ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿ ಬಿದ್ದಿದೆ ಮನೆಗೆ ಓ...ಬೇಗ ಬನ್ನಿ ಎಂದ ಕಯ್ಯಾರರ ನೆನಪು

By ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

ಗಡಿನಾಡ ಕನ್ನಡ ಹೋರಾಟಗಾರ, ಸಾಹಿತಿ, ಶತಾಯುಷಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ( 101) ಅವರ ಅಂತ್ಯ ಸಂಸ್ಕಾರ ಸೋಮವಾರ ಮಧ್ಯಾಹ್ನ ಸರ್ಕಾರಿ ಸಕಲ ಗೌರವಗಳೊಂದಿಗೆ ಸಾವಿರಾರು ಅಭಿಮಾನಿಗಳು, ಹಿತೈಷಿಗಳು, ಬಂಧುಮಿತ್ರರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ನೆರವೇರಿತು.

ಕಾಸರಗೋಡಿನ ಬದಿಯಡ್ಕದ ನಿವಾಸ ಕವಿತಾ ಕುಟೀರ ಪರಸರದಲ್ಲಿ ಇಂದು ಮಧ್ಯಾಹ್ನ 12.30ರಲ್ಲಿ ಹಿರಿಯ ಪುತ್ರ ದುರ್ಗಪ್ರಸಾದ್ ರೈ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನಡೆಯಿತು. ಕನ್ನಡದ ಕಲಿ ಕವಿ ಕಯ್ಯಾರ ಕಿಞಣ್ಣ ರೈ ಅವರಿಗೆ ನುಡಿ ನಮನ ಇಲ್ಲಿದೆ...[ಕಾಸರಗೋಡಿನ ಕನ್ನಡದ ಗಟ್ಟಿದನಿ ಕಯ್ಯಾರ ಕಿಞ್ಞಣ್ಣ ರೈ ಅಸ್ತಂಗತ]

ತನ್ನ ನೆಲ, ಕನ್ನಡದ ನೆಲ ಅನ್ಯರ -ಕೇರಳದ ಪಾಲಾದಾಗ ಕೆರಳಿದವರು, ಕೊರಗಿದವರು ಕನ್ನಡದ ಕಲಿ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು! 'ಬೆಂಕಿ ಬಿದ್ದಿದೆ ಮನೆಗೆ ಓ...ಬೇಗ ಬನ್ನಿ, ಎಲ್ಲೆಲ್ಲೂ ಎದ್ದೆದ್ದು ಓಡಿ ಬನ್ನಿ/ ಕನ್ನಡದ ಗಡಿ ಕಾಯೆ ಗುಡಿ ಕಾಯೆ ನುಡಿ ಕಾಯೆ, ಕಾಯಲಾರೆವೆ ಸಾವೆ, ಓ ಬನ್ನಿ ಬನ್ನಿ' ಎಂದು ಕನ್ನಡದ ಬಾಂಧವರಿಗೆ ಕರೆ ಕೊಟ್ಟವರು.

ಏನಾದರೂ ಕಯ್ಯಾರರ ಕಾಸರಗೋಡು, ಕನ್ನಡದ ಕಾಸರಗೋಡು ಕನ್ನಡಿಗರಿಗೆ ದಕ್ಕಲೇ ಇಲ್ಲ. ರಾಜ್ಯ ವಿಂಗಡಣೆಯಾದಾಗಿನಿಂದಲೂ ಕಾಸರಗೋಡು ಕನ್ನಡಕ್ಕೆ ಸೇರುವುದನ್ನೇ ಹಾರೈಸುತ್ತ, ಖಂಡಿತವಾಗಿ ಅದು ಕರ್ನಾಟಕಕ್ಕೆ ಮರಳಿ ಬಂದೇ ಬರುತ್ತದೆ ಎಂದು ಬಲವಾಗಿ ನಂಬುತ್ತ ಬಂದ ಕಯ್ಯಾರರಿಗೆ ಇನ್ನೂ ಬತ್ತದ ವಿಶ್ವಾಸ.

