ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಯಕ್ತಿಯನ್ನು ಎಸೆದ ಕುಕ್ಕೆ ಗಜರಾಣಿ ವಿಡಿಯೋ ವೈರಲ್; ಘಟನೆ ಹಿಂದಿನ ಸತ್ಯಾಸತ್ಯತೆ ಏನು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 9: ಕಳೆದ ಕೆಲ‌ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕುಕ್ಕೆಯ ಗಜರಾಣಿ ವ್ಯಕ್ತಿಯೋರ್ವನನ್ನು ಎಸೆದಿದೆ ಎನ್ನಲಾದ ವಿಡಿಯೋದ ಸತ್ಯಾಸತ್ಯತೆ ಈಗ ಬಯಲಾಗಿದೆ.

ಆ ವಿಡಿಯೋದಲ್ಲಿರುವುದು ಕುಕ್ಕೆಯ ಆನೆ ಎಂದು ಸ್ವತಃ ಮಾವುತ ಶ್ರೀನಿವಾಸ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಒನ್ಇಂಡಿಯಾ ಕನ್ನಡದ ಜೊತೆ ಶ್ರೀನಿವಾಸ್, ಅಂದು ನಡೆದ ಘಟನೆಯ ಬಗ್ಗೆ ಶ್ರೀನಿವಾಸ್ ಇಂಚಿಂಚು ಮಾಹಿತಿ ನೀಡಿದ್ದಾರೆ.

"ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕುಕ್ಕೆಯ ಗಜರಾಣಿ ಯಶಸ್ವಿನಿಯದ್ದೇ ಆಗಿದೆ. ಆದರೆ ಇದರ ಹಿಂದೆ ಬೇರೆ ಕಾರಣವಿದೆ. ಗಜರಾಣಿ ಯಶಸ್ವಿನಿ ಪ್ರಾಣಿಯಾದರೂ ಅದರ ಸಂವೇದನೆ, ಭಾವನೆಗಳೆಲ್ಲಾ ಮಾನವನಿಗಿಂತ ಮಿಗಿಲಿದೆ. ಆ ದಿನ ಕ್ಷೇತ್ರದಲ್ಲಿ ರಾತ್ರಿ ಪೂಜೆಗಾಗಿ ಯಶಸ್ವಿನಿಯನ್ನು ಕ್ಷೇತ್ರಕ್ಕೆ ಕರೆದುಕೊಂಡು ಹೋಗಿದ್ದೆ. ಯಶಸ್ವಿನಿಯದ್ದು ಮಕ್ಕಳ‌ ಮನಸ್ಸು, ಯಾರಿಗೂ ನೋವುಂಟು ಮಾಡಲ್ಲ. ಆದರೆ ಆನೆಗೆ ಮದ್ಯದ ಘಾಟು ಮಾತ್ರ ಸ್ವಲ್ಪ ಬಂದರೆ ಸಾಕು, ಯಾರಿದ್ದರೂ ಬಿಡುವುದಿಲ್ಲ. ಇದು ಯಶಸ್ವಿನಿಯ ಗುಣವಾಗಿದೆ," ಎಂದು ಮಾವುತ ಶ್ರೀನಿವಾಸ್ ಹೇಳಿದ್ದಾರೆ.

 ವ್ಯಕ್ತಿಯಿಂದ ಮದ್ಯದ ಘಾಟು ಬರುತಿತ್ತು

ವ್ಯಕ್ತಿಯಿಂದ ಮದ್ಯದ ಘಾಟು ಬರುತಿತ್ತು

"ಆ ದಿನ ರಾತ್ರಿ ಪೂಜೆಗೆಂದು ಓರ್ವ ವ್ಯಕ್ತಿ ಬಂದಿದ್ದು, ಆತನಿಂದ ಮದ್ಯದ ಘಾಟು ಬರುತಿತ್ತು. ಯಶಸ್ವಿನಿಯ ಮುಂದೆಯೇ ನಾಲ್ಕೈದು ಬಾರಿ ಆ ಕಡೆ ಈ ಕಡೆ ಸುತ್ತಾಡಿದ. ಯಶಸ್ವಿನಿಯ ಹತ್ತಿರದಲ್ಲೇ ಮತ್ತೆ ಮತ್ತೆ ಹೋದಾಗ ಯಶಸ್ವಿನಿ ಆತನನ್ನು ಹಿಂದಕ್ಕೆ ದೂಡಿದೆ. ನಾನು ನೋಡ ನೋಡುತ್ತಿದ್ದಂತೆಯೇ ಆ ವ್ಯಕ್ತಿಯನ್ನು ಹಿಂದೆ ತಳ್ಳಿದೆ. ಅದೃಷ್ಟವಶಾತ್ ಮೆತ್ತಗೆ ಎಸೆದಿರುವ ಕಾರಣ ಯಾವುದೇ ತೊಂದರೆ ಉಂಟಾಗಿಲ್ಲವೆಂದು," ಮಾವುತ ಶ್ರೀನಿವಾಸ್ ತಿಳಿಸಿದ್ದಾರೆ.

