• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕಂಪಾಡಿ ಜನರಿಗೆ ನಿತ್ಯ ನರಕ ದರ್ಶನ: ಪ್ರತಿದಿನ ರೈಲಿನ ಅಡಿಯಲ್ಲೇ ತೆವಳಿಕೊಂಡು ಹೋಗಬೇಕು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 31: ಗ್ರಾಮೀಣ ಭಾಗದಲ್ಲಿ ಸೇತುವೆ ಸಮಸ್ಯೆ, ರಸ್ತೆ ಸಮಸ್ಯೆ, ಮೂಲಭೂತ ಸೌಕರ್ಯಗಳ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಕಂಡಿದ್ದೇವೆ. ಆದರೆ ಭವಿಷ್ಯದಲ್ಲಿ ಸ್ಮಾರ್ಟ್ ಸಿಟಿ ಅಂತಾ ಕರೆಯಿಸಿಕೊಳ್ಳಬೇಕಾದ ಮಂಗಳೂರು ನಗರದಲ್ಲೇ, ಜನಪ್ರತಿನಿಧಿಗಳ ಅಸಡ್ಡೆಗೆ ಶಾಪಗ್ರಸ್ತವಾಗಿರುವ ಸಮಸ್ಯೆಯೊಂದು ಬಗೆಹರಿಯದೇ ಇನ್ನೂ ಜೀವಂತವಾಗಿದೆ ಅಂದರೆ ನೀವು ನಂಬಲೇಬೇಕು.

ಅದು ಮಂಗಳೂರು ನಗರ ಹೊರ ವಲಯದಲ್ಲಿರುವ ಪಣಂಬೂರು ಸಮೀಪದ ಮೀನಕಳಿಯ ಎಂಬ ಸುಂದರ ಊರು. ಹೆಸರೇ ಸೂಚಿಸುವಂತೆ ಮೀನುಗಾರ ಕುಟುಂಬಗಳೇ ಹೊಂದಿರುವ ಅರಬ್ಬೀ ಸಮುದ್ರದ ಕಿನಾರೆಯಲ್ಲಿರುವ ಮೀನಕಳಿಯ ಊರು ಹಲವು ವರ್ಷಗಳಿಂದ ಶಾಪಗ್ರಸ್ತವಾಗಿದೆ. ಮೀನಕಳಿಯ ಊರಿಗೆ ಹೋಗಬೇಕಾದರೆ ಎರಡು ದಾರಿಗಳಿದ್ದು, ಒಂದು‌ ಬೈಕಂಪಾಡಿಗೆ ಹೋಗಿ ಸುಮಾರು 7 ಕಿ.ಮೀ ಸುತ್ತಿ ಹೋಗಬೇಕು. ಇನ್ನೊಂದು ಅತೀ ಹತ್ತಿರದ ದಾರಿ ನೇರವಾಗಿ ಪಣಂಬೂರು ಮುಖ್ಯರಸ್ತೆಗೆ ಕೇವಲ ಒಂದು ಕಿ.ಮೀ ದೂರದಲ್ಲಿ ಸಾಗಿದರೆ ಮುಖ್ಯ ರಸ್ತೆ ಸಿಗುತ್ತದೆ. ಆದರೆ ಆ ಒಂದು ಕಿ.ಮೀ ಹೋಗಬೇಕಾದರೆ ನರಕದ ಹಾದಿ ಗೋಚರವಾಗುತ್ತದೆ.

ಅದಿರು ಸಾಗಾಟದ ಗೂಡ್ಸ್ ರೈಲು ನಿಲ್ಲುತ್ತದೆ

ಅದಿರು ಸಾಗಾಟದ ಗೂಡ್ಸ್ ರೈಲು ನಿಲ್ಲುತ್ತದೆ

ಈ ಒಂದು ಕಿಲೋಮೀಟರ್ ದಾರಿಯಲ್ಲಿ ಎನ್‌ಎಂಪಿಟಿಗೆ ಅದಿರು ಸಾಗಾಟದ ಗೂಡ್ಸ್ ರೈಲು ನಿಲ್ಲುತ್ತದೆ. ಈ ರೈಲೇ ಮೀನಕಳಿಯ ಊರಿನ ಜನರಿಗೆ ದೊಡ್ಡ ಸಮಸ್ಯೆಯಾಗಿದೆ. ಅದಿರು ಕೊಂಡುಹೋಗಲು ಬರುವ ಗೂಡ್ಸ್ ರೈಲು ಕೆಲವೊಮ್ಮೆ ವಾರಗಟ್ಟಲೆ ರಸ್ತೆಗೆ ಅಡ್ಡವಾಗಿ ನಿಲ್ಲುವುದರಿಂದ ಮೀನಕಳಿಯದ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ.