ಉಳಿದುಹೋದ ಏಕೈಕ ನೋವು, ಸಂಕಟ

ಉಳಿದುಹೋದ ಏಕೈಕ ನೋವು, ಸಂಕಟ

'ಕಾಸರಗೋಡು ಕನ್ನಡ ನಾಡು' ಇದೇ ಅವರ ಶ್ವಾಸ. ಕಯ್ಯಾರರ ಹಸ್ತಾಕ್ಷರ ಕೋರಿ ಹೋದ ಪುಸ್ತಿಕೆಯಲ್ಲೂ ಅದೇ ಆಶಯ, ಹಕ್ಕೊತ್ತಾಯ.

ಕಯ್ಯಾರರು ಮೊನ್ನೆ ಮೊನ್ನೆಯವರೆಗೂ ಕಾಸರಗೋಡಿನಲ್ಲಿ ಅದೆಷ್ಟು ಬಾರಿ ಕನ್ನಡಿಗರನ್ನು ಸಂಘಟಿಸಿದರು; ಸಮ್ಮೇಳನಗಳನ್ನು ನಡೆಯಿಸಿದರು; ಚಳವಳಿ ಮಾಡಿದರು! ಕರ್ನಾಟಕ ಸರಕಾರದ ಬಳಿ ಅದೆಷ್ಟು ಬಾರಿ ನಿವೇದಿಸಿಕೊಂಡರು, ಆಗ್ರಹಿಸಿದರು! ಕನ್ನಡದ ಎಂಪಿಗಳಲ್ಲೂ ಬಿನ್ನವಿಸಿಕೊಂಡದ್ದೇನು!

'ಇನ್ನೇನೂ ಬೇಡ. ಮಹಾಜನ ವರದಿ ಮಂಜೂರಾಗುವಂತೆ ಮಾಡಿ. ಅದು ನ್ಯಾಯದ ದಾರಿ' ಎಂದು ಎಷ್ಟೇ ಮೊರೆಯಿಟ್ಟರೂ ಅದು ನಿಷ್ಪ್ರಯೋಜಕವೇ ಆದದ್ದು 101ರ ವಯೋಮಾನದ ಕಯ್ಯಾರರಲ್ಲಿ ಉಳಿದುಹೋದ ಏಕೈಕ ನೋವು, ಸಂಕಟ.

ಕನ್ನಡ ಶಾಲೆಗಳಲ್ಲೂ ಮಲಯಾಳಂ

ಕನ್ನಡ ಶಾಲೆಗಳಲ್ಲೂ ಮಲಯಾಳಂ

ಈಗ ಏನಾಗಿದೆ? ಕೇರಳ ಸರಕಾರ ತನ್ನ ರಾಜ್ಯದ ಕನ್ನಡ ಶಾಲೆಗಳಲ್ಲೂ ಮಲಯಾಳಂನ್ನು ಕಡ್ಡಾಯಗೊಳಿಸಿದೆ. ಕನ್ನಡ ಶಾಲೆಗಳೂ ಇಲ್ಲವಾಗುತ್ತಿವೆ. ಇದು ಕಯ್ಯಾರರನ್ನು ಇನ್ನಷ್ಟು ಘಾಸಿಗೊಳಿಸಿರುವ ಬೆಳವಣಿಗೆಗಳಾಗಿವೆ!

ಕಯ್ಯಾರರದು ಕಂಚಿನ ಕಂಠ. ಕನ್ನಡದ ಬಗ್ಗೆ ಅಭಿಮಾನದಿಂದ ಮೊಳಗುತ್ತಿದ್ದರು. ಕನ್ನಡ ಭಾಷೆ, ಕನ್ನಡ ಮಾಧ್ಯಮ ಶಿಕ್ಷಣದ ಅಗತ್ಯದ ಬಗ್ಗೆ ಬಹಳ ಅಥೆಂಟಿಕ್ ಆದ ನಿಲುವನ್ನು ಘಂಟಾಘೋಷವಾಗಿ ಸಾರುತ್ತಿದ್ದಾರೆ.

