ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಿತು ಅಪರೂಪದ ಅಗ್ನಿಯುದ್ಧ

|
Google Oneindia Kannada News

ಮಂಗಳೂರು, ಏಪ್ರಿಲ್ 22: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ಮುಖ್ಯ ಆಕರ್ಷಣೆ 'ತೂಟೆದಾರ ಸೇವೆ'. ಎರಡು ಮಾಗಣೆಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಸ್ಥರ ನಡುವೆ ನಡೆಯುವ ಅಗ್ನಿ ಯುದ್ಧ ಸೇವೆ ನೋಡಲು ಸಾವಿರಾರು ಜನರು ಸೇರುತ್ತಾರೆ.

ಇಂದು (ಭಾನುವಾರ) ಬೆಳ್ಳಂಬೆಳಿಗ್ಗೆ ಈ ಅಗ್ನಿಯುದ್ಧ ಸೇವೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಕಳೆದ ಹಲವಾರು ಶತಮಾನಗಳಿಂದ ಈ ತೂಟೆದಾರ ಬೆಂಕಿಯ ಆಟ ನಡೆದು ಬರುತ್ತಿದ್ದು ಬೆಂಕಿ ಅನಾಹುತ, ಭಕ್ತಾದಿಗಳ ಮೈಮೇಲೆ ಗಂಭೀರ ಗಾಯಗಳುಂಟಾದ ಉದಾಹರಣೆಗಳಿಲ್ಲ. ಬೆಂಕಿಯ ಪಂಜುಗಳನ್ನು ಒಬ್ಬರ ಮೇಲೆ ಮತ್ತೊಬ್ಬರು ಎಸೆಯುವ ಈ ತೂಟೆದಾರ ಸೇವೆ ಕಟೀಲು ಕ್ಷೇತ್ರದ ಅತ್ಯಂತ ಆಕರ್ಷಣೆಯ ಸೇವೆಯಾಗಿದೆ.

7 ದಿನಗಳ ಜಾತ್ರೆ

7 ದಿನಗಳ ಜಾತ್ರೆ

ಇತಿಹಾಸ ಪ್ರಸಿದ್ದ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ದೇಶ ವಿದೇಶದ ಜನರನ್ನು ಕೈಬೀಸಿ ಕರೆಯುತ್ತದೆ. 7 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಾರೆ.

ತಾಯಿ ದುರ್ಗಾ ಪರಮೇಶ್ವರಿಯ ದರ್ಶನ ಪಡೆದು ಜನರು ಕೃತಾರ್ಥರಾಗುತ್ತಾರೆ. ಜಾತ್ರಾ ಮಹೋತ್ಸವದ ಕೊನೆಯ ದಿನ ದೇವರ ಬಲಿ ಉತ್ಸವ ನಡೆಯುತ್ತದೆ. ವಸಂತ ಮಂಟಪದಲ್ಲಿ ದುರ್ಗಾ ಪರಮೇಶ್ವರಿಗೆ ಪೂಜೆ ನಡೆದು ಬಳಿಕ ಪಲ್ಲಕಿಯಲ್ಲಿ ಎಕ್ಕಾರಿನವರೆಗೆ ಸವಾರಿ ಸಾಗುತ್ತದೆ.

ಸವಾರಿ ಹೋಗಿ ಹಿಂದೆ ಬರುವ ಸಂದರ್ಭದಲ್ಲಿ ಸಿಗುವ ದೇವರ ಕಟ್ಟೆಗಳಲ್ಲಿ ಕಟ್ಟೆ ಪೂಜೆ ನೆರವೇರಿಸಿ ಬಳಿಕ ಶ್ರೀದುರ್ಗಾ ಪರಮೇಶ್ವರಿ ಕಟೀಲಿಗೆ ಆಗಮಿಸುವ ಸಂದರ್ಭದಲ್ಲಿ ಶಿಬರೂರು ಕೊಡಮಣಿತ್ತಾಯ ದೇವರ ಭೇಟಿ ಜರುಗುತ್ತದೆ.

ನಂತರ ಕಟೀಲಿನಲ್ಲಿ ಶ್ರೀದೇವಿ ರಥಾರೂಢಳಾಗಿ ಬ್ರಹ್ಮರಥೋತ್ಸವ ಜರುಗುತ್ತದೆ. ಈ ಬ್ರಹ್ಮರಥೋತ್ಸವದ ಬಳಿಕ ನಡೆಯುವುದೇ ಅತ್ಯಂತ ಆಕರ್ಷಕ ಮೈ ಜುಮ್ಮೆನಿಸುವ ತೂಟೆದಾರ ಸೇವೆ.

