ಮುಳುಗಿದ ಹಡಗಿನಿಂದ ತೈಲ ಸೋರಿಕೆ ಭೀತಿ; ಭಾರೀ ಪ್ರಮಾಣದಲ್ಲಿ ಪರಿಸರ ಹಾನಿ ಆತಂಕ
ಮಂಗಳೂರು, ಜುಲೈ 3: ಮಂಗಳೂರು ನಗರ ಹೊರವಲಯದ ಉಚ್ಚಿಲ ಬಟ್ಟಪಾಡಿಯ ಸಮುದ್ರ ತೀರದಲ್ಲಿ ವಿದೇಶಿ ಸರಕು ಸಾಗಾಣೆ ಹಡಗು ಮುಳುಗಡೆ ಹತ್ತು ದಿನಗಳು ಕಳೆದಿದೆ. ಕಳೆದ ಜೂ.23ರಂದು ಈ ಹಡಗು ಮುಳುಗಡೆಯಾಗಿದ್ದುಇದೀಗ ಹಡಗಿನಲ್ಲಿ ಇರುವ ಬರೋಬ್ಬರಿ 220 ಮೆಟ್ರಿಕ್ ಟನ್ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ ಹದ್ದಿನಕಣ್ಣು ಇಡಲಾಗಿದ್ದು, ಏರ್ ಕ್ರಾಫ್ಟ್ ಮತ್ತು ಹಡಗಿನ ಮೂಲಕ ಮಾನಿಟರಿಂಗ್ ಮಾಡಲಾಗುತ್ತಿದೆ. ಹಡಗು ಮುಳಗಿದ ಜಾಗದ ಮೇಲಿನಿಂದ ಏರ್ ಜೆಟ್ ಮೂಲಕ ತೈಲ ಸೋರಿಕೆ ಆಗುತ್ತಾ ಎಂಬ ಬಗ್ಗೆ 24 ಗಂಟೆ ನಿಗಾ ಇಡಲಾಗುತ್ತಿದೆ. ಹಡಗಿನ ತೈಲ ಸೋರಿಕೆಯಾದ್ರೆ ಮತ್ಸ್ಯ ಸಂಕುಲ ನಾಶ ಮತ್ತು ಮೀನುಗಾರರಿಗೆ ಆಘಾತ ಆಗೋ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್, ದ.ಕ ಜಿಲ್ಲಾಡಳಿತ ಅಲರ್ಟ್ ಮಾಡಲಾಗಿದೆ.
ಮಂಗಳೂರು; ಸಮುದ್ರದಲ್ಲಿ ಸಿಲುಕಿದ ಹಡಗು; 15 ಸಿಬ್ಬಂದಿ ರಕ್ಷಣೆ
ಸಿರಿಯಾ ದೇಶದ ಪ್ರಿನ್ಸೆಸ್ ಮಿರಲ್ ಹೆಸರಿನ ಈ ವ್ಯಾಪಾರಿ ಹಡಗು ಚೀನಾದಿಂದ ಲೆಬನಾನ್ ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತಿತ್ತು. ಆದ್ರೆ ತಾಂತ್ರಿಕ ಕಾರಣದಿಂದ ಮಂಗಳೂರು ಸಮುದ್ರದಲ್ಲಿ ಈ ಹಡಗು ಮುಳುಗಡೆಯಾಗಿದೆ. ಮುಳುಗಡೆ ಸಂದರ್ಭ ಹಡಗಿನಲ್ಲಿದ್ದ ಸಿರಿಯಾ ದೇಶದ 15 ಸಿಬ್ಬಂದಿಗಳನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿತ್ತು.

ಮೀನುಗಾರರಲ್ಲಿ ಆತಂಕ
ಸ್ಟೀಲ್ ಆಯಿಲ್ ಸಾಗಿಸುತ್ತಿದ್ದ ಹಡಗು ಭಾಗಶಃ ಮುಳುಗುತ್ತಾ ಬಂದಿದ್ದು ಕೇವಲ ಮೇಲ್ಬಾಗ ಮಾತ್ರ ಕಾಣಿಸುತ್ತಿದೆ. ಸದ್ಯ ಕಡಲು ರಫ್ ಇರುವುದರಿಂದ ಹಡಗು ತೆರವುಗೊಳಿಸುವುದು ಅಥವಾ ಹಡಗಿನ ಆಯಿಲ್ ನ್ನು ಸುರಕ್ಷಿತವಾಗಿ ತೆಗೆಯುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ದಕ್ಷಿಣಕನ್ನಡ ಜಿಲ್ಲಾಡಳಿತ ಅಲರ್ಟ್ ಘೋಷಿಸಿದೆ. ತೈಲ ಸೋರಿಕೆಯಾದ್ರೆ ಮುಂದಿನ ಕ್ರಮಗಳ ಬಗ್ಗೆಯೂ ಜಿಲ್ಲಾಡಳಿತ, ಕೋಸ್ಟ್ ಗಾರ್ಡ್ ಅಣುಕು ಕಾರ್ಯಾಚರಣೆ ನಡೆಸಿದೆ. ಸದ್ಯ ಹಡಗು ಮುಳುಗಿರುವುದರಿಂದ ಮೀನುಗಾರರಲ್ಲಿ ಮತ್ತು ಸ್ಥಳೀಯ ಜನರಲ್ಲಿ ಮುಂದೆನಾಗುತ್ತೆ ಎಂಬ ಆತಂಕ ಕಾಡುತ್ತಿದೆ.