ಕಾಸರಗೋಡಿನ ಪೆರಡಾಲದಲ್ಲಿ ಜೂನ್ 8, 1915ರಲ್ಲಿ ಜನನ. ತಂದೆ ದುಗ್ಗಪ್ಪ ರೈಗಳು, ಅಜ್ಜ ಶಂಕರಾಳ್ವ ಅವರು ರಾಮಾಯಣ, ಮಹಾ ಭಾರತ, ಜೈಮಿನಿಗಳನ್ನು ಓದ ಬಲ್ಲವರು. ಯಕ್ಷಗಾನ, ತಾಳಮದ್ದಳೆಗಳಂತೂ ಅಲ್ಲಿ ನಿರಂತರ. ಕಿಞಣ್ಣ ರೈಗಳ ಮೇಲೆ ಅವುಗಳ ಪ್ರಭಾವ ಸಹಜ, ಸತತ.

ಪೆರಡಾಲದಲ್ಲೇ ಶಾಲಾ ವಿದ್ಯಾಭ್ಯಾಸ. ಮುಂದೆಲ್ಲಿಗೆ?

ಪೆರಡಾಲದಲ್ಲೇ ಶಾಲಾ ವಿದ್ಯಾಭ್ಯಾಸ. ಮುಂದೆಲ್ಲಿಗೆ?

ಪೆರಡಾಲದಲ್ಲೇ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ. ಮುಂದೆಲ್ಲಿಗೆ? ದೂರದೂರಿಗೆ ಹೋಗಬೇಕು. ಆ ಸಂದರ್ಭದಲ್ಲಿ ಅದಾಗದ ಮಾತು.

ಹಾಗೆಂದು ಓದೇಕೆ ಕೈದಾಗಬೇಕು? ಪರಿಣಾಮವಾಗಿ ಹತ್ತಿರದ ನೀರ್ಚಾಲಿನಲ್ಲಿದ್ದ ಪೆರಡಾಲ ಮಹಾಜನ ಸಂಸ್ಕೃತ ಕಾಲೇಜಿಗೆ ಸೇರ್ಪಡೆ. ಅಲ್ಲಿ ಮೊದಲ ಬಾರಿಗೆ ಬ್ರಾಹ್ಮಣೇತರ ವಿದ್ಯಾರ್ಥಿ. ಆಶ್ಚರ್ಯದ ಸಂಗತಿ ಎಂದರೆ ಸಂಸ್ಕೃತದಲ್ಲಿ ಎಂಥವರನ್ನೂ ಎದುರಿಸುವಷ್ಟು ಪರಿಣತಿ, ಛಾತಿ.

1935ರಲ್ಲಿ ಮದರಾಸು ವಿಶ್ವವಿದ್ಯಾನಿಲಯದಿಂದ ವಿದ್ವತ್ ಪದವಿ ಗಳಿಕೆ. ಮುಂದೆ ಕಾಲ ಕೂಡಿ ಬಂದು ಮಂಗಳೂರಿಗೆ ಹೋಗಿ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದರು. ಎಂ.ಎ.ಪದವೀಧರರಾದದ್ದೂ ಮಂಗಳೂರಿನಲ್ಲಿದ್ದಾಗಲೇ!

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲು

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲು

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲು: ಒಟ್ಟೂ ಒಂಬತ್ತು ವರ್ಷ ಕಾಲ ಮಂಗಳೂರಿನಲ್ಲಿ ವಾಸ್ತವ್ಯ. ಅಲ್ಲಿ ಪತ್ರಕರ್ತರೂ ಆಗಿದ್ದರು. 'ಸ್ವದೇಶಾಭಿಮಾನಿ'ಯೊಂದಿಗೆ ವ್ಯವಹರಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲು ತೆಗೆದುಕೊಂಡಿದ್ದರು. 1941ರಲ್ಲಿ ಗಾಂಧೀಜಿಯವರಿಂದಲೇ ವೈಯಕ್ತಿಕ ಸತ್ಯಾಗ್ರಹಿಯಾಗಿ ಆಯ್ಕೆಗೊಂಡರು.

ಅದೇ ಸುಮಾರಿಗೆ ನೆರೆ ಹಾವಳಿ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ಸಕ್ರಿಯರಾದದ್ದೂ ಚಿರಸ್ಮರಣೀಯ ಗತಿಯೇ. 1942ರಲ್ಲಿ ನಡೆಸಿದ ಸತ್ಯಾಗ್ರಹದಲ್ಲೂ ರೈಗಳು ತೊಡಗಿಸಿಕೊಂಡವರೇ. ಇನ್ನೊಮ್ಮೆ, ಹೋರಾಟದ ಕಾರಣಕ್ಕೆ ಬಂಧಿತರಾದವರು ಕೂಡ.

