ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಯೆಮನ್‌ನಿಂದ ಪಾರಾಗಿ ಬಂದ ರಾಜೇಶ್‌ ಅನುಭವ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಏ.6 : 'ರಾತ್ರಿಯಾಗುತ್ತಿದ್ದಂತೆ ಸ್ಫೋಟದ ಶಬ್ದ, ದಟ್ಟ ಹೊಗೆ. ಒಂದು ದಿನ ನನ್ನ ರೂಂನ ಕೇವಲ 500 ಮೀ. ಅಂತರದಲ್ಲೇ ವೈಮಾನಿಕ ದಾಳಿ ನಡೆಯಿತು. ಹೆದರಿದ ನಾವು ಹೊರಗೆ ಹೋಗುವ ಸ್ಥಿತಿಯಲ್ಲಿ ಇರಲಿಲ್ಲ. ನಾನು ಬದುಕಿ ಉಳಿದು ಭಾರತಕ್ಕೆ ಬರುತ್ತೇನೆ ಎಂಬುದನ್ನು ಮರೆತು ಬಿಟ್ಟಿದ್ದೆ'.

15 ದಿನಗಳ ಕಾಲ ಯುದ್ಧಪೀಡಿತ ಯೆಮನ್ ದೇಶದಲ್ಲಿ ನರಕಯಾತನೆ ಅನುಭವಿಸಿ, ಶನಿವಾರ ಸುರಕ್ಷಿತವಾಗಿ ತವರಿಗೆ ಬಂದ ಪುತ್ತೂರು ಕೋಡಿಂಬಾಳದ ರಾಜೇಶ್ ಗುಂಡಿಮಜಲು ಚೆನ್ನಪ್ಪ (24) ಅವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದು ಹೀಗೆ. [ಭಾರತೀಯರೇ ಹೆದರದಿರಿ, ಏರ್ ಇಂಡಿಯಾ ಬರ್ತಾ ಇದೆ!]

ಶುಕ್ರವಾರ ಯೆಮನ್‌ನ ಸನಾ ವಿಮಾನ ನಿಲ್ದಾಣದಿಂದ ಆಫ್ರಿಕಾದ ಜಿಬೌಟಿ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ರಾತ್ರಿ ಕೇರಳದ ಕೊಚ್ಚಿನ್‌ಗೆ ಬಂದಿಳಿದು, ಎರ್ನಾಕುಲಂ ಮೂಲಕ ರೈಲಿನಲ್ಲಿ ಮಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಿದ ರಾಜೇಶ್‌ನನ್ನು ಕುಟುಂಬದವರು ಆತ್ಮೀಯವಾಗಿ ಬರಮಾಡಿಕೊಂಡರು.

Rajesh Gowda

ಯೆಮನ್‌ಗೆ ಹೋಗಿದ್ದು : 2013ರ ಜ.28ರಂದು ಮೊದಲ ಬಾರಿಗೆ ಯೆಮನ್ ದೇಶಕ್ಕೆ ಏರ್ ಕಂಡೀಷನ್ ಎಂಜಿನಿಯರ್ ಆಗಿ ಕೆಲಸಕ್ಕೆ ಹೋಗಿದ್ದೆ. ಎರಡು ಬಾರಿಗೆ ಊರಿಗೆ ಬಂದಿದ್ದೆ. ಕಳೆದ ಮಾ.19ರಂದು ಖತಾರ್ ಮೂಲಕ ಯೆಮನ್‌ಗೆ ತೆರಳಿದ್ದೆ. ಮಾ. 20ರಂದು ನಾನು ತಲುಪುವ ಅರ್ಧ ಗಂಟೆ ಮೊದಲು ಎರಡು ಬಾಂಬ್ ಸ್ಫೋಟಗೊಂಡಿತ್ತು ಹಲವಾರು ಮಂದಿ ಸಾವಿಗೀಡಾಗಿದ್ದರು ಎಂದು ರಾಜೇಶ್ ಮಾತು ಆರಂಭಿಸಿದರು.

