ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ರಾಜಕೀಯ ಗಣ್ಯರ ಸಂತಾಪ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 13: ಹಲವು ದಿನಗಳಿಂದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ (80) ಸೋಮವಾರ ನಿಧನರಾಗಿದ್ದಾರೆ.

ಮಂಗಳೂರು ನಗರದ ಯೆನಪೋಯ ಆಸ್ಪತ್ರೆಯಲ್ಲಿ ಆಸ್ಕರ್ ಫರ್ನಾಂಡಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳಿನ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದು, ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವು ರಾಜಕೀಯ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.

Political Leaders Express Condolence to Congress Leader Oscar Fernandes Demise

Breaking; ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ವಿಧಿವಶ Breaking; ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ವಿಧಿವಶ

ಆರೋಗ್ಯ ಸಚಿವ ಸುಧಾಕರ್ ಸಂತಾಪ
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಮಾಜಿ ಸಚಿವ ಯು.ಟಿ. ಖಾದರ್ ಶೋಕ
ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಮಾಜಿ ಸಚಿವ ಯು.ಟಿ. ಖಾದರ್ ವಿಧಾನಸೌಧದಲ್ಲಿ ಸಂತಾಪ ಸೂಚಿಸಿ ಮಾತನಾಡಿದ್ದು, "ಆಸ್ಕರ್ ಅಗಲಿಕೆಯಿಂದ ನಮಗೆ ನೋವು‌ ತಂದಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬಂದ ಅವರು, ಹಲವು ಸ್ಥಾನಮಾನಗಳನ್ನು ನಿಭಾಯಿಸಿದವರು. ಎಲ್ಲ ಪಕ್ಷಗಳ ಜೊತೆ ಪ್ರೀತಿ, ವಿಶ್ವಾಸದಿಂದ ಇದ್ದರು. ಕಾರ್ಮಿಕರಿಗೆ ಹಲವು‌ ಯೋಜನೆ ತರಲು ಕಾರಣರಾಗಿದ್ದರು."

"ಶಿರಾಡಿ ಘಾಟ್ ರಸ್ತೆಗೆ ಕಾರಣರಾದ ಅವರು, ನನ್ನ ರಾಜಕೀಯ‌ ಮಾರ್ಗದರ್ಶಕರಾಗಿದ್ದರು. ನಮಗೆ ರಾಜಕೀಯಕ್ಕೆ ಪುನರುಜ್ಜೀವನ‌ ಕೊಟ್ಟವರು. ಬಲಗೈಲಿ ಮಾಡಿದ ಉಪಕಾರ ಎಡಗೈಗೆ ಗೊತ್ತಾಗುತ್ತಿರಲಿಲ್ಲ," ಎಂದು ಮಾಜಿ ಸಚಿವ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಚ್.ಕೆ. ಪಾಟೀಲ್ ತೀವ್ರ ಸಂತಾಪ
ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ ಹಿನ್ನೆಲೆ ಮಾಜಿ ಸಚಿವ ಎಚ್.ಕೆ. ಪಾಟೀಲ್ ತೀವ್ರ ಸಂತಾಪ ಸೂಚಿಸಿದ್ದಾರೆ. "ಕಾರ್ಮಿಕ ಸಚಿವರಾಗಿ, ಹಲವು ಯೋಜನೆ ತಂದಿದ್ದರು. ಯುವಕರಲ್ಲಿ ಯುವಕರಾಗಿರುತ್ತಿದ್ದರು, ರಾಜ್ಯದ ಎಲ್ಲ ಜನರ ವಿಶ್ವಾಸ ಗಳಿಸಿದ್ದವರು. ನಾನು ಅವರನ್ನ ಅತ್ಯಂತ ಸಮೀಪದಿಂದ ಬಲ್ಲವನಾಗಿದ್ದೇನೆ."

"ನಾನು‌ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ದೊಡ್ಡ ಜವಾಬ್ದಾರಿ ಕೊಟ್ಟಿದ್ದರು. ಆಸ್ಕರ್ ಕಾಂಗ್ರೆಸ್ ಪಕ್ಷದ ಮೇಂಟರ್ ಆಗಿದ್ದರು. ಆಸ್ಕರ್ ಫರ್ನಾಂಡಿಸ್ ಕೊಡುಗೆ ಅಪಾರವಾಗಿದ್ದು, ಅವರ ಸಂಘಟನಾ ಮನೋಭಾವ ದೊಡ್ಡದಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೊತೆ ಕೆಲಸ ಮಾಡಿದ್ದರು. ನಂತರ ರಾಜೀವ್ ಗಾಂಧಿ, ಸೋನಿಯಾಗೂ ಬಲ ತುಂಬಿದ್ದರು. ಅಂತವರ ನಿಧನ ತುಂಬಲಾರದ ನಷ್ಟವಾಗಿದ್ದು, ನಮಗೂ, ಪಕ್ಷಕ್ಕೂ ತುಂಬಾ ನೋವಾಗಿದೆ," ಎಂದು ಎಚ್.ಕೆ. ಪಾಟೀಲ್ ವಿಧಾನಸೌಧದಲ್ಲಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ
ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶೋಕ ವ್ಯಕ್ತಪಡಿಸಿದ್ದು, "ಆಸ್ಕರ್ ಫರ್ನಾಂಡಿಸ್ ಒಬ್ಬ ಧೀಮಂತ ನಾಯಕ. ಕಾಂಗ್ರೆಸ್ ಪಕ್ಷ ಕಷ್ಟದಲ್ಲಿ ಇದ್ದಾಗ ಎರಡು ಬಾರಿ ಅಧ್ಯಕ್ಷರಾಗಿದ್ದರು. ಸರಳತೆಗೆ, ಗಾಂಧಿ ತತ್ವಕ್ಕೆ ಆಸ್ಕರ್ ಫರ್ನಾಂಡಿಸ್ ಹೇಳಿ ಮಾಡಿಸಿದ ವ್ಯಕ್ತಿತ್ವಯಾಗಿದ್ದರು."

