'ಮಂಗಳೂರು ಚಲೋ' ತಡೆಯಲು ಸರ್ಕಾರದಿಂದ ಸಾಧ್ಯವಿಲ್ಲ : ಲಿಂಬಾವಳಿ
ಮಂಗಳೂರು, ಸೆಪ್ಟೆಂಬರ್ 7: ಬಿಜೆಪಿ ಯುವ ಮೋರ್ಚಾ ಮಂಗಳೂರಿನಲ್ಲಿ ಸೆಪ್ಟೆಂಬರ್ 7ರಂದು ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಜಾಥಾವನ್ನು ಪೊಲೀಸ್ ಪೋರ್ಸ್ ಬಳಸಿ ರಾಜ್ಯ ಸರಕಾರ ತಡೆಯೊಡ್ಡಲು ಯತ್ನಿಸುತ್ತಿದೆ. ಆದರೆ, 'ಮಂಗಳೂರು ಚಲೋ' ಕಾರ್ಯಕ್ರಮ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದರು.
ಮಂಗಳೂರಿನಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಜ್ಯೋತಿ ವೃತ್ತದಿಂದ ಬೈಕ್ ಜಾಥಾ ಅರಂಭಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿ ತನಕ ತೆರಳಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಸ್ಪಷ್ಟಪಡಿಸಿದರು. ಸುಮಾರು ಸಾವಿರಕ್ಕಿಂತ ಹೆಚ್ಚು ಬೈಕ್ ಗಳು ಈ ಜಾಥಾದಲ್ಲಿ ಭಾಗವಹಿಸಲಿವೆ ಹಾಗೂ 5 ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಜಾಥಾದ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದ ಅವರು, "ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಮುಖಂಡರೂ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ," ಎಂದು ಮಾಹಿತಿ ನೀಡಿದ್ದಾರೆ.