ಮಾ.9ರವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ 'ಸರ್ಪ ಸಂಸ್ಕಾರ ಸೇವೆ' ಇಲ್ಲ
ಮಂಗಳೂರು, ಮಾರ್ಚ್,04: ನೀವು ಏನಾದರೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಮಾಡಿಸಬೇಕೆಂದಿದ್ದರೆ ಮಾರ್ಚ್ 9ರವರೆಗೆ ಕಾಯಬೇಕು. ಏಕೆಂದರೆ ಏಕಾದಶಿ, ದ್ವಾದಶಿ, ಮಹಾಶಿವರಾತ್ರಿ ಹಾಗೂ ಸೂರ್ಯ ಗ್ರಹಣ ಹೀಗೆ ಸರಣಿ ದಿನಗಳು ಬರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾರ್ಚ್ 9ರವರೆಗೆ ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ.
ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಗದಿಯಾದ ಸರ್ಪ ಸಂಸ್ಕಾರ ಸೇವೆಗಳು ಶುಕ್ರವಾರ ಮಧ್ಯಾಹ್ನ ಮುಕ್ತಾಯವಾಗುತ್ತದೆ. ಶನಿವಾರ (ಮಾ.5) ಏಕಾದಶಿ, ಭಾನುವಾರ (ಮಾ.6) ಶ್ರವಣ ಉಪವಾಸ, ಸೋಮವಾರ (ಮಾ.7) ದಂದು ಮಹಾಶಿವರಾತ್ರಿ, ಮಂಗಳವಾರ (ಮಾ.9) ಸೂರ್ಯಗ್ರಹಣ ಇರುವುದರಿಂದ ಈ ನಿರ್ಣಯಕ್ಕೆ ಬರಲಾಗಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಯು ಪೂವಪ್ಪ ತಿಳಿಸಿದ್ದಾರೆ.[ಕುಕ್ಕೆಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ: ಇತಿಹಾಸ, ಆಚರಣೆ ಮಹತ್ವ]
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಉಮಾಮಹೇಶ್ವರಿ ದೇವಾಲಯದಲ್ಲಿ ಏಕರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳು ನೆರವೇರಲಿವೆ. ಸಂಜೆ 7ಕ್ಕೆ ವಿಶೇಷ ಉತ್ಸವ ಹಾಗೂ ಮಾರ್ಚ್ 8ರ ಸೋಮವಾರ ಸಂಜೆ ಶಿವರಾತ್ರಿ ರಥೋತ್ಸವ ನಡೆಯಲಿದೆ. ಈ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಪೂವಪ್ಪ ತಿಳಿಸಿದರು.