ಪಂಚಾಯಿತಿ ಚುನಾವಣೆಗೂ ನಿಂತು ಗೆದ್ದಿದ್ದರು

ಪಂಚಾಯಿತಿ ಚುನಾವಣೆಗೂ ನಿಂತು ಗೆದ್ದಿದ್ದರು

ಪೆರಡಾಲ ನವಜೀವನ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ನೇಮಕರಾದರು. ಅಲ್ಲಿ ಸುದೀರ್ಘ ಕಾಲ ಇವರ ಅಧ್ಯಾಪನ ವೃತ್ತಿ. ಪೆರಡಾಲ ಪಂಚಾಯಿತಿ ಚುನಾವಣೆಗೂ ನಿಂತು, ಆರಿಸಿ ಬಂದು ಅಧ್ಯಕ್ಷ ಪೀಠವನ್ನೇರಿದ್ದೂ ಚರಿತ್ರೆಯೇ.

ತನ್ನ ವಿದ್ಯಾ ಗುರು ಅನಂತ ಭಟ್ಟರಿಗೆ ಗುರು ದಕ್ಷಿಣೆಯಾಗಿ ಸುಮಾರು ಒಂದು ಲಕ್ಷ ರೂ. ವೆಚ್ಚದ ಅನಂತ ಭಟ್ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ತೆರೆದದ್ದು ಅಧ್ಯಕ್ಷತೆಯ ಹೊಣೆ ಹೊತ್ತಾಗಲೇ.

ಊರಿಗೊಂದು ಆಸ್ಪತ್ರೆ, ವಿದ್ಯುತ್ ವ್ಯವಸ್ಥೆ, ವಾಹನ ನಿಲ್ದಾಣ ಇತ್ಯಾದಿ ಬಹುತೇಕ ಅಗತ್ಯಗಳನ್ನು ಒದಗಿಸಿಕೊಟ್ಟ ವರು. ಬ್ಲಾಕ್ ಕಮಿಟಿ ಅಧ್ಯಕ್ಷರಾಗಿಯೂ ಕಯ್ಯಾರರು ನಿಭಾಯಿಸಿದ ಸಮಾಜೋಪಯೋಗಿ ಕಾರ್ಯಗಳ ಪಟ್ಟಿ ಉದ್ದದ್ದೇ.

ಉಳುಮೆಯ ಯೋಗಿ ಕಯ್ಯಾರರು

ಉಳುಮೆಯ ಯೋಗಿ ಕಯ್ಯಾರರು

ಕಯ್ಯಾರರು ಉಳುಮೆಯನ್ನೂ ಮಾಡಿದವರು. ತಮ್ಮ ತೋಟ, ಗದ್ದೆಗಳಲ್ಲೂ ಬೆವರು ಹರಿಸಿದವರು. ಕಾವ್ಯದಲ್ಲೂ ಅದನ್ನು ಕೀರ್ತಿಸಿದವರು: 'ನಾನು ಮಣ್ಣಿನ ಮಗನು-ಮಂದಾರ ಮಾಲೆಯೆನೆ/ ನೊಗ ನೇಗಿಲು ಹೊತ್ತು ತಿರುಗುವವನು...' ಒಕ್ಕಲುತನ ಮತ್ತು ಬರವಣಿಗೆಗಳಲ್ಲಿ ಯಾವುದು ನಿಮಗೆ ಹೆಚ್ಚಿನದು? ಪ್ರಶ್ನೆ ಕೇಳಿದವರಿಗೆ ರೈಯವರ ಉತ್ತರ ಏನು? ' ನೇಗಿಲಿನ ಸಮಕೆ ಲೇಖನಿ ಹಿಡಿದ ಕೈಯಲ್ಲಿ /ಗೆರೆ ತಪ್ಪದಿರೆ ಬರೆವೆ ಭೂ ಪುಟದಿ ಪುಟದಿ/ತಲೆಯ ತೂಗಿತು ತೆನೆಯ ಭಾರದಲಿ ನವಶಾಲಿ/ಅರಳಿ ಬಂದಿತೊ ಕವಿತೆ, ಹೊಸತು ಸಂಪುಟದಿ' ಹೀಗೆ. ಕಯ್ಯಾರರು ಬಂಡಾಯ ಕವಿ ಎಂದು ಹೇಳಿಕೊಂಡವರಲ್ಲ.

