ಹುಟ್ಟೂರಿನಲ್ಲಿ ಇಂದು ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ; ಮಿನಿ ಪುರಭವನದಲ್ಲಿ ಅಂತಿಮ ದರ್ಶನ
ಮಂಗಳೂರು, ಅಕ್ಟೋಬರ್ 14: ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರವನ್ನು ಪದವಿನಂಗಡಿ ದೇವಿಕಟ್ಟೆಯ ನಿವಾಸದಿಂದ ಮಂಗಳೂರು ಮಿನಿ ಪುರಭವನದತ್ತ ತರಲಾಗಿದೆ.
ಬೆಳಿಗ್ಗೆ ಒಂಬತ್ತು ಗಂಟೆಗೆ ನಡೆದ ಸಂಗೀತ ಮಾಂತ್ರಿಕನ ಅಂತಿಮ ಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಸಂಗೀತ ಪ್ರೇಮಿಗಳು ಭಾಗವಹಿಸಿದರು. ಮಧ್ಯಾಹ್ನ ಎರಡು ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತದೆ.
ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲ್ ನಾಥ್ ವಿಧಿವಶ
ಮಿನಿ ಪುರಭವನದಲ್ಲಿ ಗಣ್ಯ ವ್ಯಕ್ತಿಗಳು, ಸಂಗೀತ ಪ್ರಿಯರು ಮತ್ತು ಅಪಾರ ಶಿಷ್ಯವೃಂದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಗೋಪಾಲನಾಥ್ ಅವರ ಮಕ್ಕಳಾದ ಮಣಿಕಾಂತ್ ಕದ್ರಿ ಮತ್ತು ಗುರುಪ್ರಸಾದ್ ಮತ್ತು ಕುಟುಂಬಸ್ಥರು ಇದ್ದು, ಕದ್ರಿ ಗೋಪಾಲನಾಥ್ ಅವರ ಶಿಷ್ಯವೃಂದ ಮಿನಿ ಪುರಭವನದಲ್ಲಿ ಅಗಲಿದ ಸಾಧಕನಿಗೆ ಸ್ವರಾಂಜಲಿ ಸಲ್ಲಿಸುತ್ತಿದೆ.
ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ವ್ಯಕ್ತಿಚಿತ್ರ
ಜಿಲ್ಲಾಡಳಿತದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಜೋಗಿ ಸಮುದಾಯದ ಸಂಪ್ರದಾಯದಂತೆ ಸಂಜೆ ನಾಲ್ಕರ ಸುಮಾರಿಗೆ ಹುಟ್ಟೂರು ಬಂಟ್ವಾಳದ ಮಿತ್ತಮಜಲುನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.