ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಕೈಗಾರಿಕಾ ಪ್ರದೇಶದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಮೇ 06: ನಗರವನ್ನು ಆವರಿಸಿರುವ ಕೈಗಾರಿಕೆಗಳು ಹೊರಬಿಡುವ ವಿಷ ತ್ಯಾಜ್ಯದಿಂದ ಕೈಗಾರಿಕಾ ಪ್ರದೇಶದ ಸುತ್ತ-ಮುತ್ತಲಿನ ಜನರಲ್ಲಿ ಮಾರಕ ಕ್ಯಾನ್ಸರ್ ರೋಗ ಹೆಚ್ಚಾಗಿರೋದು ಬೆಳಕಿಗೆ ಬಂದಿದೆ. ವಾಯುಮಾಲಿನ್ಯ, ಜಲಮಾಲಿನ್ಯ, ಅಂತರ್ಜಲ ಮಾಲಿನ್ಯದ ಪರಿಣಾಮ ನಗರದ ಎಂಆರ್‌ಪಿಎಲ್ ಸುತ್ತಮುತ್ತಲಿನ ಕಾಟಿಪಳ್ಳ, ಸುರತ್ಕಲ್, ಕುಳಾಯಿ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಸ್ವತಃ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿ ಕಳವಳ ವ್ಯಕ್ತಪಡಿಸಿದೆ.

ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯು ಮಂಗಳೂರು ನಗರದ ವಿವಿಧೆಡೆ ಸಂಚರಿಸಿ ವಾಣಿಜ್ಯ, ಕೈಗಾರಿಕೆ, ನಗರಾಭಿವೃದ್ಧಿ, ಪರಿಸರ ಮಾಲಿನ್ಯ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿಶಾಮಕ ದಳ, ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದಂತೆ ಬಾಕಿ ಭರವಸೆಗಳ ಕುರಿತಂತೆ ಇಲಾಖಾಧಿಕಾರಿಗಳೊಂದಿಗೆ ಎರಡು ದಿನಗಳ ಕಾಲ ಸ್ಥಳ ಪರಿಶೀಲನೆ ನಡೆಸಿತ್ತು.

ಈ ಹಿನ್ನೆಲೆಯಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಮಿತಿ ಆತಂಕವನ್ನು ವ್ಯಕ್ತಪಡಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನೀಡಿರುವ ವರದಿಯಂತೆ ಈ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ಶ್ವಾಸಕೋಶದ ತೊಂದರೆಗಳು ಅನೇಕರಿಗೆ ಚರ್ಮದ ಕಾಯಿಲೆ, ಮಕ್ಕಳಲ್ಲಿ ಡೈರಿಯಾ ಇನ್ನಿತರ ಕಾಯಿಲೆಗಳು ಕಂಡು ಬರುತ್ತಿದೆ ಎಂದು ಸಮಿತಿಯು ಆತಂಕ ವ್ಯಕ್ತಪಡಿಸಿದೆ.

Cancer Cases Raise In Industrial Area Of ​​Mangaluru

ಈ ಬಗ್ಗೆ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯ ಅಧ್ಯಕ್ಷ ಬಿ. ಎಂ. ಫಾರೂಕ್ ಮಾತನಾಡಿ, "ಎಂಆರ್‌ಪಿಲ್, ಎಂಎಸ್ಇಝಡ್ ಸೇರಿದಂತೆ ಬೈಕಂಪಾಡಿ ಕೈಗಾರಿಕಾ ವಲಯದ ಎಲ್ಲಾ ತ್ಯಾಜ್ಯಗಳು ಕುಡುಂಬೂರು ನದಿಯನ್ನು ಸೇರುತ್ತಿದೆ. ಕಪ್ಪು ತ್ಯಾಜ್ಯ, ಎಣ್ಣೆ ಮಿಶ್ರಿತವಾಗಿರುವ ಈ ನದಿಯು ಇದೀಗ ಅತ್ಯಂತ ವಿಷಕಾರಿ ನದಿಯಾಗಿ ಪರಿವರ್ತನೆಯಾಗಿದೆ. ಈ ನದಿಯಲ್ಲಿದ್ದ ಇರ್ಪೆ ಹಾಗೂ ಕುರ್ಡಿ ಮೀನಿನ ತಳಿಯೇ ಸಂಪೂರ್ಣ ನಾಶವಾಗಿದೆ" ಎಂದರು.