'ನಮಗೆ ರಾಯಭಾರ ಕಚೇರಿಯಿಂದ ಯಾವುದೇ ಸೂಚನೆ ಸಿಗಲಿಲ್ಲ. ಹಾಗಾಗಿ ವಿಮಾನ ನಿಲ್ದಾಣದಿಂದ ರೂಮಿಗೆ ತೆರಳಿ ಮರುದಿನ ಕೆಲಸಕ್ಕೂ ಹೋಗಿದ್ದೆವು. ಮಾ.25ರ ನಂತರ ಮತ್ತೆ ವೈಮಾನಿಕ ದಾಳಿ ಆರಂಭವಾಯಿತು. ಹಗಲು ಹೊತ್ತು ಆತಂಕದಲ್ಲೇ ದಿನ ಕಳೆಯಬೇಕಾಯಿತು'. ಮಾ. 29ರ ಬಳಿಕ ಹಗಲು-ರಾತ್ರಿ ವೈಮಾನಿಕ ದಾಳಿಗಳು ಆರಂಭವಾದವು' ಎಂದರು.

ಬಾಂಬ್‌ ಅಲ್ಲ ಗುಡುಗಿನ ಶಬ್ದ : 'ಯೆಮನ್ ತಲುಪಿದಾಗ ಮಳೆಯಾಗುತ್ತಿತ್ತು. ಆದ್ದರಿಂದ ಮೊದಲ ದಿನ ಬಾಂಬ್ ದಾಳಿ ಶಬ್ದವನ್ನು ಗುಡುಗಿನ ಶಬ್ದ ಎಂದು ತಿಳಿದಿದ್ದೆ. ಉಡುಪಿ ಮೂಲದ ನರ್ಸ್ ಪ್ರೇಮಾ ಅವರು ಕರೆ ಮಾಡಿ ವೈಮಾನಿಕ ದಾಳಿಯಾಗುತ್ತಿದೆ. ಮನೆಯಿಂದ ಹೊರಗೆ ಬರಬೇಡ ಎಂದು ಎಚ್ಚರಿಕೆ ನೀಡಿದರು' ಎಂದು ರಾಜೇಶ್ ಅಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

'ನಮ್ಮ ರೂಂ ಪಕ್ಕದಲ್ಲಿ ದೇಶದ ಶಸ್ತ್ರಾಸ್ತ್ರಗಳ ಉಗ್ರಾಣವಿತ್ತು. ಅದರ ಮೇಲೆ ದಾಳಿಯಾಗುವ ಸಾಧ್ಯತೆ ಇದ್ದು, ನಮ್ಮ ಆತಂಕಕ್ಕೆ ಕಾರಣವಾಗಿತ್ತು. ಮನೆಗೆ ಕರೆ ಮಾಡುವಾಗ ಸ್ಫೋಟದ ಶಬ್ದ ಕೇಳಿಸುತ್ತಿದ್ದು, ಅವರು ಆತಂಕಪಡದಂತೆ ಸಮಾಧಾನ ಹೇಳುತ್ತಿದ್ದೆ' ಎಂದು ರಾಜೇಶ್ ಹೇಳಿದರು.

ಮರಳು ಬಿರುಗಾಳಿ ಕಾಪಾಡಿತು : 'ಎರಡು ದಿನಗಳಿಂದ ಅರಬ್ ರಾಷ್ಟ್ರಗಳಲ್ಲಿ ವಿಪರೀತ ಮರಳು ಬಿರುಗಾಳಿ ಬೀಸುತ್ತಿತ್ತು. ಇದರಿಂದ ವೈಮಾನಿಕ ದಾಳಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು. ಈ ಅವಧಿಯಲ್ಲಿ ಧ್ವಂಸಗೊಂಡಿದ್ದ ವಿಮಾನ ನಿಲ್ದಾಣದ ನಿಯಂತ್ರಣ ಘಟಕಗಳನ್ನು ದುರಸ್ತಿಪಡಿಸಿ, ವಿಮಾನ ಹಾರಾಟವನ್ನು ಪುನಃ ಆರಂಭಿಸಿದರು ಎಂದು ರಾಜೇಶ್‌ ತಿಳಿಸಿದರು.

