ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ: ಮಣ್ಣಿನ ದಂಧೆಗೆ ನಲುಗಿದ ಗ್ರಾಮಸ್ಥರು; ಆಂಧ್ರಪ್ರದೇಶಕ್ಕೆ ಅಕ್ರಮ ಮಣ್ಣು ಸಾಗಾಟ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 21: ಕರಾವಳಿಯಲ್ಲಿ ನಡೆಯುವ ಅವ್ಯಾಹತ ದಂಧೆಯ ಪಾಲಿಗೆ ಈಗ ಮಣ್ಣುಗಾರಿಕೆಯೂ ಸೇರ್ಪಡೆಗೊಂಡಿದೆ. ಮರಳುಗಾರಿಕೆಯ ಜೊತೆಗೆ ಮಣ್ಣು ದಂಧೆಯೂ ಭಾರೀ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಬೆಟ್ಟ- ಗುಡ್ಡಗಳನ್ನು ಅಗೆದು ಮಣ್ಣನ್ನು ಹೊರ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದೆ.

ಮರಳು ಮಾಫಿಯಾಕ್ಕೆ ಹೆಸರುವಾಸಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಣ್ಣು ದಂಧೆ ಆರಂಭಗೊಂಡಿದೆ. ಕೃಷಿ ಭೂಮಿ, ಕುಮ್ಕಿ ಜಮೀನು ಹೀಗೆ ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಕನ್ನಡ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹಲವೆಡೆ ಇಂತಹ ಮಣ್ಣು ಸಾಗಾಟದ ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ ಇಲ್ಲಿನ ಮಣ್ಣಿಗೆ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ. ಇದೇ ರೀತಿ ಶಾಸಕರೋರ್ವರ ಜಮೀನಿನಲ್ಲಿ ನಡೆಸಲಾಗುತ್ತಿರುವ ಮಣ್ಣಿನ ವ್ಯಾಪಾರ ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

 ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ

ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ

ಮರಳು ಮಾಫಿಯಾದ ಬಳಿಕ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಣ್ಣಿನ ಮಾಫಿಯಾ ಹೆಚ್ಚಾಗುತ್ತಿದೆ. ವರ್ಗ ಭೂಮಿಯ ಜೊತೆಗೆ ಸರಕಾರಿ ಭೂಮಿಯನ್ನೂ ಸೇರಿಸಿಕೊಂಡು ಜಿಲ್ಲೆಯಲ್ಲಿ ಇದೀಗ ಮಣ್ಣಿನ ವ್ಯವಹಾರ ಆರಂಭಗೊಂಡಿದೆ. ಇವುಗಳಲ್ಲಿ ಕೆಲವು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿಯೊಂದಿಗೆ ನಡೆದರೆ, ಇನ್ನು ಹೆಚ್ಚಿನ ಕಡೆಗಳಲ್ಲಿ ಅಕ್ರಮವಾಗಿಯೇ ನಡೆಯುತ್ತಿದೆ. ಆಂಧ್ರಪ್ರದೇಶ ಹಾಗೂ ಇತರ ಭಾಗದಲ್ಲಿ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲವು ಕಡೆಗಳಲ್ಲಿ ಸಿಗುವಂತಹ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ.

 ಮಣ್ಣು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ

ಮಣ್ಣು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ

ಇಂಥಹುದೇ ಒಂದು ಮಣ್ಣಿನ ವ್ಯವಹಾರ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್‌ರವರ ಮಾಲೀಕತ್ವದ ಜಮೀನಿನಲ್ಲೂ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆಕಲ್ಲು ಎಂಬಲ್ಲಿ ಸುಮಾರು 39 ಎಕರೆ ಜಮೀನು ಬಿ.ಎಂ. ಫಾರೂಕ್‌ಗೆ ಸೇರಿದ್ದು, ಇದರಲ್ಲಿ 5 ಎಕರೆ ಜಾಗದಲ್ಲಿ ಮಣ್ಣು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಈ ಕಾರಣಕ್ಕಾಗಿ ಕಳೆದ ಕೆಲವು ತಿಂಗಳಿನಿಂದ ಇಲ್ಲಿ ಮಣ್ಣು ಅಗೆಯುವ ಕಾರ್ಯ ಆರಂಭಗೊಂಡು, ಮಣ್ಣು ಆಂಧ್ರಪ್ರದೇಶಕ್ಕೂ ಸಾಗಿಸಲಾಗುತ್ತಿದೆ. ಆದರೆ ಈ ಮಣ್ಣು ಸಾಗಾಟದ ಲಾರಿಗಳಿಂದಾಗಿ ಸ್ಥಳೀಯ ಜನರು ಪ್ರಾಣಭಯದಿಂದ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

 ಲಾರಿಯೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ

ಲಾರಿಯೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ

ಅಲ್ಲದೆ ಹೊಸದಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ 10 ಮತ್ತು 16 ಚಕ್ರದ ಬೃಹತ್ ಲಾರಿಗಳು ಓಡಾಟ ನಡೆಸುವುದರಿಂದಾಗಿ ಹೊಸ ರಸ್ತೆಯು ಇದೀಗ ಭಾರೀ ಗಾತ್ರದ ಲಾರಿಗಳ ಭಾರ ತಾಳಲಾರದೆ ಹಾಳಾಗುತ್ತಿದೆ. ಅಲ್ಲದೆ ಈ ಹಿಂದೆ ಇದೇ ಲಾರಿಯೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸವಾರನೋರ್ವ ಮೃತಪಟ್ಟಿದ್ದಾನೆ. ಈ ಕಾರಣಕ್ಕಾಗಿ ಈ ಭಾರೀ ಗಾತ್ರದ ಲಾರಿಗಳಿಗೆ ಈ ಭಾಗದಲ್ಲಿ ಓಡಾಡಲು ಅವಕಾಶ ನೀಡಬಾರದೆಂದು ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹೀಗೆ ಎಲ್ಲಾ ಇಲಾಖೆಗಳಿಗೂ ಸ್ಥಳೀಯರು ಮನವಿ ಮಾಡಿದ್ದಾರೆ.

ಪಾದೆಕಲ್ಲಿನಿಂದ ಲೋಡ್ ಮಾಡಿದ ಮಣ್ಣನ್ನು ಈ ಲಾರಿಗಳು ವಿಟ್ಲ- ಕಲ್ಲಡ್ಕ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ-75ಕ್ಕೆ ಸಾಗುತ್ತಿದ್ದು, ವಿಟ್ಲ- ಕಲ್ಲಡ್ಕ ರಸ್ತೆಯಲ್ಲಿ ಇಂತಹ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಹೀಗಿದ್ದರೂ ಈ ಲಾರಿಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

 ಪರ್ಮೀಟ್‌ಗಿಂತ ಹೆಚ್ಚು ಲೋಡ್ ಮಣ್ಣು ಸಾಗಾಟ

ಪರ್ಮೀಟ್‌ಗಿಂತ ಹೆಚ್ಚು ಲೋಡ್ ಮಣ್ಣು ಸಾಗಾಟ

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾಲೀಕತ್ವದ ಈ ಜಮೀನಿನಲ್ಲಿ 5 ವರ್ಷಗಳ ಕಾಲ ಮಣ್ಣು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೇವಲ 1.57 ಲಕ್ಷ ರೂಪಾಯಿಗಳ ರಾಜಸ್ವ ನಿಗದಿಪಡಿಸಿದೆ. ಆದರೆ ಇಲ್ಲಿ ದಿನಕ್ಕೆ 10 ರಿಂದ 15 ಲಾರಿಗಳು ಮಣ್ಣು ಸಾಗಿಸುತ್ತಿದ್ದು, ಲೋಡ್ ಒಂದಕ್ಕೆ ಕನಿಷ್ಟ 25ರಿಂದ 30 ಸಾವಿರ ರೂಪಾಯಿಗಳನ್ನು ಪಡೆಯಲಾಗುತ್ತಿದೆ. ಇಂತಹುದೇ ರೀತಿಯ ಮಣ್ಣು ಸಾಗಾಟದ ಜಮೀನುಗಳು ಬಂಟ್ವಾಳ ತಾಲೂಕಿನ ಮುಡಿಪು, ಇರಾ, ಕನ್ಯಾನ ಹೀಗೆ ಹಲವು ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ಕಡಿಮೆ ರಾಜಸ್ವವನ್ನು ಸಂಗ್ರಹಿಸಿ ಸರಕಾರ ಕೋಟಿಗಟ್ಟಲೆ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಕಾನೂನಿನ ಮೂಲಕವೇ ಅವಕಾಶ ನೀಡಿದೆ.

ಈ ಮಣ್ಣು ಆಂಧ್ರಪ್ರದೇಶಕ್ಕೆ ರವಾನೆಯಗುತ್ತಿದೆ. ಸಿಮೆಂಟ್ ಉತ್ಪಾದನೆಗೆ ಈ ಮಣ್ಣು ಪೂರಕವಾದ ಹಿನ್ನಲೆಯಲ್ಲಿ ನಿಗದಿತ ಪರ್ಮೀಟ್‌ಗಿಂತ ಹೆಚ್ಚು ಲೋಡ್ ಮಣ್ಣು ಸಾಗಾಟವಾಗುತ್ತಿದೆ ಅನ್ನುವುದು ಸ್ಥಳೀಯರ ಆರೋಪವಾಗಿದೆ. ಇದೇ ರೀತಿಯ ಪ್ರಕ್ರಿಯೆ ನಡೆದಲ್ಲಿ ಬಳ್ಳಾರಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಣ್ಣಿನ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಸಾರ್ವಜನಿಕ ಅಭಿಪ್ರಾಯಪಟ್ಟಿದ್ದಾರೆ.

Recommended Video

ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ:CM ಬೊಮ್ಮಾಯಿ ಭಾವುಕರಾಗಿದ್ಯಾಕೆ?? | Oneindia Kannada

English summary
Soil mafia is on the rise in the Dakshina Kannada district after the sand mafia and illegal soils are being transported to Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X