ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಮೃತ್ತಿಕಾ ಪ್ರಸಾದ ವಿತರಣೆ; ಹುತ್ತದ ಮಣ್ಣಿಗಿದೆ ಅಪಾರ ಶಕ್ತಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 30: ದಕ್ಷಿಣ ಭಾರತ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.1ರಿಂದ ಚಂಪಾಷಷ್ಠಿ ಉತ್ಸವ ಆರಂಭವಾಗಲಿದೆ. ಚಂಪಾಷಷ್ಠಿ ಆರಂಭಕ್ಕೂ ಮುನ್ನ ಸಂಪ್ರದಾಯದಂತೇ ಸುಬ್ರಹ್ಮಣ್ಯದಲ್ಲಿ ಮೂಲಮೃತ್ತಿಕಾ ಪ್ರಸಾದವನ್ನು ತೆಗೆಯಲಾಗಿದೆ.

ಶ್ರೀ ಕುಕ್ಕೆ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ಮಂಗಳವಾರ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲಪ್ರಸಾದ ತೆಗೆದಿದ್ದಾರೆ. ಭಕ್ತರ ಪಾಲಿನ ಅತೀ ಶ್ರೇಷ್ಠವಾಗಿರುವ ಈ ಪ್ರಸಾದವನ್ನು ಆದಿ ಸುಬ್ರಹ್ಮಣ್ಯದ ಗರ್ಭಗುಡಿಯಲ್ಲಿರುವ ಹುತ್ತದಿಂದ ತೆಗೆಯಲಾಗುತ್ತದೆ ಅನ್ನುವುದು ವಿಶೇಷವಾಗಿದೆ.

ಕಾರ್ತಿಕ ಮಾಸದ ಏಕಾದಶಿ ದಿನದಂದು ಆದಿ ಸುಬ್ರಹ್ಮಣ್ಯದ ಗರ್ಭಗುಡಿಯ ಹುತ್ತದಿಂದ ತೆಗೆಯುವ ಮಣ್ಣು ಪರಮ ಪವಿತ್ರ ಅನ್ನುವುದು ಭಕ್ತರ ನಂಬಿಕೆಯಾಗಿದೆ. ವರ್ಷದ ಒಂದು ದಿನ ಮಾತ್ರ ಈ ಮಣ್ಣು ತೆಗೆಯುವ ಕ್ರಮವಿದೆ. ಈ ಮೂಲ ಮೃತ್ತಿಕೆ ತೆಗೆದ ಬಳಿಕ ಮರುದಿನ ಕಾರ್ತಿಕ ಬಹುಳ ದ್ವಾದಶಿಯಂದು ದೇವಸ್ಥಾನದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಚಂಪಾಷಷ್ಠಿಯ ವಾರ್ಷಿಕ ಜಾತ್ರೆ ಆರಂಭವಾಗುತ್ತದೆ.

Mangaluru: Kukke Subrahmanya Temple Moola Mrittika Prasad Distributed To Devotees

ಮೂಲ ಮೃತ್ತಿಕೆ ಪ್ರಸಾದವನ್ನು ಹುತ್ತದಿಂದ ತೆಗೆಯುವುದಕ್ಕೂ ಸಂಪ್ರದಾಯವಿದ್ದು, ಧಾರ್ಮಿಕ ವಿಧಿ ವಿಧಾನಗಳಿವೆ. ಆದಿ ಸುಬ್ರಹ್ಮಣ್ಯದ ಗರ್ಭಗುಡಿಯಲ್ಲಿರುವ ಹುತ್ತದೊಳಗಿನಿಂದ ಮೂರು ಹಿಡಿ ಮಣ್ಣು ತೆಗೆದು ಮತ್ತು ಕುಮಾರ ಪರ್ವತದ ತುದಿಯ ಮಣ್ಣನ್ನು ಸೇರಿಸಿ ಭಕ್ತರಿಗೆ ಪ್ರಸಾದ ಹಂಚಲಾಗುತ್ತದೆ.

