ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಉಪ್ಪು ಸಮುದ್ರದಲ್ಲೇ ಸಿಗುತ್ತೆ ಸಿಹಿ ನೀರು; ಸ್ವತಃ ಕುಡಿದು ಪರೀಕ್ಷಿಸಿದ ಸಚಿವ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 3: ಉಪ್ಪು ನೀರಿನ ಸಾಗರದಲ್ಲಿ ಸಿಹಿ ನೀರನ್ನು ಹುಡುಕುವುದು, ಮರುಭೂಮಿಯಲ್ಲಿ ನೀರು ಹುಡುಕುವುದು ಎರಡು ಒಂದೇ. ಆದರೆ ಇನ್ಮುಂದೆ ಉಪ್ಪು ನೀರಿನಲ್ಲೂ ಸಿಹಿ ನೀರು ಸಿಗುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ ನೂತನ ತಂತ್ರಜ್ಞಾನವೊಂದು ಮಂಗಳೂರಿನಲ್ಲಿ ಬಳಕೆಯಾಗಿದೆ. ಆಸ್ಟ್ರೇಲಿಯಾದ ತಂತ್ರಜ್ಞಾನವನ್ನು ಭಾರತದಲ್ಲಿ ಅದರಲ್ಲೂ ಮಂಗಳೂರಿನ ಮೀನುಗಾರಿಕಾ ಬೋಟ್‌ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಈ ಯಂತ್ರದ ಮೂಲಕ ದಿನವೊಂದಕ್ಕೆ ಎರಡು ಸಾವಿರ ಲೀಟರ್ ಉಪ್ಪು ನೀರನ್ನು ಸಿಹಿ ನೀರಾಗಿ ಮಾರ್ಪಾಡು ಮಾಡಬಹುದು.

ಆರೋಗ್ಯಕ್ಕೆ ಯಾವುದೇ ಹಾನಿ ಮಾಡದ ಈ ಫಿಲ್ಟರ್ ನೀರನ್ನು, ಸಮುದ್ರದಲ್ಲಿ ಸ್ವತಃ ಮೀನುಗಾರಿಕಾ ಸಚಿವ ಎಸ್.ಅಂಗಾರ ಕುಡಿಯುವ ಮೂಲಕ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಶೇ.50ರಷ್ಟು ಸಬ್ಸಿಡಿಯನ್ನು ಈ ಯಂತ್ರಕ್ಕೆ ಘೋಷಣೆ ಮಾಡಿದೆ.

Pure Drinking Water In The Sea: Australian Technology Experiment In Mangaluru

ಈ ತಂತ್ರಜ್ಞಾನ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಬಹು ಉಪಯೋಗಕಾರಿಯಾಗಿದೆ. ಯಾಕೆಂದರೆ ಆಳ ಸಮುದ್ರ ಮೀನುಗಾರಿಕೆ ಎಂಬುವುದು ವಾರಕ್ಕಿಂತ ಹೆಚ್ಚು ದಿನ ಸಮುದ್ರದ ಮಧ್ಯದಲ್ಲಿದ್ದುಕೊಂಡೇ ನಡೆಸುವ ಮೀನುಗಾರಿಕೆ ಆಗಿರುವುದರಿಂದ ಈ ರೀತಿಯ ಮೀನುಗಾರಿಕೆಗೆ ಹೋಗುವಾಗ ಕುಡಿಯುವುದಕ್ಕೆ ನಿತ್ಯದ ಬಳಕೆಗೆ ಸಿಹಿನೀರನ್ನು ಬೋಟ್‌ನಲ್ಲಿ ಸಂಗ್ರಹಿಸಿ ಕೊಂಡೊಯ್ಯಲಾಗುತ್ತದೆ. ಆದರೆ ಇನ್ಮುಂದೆ ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನು ಬೋಟ್‌ನಲ್ಲಿಯೇ ಫಿಲ್ಟರ್ ಮಾಡಿ ಸಿಹಿನೀರನ್ನು ಪಡೆಯಬಹುದಾಗಿದೆ.

10ಕ್ಕೂ ಹೆಚ್ಚು ದಿನಗಳ ಕಾಲ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಕುಡಿಯುವ ನೀರನ್ನೂ ದಡದಿಂದಲೇ ತೆಗದುಕೊಂಡು ಹೋಗಬೇಕು. ವಾರಕ್ಕಿಂತ ಹೆಚ್ಚು ದಿನ ಆಳ ಸಮುದ್ರದಲ್ಲಿ ಬೋಟ್ ಲಂಗರು ಹಾಕಿದರೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೀಟರ್ ನೀರು ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ದಡದಿಂದಲೇ ಸಿಹಿ ನೀರನ್ನು ಬೋಟ್‌ನಲ್ಲಿ ಹೇರಿ ಮೀನುಗಾರರು ಆಳ ಸಮುದ್ರಕ್ಕೆ ತೆರಳುತ್ತಿದ್ದರು.

