ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಹೊತ್ತಲ್ಲಿ ಪೂಜಾರಿ ಕಾಲಿಗೆರಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳು

|
Google Oneindia Kannada News

ಮಂಗಳೂರು ಏಪ್ರಿಲ್ 20: ರಾಜಕೀಯ ಎಂದರೇನೆ ಹಾಗೆ. ಇಲ್ಲಿ ಎಲ್ಲವೂ ಸಾಧ್ಯ... ರಾಜಕೀಯ ಕ್ಷೇತ್ರದಲ್ಲಿ ಯಾರೂ ಮಿತ್ರರಲ್ಲ, ಹಾಗೆಯೇ ಯಾರೂ ಶತ್ರುಗಳಲ್ಲ... ಚುನಾವಣೆ ಸಂದರ್ಭದಲ್ಲಿ ಎಲ್ಲರೂ ನೆನಪಾಗುತ್ತಾರೆ... ರಾಜಕೀಯದ ಬಗ್ಗೆ ಇರುವ ಈ ಎಲ್ಲಾ ಮಾತುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಎಂಬಂತೆ ಭಾಸವಾಗುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತೊಂದು ಚುನಾವಣೆಗೆ ಸಿದ್ದಗೊಳ್ಳುತ್ತಿದೆ. ಈ ನಡುವೆ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ, ಅಭ್ಯರ್ಥಿಗಳಿಗೆ ಎಂದೋ ಮರೆತು ಹೋಗಿದ್ದ ಹಿರಿಯ ಪ್ರಭಾವಿ ನಾಯಕ ಜನಾರ್ಧನ ಪೂಜಾರಿ ನೆನಪಾಗುತ್ತಿದ್ದಾರೆ.

Janardhana Poojary

ಚುನಾವಣೆಯ ನಾಮಪತ್ರ ಸಲ್ಲಿಸುವ ಮೊದಲು ಪೂಜಾರಿಯವರ ಆಶೀರ್ವಾದ ಪಡೆಯಲು ಕಾಂಗ್ರೆಸ್ ಮುಖಂಡರ ದಂಡೇ ಪೂಜಾರಿ ಅವರ ಮನೆಯತ್ತ ಹೆಜ್ಜೆ ಹಾಕ ತೊಡಗಿದೆ. ಏಪ್ರಿಲ್ 18 ರಂದು ಸಚಿವ ರಮಾನಾಥ ರೈ ಬಂಟ್ವಾಳದಲ್ಲಿ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಪೂಜಾರಿ ಅವರಿಂದ ಆಶೀರ್ವಾದ ಕೋರಿದ್ದರು. ಅದಾದ ಬಳಿಕ ನಿನ್ನೆ ಉಡುಪಿಯ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಅವರು ಪೂಜಾರಿ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು.

ಇಂದು ಕೂಡ ಕಾಂಗ್ರೆಸ್ ಮುಖಂಡರ ದಂಡು ಪೂಜಾರಿ ಅವರ ಮನೆಗೆ ಭೇಟಿ ನೀಡಿದೆ. ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ, ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ, ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಯ್ದೀನ್ ಬಾವಾ ಅವರು ಬಂಟ್ವಾಳದಲ್ಲಿರುವ ಪೂಜಾರಿಯವರ ಮನೆಗೆ ತೆರಳಿ ಆಶೀರ್ವಾದ ಪಡೆದರು.

Vasanth Bangera

ಕಾಂಗ್ರೆಸ್ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುವುದಕ್ಕೂ ಮುನ್ನ ಹಿರಿಯ ಕಾಂಗ್ರೆಸ್ಸಿಗರು ಬಿ. ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ 2 ವರ್ಷಗಳಿಂದ ಪಕ್ಷದ ಕಾರ್ಯಕ್ರಮಗಳಿಂದ ಪೂಜಾರಿ ಅವರನ್ನು ದೂರವಿಟ್ಟಿದ್ದ ಕಾಂಗ್ರೆಸ್ಸಿಗರಿಗೆ ಈಗ ಏಕಾಏಕಿ ಪೂಜಾರಿ ಅವರ ನೆನಪಾಗುತ್ತಿದೆ. ಇದಕ್ಕೆ ಕಾರಣ ಬಿಲ್ಲವ ಸಮುದಾಯದ ಜೊತೆ ಜನಾರ್ದನ ಪೂಜಾರಿ ಗುರುತಿಸಿಕೊಂಡಿರುವುದು.

ಪ್ರಮುಖ ಮುಖಂಡ ಎಂದು ಗುರುತಿಸಲಾಗುತ್ತದೆ . ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಲ್ಲವ ಮತಗಳೇ ನಿರ್ಣಾಯಕ . ಈ ಹಿನ್ನೆಲೆಯಲ್ಲಿ ಬಿಲ್ಲವರನ್ನು ಓಲೈಸುವ ತಂತ್ರಗಾರಿಕೆ ಇದಾಗಿದೆ ಎಂದು ವಿಮರ್ಶಿಸಲಾಗುತ್ತಿದೆ. ಆದರೆ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅನಾರೋಗ್ಯದ ನಡುವೆಯೂ ಹಿಂದಿನ ಕಹಿ ಅನುಭವಗಳನ್ನು ಮರೆತು ಮನೆಗೆ ಬಂದ ಪಕ್ಷದ ಅಭ್ಯರ್ಥಿಗಳನ್ನು ಮನಪೂರ್ವಕ ಹರಸಿ ಕಳುಹಿಸಿಕೊಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಮತದಾರರಲ್ಲಿ ರಮಾನಾಥ್ ರೈ ವಿರುದ್ಧ ಆಕ್ರೋಶ ಮಡುಗಟ್ಟಿತ್ತು. ಪೂಜಾರಿ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಿದ್ದೇ ರಮಾನಾಥ ರೈ ಸೇರಿದಂತೆ ಇನ್ನಿತರ ಅವರ ಬೆಂಬಲಿಗ ಮುಖಂಡರು ಎಂಬ ಆರೋಪವೂ ಕೇಳಿಬಂದಿತ್ತು.

ರಾಜ್ಯ ಸರಕಾರದ ಕೆಲ ನೀತಿಗಳ ವಿರುದ್ದ ಜನಾರ್ದನ ಪೂಜಾರಿ ಬಹಿಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಗಳ ವಿರುದ್ಧ ಕಿಡಿಕಾರಿದ್ದರು. ಆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಅಂತರ ಕಾಯ್ದು ಕೊಂಡಿದ್ದರು.

ಆದರೆ ಈಗ ಚುನಾವಣೆ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್ಸಿಗರಿಗೆ ಹಿರಿಯ ನಾಯಕರ ನೆನಪಾಗಿದೆ.

English summary
Vasanth Bangera, J.R. Lobo, Mohiuddin Bava and Vinay Kumar Sorake who are the congress candidate for next assembly election today met congress senior leader B Janardhana Poojary and seek blessing for next upcoming election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X