ಈ ಮೃತ್ತಿಕಾ ಪ್ರಸಾದ ಹಲವು ರೋಗಗಳಿಗೆ ರಾಮಬಾಣವಾಗಿದೆ. ಮೃತ್ತಿಕಾ ಪ್ರಸಾದ ಹಾಕಿದರೆ ನಾಗ ಭಯ ಇರುವುದಿಲ್ಲ. ಕನಸಿನಲ್ಲಿ ಹಾವು ಬರುವ ಭಯ, ಸರ್ಪಗಳ ಭೀತಿ ದೂರವಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೇ ಮಾತನಾಡಲು ತೊದಲುವವರು ಈ ಮಣ್ಣನ್ನು ನೀರಿನಲ್ಲಿ ಹಾಕಿ ಕುಡಿಯುತ್ತಿದ್ದರೆ ತೊದಲುವಿಕೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮೂಲ ಮೃತ್ತಿಕಾ ಪ್ರಸಾದ ತೆಗೆಯುವ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ತಡೆ ನೀಡಲಾಗಿತ್ತು.

Mangaluru: Kukke Subrahmanya Temple Moola Mrittika Prasad Distributed To Devotees

ವಿವಾಹ ನಿಶ್ಚಯ, ಬಾಲಗ್ರಹ ದೋಷ, ಆರೋಗ್ಯ ಸಮಸ್ಯೆ, ಚರ್ಮರೋಗ, ಜ್ಞಾಪಕ ಶಕ್ತಿ, ಸಂತಾನ ಭಾಗ್ಯಗಳಿಗೆ ಸುಬ್ರಹ್ಮಣ್ಯದ ಮೂಲ ಮೃತ್ತಿಕಾ ಪ್ರಸಾದ ವರವಾಗಲಿದೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಇದು ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಮತ್ತು ಬೇರೆ ಯಾವುದೇ ದೇವಾಲಯಗಳಲ್ಲಿ ಕಾಣಸಿಗುವುದಿಲ್ಲ. ಇಲ್ಲಿ ಮಾತ್ರ ಭಕ್ತರಿಗೆ ದೊರೆಯುವ ಕ್ಷೇತ್ರದ ಅತ್ಯಂತ ಪವಿತ್ರ ಮಹಾ ಪ್ರಸಾದವಾಗಿದೆ.

ಈ ಮೃತ್ತಿಕಾ ಪ್ರಸಾದವು ಚರ್ಮರೋಗಗಳ ಪರಿಹಾರಕ್ಕೆ ದಿವ್ಯ ಔಷಧವಾಗಿದೆ. ಕ್ಷೇತ್ರದ ಈ ಮುಖ್ಯ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ, ಸಂತಾನ ಭಾಗ್ಯಕ್ಕಾಗಿಯೂ ಭಕ್ತ ಜನರು ಶ್ರೀ ದೇವರಲ್ಲಿ ಪ್ರಾರ್ಥಿಸಿ ಕೊಂಡೊಯ್ಯುತ್ತಾರೆ. ಇದನ್ನು ತೀರ್ಥದಲ್ಲಿ ಸೇವಿಸುವುದರ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾದಿಗಳು ಈ ಪ್ರಸಾದವನ್ನು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಆದರೆ ಇದನ್ನು ಶರೀರದಲ್ಲಿ ಇರಿಸಿಕೊಂಡಾಗ ಅಪವಿತ್ರವಾಗದಂತೆ ತಡೆಯುವುದು ಮಾತ್ರ ಅತ್ಯಂತ ಪ್ರಮುಖವಾದ ಅಂಶವಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.1ರಂದು ಜಾತ್ರೆ ಆರಂಭವಾಗಿ ಡಿ.3ರಂದು ಲಕ್ಷದೀಪೋತ್ಸವ, ಡಿ.7ರಂದು ಚೌತಿ ಹೂವಿನ ತೇರಿನ ಉತ್ಸವ, ಡಿ.8ರಂದು ಪಂಚಮಿ ರಥೋತ್ಸವ, ಡಿ.9ರ ಬೆಳಗ್ಗೆ ಚಂಪಾ ಷಷ್ಠಿ ಬ್ರಹ್ಮ ರಥೋತ್ಸವ, ಡಿ.10ರಂದು ಅವಭಥೋತ್ಸವ ಮತ್ತು ನೌಕಾ ವಿಹಾರ ಕ್ಷೇತ್ರದಲ್ಲಿ ನಡೆಯಲಿದೆ.

ಡಿ.15ರಂದು ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರೆ ಸಮಾಪನವಾಗುತ್ತದೆ. ಆ ದಿನ ರಾತ್ರಿ ದೇವಳದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ. ಕಳೆದ ಬಾರಿ ಸರಳವಾಗಿ ನಡೆದಿದ್ದ ಚಂಪಾಷಷ್ಠಿ ಉತ್ಸವ, ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ.

English summary
The sacred soil Moola Mrittika was removed and distributed to devotees on Tuesday morning at the Kukke Subramanya temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X