• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್; ಚಾಕೊಲೇಟ್ ಮಾಡಿ ಉದ್ಯಮಿಗಳಾದ ಸಾಫ್ಟ್‌ವೇರ್ ದಂಪತಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 27; ಕೊರೊನಾ ಲಾಕ್‌ಡೌನ್ ಹಲವರ ಬದುಕನ್ನು ಬದಲಾಯಿಸಿದೆ. ಆದರೆ ಇದೇ ಲಾಕ್‌ಡೌನ್ ಅವಧಿಯನ್ನು ವ್ಯರ್ಥ ಮಾಡದೆ ಸ್ವಂತ ಉದ್ಯಮ ಆರಂಭಿಸಿ ಇಂಜಿನಿಯರ್ ದಂಪತಿ ಯಶಸ್ವಿಯಾಗಿದ್ದಾರೆ. ಐಟಿ ಫೀಲ್ಡ್‌ನಲ್ಲಿ ಉದ್ಯೋಗದಲ್ಲಿದ್ದ ಈ ದಂಪತಿ ಲಾಕ್‌ಡೌನ್ ವೇಳೆ ಮನೆಯಲ್ಲಿಯೇ ಚಾಕೊಲೇಟ್ ತಯಾರಿಕಾ ಕಂಪನಿ ತೆರೆದು ಲಾಭ ಗಳಿಸಿದ್ದಾರೆ. ತಮ್ಮದೇ ತೋಟದ ಕೋಕೋ ಬಳಸಿ, ಸತ್ವಭರಿತ ಚಾಕೊಲೇಟ್ ತಯಾರಿಸಿ, ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಸೃಷ್ಟಿಸಿದ್ದಾರೆ.

ಹಲಸಿನ ಹಣ್ಣಿನಿಂದ ಚಾಕಲೇಟ್ ತಯಾರಿಸಿದ ಕ್ಯಾಂಪ್ಕೋ ಹಲಸಿನ ಹಣ್ಣಿನಿಂದ ಚಾಕಲೇಟ್ ತಯಾರಿಸಿದ ಕ್ಯಾಂಪ್ಕೋ

ಕೋವಿಡ್ ಲಾಕ್‌ಡೌನ್‌ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಉದ್ಯಮವೊಂದನ್ನು ಸ್ಥಾಪನೆ ಮಾಡಿ, ಹೇಗೆ ಯಶಸ್ವಿ ಉದ್ಯಮಿಯಾಗಿ ಪರಿವರ್ತನೆಯಾಗಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ದಂಪತಿ ಉದಾಹರಣೆಯಾಗಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ, ಕೆಲಸ, ಟ್ರಾಫಿಕ್, ಮನೆ ಕೆಲಸ ಹೀಗೆ ಒತ್ತಡ ಜೀವನ ನಡೆಸುತ್ತಿದ್ದ ಮಹಿಳೆ ಐಟಿ ಕಂಪನಿಗೆ ರಾಜೀನಾಮೆ ನೀಡಿ, ಈಗ ಸ್ವಂತ ಉದ್ಯಮ ಸ್ಥಾಪಿಸುವ ಜೊತೆಗೆ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗವನ್ನೂ ನೀಡುವ ಹಂತಕ್ಕೆ ತಲುಪಿದ್ದಾರೆ.

ಪುತ್ತೂರು; ಅಡಿಕೆಯಿಂದ ತಯಾರಾಯ್ತು ಘಮ ಘಮ ಹೋಳಿಗೆ! ಪುತ್ತೂರು; ಅಡಿಕೆಯಿಂದ ತಯಾರಾಯ್ತು ಘಮ ಘಮ ಹೋಳಿಗೆ!

ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿ ರೆಂಜ ನಿವಾಸಿಯಾಗಿರುವ ಸ್ವಾತಿ ಕಲ್ಲೆಗುಂಡಿ ಇದೀಗ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮಗು, ಪತಿಯೊಡನೆ ಊರಿಗೆ ಬಂದು ಸ್ವಾತಿ ನೆಲೆಸಿದರು. ಇದೇ ಸಂದರ್ಭದಲ್ಲಿ ಮನೆಯಲ್ಲಿ ಬೆಳೆಸಿದ ಕೊಕ್ಕೊವನ್ನು ಲಾಕ್‌ಡೌನ್ ಕಾರಣದಿಂದಾಗಿ ಮಾರುಕಟ್ಟೆಗೆ ಹಾಕಲಾಗದೆ ಕೊಳೆಯುವ ಸ್ಥಿತಿಯಲ್ಲಿತ್ತು. ಈ ಸಂದರ್ಭ ಸ್ವಾತಿ ಹಾಗೂ ಅವರ ಪತಿ ಬಾಲಸುಬ್ರಹ್ಮಣ್ಯ ಯೋಚನೆ ಮಾಡಿದ್ದು ಚಾಕೊಲೇಟ್ ತಯಾರಿಕೆ.