ಲೋಕೋಪಕಾರವೇ ಕಾವ್ಯವಾಯಿತು

ಲೋಕೋಪಕಾರವೇ ಕಾವ್ಯವಾಯಿತು

ಕವಿಗೆ ಸುಂದರವಾದ, ಸುಭದ್ರವಾದ ನಿನ್ನೆಗಳ ಬಗ್ಗೆ ಕೋಪ ಇಲ್ಲ. ಅವರ ಆರೋಪ ಇರುವುದು -ನಿನ್ನೆಗಳೆಲ್ಲವೂ ಸ್ವೀಕಾರಾರ್ಹವಾವೇ ಅನ್ನುವ ಮತಾಂಧರ ಮೇಲೆ ಅಷ್ಟೇ. ಸ್ವಂತಿಕೆ ಮತ್ತು ವೈಚಾರಿಕತೆಯೊಂದಿಗೆ ಹೊಸ ಬಾಳು ಕಟ್ಟಿಕೊಳ್ಳುವುದೇ ಜೀವಂತಿಕೆ, ಮಾನವಂತಿಕೆ ಎಂಬುದಾಗಿ ಅಭಿಪ್ರಾಯಿಸುವುದು ಹೀಗೆ:' ಹರಕು ಮನೆಯಲ್ಲ ಮುರಿದು ಹೋಗಲಿ/ತೇಪೆ ಹಚ್ಚಬೇಡ/ಹೊಸತು ತಳಹದಿಯ ಕಜ್ಜ ಸಾಗಲಿ ಸೃಷ್ಟಿ ನೋಡ'

ಕಯ್ಯಾರ ಕಿಞಣ್ಣ ರೈ ಅವರ ಕಾವ್ಯ ಮತ್ತು ಜೀವನ ಸ್ವಾಂತ ಸುಖಾಯ ಅಲ್ಲವೇ ಅಲ್ಲ. ಅವರು ಇವೆರಡೂ ಲೋಕೋಪಕಾರಗಳಿಂದ ಪುನೀತವಾಗಬೇಕು ಎಂದು ನಂಬಿ ನಡೆದು ಬಂದವರು. ಕಯ್ಯಾರರ ನಡೆ-ನುಡಿಗಳಲ್ಲಿ ಯಾವತ್ತೂ ನಾವು ಕಂಡಿದ್ದು, ಕಾಣುತ್ತಿರುವುದು ಅದೇ.

ಕಾವ್ಯ ಇಲ್ಲವೇ ಗದ್ಯ ಸಾಕಷ್ಟು ಕಸುವಿನಿಂದ ಕೂಡಿರುತ್ತದೆ

ಕಾವ್ಯ ಇಲ್ಲವೇ ಗದ್ಯ ಸಾಕಷ್ಟು ಕಸುವಿನಿಂದ ಕೂಡಿರುತ್ತದೆ

ಕಯ್ಯಾರರ ಕವನ ಸಂಕಲನಗಳೇ ಆಗಿರಲಿ, ಗದ್ಯ ಕೃತಿಗಳೇ ಆಗಲೀ ಲೆಕ್ಕ ಭರ್ತಿಯಾಗಿಯಾಗಲೀ ಅಥವಾ ಮೋಜು ಎಂಬ ರೀತಿಯಲ್ಲಾಗಲೀ ಹೊರ ಬಂದವು ಅಲ್ಲವೇ ಅಲ್ಲ. ಅವರ ಕಾವ್ಯ ಇಲ್ಲವೇ ಗದ್ಯ ಸಾಕಷ್ಟು ಕಸುವಿನಿಂದ ಕೂಡಿರುತ್ತದೆ. ನಿಜ. ಅಧ್ಯಯನ ವ್ಯಾಪ್ತಿಯನ್ನು ಹೊಳೆಯಿಸುತ್ತದೆ. ಆದರೆ ಅದು ಸಂಕೀರ್ಣವಾಗಿರುವುದಿಲ್ಲ. ದುರೂಹ್ಯವಾಗಿರುವುದಿಲ್ಲ. ಅಲ್ಲಿರುವುದೇನು ಎಂದರೆ 'ನಾನು ನಿನ್ನವನು; ನೀನು ನನ್ನವನು. ನಾವೆಲ್ಲ ಪರಸ್ಪರ ಅರ್ಥವಾಗಬೇಕಿದೆ. ಒಬ್ಬರಿಗೊಬ್ಬರು ಆಗಬೇಕಿದೆ. ಆದ್ದರಿಂದ ನಾನು ಹೀಗೆ ತೆರೆದುಕೊಳ್ಳುತ್ತಿದ್ದೇನೆ' ಎಂಬ ರೀತಿ ಆಪ್ತತೆ, ಆರ್ದ್ರತೆ.