ತೂಟೆದಾರ ಅಗ್ನಿ ಖೇಳಿ ಸೇವೆ

ತೂಟೆದಾರ ಅಗ್ನಿ ಖೇಳಿ ಸೇವೆ

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರ ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣ ಪ್ರಸಿದ್ಧಿಯನ್ನು ಹೊಂದಿದೆ. ವರ್ಷಂಪ್ರತಿ ಇಲ್ಲಿಯ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಜಾತ್ರಾ ಮಹೋತ್ಸವ ಅಂಗವಾಗಿ ಮಹೋತ್ಸವದ ಕೊನೆಯ ದಿನ ಹರಕೆ ಸೇವೆಯ ನಿಮಿತ್ತ ನಡೆಯುವ ತೂಟೆದಾರ ಅಗ್ನಿ ಖೇಳಿಯನ್ನು ನೋಡಲು ಸಾವಿರಾರು ಜನರು ಜಮಾಯಿಸುತ್ತಾರೆ.

ತೂಟೆದಾರ ಎಂದರೆ ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವ ಆಟ. ಜಲ ದುರ್ಗೆಯಾದಂತಹ ದುರ್ಗಾ ಪರಮೇಶ್ವರಿಗೆ ಈ ಆಟ ಇಷ್ಟವಾದ ಕಾರಣ ಈ ಆಟ ನಡೆಯುತ್ತಿದೆ ಎಂದು ಹೇಳಲಾಗಿದೆ.

ದೇವರ ಸೇವಾ ರೂಪದಲ್ಲಿ ಹಿಂದಿನಿಂದಲೂ ಈ ಖೇಳಿ ಅಥವಾ ಆಟ ನಡೆದು ಬರುತ್ತಿದ್ದು ಊರಿನ ಜನರಿಗೆ ಕಷ್ಟ ಕಾರ್ಪಣ್ಯಗಳು ಬಂದರೆ ದೇವರ ಹರಕೆ ರೂಪದಲ್ಲಿ ಈ ಸೇವೆಯನ್ನು ನಡೆಸಲಾಗುತ್ತದೆ.

ಅತ್ತೂರು - ಕೊಡೆತ್ತೂರು ಗ್ರಾಮಗಳ ಜನರ ನಡುವಿನ ಆಟ

ಅತ್ತೂರು - ಕೊಡೆತ್ತೂರು ಗ್ರಾಮಗಳ ಜನರ ನಡುವಿನ ಆಟ

ತುಳುನಾಡಿನ ಪರಂಪರೆಯ ಪ್ರತೀಕವಾಗಿರುವ ಈ ತೂಟೆದಾರ ಅಗ್ನಿಖೇಳಿ ಆಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಜನರ ನಡುವೆ ನಡೆಯುತ್ತದೆ. ಈ ಎರಡು ಗ್ರಾಮಗಳನ್ನು ಹೊರತುಪಡಿಸಿ ಬೇರೆಯವರು ಈ ಆಟದಲ್ಲಿ ಭಾಗವಹಿಸುವಂತಿಲ್ಲ. ಈ ತೂಟೆದಾರದಲ್ಲಿ ಗ್ರಾಮದ ಹೆಚ್ಚಿನ ಭಕ್ತರು ಭಾಗವಹಿಸುತ್ತಾರೆ.

ತೂಟೆದಾರದಲ್ಲಿ ಭಾಗವಹಿಸುವ ಭಕ್ತರು ಜಾತ್ರಾ ಮಹೋತ್ಸವದ ಧ್ವಜಾ ರೋಹಣದಿಂದ ಮದ್ಯ ಮಾಂಸವನ್ನು ತ್ಯಜಿಸಿ ಉಪವಾಸದಿಂದ ವೃತ ಆಚರಿಸುತ್ತಾರೆ. ಅಗ್ನಿ ಆಟದ ದಿನ ಗ್ರಾಮಸ್ಥರು ಧೋತಿಯನ್ನು ಮಾತ್ರ ತೊಡುತ್ತಾರೆ.

ಅಜಾರು ಸಮೀಪದ ಜಳಕದ ಕಟ್ಟೆಯಲ್ಲಿ ಸ್ನಾನ ಮುಗಿಸಿ ಬಂದು ಅಜಾರು ರಕ್ತೇಶ್ವರಿ ಸನ್ನಿಧಿ ಬಳಿ ಅತ್ತೂರು ಮತ್ತು ಕೊಡೆತ್ತೂರು ಗ್ರಾಮದ ನಿವಾಸಿಗಳು ಎರಡು ತಂಡಗಳಾಗಿ ವಿಂಗಡಿಸಿ ಒಬ್ಬರ ಮೇಲೊಬ್ಬರು ತೂಟೆ ಅಥವಾ ಪಂಜನ್ನು ಎಸೆಯುತ್ತಾರೆ.

