ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ ಸ್ಯಾಕ್ಸೊಫೋನ್ ಮಾಂತ್ರಿಕ

By ಐಸಾಕ್ ರಿಚರ್ಡ್ಸ್
|
Google Oneindia Kannada News

ಮಂಗಳೂರು, ಅಕ್ಟೋಬರ್ 4: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ 'ಸ್ವಚ್ಛತಾ ಹೀ ಸೇವಾ' ಅಭಿಯಾನಕ್ಕೆ ದೇಶದಾದ್ಯಂತ ಕಲಾವಿದರು ತಮ್ಮ ಕೊಡುಗೆ ನೀಡಲು ಮುಂದಾಗುತ್ತಿದ್ದಾರೆ. ಇದೀಗ ಈ ಅಭಿಯಾನಕ್ಕೆ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಸ್ಪಂದಿಸಿದ್ದಾರೆ .

ಕಲೈಮಾಮಣಿ ಎಂದೇ ಪ್ರಸಿದ್ಧರಾಗಿರುವ ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥ್ ಪ್ರಧಾನಿ ನರೇಂದ್ರ ಮೋದಿ ಅವರ ಪತ್ರಕ್ಕೆ ಸ್ಪಂದಿಸಿ ರಾಷ್ಟ್ರೀಯ ಸ್ವಚ್ಛತಾ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ .

ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕದ್ರಿ ಗೋಪಾಲನಾಥ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ನೆಲೆಯಲ್ಲಿ ಪತ್ರ ಬರೆದಿದ್ದರು. ತಮ್ಮಿಂದ ಸ್ವಚ್ಛತಾ ಅಭಿಯಾನಕ್ಕೆ ಕೊಡುಗೆ ಬೇಕು ಎಂದು ವಿನಂತಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ವಿನಂತಿ ಪತ್ರಕ್ಕೆ ಸ್ಪಂದಿಸಿದ ಕದ್ರಿ ಗೋಪಾಲ್ ನಾಥ್, "ತಮ್ಮನ್ನು ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಚ್ಛತೆ ಎಂಬುದು ಮನೆಯಿಂದಲೇ ಆರಂಭವಾಗಬೇಕು ಎನ್ನುವಂತೆ ಕದ್ರಿ ಗೋಪಾಲ್ ನಾಥ್ ತಮ್ಮ ಜನ್ಮ ಭೂಮಿಯಿಂದಲೇ ಸ್ವಚ್ಛತಾ ಅಭಿಯಾನಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ .

ಬೆಂಗ್ರೆ ಶಾಲೆಗೆ ಶೌಚಾಲಯ

ಬೆಂಗ್ರೆ ಶಾಲೆಗೆ ಶೌಚಾಲಯ

ಮಂಗಳೂರು ಹೊರವಲಯದ ಬೆಂಗ್ರೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವ ಕದ್ರಿ ಗೋಪಾಲನಾಥ್ ಶಾಲೆಗೆ ಎರಡು ಶೌಚಾಲಯ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದಾರೆ .

60 ಮಕ್ಕಳ ಶಾಲೆಗೆ ಶೌಚಾಲಯವೇ ಇಲ್ಲ

60 ಮಕ್ಕಳ ಶಾಲೆಗೆ ಶೌಚಾಲಯವೇ ಇಲ್ಲ

ಬೆಂಗ್ರೆಯಲ್ಲಿರುವ ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 60 ಮಕ್ಕಳು ಕಲಿಯುತ್ತಿದ್ದಾರೆ. ಆದರೆ, ಈ ಶಾಲೆಗೆ ಶೌಚಾಲಯವೇ ಇಲ್ಲ. ವಿಶೇಷ ಚೇತನ ಮಕ್ಕಳಿಗಾಗಿ ಇರುವ ಒಂದು ಶೌಚಾಲಯವನ್ನೇ ಶಾಲೆಯ ಮಕ್ಕಳು ಬಳಸುತ್ತಿದ್ದಾರೆ. ಶೌಚಾಲಯಕ್ಕಾಗಿ ಇಲ್ಲಿ ಮಕ್ಕಳು ಕ್ಯೂ ನಿಲ್ಲುವ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಶಾಲೆಯ ಪರಿಸ್ಥಿತಿಯನ್ನು ತಿಳಿದು ಸ್ವಚ್ಛತೆಯ ಮೂಲ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಮುಂದಾದೆ ಎಂದು ಒನ್ ಇಂಡಿಯಾ ಕನ್ನಡಕ್ಕೆ ಕದ್ರಿ ಗೋಪಾಲನಾಥ್ ತಿಳಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಬೆಂಗ್ರೆಯ ಈ ಶಾಲೆಗೆ ಭೇಟಿ ನೀಡಿದ ಗೋಪಾಲನಾಥ್ ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ಶಿಲಾನ್ಯಾಸವನ್ನು ನೆರವೇರಿಸಿದ್ದಾರೆ. 80 ಸಾವಿರ ವೆಚ್ಚದಲ್ಲಿ ಎರಡು ಶೌಚಾಲಯ ನಿರ್ಮಾಣವಾಗಲಿದೆ. ಖ್ಯಾತ ಕಲಾವಿದರ ಈ ಕೊಡುಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದೆ .

