ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟನ್‌ಗಟ್ಟಲೆ ಕಸವನ್ನು ಹೊರಹಾಕಿದ ಅರಬ್ಬೀ ಸಮುದ್ರ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 24: ಪಶ್ಚಿಮ ಕರಾವಳಿಯುದ್ದಕ್ಕೂ ವಿಶಾಲವಾಗಿ ಮೈ ಚಾಚಿರುವ ಅರಬ್ಬೀ ಸಮುದ್ರ. ಅರಬ್ಬೀ ಸಮುದ್ರದ ಅಲೆಗಳನ್ನು ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಪ್ರವಾಸಿಗರು. ಸಮುದ್ರ ರಾಜನ ಅಬ್ಬರ, ಅಲೆಗಳ ಏರಿಳಿತ, ಪಡುವಣ ದಿಕ್ಕಿನಿಂದ ಬರುವ ತಂಪಾದ ತಂಗಾಳಿ, ಇಳಿ ಸಂಜೆಯ ಹೊತ್ತು ಹಾಗೆಯೇ ಒಂದು ಕ್ಷಣ ಕಡಲತಡಿಯಲ್ಲಿ ಹೆಜ್ಜೆ ಹಾಕಿದರೆ ಮನಸ್ಸು ಹಗುರವಾಗಿ ಹಾಯಾಗೆನಿಸುತ್ತದೆ.

ಆದರೆ ಪೃಕೃತಿ ನಮಗೆ ನಿಸ್ವಾರ್ಥವಾಗಿ ಖುಷಿಯನ್ನು ಧಾರೆಯೆರೆದು ಕೊಟ್ಟರೆ, ನಾವು ಪೃಕೃತಿಗೆ ಮರಳಿ ಕೊಟ್ಟಿದ್ದೇನು? ನಾವು ಏನು ಕೊಟ್ಟಿದ್ದೇವೆ ಎಂದು ಕಣ್ಣಾರೆ ನೋಡಬೇಕೆಂದರೆ ನೀವು ಈಗ ಒಮ್ಮೆ ಮಂಗಳೂರಿನ ಪಣಂಬೂರು ಕಡಲ ಕಿನಾರೆಗೆ ಭೇಟಿ ನೀಡಬೇಕು.

ಎಲ್ಲಿ ನೋಡಿದರೂ ರಾಶಿ ರಾಶಿ ಪ್ಲಾಸ್ಟಿಕ್ ಕಸ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಪ್ಲಾಸ್ಟಿಕ್ ಅವಶೇಷಗಳು. ಮಕ್ಕಳ ಡೈಪರ್‌ನಿಂದ ಹಿಡಿದು, ಮೋಜು ಮಸ್ತಿಯ ಬಿಯರ್ ಬಾಟಲಿಗಳು. ಈ ದೃಶ್ಯ ಕಂಡುಬಂದಿದ್ದು ಯಾವುದೋ ಡಂಪಿಗ್ ಯಾರ್ಡ್‌ನಲ್ಲಿ ಅಲ್ಲ. ಕಡಲನಗರಿ ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ. ಮನುಷ್ಯ ತನ್ನೊಳಗೆ ತುರುಕಿದ್ದ ಎಲ್ಲಾ ವಸ್ತುಗಳನ್ನು ಕಡಲು, ತನ್ನ ಒಡಲಿಂದ ಹೊರಗೆ ಹಾಕಿದೆ.