"ಸೋಮವಾರ ಸಂಜೆ ನಾಲ್ಕು ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಇಟ್ಟುಕೊಂಡಿದ್ದೇವೆ. ಇನ್ನು ಅಂತಿಮ ಕಾರ್ಯದ ಬಗ್ಗೆ ಕುಟುಂಬಸ್ಥರು ಸಮಯ ನಿಗದಿ ಮಾಡಿಲ್ಲ, ಹೀಗಾಗಿ ನಂತರ ನಿರ್ಧಾರ ಮಾಡುತ್ತೇವೆ," ಎಂದು ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ತಿಳಿಸಿದರು.

ಕೆ.ಎಸ್. ಈಶ್ವರಪ್ಪ ಸಂತಾಪ
"ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದರು. ದೇವರು ಅವರಿಗೆ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಆಸ್ಕರ್ ನಿಧನಕ್ಕೆ ಎಸ್.ಆರ್. ಪಾಟೀಲ್ ಶೋಕ
"ಹಿರಿಯ ಕಾಂಗ್ರೆಸ್ಸಿಗ ಆಸ್ಕರ್ ಫರ್ನಾಂಡೀಸ್ ನಿಧನ ಹಿನ್ನೆಲೆ ಕಾಂಗ್ರೆಸ್ ನಾಯಕ ಎಸ್.ಆರ್. ಪಾಟೀಲ್ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದು, ಇಡೀ ರಾಷ್ಟ್ರದ ಸಾರ್ವಜನಿಕ ಬದುಕು ಬರಡಾಗಿದೆ. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ಉತ್ತಮ ಕಾರ್ಯ ಮಾಡಿದ್ದರು. ರಾಜ್ಯದ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಮಾಡಿದವರು, ಇಂದಿರಾಗಾಂಧಿ, ರಾಜೀವ್ ಗಾಂಧಿ‌ ಜತೆ ಕೆಲಸ ಮಾಡಿದ್ದರು. ಆಸ್ಕರ್ ಅಗಲಿಕೆ ನನಗೆ ಆಘಾತ ತಂದಿದ್ದು, ಅವರ ಆತ್ಮಕ್ಕೆ ದೇವರು ಸದ್ಗತಿ ಕೊಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ," ಎಂದು ಎಂಎಲ್‌ಸಿ ಎಸ್.ಆರ್. ಪಾಟೀಲ್ ಸಂತಾಪ ಸೂಚಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
"ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡಿಸ್ ಇಂದು ನಮ್ಮನ್ನೆಲ್ಲ ಅಗಲಿರುವುದು ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುತ್ತೇನೆ. ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ಕರುಣಿಸಲೆಂದು ಪ್ರಾರ್ಥಿಸುತ್ತೇನೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
"ನಮ್ಮ ನಾಡಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ನನ್ನ ಆಪ್ತರೂ ಆಗಿದ್ದ ಆಸ್ಕರ್ ಫರ್ನಾಂಡೀಸ್ ನಿಧನ ನನಗೆ ಬಹಳ ನೋವುಂಟು ಮಾಡಿದೆ. ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಗುಣಮುಖರಾಗಿ ಮನೆಗೆ ಮರಳುತ್ತಾರೆ ಎನ್ನುವ ಹೊತ್ತಿನಲ್ಲಿ ಈ ಆಘಾತದ ಸುದ್ದಿ ಬಂದಿದೆ."

"ಪ್ರತಿಯೊಬ್ಬರನ್ನೂ ಅತ್ಯಂತ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಆಸ್ಕರ್ ಫರ್ನಾಂಡೀಸ್ ಅವರು, ದೇಶ ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದರು. ರಾಜಕೀಯವನ್ನು ಮೀರಿ ಎಲ್ಲರನ್ನೂ ಆದರಿಸುತ್ತಿದ್ದರು. ಪಕ್ಷ ರಾಜಕಾರಣಕ್ಕೆ ಮೀರಿದ ವ್ಯಕ್ತಿತ್ವ. ಅವರಿಗೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಆಸ್ಕರ್ ನಿಧನಕ್ಕೆ ಸಚಿವ ಸುನಿಲ್ ಕುಮಾರ್ ಶೋಕ
ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. "ಕಾಂಗ್ರೆಸ್ ನ ಹಿರಿಯ ನಾಯಕ , ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನದ ಸುದ್ದಿ ತಿಳಿದು ದುಃಖವಾಯಿತು."

"ಲೋಕಸಭಾ ಸದಸ್ಯರಾಗಿ ರಾಜ್ಯ ಸಭಾ ಸದಸ್ಯರಾಗಿ ಸಲ್ಲಿಸಿದ ಸೇವೆ ಅನನ್ಯವಾದದ್ದು, ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ ಉಡುಪಿಯಲ್ಲಿ ಹುಟ್ಟಿ, ನಂತರ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದದ್ದು ಒಂದು ಸಾಹಸಗಾಥೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅತ್ಯುತ್ತಮ ಜನನಾಯಕನನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ," ಎಂದು ಸಚಿವ ಸುನಿಲ್ ಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

English summary
The death of Oscar Fernandes has been deeply condolenced by many political leaders, including the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X