ದೇಶದ ಸ್ವಚ್ಛತೆಗೆ 'ಅಳಿಲು ಸೇವೆ'

ದೇಶದ ಸ್ವಚ್ಛತೆಗೆ 'ಅಳಿಲು ಸೇವೆ'

ಸ್ವಚ್ಛತಾ ಅಭಿಯಾನಕ್ಕಾಗಿ ತಮ್ಮ ಅಳಿಲು ಸೇವೆಯ ಕುರಿತು ಒನ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ ಕದ್ರಿ ಗೋಪಾಲನಾಥ್ , "ಪ್ರಧಾನಿಯವರ ಪತ್ರ ಮನಸ್ಸಲ್ಲಿ ಹುಮ್ಮಸ್ಸು ತುಂಬಿದೆ. ವೈಯಕ್ತಿಕವಾಗಿ ಗುರುತಿಸಿ ಸದುದ್ದೇಶಕ್ಕಾಗಿ ಒಂದು ಜವಾಬ್ದಾರಿ ನಿರ್ವಹಿಸಬೇಕೆಂದು ಪ್ರಧಾನಿಯವರು ಮನವಿ ಮಾಡಿಕೊಂಡಾಗ ನಾನು ಸ್ಪಂದಿಸದಿದ್ದರೆ ಹೇಗೆ ? ವಿಶ್ವದ ಹಲವಾರು ದೇಶಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಅಲ್ಲಿಯ ಸ್ವಚ್ಛತೆ, ಸೌಂದರ್ಯ ಕಂಡು ನನ್ನ ದೇಶದ ಸ್ವಚ್ಛತೆ ಬಗ್ಗೆ ಆಲೋಚಿಸಿದ್ದೇನೆ. ಈಗ ದೇಶವನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ನನ್ನದೊಂದು ಅಳಿಲು ಸೇವೆ ಮಾಡುವ ಅವಕಾಶ ದೊರೆತಿದೆ" ಎಂದು ಹೇಳಿದರು.

ಸ್ವಚ್ಛತೆಗಾಗಿ ಹಲವು ಯೋಜನೆ

ಸ್ವಚ್ಛತೆಗಾಗಿ ಹಲವು ಯೋಜನೆ

"ಕಲಾವಿದನಾಗಿ ನನಗಿರುವ ಸಂಪರ್ಕ ಬಳಸಿ ದೇಶದ ವಿವಿಧ ಭಾಗಗಳಲ್ಲಿ ಸ್ವಚ್ಛತೆಯ ಬಗ್ಗೆ ಪ್ರಚಾರ ಮಾಡುತ್ತೇನೆ. ಸ್ವಚ್ಛತೆ ಅಭಿಯಾನಕ್ಕೆ ಉಚಿತವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಯೋಜನೆ ಹಾಕಿ ಕೊಂಡಿದ್ದೇನೆ," ಎಂದು ಅವರು ಮಾಹಿತಿ ನೀಡಿದರು.

ಈ ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ದೂರದರ್ಶನದ ಮುಖಾಂತರ ಕಲಾವಿದರಲ್ಲಿ ಸಹಕಾರ ಕೇಳಿದ್ದರು. ಈ ಹಿನ್ನಲೆಯಲ್ಲಿ ಪ್ರಧಾನಿಯವರ ಮನವಿಯಂತೆ ಸಂಗೀತ ಕಾರ್ಯಕ್ರಮವನ್ನು ಸಂಘಟಿಸಿ ತಮಿಳುನಾಡು ಸರ್ಕಾರದ ಮೂಲಕ 6.5 ಲಕ್ಷ ರೂಪಾಯಿ ನೆರವು ನೀಡಿದ್ದಾಗಿ ಕದ್ರಿ ಗೋಪಾಲ್ ನಾಥ್ ನೆನಪಿಸಿಕೊಂಡರು.