 ಕಸದ ರಾಶಿ ಟನ್‌ಗಟ್ಟಲೆ ಬಂದು ಬಿದ್ದಿದೆ

ಕಸದ ರಾಶಿ ಟನ್‌ಗಟ್ಟಲೆ ಬಂದು ಬಿದ್ದಿದೆ

ಬೀಚ್ ಬದಿಗಳಿಗೆ ಮೋಜು- ಮಸ್ತಿ ಮಾಡಲು ಬರುವ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ಬಾಟಲಿ, ಮಕ್ಕಳ ಆಟಿಕೆ, ತಿಂಡಿ ತಿನಿಸಿನ ಪ್ಲಾಸ್ಟಿಕ್, ಬಟ್ಟೆಗಳು ಸೇರಿ ಎಲ್ಲವನ್ನೂ ಸಮುದ್ರ ಒಂದು ರಾತ್ರಿಯಲ್ಲೇ ಹೊರ ಹಾಕಿದೆ. ಸುಮಾರು ಕಿಲೋ‌ಮೀಟರ್‌ನಷ್ಟು ಕಸದ ರಾಶಿ ಟನ್‌ಗಟ್ಟಲೆ ಬಂದು ಬಿದ್ದಿದೆ. ಸಮುದ್ರ ನಾವು ಕೊಟ್ಟಿದ್ದನ್ನು ನಮಗೇ ವಾಪಸ್ ಕೊಟ್ಟಿದೆ.

 ಕಸ ಹೊರ ಹಾಕುವುದಕ್ಕೆ ವೈಜ್ಞಾನಿಕ ಕಾರಣ

ಕಸ ಹೊರ ಹಾಕುವುದಕ್ಕೆ ವೈಜ್ಞಾನಿಕ ಕಾರಣ

"ಸಮುದ್ರ ಈ ರೀತಿ ಕಸವನ್ನು ಹೊರ ಹಾಕುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಕಡಲ ತಡಿಗೆ ಕಸ ಬಂದು ಬಿದ್ದ ದಿನ‌ ಹುಣ್ಣಿಮೆಯಾಗಿದ್ದರಿಂದ ಕಡಲ ಅಲೆಗಳ ಅಬ್ಬರ ಕೂಡಾ ಜೋರಾಗಿ ಇರುತ್ತದೆ. ಅಲೆಗಳು ಸಾಮಾನ್ಯವಾಗಿ ಎಂತಹ ಘನ ವಸ್ತುಗಳನ್ನಾದರೂ ದಡಕ್ಕೆ ಎಸೆಯುತ್ತದೆ. ಅಲೆಗಳ ಸಾಮರ್ಥ್ಯದ ಮುಂದೆ ನಮ್ಮ ಕಸ- ಕಡ್ಡಿ ಯಾವುದೂ ಲೆಕ್ಕಕ್ಕೆ ಇಲ್ಲ. ಮುಂಬೈನಂತಹ ಮಹಾನಗರಗಳಲ್ಲಿ ಈ ರೀತಿಯ ಕಸವನ್ನು ಸಮುದ್ರ ಹೊರ ಹಾಕುವುದನ್ನು ಕಂಡಿದ್ದೇವೆ. ಈಗ ನಮ್ಮ ಮಂಗಳೂರಿನಲ್ಲಿ ಈ ರೀತಿಯ ರಾಶಿಗಟ್ಟಲೆ ತ್ಯಾಜ್ಯ ಹೊರ ಬಂದಿರುವುದರಿಂದ ಆಶ್ಚರ್ಯವಾಗಿದೆ. ಇದು ಪ್ರಕೃತಿಯ ಕೊನೆ ಎಚ್ಚರಿಕೆಯೂ ಆಗಿರಬಹುದು," ಅಂತಾ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಪ್ರೋ. ಕೆ.ವಿ. ರಾವ್ ಹೇಳಿದ್ದಾರೆ