ಎಲ್ಲರೂ ನಮ್ಮವರೇ ಎಂದೇ.

ಎಲ್ಲರೂ ನಮ್ಮವರೇ ಎಂದೇ.

ಕಯ್ಯಾರರ ರಾಷ್ಟ್ರಪ್ರೇಮ ಅಸಾಧಾರಣವಾದದ್ದು. ಸ್ವಾತಂತ್ರ್ಯ ಪ್ರೀತಿ ಅಸಾಮಾನ್ಯವಾದದ್ದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅವರು ಇನ್ನಿಲ್ಲದಂತೆ ಸಂಭ್ರಮಿಸಿದರು. ಭಾವಾವೇಶವಿಲ್ಲದ ಕವಿ ಹಿಂದು ಮುಸ್ಲಿಂ ಕ್ರಿಸ್ತ/ಸಿಕ್ಖ ಪಾರ್ಸಿ ಸಮಸ್ತ/ಒಂದಾಗಿ ಪಡೆದ ಸ್ವಾತಂತ್ರ್ಯ ಬಂತು...ಆ ಬಾಲ ವೃದ್ಧರು/ಮಹಿಳೆಯರು ಶುದ್ಧರು/ಬಲಿದಾನವಿತ್ತ ಬಿಡುಗಡೆಯು ಬಂತು ಅಂತ ಸ್ಪಷ್ಟವಾಗುತ್ತಾರೆ.

ವರ ಕವಿ ಕಯ್ಯಾರರಿಗೆ ಆಂತರ್ಯದಲ್ಲಿರುವ ಭಾವ ಒಂದೇ-' ಆರ್ಯರೋ, ಮೊಗಲರೋ, ಕ್ರೈಸ್ತರೋ, ತಡೆಯೇನು?' ಎಲ್ಲರೂ ನಮ್ಮವರೇ ಎಂದೇ. ಇವರೆಲ್ಲರೂ ಒಂದಾಗಿ ಬದುಕದೇ ಹೋದರೆ ದೇಶಕ್ಕೆ ಶಾಂತಿಯಿಲ್ಲ, ಚಂದವಿಲ್ಲ, ಶ್ರೀಮಂತಿಕೆ ಇರುವುದಿಲ್ಲ ಎಂಬುದು ಕಯ್ಯಾರರ ಒಳಗುದಿ. ಅದಕ್ಕೇ ಅವರಿತ್ತ ಮಂತ್ರ ಘೋಷ: ಐಕ್ಯವೊಂದೆ ಮಂತ್ರ: ಐಕ್ಯದಿಂದೆ ಸ್ವತಂತ್ರ ಐಕ್ಯಗಾನದಿ ರಾಷ್ಟ್ರ ತೇಲುತಿರಲಿ.. ಕಯ್ಯಾರರ ಸಾಹಿತ್ಯದ ಮರು ಓದು ಈಗಿನ ತುರ್ತಾಗಿದೆ.

