ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳ ಗಡಿಭಾಗದ ಮದ್ಯಪ್ರಿಯರಿಗೆ ಶಾಕ್ ನೀಡಿದ ದ‌ಕ್ಷಿಣ ಕನ್ನಡ ಜಿಲ್ಲಾಡಳಿತ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 03: ಕೇರಳದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ- ಕಾಸರಗೋಡು ಗಡಿಗೆ ಹೊಂದಿಕೊಂಡ ಮದ್ಯದಂಗಡಿಗಳನ್ನು ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ನೀಡಿದ್ದು, ಕೇರಳದ ಗಡಿಭಾಗಕ್ಕೆ ಹೊಂದಿಕೊಂಡ 5 ಕಿ.ಮೀ ವ್ಯಾಪ್ತಿಯ ಮದ್ಯದಂಗಡಿ ಬಂದ್ ಮಾಡಲು ಆದೇಶಿಸಿದ್ದಾರೆ. ಇದರಿಂದ ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕಿನ ಗಡಿ ಭಾಗದ ಮದ್ಯದಂಗಡಿಗಳು ಬಂದ್ ಆಗಲಿವೆ. ಒಟ್ಟು 19 ಗ್ರಾಮಗಳ 29 ಮದ್ಯದಂಗಡಿಗಳ ಬಂದ್‌ಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಆಗಸ್ಟ್ 15ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮದ್ಯಪ್ರಿಯರು ದಕ್ಷಿಣ ಕನ್ನಡ ಜಿಲ್ಲೆಯ ಮದ್ಯದಂಗಡಿಗಳನ್ನು ಅವಲಂಬಿಸಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಆದೇಶವನ್ನು ಹೊರಡಿಸಿದೆ. ಜಿಲ್ಲಾಡಳಿತದ ಈ ನೂತನ ಆದೇಶ ಆಗಸ್ಟ್ 3ನೇ ತಾರೀಖಿನಿಂದ ಜಾರಿಯಲ್ಲಿದ್ದು, ಆಗಸ್ಟ್ 15ರವರೆಗೆ ಮದ್ಯದಂಗಡಿಗಳು ಮುಚ್ಚಲಿದೆ.

 Mangaluru: Dakshina Kannada District Administration Ordered To Close 29 Liquor Store In Kerala Border

ಮಂಗಳೂರು ತಾಲೂಕಿನ ತಲಪಾಡಿ, ಸೋಮೇಶ್ವರ, ಕೋಟೆಕಾರ್ ಮತ್ತು ಮಂಜನಾಡಿ ಭಾಗದ 9 ಮದ್ಯದಂಗಡಿಗಳು ಮುಚ್ಚಲಿದ್ದು, ಇನ್ನು ಬಂಟ್ವಾಳ ತಾಲೂಕಿನ ಕೇಪು, ಕೊರೋಪಾಡಿ, ಪೆರುವಾಯಿ, ನರಿಂಗಾನ, ಕಂಬಳಪದವು, ಮುಡಿಪು ಮತ್ತು ಪಜೀರು ಪ್ರದೇಶದ 7 ಮದ್ಯದಂಗಡಿಗಳು ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶದಿಂದ ಮುಚ್ಚಲಿದೆ.