ಡಿವಿಎಸ್ ಕರೆ ಮಾಡಿದ್ದರು : ನಮ್ಮ ರೂಂ ಪಕ್ಕದಲ್ಲಿದ್ದ ಯೆಮನ್ ನಾಗರಿಕರು ಆಹಾರ ತಂದು ಕೊಡುತ್ತಿದ್ದರು. ಹೊರಗೆ ಹೋಗದಂತೆ ಜಾಗ್ರತೆ ವಹಿಸಿ, ಗೋಡೆ ಪಕ್ಕ ಕುಳಿತುಕೊಳ್ಳದಂತೆ ಸಲಹೆ ನೀಡುತ್ತಿದ್ದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕರೆ ಮಾಡಿ ಧೈರ್ಯ ತುಂಬಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿ ತಿಳಿಸಿದ್ದರಿಂದ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿ ಅತ್ಯಂತ ಕ್ಷಿಪ್ರವಾಗಿ ಸ್ಪಂದಿಸಿದರು' ಎಂದು ರಾಜೇಶ್ ನೆನಪು ಮಾಡಿಕೊಂಡರು.

ಮೂರು ಗಂಟೆಗೆ ಕರೆ : ಶುಕ್ರವಾರ ಮುಂಜಾನೆ 3 ಗಂಟೆಗೆ ನಮಗೆ ಕರೆ ಬಂತು. ತಕ್ಷಣ ವಿಮಾನ ನಿಲ್ದಾಣಕ್ಕೆ ಬರುವಂತೆ ತಿಳಿಸಲಾಯಿತು. ಬೆಂಗಳೂರಿನ ಇಮ್ತಿಯಾಝ್, ಆಂಧ್ರಪ್ರದೇಶದ ವಿಶಾಖಪಟ್ಟಣದ ಕುಟುಂಬ ಜತೆ ನಾನು ವಿಮಾನ ಹತ್ತಿದ್ದೆ. ಆ ಕುಟುಂಬದಲ್ಲಿ ಒಬ್ಬ ವಿಕಲಚೇತನ ಮಗುವಿದ್ದ ಕಾರಣ ನಮಗೆ ಮೊದಲು ಬರುವ ಅವಕಾಶ ದೊರೆಯಿತು ಎಂದರು.

ಮತ್ತೆ ಹೋಗಲ್ಲ : ತಾನು ಕೆಲಸ ಮಾಡುತ್ತಿದ್ದ ಕಂಪನಿ ಎಲ್ಲ ಸಂಬಳ ನೀಡಿ ಕಳುಹಿಸಿ ಕೊಟ್ಟಿದೆ. ಯೆಮನ್‌ಗೆ ಮತ್ತೆ ತೆರಳುವ ಇಚ್ಛೆ ಇಲ್ಲ. ಭವಿಷ್ಯದಲ್ಲಿ ಏನು ಮಾಡಬೇಕು ಎಂದು ಆಲೋಚನೆ ಮಾಡಿಲ್ಲ ಎಂದು ರಾಜೇಶ್ ತಿಳಿಸಿದರು.

ಮಗನ ಕಂಡು ಗದ್ಗದಿತರಾದ ತಂದೆ: ದೂರದ ಯುದ್ಧಪೀಡಿತ ಯೆಮನ್‌ನ ಮೃತ್ಯು ದವಡೆಯಿಂದ ಸುರಕ್ಷಿತವಾಗಿ ಆಗಮಿಸಿದ್ದ ಮಗ ರಾಜೇಶ್‌ನನ್ನು ಅಪ್ಪಿ ಹಿಡಿದುಕೊಂಡ ತಂದೆ ಚೆನ್ನಪ್ಪ ಗೌಡ ಗದ್ಗದಿತರಾದರು. ಉಮ್ಮಳಿಸಿ ಬಂದ ದುಃಖ ತಾಳಲಾರದೆ ಕಣ್ಣೀರು ಹಾಕಿದಾಗ, ಮಗನ ಕಣ್ಣಾಲಿಗಳೂ ತುಂಬಿದವು.

English summary
Rajesh Gowda an engineer from Puttur, Mangaluru who was stranded in strife-torn Yemen, reached Mangaluru on Saturday. The engineer had returned to Yemen only on March 19 after a month long holiday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X