ಸ್ವಾತಂತ್ರ್ಯ ಹೋರಾಟದ ದಿನಗಳು

ಸ್ವಾತಂತ್ರ್ಯ ಹೋರಾಟದ ದಿನಗಳು

ಕಯ್ಯಾರರು ಗಾಂಧಿವಾದಿ. ಖಾದಿ ದಾರಿ. ಒಂದು ಮುಂಡು, ನಿಲುವಂಗಿ, ಹೆಗಲಿಗೊಂದು ಶಾಲು-ಎಲ್ಲವೂ ಖಾದಿಯೇ. 1940ರ ದಶಕದಲ್ಲಿ ಗಾಂಧೀಜಿಯವರಿಂದ ಪ್ರಭಾವಿತರಾದವರು ಕಯ್ಯಾರರು. ದೇಶಕ್ಕೆ ಸ್ವಾತಂತ್ರ್ಯ ಅತ್ಯಗತ್ಯ. ಅದಕ್ಕಾಗಿ ಹೋರಾಡುವುದು ಕರ್ತವ್ಯ ಎಂದು ಆಗ ದೃಢವಾಗಿ ನಿರ್ಧರಿಸಿದರು, ತನ್ನನ್ನು ಕೊಟ್ಟುಕೊಂಡರು ಕೂಡ.

1941ರಲ್ಲಿ ಆದದ್ದೇನು? ಸತ್ಯಾಗ್ರಹಿ-ವೈಕ್ತಿಕ ಸತ್ಯಾಗ್ರಹಿಯಾಗಿ ಇವರ ಆಯ್ಕೆ. ಯಾರಿಂದ? ಗಾಂಧೀಜಿಯವರಿಂದ. ಇದು ಕಯ್ಯಾರರ ಉಜ್ವಲ ರಾಷ್ಟ್ರ ಭಕ್ತಿಗೆ ಸಂದ ಗೌರವ. ಕಯ್ಯಾರರ ಹೆಮ್ಮೆಯ ಪುಟಗಳಲ್ಲಿ ಈ ಘಟನೆಗೆ ದಪ್ಪಕ್ಷರದ ಮರ್ಯಾದೆ.

ಆ ವರ್ಷವೇ ನೆರೆ ಹಾವಳಿಯಿಂದ ನೊಂದ ದ.ಕ. ಜಿಲ್ಲೆಗೆ ನೆರವಾಗಲೂ ಗಾಂಧಿಜಿ ನೇಮಿಸಿದ್ದೂ ಕಯ್ಯಾರರನ್ನೇ. ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಕಯ್ಯಾರರು ಭಾಗಿ. ಆದರೆ ಪರೋಕ್ಷವಾಗಿ ಅಲ್ಲ, ಅಪರೋಕ್ಷವಾಗಿ. ಅದು ಹಿರಿಯ ಹೋರಾಟಗಾರರ ಅಪೇಕ್ಷೆ. ಹಾಗಾಗಿಯೂ ಭೂಗತರಾಗಿ ಕಯ್ಯಾರರು ಚಟುವಟಿಕೆಗಳನ್ನು ಗುಪ್ತವಾಘಿ ಊರೂರಿಗೆ ತಲುಪಿಸುತ್ತಾರೆ!

ತುಳುವಪ್ಪೆಯ ಮಗ,

ತುಳುವಪ್ಪೆಯ ಮಗ,

ಕಯ್ಯಾರರು ಕನ್ನಡಾಭಿಮಾನಿ. ಸಂಸ್ಕೃತ ಭಾಷಾ ಪ್ರೇಮಿ. ಸಂಸ್ಕೃತದಲ್ಲೂ ಅಪಾರವಾದ ಪಾಂಡಿತ್ಯ ಉಳ್ಳವರು. ಐದು ಉಪನಿಷತ್ತುಗಳ ಕನ್ನಡಾನುವಾದವನ್ನೊಳಗೊಂಡ ಸಂಸ್ಕೃತದ ಮಹಾನ್ ವಿದ್ವಾಂಸರ ಬಹು ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಕೃತವನ್ನೇ ಆಗಲಿ, ಇನ್ಯಾವುದೇ ಭಾಷೆಯನ್ನಾಗಲೀ ದ್ವೇಷಿಸುವುದನ್ನು ಕಯ್ಯಾರರು ದ್ವೇಷಿಸುತ್ತಾರೆ.

ತುಳುವಪ್ಪೆಯ ಮಗ: ಕಯ್ಯಾರರನ್ನು ಹೆತ್ತವಳು ತುಳು ತಾಯಿ. 'ನನ್ನನ್ನು ನವ ಮಾಸ ಗರ್ಭದಲ್ಲಿಟ್ಟು ಮತ್ತೆ ಈ ಲೋಕದ ಬೆಳಕನ್ನು ಪ್ರಥಮತಃ ತೋರಿಸಿ ಲಾಲಿಸಿದ ಆ ತುಳು ತಾಯಿಯ ಋಣ ದೊಡ್ಡದು; ಎಂದು ಕಯ್ಯಾರರು ಕೃತಜ್ಞತಾಪೂರ್ವಕ ನಿವೇದಿಸಿಕೊಂಡಿದ್ದಾರೆ.