 ಕಸ ತೆರವುಗೊಳಿಸುವುದಕ್ಕೂ ವ್ಯವಸ್ಥೆಗಳಿಲ್ಲ

ಕಸ ತೆರವುಗೊಳಿಸುವುದಕ್ಕೂ ವ್ಯವಸ್ಥೆಗಳಿಲ್ಲ

ಪಣಂಬೂರು ಕಡಲ ಕಿನಾರೆ ಕಸದ ರಾಶಿಯಿಂದ ತುಂಬಿ ಹೋಗಿದ್ದು, ಸದ್ಯ ಕಸವನ್ನು ತೆರವುಗೊಳಿಸುವುದಕ್ಕೂ ವ್ಯವಸ್ಥೆಗಳಿಲ್ಲ. ಈ ಹಿಂದಿನ ವರ್ಷಗಳಲ್ಲಿ‌ ಸಮುದ್ರ ಹೊರಗೆಸೆಯುವ ಕಸವನ್ನು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಮಾಡುತ್ತಿತ್ತು. ಆದರೆ ಈಗ ಆ ಸಮಿತಿಯ ಅವಧಿ ಮುಗಿದಿದ್ದರಿಂದ ಕಸ ತೆಗೆಯುವುದಕ್ಕೆ ಜನರಿಲ್ಲದಂತಾಗಿದೆ. ಪಣಂಬೂರು ಕಡಲ ಕಿನಾರೆಗೆ ಅತೀ ಹೆಚ್ಚು ಪ್ರವಾಸಿಗರು ಬರುವುದರಿಂದ ನಿರ್ವಹಣೆಯೂ ಕಷ್ಟವಾಗಿದೆ. ಪ್ರವಾಸಿಗರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಕಸಗಳೆಲ್ಲಾ ನಿರಾಸಯವಾಗಿ ಸಮುದ್ರ ಸೇರುತ್ತಿದೆ. ಅಲ್ಲಲ್ಲಿ ಕಸದ ಡಬ್ಬಗಳನ್ನಿಟ್ಟರೂ, ಪ್ರವಾಸಿಗರು ಮಾತ್ರ ಕಸವನ್ನು ಡಬ್ಬದ ಬದಲು ಬೇರೆಲ್ಲಾ ಕಡೆ ಹಾಕುವುದರಿಂದ ಸಮುದ್ರ ತೀರವೂ ಮಾಲಿನ್ಯವಾಗುತ್ತಿದೆ.

Recommended Video

ಪಾಕಿಸ್ತಾನ ಬಾಂಗ್ಲಾದೇಶದ ಮುಸ್ಲಿಂರನ್ನು ಇಲ್ಲಿಗೆ ತುಂಬಿಸ್ಕೊಂಡಿದ್ರೆ ಪರಿಸ್ಥಿತಿ ಏನಾಗ್ತಿತ್ತು ? | Oneindia
 ತೀರ ಕಸದ ರಾಶಿಯಿಂದ ತುಂಬಿದೆ

ತೀರ ಕಸದ ರಾಶಿಯಿಂದ ತುಂಬಿದೆ

ಹೀಗಾಗಿ ಸಮುದ್ರ ತೀರ ಕಸದ ರಾಶಿಯಿಂದ ತುಂಬಿದೆ. ‌ಹೀಗಾಗಿ ಸಾರ್ವಜನಿಕರ ದೂರಿನ ಅನ್ವಯ ಮಂಗಳೂರಿನ ಪೌರ ಕಾರ್ಮಿಕರು ಈಗ ಕಸ ತೆರವಿಗೆ ಮುಂದಾಗಿದ್ದಾರೆ. ಜೊತೆಗೆ ಕಡಲಿಗೆ ಸೇರುವ ಉಪನದಿಗಳೂ ಕಸ ತ್ಯಾಜ್ಯದಿಂದ ತುಂಬಿ ಹೋಗಿರುವುದರಿಂದ ಅರಬ್ಬೀ ಸಮುದ್ರ ಸಂಪೂರ್ಣ ಮಾಲಿನ್ಯವಾಗುತ್ತಿದೆ.

ಅದೇನೇ ಆದರೂ ಸಮುದ್ರ ಕಸವನ್ನು ಹೊರಗೆ ಹಾಕಿ, ಪ್ರಕೃತಿ ಮುಂದೆ ಮನುಷ್ಯನನ್ನು ಮತ್ತೆ ಬೆತ್ತಲೆ ಮಾಡಿದೆ. ದೊಡ್ಡ ದೊಡ್ಡ ಪದವಿಗಳನ್ನು ಪಡೆದು, ಸುಕ್ಷಿತರೆನ್ನುವ ನಾವು, ಪ್ರಕೃತಿಗೇ ದ್ರೋಹ ಬಗೆದು ದಡ್ಡರಾಗಿದ್ದು ಮಾತ್ರ ದುರಂತವಾಗಿದೆ.

English summary
Tons of Garbage came out from Arabian Sea in Panambur beach of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X