ಕಳೆದ 3 ದಿನಗಳ ಹಿಂದೆಯೇ ಸೋರಿಕೆ
ವಿದೇಶಿ ಸರಕು ಸಾಗಾಣೆಯ ಹಡಗಿನಲ್ಲಿ ಎಂಟು ಸಾವಿರ ಮೆಟ್ರಿಕ್ ಟನ್ ಸ್ಟೀಲ್ ಕಾಯಿಲ್ ಕೂಡಾ ಇತ್ತು. ಮಂಗಳೂರಿನ ಅರಬ್ಬಿಸಮುದ್ರದಲ್ಲಿ ಮುಳುಗಡೆಯಾರುವ ಶಿಪ್ ನಲ್ಲಿರುವ ಬೃಹತ್ ಪ್ರಮಾಣದ ತೈಲ ಸೋರಿಕೆಯ ಆತಂಕ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿಯನ್ ಕೋಸ್ಟ್ ಗಾರ್ಡ್ ಶಿಪ್ ಮತ್ತು ಏರ್ ಕ್ರಾಫ್ಟ್ ಮೂಲಕ ಇಪ್ಪತ್ತನಾಲ್ಕು ಗಂಟೆಯೂ ನಿಗಾ ಇರಿಸಿದೆ. ಆದರೆ ಹಡಗಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದೆ ಅಂತಾ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಸಮುದ್ರದಲ್ಲಿ ಕಪ್ಪು ಬಣ್ಣದಲ್ಲಿ ಸಣ್ಣ ಪ್ರಮಾಣದ ತೈಲ ಸೋರಿಕೆಯಾಗಿದೆ. ಸುಮಾರು 220 ಮೆಟ್ರಿಕ್ ಟನ್ ತೈಲ ಹೊಂದಿರುವ ವಿದೇಶಿ ಹಡಗು ಇದಾಗಿದ್ದು,ಕಳೆದ ಮೂರು ದಿನಗಳ ಹಿಂದೆಯೇ ತೈಲ ಸೋರಿಕೆಯಾಗಿದೆ.

ಕೆಲವು ಜನರಿಗೆ ಆನಾರೋಗ್ಯ ಸಮಸ್ಯೆ
ಈಗಾಗಲೆ ತೀರ ಪ್ರದೇಶದಲ್ಲಿ ತೈಲದ ಕೆಟ್ಟ ವಾಸನೆಯಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳಿಂದ ತೈಲ ಸೋರಿಕೆಯಾಗಿ ವಾಸನೆ ಬರ್ತಿದೆ. ಸಮುದ್ರದಲ್ಲಿ ತೈಲ ಸೇರಿಕೊಂಡು ಬಾವಿ ನೀರು ಸೇರಿ ಜಲಮೂಲಗಳು ಕಲುಷಿತವಾಗಿದೆ. ಇದರಿಂದ ಇಲ್ಲಿನ ಕೆಲ ಮನೆಗಳ ನಿವಾಸಿಗಳಿಗೆ ಬೇಧಿಯಾಗ್ತಿದೆ. ನಾಲ್ಕೈದು ಜನರಿಗೆ ಸಣ್ಣಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.ಮೀನುಗಾರಿಕೆ ತೆರಳಲಾಗದೇ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಅಂತಾ ಸ್ಥಳೀಯ ಮೀನುಗಾರರು ಹೇಳಿದ್ದಾರೆ.

2 ಬಾರಿ ಹಡಗು ಮುಳುಗಡೆ
ತಣ್ಣೀರುಭಾವಿಯಲ್ಲಿ ಈ ಹಿಂದೆಯೂ 2 ಹಡಗುಗಳು ಮುಳುಗಡೆ ಯಾಗಿದ್ದವು. 29 ವರ್ಷದ ಹಿಂದೆ ತಣೀರುಬಾವಿ ಬಳಿ ಸಮುದ್ರದಲ್ಲಿ ಮುಳುಗಿದ್ದ ಸಿಂಗಪುರ ಮೂಲದ ಓಷನ್ ಬ್ರೌಸಿಂಗ್ ಹಡಗಿನ ತೆರವು ಕಾರ್ಯ ಇನ್ನೂ ಪೂರ್ಣವಾಗಿಲ್ಲ, ಎರಿಟ್ರಿಯಾದ ಎಂ.ವಿ. ಡೆನ್ ಡೆನ್ ಹಡಗು 2007ರಲ್ಲಿ ಮಂಗಳೂರಿನ ತಣ್ಣೀರುಬಾವಿ ಬಳಿ ಅಪಘಾತಕ್ಕೊಳಗಾಗಿ ಮುಳುಗಿತ್ತು. ನೌಕೆಯಲ್ಲಿದ್ದ 24 ಸಿಬಂದಿಗಳ ಪೈಕಿ ಮೂವರು ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು. ಇಷ್ಟು ವರ್ಷಗಳಾಗಿದ್ದರೂ ಇದು ಪೂರ್ಣ ವಿಲೇವಾರಿಯಾಗಿಲ್ಲ. 2008ರಲ್ಲೂ ಮ್ಯಾಂಗನೀಸ್ ಹೊತ್ತ ತರುತ್ತಿದ್ದ ಚೀನಾದ ಹಡಗೂ ಕೂಡ ಮುಳುಗಿತ್ತು.