ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜರಂಗದಳ ರೈಫಲ್ ತರಬೇತಿ ತಾಲಿಬಾನ್ ಸಂಸ್ಕೃತಿ; ಯುಟಿ ಖಾದರ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು , ಮೇ 17: "ಶಾಲೆಗಳಲ್ಲಿ ಪುಸ್ತಕ, ಪೆನ್ನು ಹಿಡಿಯುವ ವಿದ್ಯಾರ್ಥಿಗಳ ಕೈಗೆ ರೈಫಲ್ ನೀಡಿದ್ದಾರೆ. ಸ್ವತಃ ಶಾಸಕರೇ ಮುಂದೆ ನಿಂತು ತಾಲಿಬಾನ್ ಸಂಸ್ಕೃತಿ ತೋರಿಸುತ್ತಿದ್ದಾರೆ" ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು. ಟಿ. ಖಾದರ್ ಹೇಳಿದರು.

ಮಂಗಳವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಡಿಕೇರಿಯಲ್ಲಿ ಭಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. "ಶಾಸಕರೇ ಮುಂದೆ ನಿಂತು ತರಬೇತಿ ಮಾಡಿಸಿದ್ದಾರೆ. ಇದು ಸರ್ಕಾರದ ತಾಲಿಬಾನ್ ಸಂಸ್ಕೃತಿ ತೋರಿಸುತ್ತದೆ. ಸರ್ಕಾರ ಗೂಂಡಾಗಿರಿ ಮಾಡಲು ಹೊರಗುತ್ತಿಗೆ ಕೊಟ್ಟಂತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಎನ್‌ಸಿಸಿಯಂಥ ಸಂಸ್ಥೆಗಳು ಅಧಿಕೃತ, ಅವರು ದೇಶ ಸೇವೆಗಾಗಿ ತರಬೇತಿ ಕೊಡುತ್ತಾರೆ. ಆದರೆ ಕೊಡಗಿನಲ್ಲಿ ಮಾಡಿದವರು ಯಾರು ಎನ್ನುವುದು ಗೊತ್ತಿದೆ. ಇವರ ಉದ್ದೇಶ ಏನು?, ಅನುಮತಿ ಯಾರು ಕೊಟ್ಟಿದ್ದು ಎಂಬುದರ ತನಿಖೆ ಆಗಲಿ" ಎಂದರು.

UT Khader Says Bajrang Dal Arms Training As Taliban Culture

"ವಿದ್ಯಾಸಂಸ್ಥೆಗಳಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಕೊಟ್ಟಿರುವುದು ಸರ್ಕಾರದ ನಿರ್ಲಕ್ಷ್ಯ. ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಈ ಬಗ್ಗೆ ಜನರಿಗೆ ಉತ್ತರಿಸಲಿ.‌ ಈ ವಿಚಾರದಲ್ಲಿ ಮುಖ್ಯಮಂತ್ರಿ ಕೂಡ ಮೌನವಾಗಿರೋದು ಸರಿಯಲ್ಲ. ಮಕ್ಕಳ ಕೈಗೆ ಪುಸ್ತಕ, ಪೆನ್ ಕೊಡುವ ಬದಲು ಆಯುಧ ಕೊಡ್ತಾರಾ?. ಗನ್ ಹಿಡಿದುಕೊಂಡು ಸುತ್ತಾಡಲಿಕ್ಕೆ ಇದೇನು ಉತ್ತರ ಪ್ರದೇಶವಾ?" ಎಂದು ಪ್ರಶ್ನಿಸಿದರು.

"ಕಾಂಗ್ರೆಸ್ ಸೇವಾದಳ ಅಥವಾ ಯೂತ್ ಕಾಂಗ್ರೆಸ್ ಮಾಡಿದರೆ ಏನಾಗುತ್ತಿತ್ತು?. ದೇಶದ ಭವಿಷ್ಯ ಮಕ್ಕಳು, ಮಕ್ಕಳಲ್ಲಿ ದ್ವೇಷದ ವಾತಾವರಣ ಬೇಡ. ಹೀಗಾಗಿ ದ್ವೇಷ ಹುಟ್ಟುವ ವಿಚಾರಗಳು ಮಕ್ಕಳಲ್ಲಿ ಬೇಡ ಅಂತಾ ಹೇಳಿದ್ದಾರೆ" ಎಂದರು.

ಸರ್ಕಾರ ತನಿಖೆ ಮಾಡಲಿ: "ಸರ್ಕಾರ ಇಂತಹ ವಿಚಾರಗಳಿಗೆ ಗಮನ ಹರಿಸುವ ಬದಲು ರಾಜ್ಯದಲ್ಲಿ ಒಂದಾದರೂ ಹೈಸ್ಕೂಲ್ ತೆರೆಯಲಿ, ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶಾಲೆಗೆ ಬೆಂಚ್ ನೀಡಲಿ. ದಕ್ಷಿಣ ಕನ್ನಡ ಜಿಲ್ಲೆಯ ಎಂಬಿಎ ಕಲಿತ ವಿದ್ಯಾರ್ಥಿನಿ ಸರಿಯಾಗಿ ಉದ್ಯೋಗ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ಜನ ವಿರೋಧಿ ನೀತಿಯ ಉದಾಹರಣೆಯಾಗಿದೆ" ಎಂದು ಖಾದರ್ ವಾಗ್ದಾಳಿ ನಡೆಸಿದರು.