ಐಟಿಸಿಯಿಂದ ಕೇಜಿಗೆ 4.5 ಲಕ್ಷದ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಐಟಿಸಿಯಿಂದ ಕೇಜಿಗೆ 4.5 ಲಕ್ಷದ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್

ತಾನೂ ಉದ್ಯಮಿಯಾಗಬಹುದು, ಮಾವ ಬೆಳೆಸಿದ ಕೊಕೊಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂಬ ಚಿಂತನೆಯನ್ನು ಬೆನ್ನತ್ತಿ ಹೊರಟ ಸ್ವಾತಿ ಅಂತರ್ಜಾಲದಲ್ಲಿ ಚಾಕೊಲೇಟ್ ತಯಾರಿಗೆ ಬೇಕಾದ ಹುಡುಕಾಟವನ್ನು ನಡೆಸಿದರು. ತಯಾರಿಕೆ, ತಂತ್ರಜ್ಞಾನ, ಗುಣಮಟ್ಟ, ತಯಾರಿಸಲು ಪರವಾನಗಿ ಹೀಗೆ ಎಲ್ಲ ಮಗ್ಗುಲುಗಳ ಮಾಹಿತಿ ಕಲೆ ಹಾಕಿದರು. ಪತಿ ಬಾಲ ಸುಬ್ರಹ್ಮಣ್ಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವುದರಿಂದ ಯಂತ್ರೋಪಕರಣ, ತಂತ್ರಜ್ಞಾನದ ಹುಡುಕಾಟಕ್ಕೆ ಸಹಾಯಕವಾಯಿತು. ಬಳಿಕ, ಚಾಕಲೋಟ್ ತಯಾರಿಕೆ ಕುರಿತು ಪತಿ ಮತ್ತು ಪತ್ನಿ ಇಬ್ಬರೂ ವೃತ್ತಿಪರ ತರಬೇತಿ ಪಡೆದರು. ತಾನು ದುಡಿದು ಉಳಿಸಿದ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು ಯಂತ್ರೋಪಕರಣಗಳನ್ನು ಆನ್‌ಲೈನ್ ಮೂಲಕವೇ ಸಮಾಲೋಚನೆ ನಡೆಸಿ ಖರೀದಿಸಿದರು.

ಮಿಶ್ರ ಬೆಳೆಯಾಗಿ ಕೊಕ್ಕೊ ಬೆಳೆಯುತ್ತಾರೆ

ಮಿಶ್ರ ಬೆಳೆಯಾಗಿ ಕೊಕ್ಕೊ ಬೆಳೆಯುತ್ತಾರೆ

ಇವರಿಗೆ ಒಟ್ಟು 5 ಎಕರೆ ತೋಟವಿದ್ದು, ಇದರಲ್ಲಿ ಮಿಶ್ರ ಬೆಳೆಯಾಗಿ ಕೊಕ್ಕೊವನ್ನು ಬೆಳೆಯುತ್ತಾರೆ. ಸುಮಾರು 450ಕ್ಕೂ ಹೆಚ್ಚು ಕೊಕ್ಕೊ ಗಿಡಗಳು ಇದೆ. ಈ ಹಿಂದೆ ತಾವು ಬೆಳೆದ ಕೊಕ್ಕೊವನ್ನು ನೇರವಾಗಿ ಮಾರುಕಟ್ಟೆಗೆ ನೀಡುತ್ತಿದ್ದರು. ಆದರೆ ಇದೀಗ ಚಾಕೊಲೇಟ್ ಉದ್ಯಮ ಶುರುಮಾಡಿದ ಬಳಿಕ ಬೆಳೆದ ಕೊಕ್ಕೊವನ್ನು ಇಲ್ಲಿಯೇ ಬಳಸುತ್ತಿದ್ದಾರೆ. ಇಲ್ಲಿ ಫಾರ್ಮ್ ಟು ಬಾರ್ ಪರಿಕಲ್ಪನೆಯಲ್ಲಿ ಚಾಕಲೇಟ್ ತಯಾರಾಗುತ್ತಿದ್ದು, ಕೊಕ್ಕೊ ಸಂಸ್ಕರಣೆಯಿಂದ ಚಾಕೊಲೇಟ್ ಸಿದ್ಧವಾಗಿ ರವಾನೆಯಾಗುವವರೆಗೂ ಎಲ್ಲಾ ಕೆಲಸಗಳೂ ಇಲ್ಲಿಂದಲೇ ನಿರ್ವಹಣೆಯಾಗುತ್ತವೆ. ಮನೆಯ ಮೇಲ್ಭಾಗದಲ್ಲಿ ಉಪಕರಣಗಳನ್ನೆಲ್ಲಾ ಅಳವಡಿಸಿಕೊಂಡು ಉದ್ಯಮ ಪ್ರಾರಂಭಿಸಿದ್ದಾರೆ.