ವೈರಿಗಳಂತೆ ಬೆಂಕಿ ಯುದ್ಧ

ವೈರಿಗಳಂತೆ ಬೆಂಕಿ ಯುದ್ಧ

ಆಪ್ತರಾಗಿರುವ ಅತ್ತೂರು ಕೊಡೆತ್ತೂರು ಮಾಗಣಿಯ ವೃತದಲ್ಲಿರುವ ಜನರು ತೂಟೆದಾರ ಖೇಳಿ ಸಂದರ್ಭದಲ್ಲಿ ಮಾತ್ರ ಅಕ್ಷರಶಃ ವೈರಿಗಳಂತೆ ಬೆಂಕಿ ಯುದ್ದದಲ್ಲಿ ಕಾದಾಡುತ್ತಾರೆ. ಹೀಗೆ ಮೂರು ಸುತ್ತು ಬೆಂಕಿಯ ಪಂಜನ್ನೆ ಎಸೆಯುವ ಯುದ್ಧವೇ ಅಲ್ಲಿ ನಡೆಯುತ್ತದೆ.

ನಂತರ ಅಲ್ಲಿಂದ ಬಂದು ದೇವಾಲಯದ ರಥ ಬೀದಿಯಲ್ಲಿ ಎರಡು ತಂಡಗಳು ಒಬ್ಬರ ಮೇಲೊಬ್ಬರು ಉರಿಯುವ ತೂಟೆಗಳನ್ನು ಎಸೆಯುತ್ತಾರೆ. ಹೀಗೆ ಮೂರು ಸುತ್ತುಗಳು ನಡೆಯುತ್ತದೆ. ಇದು ಅತಿರೇಕಕ್ಕೆ ಹೋಗದಂತೆ ಮಧ್ಯದಲ್ಲಿ ಗಾಮಗಳಿಗೆ ಸಂಬಂಧಪಟ್ಟ ಗುತ್ತು ಬರ್ಕೆಯವರು ಹತೋಟಿಗೆ ತರುತ್ತಾರೆ.

ಇದು ನೋಡುತ್ತಿರುವವರಿಗೆ ಮನರಂಜನೆಯಾದರೂ ಇದರ ಹಿಂದೆ ಧಾರ್ಮಿಕ ನಂಬಿಕೆಯು ಇದೆ. ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರುವುದು ಎಂಬ ಪ್ರತೀತಿಯೂ ಇದೆ.

ಅನಾಹುತ ನಡೆದ ಉದಾಹರಣೆಗಳಿಲ್ಲ

ಅನಾಹುತ ನಡೆದ ಉದಾಹರಣೆಗಳಿಲ್ಲ

ಈ ಬೆಂಕಿ ಆಟ ಸಂದರ್ಭದಲ್ಲಿ ಎರಡು ಊರಿನ ಜನರಿಗೆ ಕುಂಕುಮ ಹಾಗೂ ಹೂವು ನೀಡಲಾಗುತ್ತದೆ. ಈ ಆಟದಲ್ಲಿ ಭಾಗವಹಿಸುವವರೆಲ್ಲರೂ ಗಂಡಸರಾದರೂ ಹೂ ಮುಡಿಯುತ್ತಾರೆ. ದೇಹಕ್ಕೆ ಕುಂಕುಮ ಲೇಪನ ಮಾಡಿಕೊಳ್ಳುತ್ತಾರೆ. ಈ ತೂಟೆದಾರ ಸಂದರ್ಭದಲ್ಲಿ ಈವರೆಗೆ ಯಾವುದೇ ಅನಾಹುತಗಳು ನಡೆದ ಉದಾರಹಣೆಗಳಿಲ್ಲ.

ಈ ಬೆಂಕಿ ಚೆಂಡು ಆಟ ಅಥವಾ ತೊಟೆದಾರ ಖೇಳಿ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ. ಜಾತ್ರಾ ಮಹೋತ್ಸವದ ಆಕರ್ಷಣೆಯೂ ಹೌದು. ವರ್ಷಂಪ್ರತಿ ಈ ತೂಟೆದಾರ ಖೇಳಿಯ ವೀಕ್ಷಿಸಲು ದೂರದೂರದಿಂದ ಸಾವಿರಾರು ಜನರು ಆಗಮಿಸಿ ಹರಕೆಯ ಖೇಳಿಯನ್ನು ಕಣ್‌ತುಂಬಿಕೊಳ್ಳುತ್ತಾರೆ. ಈ ಬಾರಿಯೂ ಸಾವಿರಾರು ಜನರು ತೂಟೆದಾರ ಖೇಳಿಗೆ ಸಾಕ್ಷಿಯಾದರು.

English summary
On account of jathra mahotsava of Kateelu Shri Durgaparameshwari, a Agni Seva has been performed today morning in Kateelu. This ritual is call ‘Tootedara’ or Agni Keli. The devotees of 2 village lit fire and throw at each other. They use dried coconut leaf to prepare the fire torches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X