"ಮಡಿಕೇರಿಯಲ್ಲಿ ನಡೆದ ಶಸ್ತ್ರಾಭ್ಯಾಸದ ಬಗ್ಗೆ ಸರ್ಕಾರ ತನಿಖೆ ಮಾಡಬೇಕು. ಗೃಹ ಸಚಿವರು ಈ ಬಗ್ಗೆ ಉತ್ತರ ನೀಡಬೇಕು. ರಾಜ್ಯದಲ್ಲಿ ತಕ್ಷಣ ಶಿಕ್ಷಕರ ನೇಮಕಾತಿ ನಡೆಯಬೇಕು. ಡೆಸ್ಕ್, ಬೆಂಚ್, ಬುಕ್ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಶಿಕ್ಷಕ ವರ್ಗಕ್ಕೆ ಬೇಡುವ ಪರಿಸ್ಥಿತಿ ಬಂದಿದೆ. ಈ ಬಾರಿ ಶೈಕ್ಷಣಿಕ ವರ್ಷವನ್ನು 15 ದಿನಗಳ ಮುಂಚೆ ಆರಂಭಗೊಳಿಸಿದ್ದಾರೆ. ಶಿಕ್ಷಕರಿಗೆ ಮಕ್ಕಳಿಗೆ ಏನು ಮಾಡಬೇಕು? ಅಂತಾ ಗೊತ್ತಾಗುತ್ತಿಲ್ಲ. ಮಕ್ಕಳು ಆರಂಭದಲ್ಲೇ ಶಾಲೆಯಲ್ಲಿ ಆಟ ಆಡಿದರೆ ಅವರ ಶಿಕ್ಷಣ ಆಗೋದು ಹೇಗೆ?" ಎಂದರು.

ಮಕ್ಕಳಿಗೆ ಬಿಸಿಯೂಟಕ್ಕೆ ಕುಚ್ಚಲ್ಲಕ್ಕಿ ನೀಡಿ: "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ಕುಚ್ಚಲ್ಲಕ್ಕಿ ನೀಡಬೇಕು. ಕರಾವಳಿಯ ಮಕ್ಕಳು ಬೆಳ್ತಿಗೆ ಅಕ್ಕಿಯ ಊಟ ಮಾಡುವುದಿಲ್ಲ. ಈ ಬಗ್ಗೆ ಇಲ್ಲಿನ ಉಸ್ತುವಾರಿ ಸಚಿವ ಸೇರಿದಂತೆ ಶಾಸಕರುಗಳು ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ" ಎಂದು ಯು. ಟಿ. ಖಾದರ್ ದೂರಿದರು.

"ಮುಸ್ಲಿಂ ಮತ ಬೇಡ ಎನ್ನುವ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯಲ್ಲಿ ಎಂಡೋಸಲ್ಫಾನ್ ಪೀಡಿತರನ್ನು ಮುಂದೆ ನಿಲ್ಲಿಸಿ ಚುನಾವಣೆ ಗೆದ್ದು, ಇದೀಗ ಎಂಡೋಸಲ್ಫಾನ್ ಪೀಡಿತರನ್ನು ಕೇಳುವ ಗತಿಯಿಲ್ಲದಂತಾಗಿದೆ. ನಾನು‌ ಆರೋಗ್ಯ ಸಚಿವನಾಗಿದ್ದಾಗ ತಂದಿರುವ ಯೋಜನೆ ಬಿಟ್ಟರೆ, ಅದಕ್ಕೆ ಹೊಸ ಯೋಜನೆ ಜೋಡಣೆಯಾಗಿಲ್ಲ. ಅಲ್ಲದೆ ನನ್ನ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನವೂ ಆಗಿಲ್ಲ" ಎಂದರು.

ಹರೀಶ್ ಪೂಂಜಾ ಹೇಳಿಕೆಗೆ ಖಂಡನೆ: "ತನಗೆ ಮುಸ್ಲಿಂ ಓಟ್ ಬೇಡ" ಎಂದು ಹೇಳಿದ ಶಾಸಕ ಹರೀಶ್ ಪೂಂಜಾ ಹೇಳಿಕೆಯನ್ನು ಖಂಡಿಸಿದ ಯು. ಟಿ. ಖಾದರ್, "ಎಂಡೋಸಲ್ಫಾನ್ ಪೀಡಿತ ಮಕ್ಕಳನ್ನು ಫ್ರೀಡಂ ಪಾರ್ಕ್‌ಗೆ ಕೊಂಡೊಯ್ದು ಪ್ರತಿಭಟನೆ ಮಾಡಿದ ಅವರು, ಶಾಸಕನಾದ ಬಳಿಕ ಅವರಿಗೇನಾದರೂ ಮಾಡಿದರೆ?. ಪರಿಪಕ್ವವಲ್ಲದ ಇಂತಹ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರವರ ರಾಜಕೀಯ ಅವರವರದ್ದು. ಬೆಳ್ತಂಗಡಿಯ ಜನತೆ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ" ಎಂದು ಹೇಳಿದರು.

English summary
Congress leader U. T. Khader said Bajrang Dal Kodagu training camp as Taliban culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X