ಯಶಸ್ವಿನಿಯನ್ನು ಸಚಿವ, ಉದ್ಯಮಿ ಅನಂದ್ ಸಿಂಗ್ ಕ್ಷೇತ್ರಕ್ಕೆ ಕಾಣಿಕೆಯಾಗಿ ನೀಡಿದ್ದರು. ಸಣ್ಣ ಪ್ರಾಯದಿಂದಲೇ ಯಶಸ್ವಿನಿ ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಜನರ ಮತ್ತು ಭಕ್ತರ ಅಚ್ಚುಮೆಚ್ಚಿನ ಗಜರಾಣಿಯಾಗಿ ಬೆಳೆದಿದ್ದಾಳೆ. ಸದ್ಯ 12 ಹರೆಯದ ಯಶಸ್ವಿನಿ ಕ್ಷೇತ್ರದ ಪ್ರಮುಖ ಆಕರ್ಷಣೆಯಾಗಿದ್ದಾಳೆ.

ಯಶಸ್ವಿನಿಯನ್ನು ದೇವಳದಲ್ಲಿ ಕಟ್ಟಿ ಹಾಕುವುದಿಲ್ಲ. ಮಾವುತರು ಹೇಳಿದ ರೀತಿ ಕೇಳಿ ಅವರ ಮಾತನ್ನು ಅನುಸರಿಸುವುದು ಯಶಸ್ವಿನಿಯ ವಿಶೇಷ ಗುಣವಾಗಿದೆ. ಸುಬ್ರಹ್ಮಣ್ಯನ ಪೂಜೆಯ ಸಂದರ್ಭದಲ್ಲಿ ಗಂಟೆಯನ್ನು ಬಾರಿಸಿ ಮಂಗಳಾರತಿಯ ಬಳಿಕ ತಾನೂ ಕಾಲು ಬಗ್ಗಿಸಿ ನಮಸ್ಕಾರ ಸಲ್ಲಿಸುವುದು ಯಶಸ್ವಿನಿಯ ವಿಶೇಷ ಗುಣ.

 ಗಜರಾಣಿ ತೀವ್ರ ಚಿಂತಾಜನಕ ಸ್ಥಿತಿಗೆ ತಲುಪಿದ್ದಳು

ಗಜರಾಣಿ ತೀವ್ರ ಚಿಂತಾಜನಕ ಸ್ಥಿತಿಗೆ ತಲುಪಿದ್ದಳು

ಕಳೆದ ಕೆಲ ವರ್ಷಗಳ ಹಿಂದೆ ಯಶಸ್ವಿನಿ ಅನಾರೋಗ್ಯಕ್ಕೀಡಾಗಿತ್ತು. ಯಾವುದೇ ಆಹಾರವನ್ನು ಕೊಟ್ಟರೂ ಜೀರ್ಣವಾಗದೇ ಗಜರಾಣಿ ತೀವ್ರ ಚಿಂತಾಜನಕ ಸ್ಥಿತಿಗೆ ತಲುಪಿದ್ದಳು. ಬಳಿಕ ಮೈಸೂರಿನ ವೈದ್ಯರ ತಂಡ ಸುಬ್ರಹ್ಮಣ್ಯದಲ್ಲೇ ಬೀಡು ಬಿಟ್ಟು ವಿಶೇಷ ಪ್ರಯತ್ನದಿಂದ ಆನೆಯನ್ನು ಬದುಕುಳಿಸಿದ್ದರು.

ಈ ಸಂದರ್ಭದಲ್ಲಿ ಗಜರಾಣಿ ಬೇಗ ಗುಣಮಖವಾಗಿ ಮರಳಿ ಬರಲೆಂದು ಸುಬ್ರಹ್ಮಣ್ಯ ಜನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು. ಯಶಸ್ವಿನಿಗಾಗಿ ತಾವು ತೋಟದಲ್ಲಿ ಬೆಳೆದ ಹಣ್ಣು, ಕಬ್ಬನ್ನು ಸ್ವಯಂ ಪ್ರೇರಿತವಾಗಿ ನೀಡಿದ್ದರು. ಕ್ಷೇತ್ರದಲ್ಲಿ ಗಜರಾಣಿಯ ಆರೋಗ್ಯ ಹದಗೆಟ್ಟ ವಿಚಾರವಾಗಿ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ವೈದಿಕ ಚಿಂತನೆಗಳ ಮೂಲಕ ಪರಿಹಾರ ಕಾರ್ಯಗಳನ್ನು ಮಾಡಲಾಯಿತು. ಗಜರಾಣಿಯ ಆಲಯವನ್ನು ಬದಲು ಮಾಡಿ ಗಜಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

