ಧರ್ಮಸ್ಥಳ ವಾರ್ಷಿಕ ಲಕ್ಷದೀಪೋತ್ಸವ: ದೇವಾಲಯದ ಮಹತ್ವದ ಪ್ರಕಟಣೆ
ಮಂಗಳೂರು, ನ 26: ಕಾರ್ತಿಕ ಮಾಸದಲ್ಲಿ ನಾಡಿನಲ್ಲಿ ನಡೆಯುವ ಪ್ರಮುಖ ಉತ್ಸವಗಳಲ್ಲೊಂದಾದ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಲಕ್ಷದೀಪೋತ್ಸವ ಈ ಬಾರಿ ಸರಳವಾಗಿ ಆಚರಿಸಲಾಗುವುದು ಎಂದು ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.
ನಿರ್ಗತಿಕರ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ 'ವಾತ್ಸಲ್ಯ ಯೋಜನೆ'ಗೆ ಚಾಲನೆ ನೀಡುತ್ತಾ ಮಾತನಾಡಿದ ಹೆಗ್ಗಡೆಯವರು, "ದೇವಾಲಯದ ವಾರ್ಷಿಕ ಲಕ್ಷದೀಪೋತ್ಸವವನ್ನು ಈ ಬಾರಿ, ಕೊರೊನಾ ಕಾರಣದಿಂದ ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ"ಎಂದು ಹೇಳಿದ್ದಾರೆ.
ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಟ್ರಸ್ಟಿನಿಂದ ಮಹತ್ವದ ಕೆಲಸ
"ಉತ್ಸವವನ್ನು ಸರಳವಾಗಿ ಆಚರಿಸಿದರೂ, ಸರ್ವಧರ್ಮ ಸಮ್ಮೇಳನವನ್ನು ಮತ್ತು ಸಾಹಿತ್ಯ ಮೇಳವನ್ನು ನಿಲ್ಲಿಸುವುದಿಲ್ಲ"ಎಂದು ಸ್ಪಷ್ಟನೆ ನೀಡಿರುವ ಹೆಗ್ಗಡೆಯವರು, "ಈ ಬಾರಿ ಆನ್ಲೈನ್ ಮೂಲಕ ಹೆಚ್ಚು ಜನರಿಗೆ ಧಾರ್ಮಿಕ ಕಾರ್ಯಕ್ರಮಗಳು ತಲುಪುವಂತೆ ನೋಡಿಕೊಳ್ಳಲು ಸೂಕ್ರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು"ಎಂದು ಹೇಳಿದ್ದಾರೆ.
"ಡಿಸೆಂಬರ್ 10-14ರ ವರೆಗೆ ಲಕ್ಷದೀಪ ಕಾರ್ಯಕ್ರಮ ನಡೆಯಲಿದ್ದು, ಡಿಸೆಂಬರ್ ಹದಿಮೂರರಂದು ಸರ್ವಧರ್ಮ ಸಮ್ಮೇಳನ, ಡಿ.14ರಂದು ಸಾಹಿತ್ಯ ಸಮ್ಮೇಳನ ಮತ್ತು ಅಂದೇ ಲಕ್ಷದೀಪ ಧಾರ್ಮಿಕ ಉತ್ಸವ ನಡೆಯಲಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ, ಭಕ್ತಾದಿಗಳು ತಾವಿದ್ದಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸುವ ಸೌಲಭ್ಯವನ್ನು ಮಾಡಿಕೊಡಲಾಗುವುದು"ಎಂದು ಡಾ.ಹೆಗ್ಗಡೆಯವರು ಹೇಳಿದ್ದಾರೆ.
ವಾತ್ಸಲ್ಯ ಯೋಜನೆಯ ಬಗ್ಗೆ ಮಾತನಾಡುತ್ತಾ, "ಹಿರಿಯರನ್ನು ಗೌರವಿಸುವ ಪರಿಪಾಠವನ್ನು ನಾವೆಲ್ಲಾ ಕಲಿಯಬೇಕಿದೆ. ಅನಾಥರು, ಅಶಕ್ತರು, ನೊಂದವರ ಶಾಪ ಮನುಕುಲಕ್ಕೆ ಶಾಪವಾಗಿ ಪರಿಗಣಿಸಬಹುದು. ಅವರ ಕಣ್ಣೀರು ಒರೆಸುವ ಕೆಲಸವನ್ನು ನಾವು ಮಾಡಬೇಕಿದೆ"ಎಂದು ಡಾ.ಹೆಗ್ಗಡೆಯವರು ಹೇಳಿದ್ದಾರೆ.
"ಈಗಾಗಲೇ ರಾಜ್ಯದಲ್ಲಿ 10,481 ಮಂದಿಗೆ ವಾರ್ಷಿಕ ಎಂಟು ಕೋಟಿ ರೂಪಾಯಿ ಮಾಸಾಶನವನ್ನು ವಿತರಿಸಲಾಗಿದೆ. ಅಡುಗೆ ಪಾತ್ರೆ, ಚಾಪೆ,ಹೊದಿಕೆ ಮುಂತಾದ ಮೂಲಭೂತ ಅವಶ್ಯಕ ವಸ್ತುಗಳನ್ನು ಮನೆಬಾಗಿಲಿಗೆ ಈ ಯೋಜನೆಯಡಿಯಲ್ಲಿ ಒದಗಿಸಲಾಗುವುದು"ಎಂದು ಡಾ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.