ಆದ್ದರಿಂದಲೇ ತುಳು ಭಾಷೆಗೆ ಸಂಬಂಧಿಸಿದ ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ ಕಯ್ಯಾರರು ಅಭಿಮಾನದಿಂದಲೇ ಭಾಗವಹಿಸಿದ್ದಾರೆ. 'ಎನ್ನಪ್ಪೆ ತುಳುವಪ್ಪೆ' (ನನ್ನ ತಾಯಿ ತುಳು ತಾಯಿ) ಎಂಬ ತುಳು ಕವನ ಸಂಕಲನ ತುಳುವಿನಲ್ಲೂ ಕಯ್ಯಾರರಿಗಿರುವ ಹಿಡಿತಕ್ಕೆ ಈ ಕೃತಿ ಶಕ್ತ ಸಾಕ್ಷಿ.

ಕಯ್ಯಾರರಿಂದ ಮಲಯಾಳ ಸಾಹಿತ್ಯವೂ ಕನ್ನಡಕ್ಕೆ. ಕೇರಳದ ಮಹಾಕವಿ ಮಹಾಕವಿ ಕುಮಾರನ್ ಆಶಾನರ ಮೂರು ಕವಿತೆಗಳು ಇವರ ಲಯದಲ್ಲಿ, ಛಂದದಲ್ಲಿ ಪಡಿಮೂಡಿದೆ. ಮಲಯಾಳ ಸಾಹಿತ್ಯ ಚರಿತ್ರೆ ಕೂಡ ಸೊಗಸಾದ ಅನುವಾದವೇ.

ಕಯ್ಯಾರರ ಉದ್ಘೋಷ

ಕಯ್ಯಾರರ ಉದ್ಘೋಷ

ಅಂತಾರಾಷ್ಟ್ರೀಯ ಭಾಷೆ ಎನ್ನುವ ಉದಾರನೀತಿಯಿಂದ ಇಂಗ್ಲಿಷ್‌ನ್ನು ಕಲಿಸುವುದಾದರೆ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಭಾಷೆಯಲ್ಲೇ ಕಲೀಬೇಕು. ಅನಂತರ ವಿದೇಶಗಳಲ್ಲೇ ಹೋಗಿ ನೆಲೆಸುವುದು ಎಂಬ ನಿರ್ಧಾರಕ್ಕೆ ಬಂದರೆ, ಅನಿವಾರ್ಯವಾದರೆ ಕಲಿಯಬಹುದು. ಹಾಗಲ್ಲದೆ ಕನ್ನಡದ ಹೊರತಾಗಿ ಆಂಗ್ಲ ಭಾಷೆಯಲ್ಲಿ ಎಳವೆಯಲ್ಲಿ ಶಿಕ್ಷಣ ನೀಡುವುದು ಅನ್ಯಾಯ, ಅಧರ್ಮ, ಅಸತ್ಯ....

'ನಾವು ಕಾಸರಗೋಡಿನವರು ತುಳುವರಾದರೂ, ಕೊಂಕಣಿಗರಾದರೂ ಯಾವುದೇ ಮಾತೃಭಾಷೆಯವರಾದರೂ ಕನ್ನಡಿಗರು. ಕನ್ನಡಿಗರು, ಕೇರಳೀಯರು, ತಮಿಳರು ಏನೇ ಆಗಿದ್ದರೂ ಭಾರತೀಯರು ಎಂಬ ವಿಶಾಲಮತಿತ್ವಕ್ಕೆ ಕಾಸರಗೋಡು ಸಹಿತವಾದ ದಕ್ಷಿಣ ಕನ್ನಡ ಪ್ರದೇಶ ಉತ್ತಮ ಆದರ್ಶ.

English summary
Hundreds of people bid farewell to litterateur, freedom fighter, renowned poet and centenarian Kayyara Kinhanna Rai, popularly known as the elder brother of Kasargod, who breathed his last on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X