ಇನ್ನು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು, ಬಡಗನ್ನೂರು, ಪಾಣಾಜೆಯ 3 ಮದ್ಯದಂಗಡಿಗಳು ಮತ್ತು 5 ಶೇಂದಿ ಅಂಗಡಿಗಳೂ ಜಿಲ್ಲಾಡಳಿತದ ಆದೇಶದಿಂದ ಅಗಸ್ಟ್ 15ರವರೆಗೆ ಮುಚ್ಚಲಿದೆ. ಇನ್ನು ಸುಳ್ಯ ತಾಲೂಕಿನ ಅಲೆಟ್ಟಿ, ಕೆನ್ಯಾ, ಮಂಡೆಕೋಲು, ಜಾಲ್ಸೂರು ಮತ್ತು ಕನಕ ಮಜಲು ಪ್ರದೇಶದ 4 ಮದ್ಯದಂಗಡಿಗಳು ಮುಚ್ಚಲಿವೆ. ಒಟ್ಟು 24 ಮದ್ಯದಂಗಡಿಗಳು ಮತ್ತು 5 ಶೇಂದಿ ಅಂಗಡಿಗಳನ್ನು ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶವು ಗಡಿಭಾಗದ ಮದ್ಯಪ್ರಿಯರ ಕಣ್ಣು ಕೆಂಪಾಗಿಸಿದೆ. ತಲಪಾಡಿ ಗಡಿಭಾಗದಲ್ಲಿ ಕೇರಳ ಭಾಗದವರನ್ನು ಅಪರಾಧಿಗಳ ರೀತಿ ಕಾಣುವ ಜಿಲ್ಲಾಡಳಿತ, ಈಗ ಮದ್ಯದಂಗಡಿಗೆ ನಡೆದುಕೊಂಡು ಬರಲೂ ಬಿಡುತ್ತಿಲ್ಲ. ಜಿಲ್ಲಾಡಳಿತ ಮದ್ಯದಂಗಡಿಗಳಲ್ಲಿ ಗ್ರಾಹಕರಿಗೆ ಕೊಡುವ ಸೇವೆಯನ್ನು ನಿಲ್ಲಿಸಲಿ, ಆದರೆ ಪಾರ್ಸೆಲ್ ವ್ಯವಸ್ಥೆಯನ್ನಾದರೂ ಮಾಡಬೇಕೆಂದು ಗಡಿಭಾಗದ ಜನರು ಆಗ್ರಹಿಸಿದ್ದಾರೆ.

 Mangaluru: Dakshina Kannada District Administration Ordered To Close 29 Liquor Store In Kerala Border

ಇನ್ನು ಮದ್ಯದಂಗಡಿಗಳ ಮಾಲೀಕರೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿ ಭಾಗದಿಂದ 5 ಕಿ.ಮೀ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವುದಕ್ಕೆ ಆದೇಶ ನೀಡಿರುವುದು ಸರಿಯಲ್ಲ‌. ಲಾಕ್‌ಡೌನ್ ವೇಳೆ ನೆಲಕಚ್ಚಿದ್ದ ಉದ್ಯಮ ಸದ್ಯ ತೆರೆಯುತ್ತಿದೆ. ಇದರ ನಡುವೆ ಈಗ ಜಿಲ್ಲಾಡಳಿತ ಮತ್ತೆ ಬಂದ್ ಮಾಡುವುದಕ್ಕೆ ಆದೇಶ ನೀಡಿದ್ದು, ಮತ್ತೆ ಮುಚ್ಚುವುದರಿಂದ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ ಮತ್ತು ದಕ್ಷಿಣ ಕನ್ನಡ ಗಡಿಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಕೊರೊನಾ ನೆಗೆಟಿವ್ ವರದಿ ಇಲ್ಲದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ನಿಷೇಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ಈ ನಿರ್ಧಾರವನ್ನು ಗಡಿಭಾಗದ ಜನರು ಖಂಡಿಸಿದ್ದು, ಜಿಲ್ಲೆ ಜಿಲ್ಲೆಗಳ ನಡುವೆ ಸಂಘರ್ಷಕ್ಕೆ ಈ ಕಾನೂನು ಎಡೆಮಾಡಿ ಕೊಡುತ್ತದೆ. ಕೇರಳ- ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳು ಭಾರತ- ಪಾಕಿಸ್ತಾನದ ಗಡಿ ರೀತಿಯಾಗಿದೆ ಅಂತಾ ಹೇಳಿ ಗಡಿಭಾಗದ ಜನರು ಮಂಗಳೂರು- ಕೇರಳ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.

English summary
With the backdrop of increasing cases of Covid19 in Kerala, the Dakshina Kannada District administration has ordered the closure of liquor stores adjoining the Dakshina Kannada-Kasaragod border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X