ಆದರೆ ಇನ್ಮುಂದೆ ಅಂತಹ ಯಾವುದೇ ಸಮಸ್ಯೆ ಮೀನುಗಾರರಿಗೆ ಬರಲ್ಲ. ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನೇ ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡಬಹುದು. ಆಸ್ಟ್ರೇಲಿಯಾದ ಈ ತಂತ್ರಜ್ಞಾನವನ್ನು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ. ಈ ರೀತಿ ಬೋಟ್‌ನಲ್ಲಿಯೇ ಉಪ್ಪು ನೀರನ್ನು ಸಿಹಿ ನೀರಾಗಿ ಫಿಲ್ಟರ್ ಮಾಡುವ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಮೀನುಗಾರಿಕ ಸಚಿವ ಎಸ್. ಅಂಗಾರ ಸಮ್ಮುಖದಲ್ಲೇ ನಡೆಸಲಾಗಿದೆ.

Pure Drinking Water In The Sea: Australian Technology Experiment In Mangaluru

ಅರಬ್ಬೀ ಸಮುದ್ರವನ್ನು ಪ್ರವೇಶಿಸುವ ಅಳಿವೆ ಬಾಗಿಲಿನಲ್ಲಿ ಈ ಪ್ರಾತ್ಯಕ್ಷಿತೆಯನ್ನು ಮಾಡಲಾಗಿದೆ. ದಡದಿಂದ ಬೋಟ್‌ನಲ್ಲಿ ಸ್ವತಃ ತೆರಳಿದ ಮೀನುಗಾರಿಕಾ ಸಚಿವ ಎಸ್. ಅಂಗಾರ, ಸಮುದ್ರದ ಉಪ್ಪು ನೀರಿನಿಂದ ಸಂಸ್ಕರಿಸಿದ ಸಿಹಿ ನೀರನ್ನು ಸ್ವತಃ ಕುಡಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ತಂತ್ರಜ್ಞಾನ ಅಮೆರಿಕ, ಯುರೋಪ್‌ನಲ್ಲಿ ಈಗಾಗಲೇ ಬಳಕೆಯಲ್ಲಿದೆ. ಆಸ್ಟ್ರೇಲಿಯಾ ಮೂಲದ ರೆಯಾನ್ಸ್ ಎಂಬ ಕಂಪೆನಿ ಈ ಕಿಟ್‌ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಸಂಗ್ರಹಿಸಲಾಗುತ್ತದೆ.

ಪೈಪ್‌ನಿಂದ ಬಂದ ಉಪ್ಪು ನೀರು ಶುದ್ಧೀಕರಿಸುವ ಯಂತ್ರದ ಒಳಗೆ ಪಂಪ್ ಮಾಡಿ, ಬಳಿಕ ಫಿಲ್ಟರ್ ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತದೆ. ಈ ರೀತಿ ಗಂಟೆಗೆ 168 ಲೀಟರ್ ನೀರು ಫಿಲ್ಟರ್ ಆಗಲಿದ್ದು, ದಿನವೊಂದಕ್ಕೆ 2000 ಲೀ. ನೀರು ಫಿಲ್ಟರ್ ಆಗುತ್ತದೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್‌ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತದೆ ಎಂಬ ಆತಂಕವು ಇರುವುದಿಲ್ಲ.

Pure Drinking Water In The Sea: Australian Technology Experiment In Mangaluru

ಈ ಯಂತ್ರಕ್ಕೆ ನಾಲ್ಕು ಲಕ್ಷದ ಅರವತ್ತು ಸಾವಿರ (4,60,000) ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಐವತ್ತು ಶೇಕಡ ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಇನ್ಮುಂದೆ ಮೀನುಗಾರರಿಗೆ ಸಿಹಿ ನೀರು ಸಮುದ್ರದಲ್ಲೇ ಲಭ್ಯವಾಗಲಿದ್ದು, ಸಿಹಿ ನೀರಿನ ಅಭಾವ ತಪ್ಪಲಿದೆ.

English summary
Australian technology has been adapted on a fishing boat in Mangaluru, where two thousand liters of salt water per day can be converted into sweet water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X