"ಅಲ್ಲದೆ ಈ ನದಿಯ ಮೀನುಗಳನ್ನು ಸೇವನೆ ಮಾಡುವ ಮನುಷ್ಯರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ಜೊತೆಗೆ ಈ ಕಲುಷಿತ ನೀರು ಗುರುಪುರ ನದಿಯನ್ನು ಸೇರುತ್ತಿದ್ದು, ಅಲ್ಲಿಂದ ಕಡಲ ಒಡಲನ್ನು ಈ ತ್ಯಾಜ್ಯ ಸೇರುತ್ತಿದೆ. ಇದಕ್ಕೆ ಕೈಗಾರಿಕಾ ವಲಯದವರು ಇಟಿಪಿ ಪ್ಲ್ಯಾನ್ ಮೂಲಕ ಪ್ರೊಪೊಸಲ್ ಮಾಡಿದ್ದಾರೆ. ಈ ಮೂಲಕ ಕುಡುಂಬೂರು ನದಿಯ ಶುಚಿತ್ವಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ" ಎಂದು ಹೇಳಿದರು.

Cancer Cases Raise In Industrial Area Of ​​Mangaluru

"ಎಂಆರ್‌ಪಿಎಲ್‌ನ ಪೆಟ್ಕೊ ಪ್ಲ್ಯಾಂಟ್ ನಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಹಳೆಯ ಪ್ಲ್ಯಾಂಟ್ ಅನ್ನು ತೆಗೆದು ಅಲ್ಲಿ ಹಸಿರು ವಲಯ ಮಾಡಬೇಕಿತ್ತು. ಆದರೆ ಇನ್ನೂ ಈ ಕಾರ್ಯವಾಗಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಯವರ ಪ್ರತ್ಯೇಕ ಸಭೆ ಕರೆದು ಅದರ ವರದಿಯನ್ನು ನಾವು ಕೇಳಲಿದ್ದೇವೆ" ಎಂದು ತಿಳಿಸಿದರು.

"ಎಂಆರ್ ಪಿಎಲ್ ವಲಯದಲ್ಲಿ ಮಳೆನಾಡು ಗಿಡ್ಡ, ಇನ್ನಿತರ ಹಸುಗಳ ಸಂತತಿ ಕೂಡಾ ನಾಶವಾಗುತ್ತಿದೆ. ಮಲ್ಲಿಗೆಗಳು ಕಪ್ಪಾಗೋದು, ಬಾವಿಯ ನೀರಿನಲ್ಲಿ ತೈಲಗಳು ಗೋಚರವಾಗುತ್ತಿದೆ. ಇದು ಎಂಆರ್‌ಪಿಲ್ ತೈಲದ ಪರಿಣಾಮವೇ? ಎಂದು ಪರಿಶೀಲನೆ ನಡೆಸಿದ್ದೇವೆ. ಆದರೆ ಎಂಆರ್‌ಪಿಎಲ್ ಸಂಸ್ಥೆ ಇದನ್ನು ಒಪ್ಪುತ್ತಿಲ್ಲ. ಆದರೆ ಈ ಬಗ್ಗೆ ನಾವು ಸಂಪೂರ್ಣ ಪರಿಶೀಲನೆ ನಡೆಸುತ್ತೇವೆ" ಎಂದರು.

ಎಂಆರ್‌ಪಿಎಲ್‌ನಿಂದ ಈ ಹಿಂದೆ ಕೂಡಾ ತೊಂದರೆಯಾಗುತ್ತಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟಕದಿಂದ ಹೊರ ಬರುವ ಧೂಳು ಮಿಶ್ರಿತ ಹೊಗೆಯಿಂದಾಗಿ ಶ್ವಾಸಕೋಶದ ಸಮಸ್ಯೆ ಉಸಿರಾಟದ ಸಮಸ್ಯೆ ಆಗುತ್ತಿರುವ ಬಗ್ಗೆಯೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕೈಗಾರಿಕೆಗಳ ತ್ಯಾಜ್ಯ ನೀರು ಕಡಲು ಸೇರುತ್ತಿರೋದರಿಂದ ನೀರು ಮಲಿನವಾಗಿ ಜೀವಜಲಕ್ಕೂ ಕುತ್ತಾಗಿರುವ ಬಗ್ಗೆಯೂ ಜನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.

English summary
In Mangaluru industrial cancer cases raised. Due to low quality of air case may raise in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X