ಸ್ವಂತ ಹಣದಿಂದ ಶೌಚಾಲಯ ನಿರ್ಮಾಣ

ಸ್ವಂತ ಹಣದಿಂದ ಶೌಚಾಲಯ ನಿರ್ಮಾಣ

ಮಂಗಳೂರಿನ ಬೆಂಗ್ರೆ ಶಾಲೆಯಲ್ಲಿ ಕೈಗೆತ್ತಿಕೊಂಡಿರುವ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಸಹಾಯದ ಅವಶ್ಯಕತೆ ಇಲ್ಲ. ಅದನ್ನು ನನ್ನ ವೈಯಕ್ತಿಕ ನೆಲೆಯಲ್ಲಿ ನಿರ್ಮಿಸಿಕೊಡುತ್ತೇನೆ. ಆದರೆ ಮುಂಬರುವ ದಿನಗಳಲ್ಲಿ ಸ್ವಚ್ಛತೆಗಾಗಿ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಆ ಸಂದರ್ಭದಲ್ಲಿ ನಾನೇ ಸಹಾಯ ಹಸ್ತ ನೀಡುವಂತೆ ಕರೆ ನೀಡುತ್ತೇನೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ಸ್ಲಂಗಳಿಗೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಆಲೋಚಿಸಿದ್ದೇನೆ ಎಂಬುದಾಗಿ ತಮ್ಮ ಮನದಾಳದ ಮಾತನ್ನು ಕದ್ರಿ ಗೋಪಾಲನಾಥ್ ಹಂಚಿಕೊಂಡರು.

ಕಲೈಮಾಮಣಿ ಸಹಾಯ ಮರೆಯಲ್ಲ

ಕಲೈಮಾಮಣಿ ಸಹಾಯ ಮರೆಯಲ್ಲ

"ಕದ್ರಿ ಗೋಪಾಲನಾಥ್ ಅವರ ಈ ಸಹಾಯವನ್ನು ನಾವು ಎಂದೂ ಮರೆಯುವುದಿಲ್ಲ. ಸತತ 98 ವರ್ಷಗಳಿಂದ ಅನೇಕ ಗಣ್ಯರು ಈ ಶಾಲೆಗೆ ಭೇಟಿ ನೀಡಿದ್ದಾರೆ. ನಮ್ಮ ಶಾಲೆಯ ಪರಿಸ್ಥಿತಿ ನೋಡಿ ನಿಮಗೆ ನಾವು ಸಹಾಯ, ದಾನ ನೀಡುತ್ತೇವೆ ಎಂದು ಎಷ್ಟೋ ಮಂದಿ ಭರವಸೆ ಕೊಟ್ಟು ಹೋಗಿದ್ದಾರೆ. ಈವರೆಗೆ ಕೂಡ ಯಾರೂ ಸಹಾಯಧನಕ್ಕೆ ಮುಂದಾಗಲೇ ಇಲ್ಲ," ಎಂದು ಶಾಲಾ ಶಿಕ್ಷಕರು ಹೇಳಿದರು.

ಆದರೆ, ಕದ್ರಿ ಗೋಪಾಲನಾಥ್ ಅವರು ನಮ್ಮ ಶಾಲೆಯ ಪರಿಸ್ಥಿತಿಯನ್ನು ನೋಡಿ ತಕ್ಷಣವೇ ಸ್ಪಂದಿಸಿ ನಮ್ಮ ಶಾಲೆಗೆ ಶೌಚಾಲಯವನ್ನು ನಿರ್ಮಿಸಿ ಕೊಡುತ್ತಿರುವುದು ನಮಗೂ ಹಾಗೂ ನಮ್ಮ ಶಾಲೆಯ ಮಕ್ಕಳಿಗೆ ಬಹಳ ಸಂತೋಷ ತಂದಿದೆ ಎಂದು ಶಾಲೆಯ ಶಿಕ್ಷಕರು ತಮ್ಮ ಸಂತಸವನ್ನು ಒನ್ ಇಂಡಿಯಾ ಕನ್ನಡದ ಹಂಚಿಕೊಂಡರು.

English summary
Lending support to the clean India campaign by Prime Minister Narendra Modi, well-known saxophonist Kadri Gopalnath has come forward to get two toilets built for a 98-year-old government primary school at Bengre here in Mangaluru. Kadri Gopalnath shares his views with Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X