 ಆನೆಯ ಆಟ ನೋಡಲೆಂದೇ ಭಕ್ತರು ಬರುತ್ತಾರೆ

ಆನೆಯ ಆಟ ನೋಡಲೆಂದೇ ಭಕ್ತರು ಬರುತ್ತಾರೆ

ಚಂಪಾಷಷ್ಠಿಯ ಸಂದರ್ಭದಲ್ಲಿ ಯಶಸ್ವಿನಿಯ ಆಟವನ್ನು ನೋಡಲೆಂದೇ ಭಕ್ತರು ಬರುತ್ತಾರೆ. ಚಂಪಾಷಷ್ಠಿಗೆ ತೆರೆ ಬೀಳುವ ಸಮಯದಲ್ಲಿ ಕುಮಾರಧಾರಾ ನದಿಯಲ್ಲಿ ನಡೆಯುವ ದೇವರ ಅವಭೃತ ಸ್ನಾನದ ಸಂದರ್ಭದಲ್ಲಿ ಯಶಸ್ವಿನಿಯೂ ನದಿಯಲ್ಲಿ ಮಿಂದು ನೀರಾಟವಾಡುತ್ತಾಳೆ. ಮಕ್ಕಳಿಗೆ ನೀರು ಚಿಮ್ಮಿಸಿ ಮನರಂಜಿಸುತ್ತಾಳೆ.

ಕುಕ್ಕೆ ದೇವಳದ ಒಳಗೆ ನಡೆಯುವ ಬಂಡಿ ಉತ್ಸವದ ಸಂದರ್ಭದಲ್ಲಿ ದೇವಳದ ಪ್ರಾಂಗಣದಲ್ಲಿ ಯಶಸ್ವಿನಿ ಆಟ ಆಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿರುತ್ತದೆ.

 ಸಿಟ್ಟಾಗುವುದಕ್ಕೆ ಬೇರೆ ಕಾರಣವೂ ಇದೆ

ಸಿಟ್ಟಾಗುವುದಕ್ಕೆ ಬೇರೆ ಕಾರಣವೂ ಇದೆ

"ಯಾರಿಗೂ ತೊಂದರೆ ಮಾಡದ ಯಶಸ್ವಿನಿ, ಕೆಲವೊಮ್ಮೆ ಸಿಟ್ಟಾಗುವುದಕ್ಕೆ ಬೇರೆ ಕಾರಣವೂ ಇದೆ. ಯಶಸ್ವಿನಿಯನ್ನು ಗಂಡು ಆನೆಯ ಜೊತೆ ಸೇರಲು ಬಿಡದ ಕಾರಣ ಆಕೆಯ ಮನಸ್ಸು ಕೋಪಕ್ಕೆ ತಿರುಗತ್ತದೆ. ಗಂಡು ಆನೆಯ ಅವಶ್ಯಕತೆ ಇರುವ ಸಂದರ್ಭದಲ್ಲಿ ಆಕೆಯ ಇಚ್ಛೆಯನ್ನು ಪೂರೈಸದೇ ಇರುವುದು ಕೂಡಾ ಒಂದು ಕಾರಣವಾಗಿರಬಹುದು," ಅಂತಾ ಹಿರಿಯ ಅರಣ್ಯಾಧಿಕಾರಿಯೋರ್ವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಪಾವಿತ್ರ್ಯತೆಗೆ ತಿಲಕ ಬಿಂದುವಿನಂತಿರುವ ಯಶಸ್ವಿನಿ, ಸದಾ ಸುಬ್ರಹ್ಮಣ್ಯನ ಸೇವೆ ಮಾಡುತ್ತಾ ಖುಷಿ ಖುಷಿಯಾಗಿರಲಿ ಅನ್ನುವುದು ಭಕ್ತರ ಅಭಿಪ್ರಾಯವಾಗಿದೆ.

Recommended Video

ಮತ್ತೆ ನರಿ ಬುದ್ದಿ ತೋರಿದ ಚೀನಾ | Oneindia Kannada

English summary
Kukke Subramanya Elephant threw a person has become a viral on the social network over the past few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X