ಅನುತ್ತಮ ಹೆಸರಿನ ಚಾಕೊಲೇಟ್

ಅನುತ್ತಮ ಹೆಸರಿನ ಚಾಕೊಲೇಟ್

'ಅನುತ್ತಮ' ಹೆಸರಿನ ಚಾಕೊಲೇಟ್ ತಯಾರಿಸುತ್ತಿರುವ ಸ್ವಾತಿ, ಉದ್ಯಮದ ಎಲ್ಲಾ ಜವಾಬ್ದಾರಿಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಆನ್‌ಲೈನ್ ಮಾರುಕಟ್ಟೆಯನ್ನೇ ಅವಲಂಬಿಸಿರುವ ಸ್ವಾತಿ ಇನ್‌ಸ್ಟಾಗ್ರಾಂ, ಫೇಸ್ಪುಕ್ ಹಾಗೂ ಅಮೆಜಾನ್‌ನಲ್ಲಿ ತಮ್ಮ ಚಾಕೊಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವರು ಯಾವುದೇ ರಾಸಾಯನಿಕ, ಸಕ್ಕರೆ ಬಳಸದೆ ಕೇವಲ ಬೆಲ್ಲವನ್ನು ಬಳಸಿಕೊಂಡು ಚಾಕೊಲೇಟ್ ತಯಾರಿಸುತ್ತಾರೆ. ಡಾರ್ಕ್ ಚಾಕೊಲೇಟ್ ಇದಾಗಿದ್ದು, ಉಳಿದ ಚಾಕೊಲೇಟ್‌ಗಳಿಗಿಂತ ಕೊಂಚ ಭಿನ್ನ ರುಚಿಯನ್ನೂ ಇದು ಹೊಂದಿದೆ. ತಿಂಗಳಿಗೆ 800 ಬಾರ್‌ಗಳಿಗೆ ಬೇಡಿಕೆಯಿದ್ದು, ಇನ್ನಷ್ಟು ಬೇಡಿಕೆ ಬರುವ ನಿರೀಕ್ಷೆಯಲ್ಲೂ ಸ್ವಾತಿಯವರು ಇದ್ದಾರೆ. ಸದ್ಯ ಒಂದು ಬಾರ್‌ಗೆ 175 ರೂಪಾಯಿ ದರ ನಿಗದಿ ಮಾಡಿದ್ದಾರೆ.

ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ

ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ

ಅಂದ ಹಾಗೆ ಸ್ವಾತಿ ತಯಾರಿಸುತ್ತಿರುವ ಚಾಕೊಲೇಟ್‌ಗಳು ಡಾರ್ಕ್ ಚಾಕೊಲೇಟ್‌ಗಳಾಗಿರುವುದರಿಂದ ಆಂಟಿ ಆಕ್ಸಿಡೆಂಟ್ ಸೇರಿದಂತೆ ಹಲವು ಆರೋಗ್ಯಕರ ಅಂಶಗಳು ಇದರಲ್ಲಿವೆ. ಜೊತೆಗೆ ಕೃತಕ ಬಣ್ಣ, ಪರಿಮಳಗಳನ್ನು ಬಳಸದೆ ಸಂಪೂರ್ಣವಾಗಿ ಕೊಕ್ಕೊ ಬೀಜಗಳನ್ನು ಬಳಸಿಕೊಂಡು ತಯಾರಾಗುತ್ತಿವೆ. ಇವರ ಉತ್ಪನ್ನಗಳಲ್ಲಿ 62% ಡಾರ್ಕ್ ಚಾಕೊಲೇಟ್ ಜೊತೆ ಸಾವಯವ ಬೆಲ್ಲ ಬಳಸಿಕೊಂಡು ಮಾಡಿದ ಚಾಕೊಲೇಟ್ ಹಾಗೂ ಹುರಿದ ಬಾದಾಮಿ ಮಿಶ್ರಿತ ಚಾಕೊಲೇಟ್‌ಗೆ ಹೆಚ್ಚಿನ ಬೇಡಿಕೆಯಿದೆ. ಇದರ ಜೊತೆಗೆ ಕಾಳು ಮೆಣಸು, ಕಿತ್ತಳೆ ಹಣ್ಣಿನ ಸಿಪ್ಪೆ, ಮಾವಿನ ಹಣ್ಣಿನ ಮಾಂಬಳ ಬಳಸಿಕೊಂಡು ಮಾಡಿದ ಚಾಕೊಲೇಟ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕೃಷಿಕರಿಗೂ ಪ್ರೇರಣೆಯಾಗಿದ್ದಾರೆ

