸಿಎಂ ನೈತಿಕ ಪೊಲೀಸ್‌ಗಿರಿಗೆ ಬೆಂಬಲ ಸೂಚಿಸಿದ ಹೇಳಿಕೆಯ ಬಳಿಕದ ಬೆಳವಣಿಗೆ ಅಂತಾ ಬಣ್ಣಿಸಲಾಗುತ್ತಿದೆ. ಆದರೆ ಈ ತರಹದ ಯಾವುದೇ ಯೋಚನೆ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಬಳಿ ಇಲ್ಲ. ಕಳೆದ ಬಾರಿ ಕೋವಿಡ್ ಕಾರಣದಿಂದ ಕಾರ್ಯಕ್ರಮ ಮಾಡಲಾಗಲಿಲ್ಲ. ಪ್ರತಿ ವರ್ಷ ಎಲ್ಲಾ ಕಾರ್ಯಾಲಯದಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆಯುತ್ತದೆ ಅಂತಾ ವಿಶ್ವ ಹಿಂದೂ ಪರಿಷತ್‌ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಸ್ಪಷ್ಟನೆ ನೀಡಿದ್ದಾರೆ.

Mangaluru: Vishwa Hindu Parishad Clarification About Arms Distribution For Activists

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರಿಗೆ ಬಾಂಬ್ ಅಥವಾ ಗ್ರೆನೇಡ್ ದೀಕ್ಷೆ ಮಾಡಿಲ್ಲ. ನಾವು ಶಕ್ತಿ ಆರಾಧಕರು ಆಗಿರುವುದರಿಂದ ತ್ರಿಶೂಲ ದೀಕ್ಷೆ ನೀಡಿದ್ದೇವೆ. ಭಜರಂಗದಳ ಇಡೀ ರಾಷ್ಟ್ರದಲ್ಲಿ ತನ್ನ ನೂತನ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡುತ್ತದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ತ್ರಿಶೂಲ ದೀಕ್ಷೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಕಾರ್ಯಕ್ರಮ ಸಾರ್ವಜನಿಕವಾಗಿ ಮಾಡಿಲ್ಲ. ನಮ್ಮ ಕಾರ್ಯಾಲಯದಲ್ಲಿ, ಭಜರಂಗದಳದ ವಿವಿಧ ಜವಾಬ್ದಾರಿಯನ್ನು ಹೊಂದಿದವರಿಗೆ ಮಾತ್ರ ತ್ರಿಶೂಲ ದೀಕ್ಷೆ ಮಾಡಿದ್ದೇವೆ ಅಂತಾ ಶರಣ್ ಪಂಪ್ವೆಲ್ ತಿಳಿಸಿದರು.

ತ್ರಿಶೂಲ ದೀಕ್ಷೆ ಕಾರ್ಯಕ್ರಮ ಗುರುವಾರ ಆಯುಧ ಪೂಜೆಯ ಸಂದರ್ಭದಲ್ಲಿ ಮಂಗಳೂರಿನ ಕದ್ರಿಯ ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಲಯ, ಉಡುಪಿ ಮತ್ತು ಪುತ್ತೂರಿನ ಕಾರ್ಯಾಲಯಗಳಲ್ಲಿ ನಡೆದಿತ್ತು.

ತ್ರಿಶೂಲ ದೀಕ್ಷೆ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪರ- ವಿರೋಧದ ಚರ್ಚೆ ನಡೆದಿದೆ. ತ್ರಿಶೂಲದ ನೆಪದಲ್ಲಿ ಹರಿತವಾದ ಕತ್ತಿಯನ್ನು ನೀಡಿ ಕಾರ್ಯಕರ್ತರಿಗೆ ಶಸ್ತ್ರವನ್ನು ಹಿಡಿಯಲು ಪ್ರೇರಣೆ ನೀಡಲಾಗುತ್ತಿದೆ ಎಂಬ ಆರೋಪವನ್ನು ಮಾಡಲಾಗಿದೆ.

Mangaluru: Vishwa Hindu Parishad Clarification About Arms Distribution For Activists

ಕರಾವಳಿಯಲ್ಲಿ ಅನೈತಿಕ ಪೊಲೀಸ್‌ಗಿರಿ, ಗೋಹತ್ಯೆ ವಿಚಾರವಾಗಿ ಕಳೆದ ಒಂದು ತಿಂಗಳ ಅಂತರದಲ್ಲಿ ಹಲವು ಪ್ರಕರಣಗಳು ನಡೆದಿವೆ. ಅದರಲ್ಲೂ ಅನೈತಿಕ ಪೊಲೀಸ್‌ಗಿರಿ ಪ್ರಕರಣ ಜಿಲ್ಲೆಯ ಹಲವು ಕಡೆಗಳಲ್ಲಿ ನಡೆದಿದೆ. ಇದರ ನಡುವೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಈ ಕಾರ್ಯಕ್ರಮ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಇನ್ನು ಈ ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಸ್ವಾಗತ ಮಾಡಿದ್ದಾರೆ. ಭಯೋತ್ಪಾದನಾ, ಮತಾಂತರ, ಧರ್ಮ ಜಾಗೃತಿ ವಿಚಾರಕ್ಕೆ ಇಂತಹ ಆಚರಣೆಗಳು ಅಗತ್ಯವಿದೆ. ಈ ಕಾರ್ಯಕ್ರಮದಲ್ಲಿ ಯಾವುದೇ ತಪ್ಪುಗಳಿಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ.

English summary
Leaders of the Vishwa Hindu Parishad have clarified the issue of arms distribution to VHP and Bajarang Dal activists on Ayudha Puja day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X