ಕೃಷಿಕರಿಗೂ ಪ್ರೇರಣೆಯಾಗಿದ್ದಾರೆ

ಚಾಕೊಲೇಟ್ ತಯಾರಿಸಲು ಆರಂಭಿಸಿದ ಬಳಿಕ ಸುತ್ತಮುತ್ತಲಿನ ಕೃಷಿಕರಿಗೂ ಸಾವಯವ ಕೊಕ್ಕೊ ಬೆಳೆಸಲು ಸ್ವಾತಿ ಪ್ರೇರಣೆ ನೀಡುತ್ತಿದ್ದಾರೆ. ಈ ಬಾರಿಯ ಲಾಕ್‌ಡೌನ್‌ ಸಂದರ್ಭ ಸಾವಯವ ಮಾದರಿಯಲ್ಲಿ ಬೆಳೆಸಿದ ಕೊಕ್ಕೊವನ್ನು ಕೃಷಿಕರಿಂದ ಮಾರುಕಟ್ಟೆ ಬೆಲೆಗಿಂತ ಅಧಿಕ ಮೊತ್ತ ನೀಡಿ ಖರೀದಿಸಿದ್ದಾರೆ. ಇದರಿಂದಾಗಿ ಕೃಷಿಕರಿಗೂ ಉತ್ತಮ ಬೆಲೆ ಸಿಕ್ಕಿದೆ, ಪ್ರಸ್ತುತ ಸುಮಾರು 14 ಬಗೆಯ ಚಾಕೊಲೇಟ್ ಲಭ್ಯವಿದೆ. ರುಚಿಯನ್ನು ಹೆಚ್ಚಿಸಲು ಇನ್ನಷ್ಟು ಸಂಶೋಧನೆಯಲ್ಲಿ ಸ್ವಾತಿ ತೊಡಗಿಸಿಕೊಂಡಿದ್ದಾರೆ. ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ವೃತ್ತಿಯೊಂದಿಗೆ ಪತಿಯೂ ಸಂಶೋಧನೆ ನಡೆಸುತ್ತಿದ್ದಾರೆ.

ಲಾಕ್ಡೌನ್ ಅವಧಿಯಲ್ಲಿ ಹವ್ಯಾಸವಾಗಿ ಆರಂಭವಾದ ಹಲವು ಕೆಲಸಗಳು, ಇಂದು ಯಶಸ್ವಿ ಉದ್ಯಮಗಳಾಗಿ ಬದಲಾಗುತ್ತಿವೆ. ಹೀಗೆ ಸಣ್ಣ ಪರಿಸರದಲ್ಲಿ ಆರಂಭವಾಗಿ, ದೊಡ್ಡ ಮಾರುಕಟ್ಟೆ ಸೃಷ್ಟಿಸಿಕೊಂಡ ಅನುತ್ತಮ ಅನ್ನೋ ಚಾಕೊಲೇಟ್ ಪುತ್ತೂರು ಪರಿಸರದಲ್ಲಿ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮವನ್ನು ಆರಂಭಿಸಿ, ಯಶಸ್ವಿಯಾಗುವುದು ದೊಡ್ಡ ಸವಾಲೇ ಸರಿ.

English summary
Dakshina Kannada district Puttur based software engineer Swathi with the help of husband started chocolate production in the time of lock down. Now couple successful entrepreneur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X