ಮಂಗಳೂರಿನ ಮೀನಕಳಿಯ ಊರಿನಲ್ಲಿ ಸಾವಿರಕ್ಕೂ ಅಧಿಕ ಜನರಿದ್ದಾರೆ. ಇದರಲ್ಲಿ ಮೀನುಗಾರರು, ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ಅತೀ ಹೆಚ್ಚಾಗಿ ನೆಲೆಸಿದ್ದಾರೆ‌. ಎಲ್ಲರೂ ಪ್ರತಿನಿತ್ಯದ ದುಡಿಮೆಯಿಂದಲೇ ಜೀವನ ಕಂಡುಕೊಳ್ಳುವುದರಿಂದ ಹೊರಗಡೆ ಅಂದರೆ ನಗರ ಪ್ರದೇಶಕ್ಕೆ ಹೋಗಬೇಕಾದರೆ ಈ ರೈಲನ್ನು ದಾಟುವುದು ಅನಿವಾರ್ಯವಾಗಿದೆ.

ರೈಲು ಹತ್ತಿ ಇಳಿಯುವುದರಿಂದ ಕೈ ಕಾಲು ನೋವು

ರೈಲು ಹತ್ತಿ ಇಳಿಯುವುದರಿಂದ ಕೈ ಕಾಲು ನೋವು

ನಿತ್ಯ ಕೆಲಸಕ್ಕೆ ಹೋಗುವ ಮಹಿಳೆಯರು ರೈಲಿನ ಅಡಿಯಲ್ಲೇ ನುಸುಳಿಕೊಂಡು ಹೋಗಬೇಕು. ತಲೆಯಲ್ಲಿ ಮಣಭಾರದ ಗಂಟನ್ನು ಹೊತ್ತು ರೈಲಿನ ಅಡಿಯಲ್ಲಿ ತೆವಳಿಕೊಂಡು ಹೋಗಬೇಕಾಗಿದೆ. ಮಹಿಳೆಯರು ರೈಲಿನ ಕೆಳ ಭಾಗದಲ್ಲಿ ನುಸುಳಿಕೊಂಡು ಹೋದರೆ, ಯುವಕರು ರೈಲಿನ ಬೋಗಿಗಳ ನಡುವೆ ಹತ್ತಿ ಮತ್ತೆ ಊರು ಸೇರಬೇಕಾಗಿದೆ. ಪ್ರತಿನಿತ್ಯ ಮಹಿಳೆಯರು, ಮಕ್ಕಳು, ವೃದ್ಧರು ಇದೇ ರೀತಿ ನರಕದ ಹಾದಿಯಲ್ಲೇ ಹೋಗಬೇಕಾಗಿದೆ. ಹೀಗೆ ರೈಲು ಹತ್ತಿ ಇಳಿಯುವುದರಿಂದ ಕೈ ಕಾಲು ನೋವಿನಿಂದ ಹಲವು ಮಹಿಳೆಯರು ಬಳಲುತ್ತಿದ್ದಾರೆ. ಪ್ರತಿ ನಿತ್ಯ ಜನರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಇದೇ ದಾರಿಯಲ್ಲಿ ಹೋಗುತ್ತಿದ್ದಾರೆ.

ನರೇಂದ್ರ ಮೋದಿಯವರಿಗೆ ಮನವಿ

ನರೇಂದ್ರ ಮೋದಿಯವರಿಗೆ ಮನವಿ

ಈ ರೈಲ್ವೇ ಹಳಿಗೆ ಶಾಶ್ವತ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ಮೀನಕಳಿಯ ಜನರು ಶಾಸಕ ವೈ. ಭರತ್ ಶೆಟ್ಟಿ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಜನಪ್ರತಿನಿಧಿಗಳಿಗೆ ಕಾದರೆ ಪ್ರಯೋಜನವಿಲ್ಲ ಅಂತಾ ಮೀನಕಳಿಯ ಊರಿನ ವಿಶಾಲ್ ಎಂಬ ಯುವಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಯುವಕನ ಮನವಿಗೆ ಪ್ರಧಾನಮಂತ್ರಿ ಕಾರ್ಯಾಲಯ ಉತ್ತರಿಸಿದ್ದು, ಶಾಶ್ವತ ಮೇಲ್ಸೇತುವೆಯ ವೆಚ್ಚವನ್ನು ಅರ್ಧ ಭಾಗ ಎನ್.ಎಂ.ಪಿ.ಟಿ ಮತ್ತು ಇನ್ನು ಅರ್ಧ ಭಾಗ ರಾಜ್ಯ ಸರ್ಕಾರ ಹಾಕಿ ಸೇತುವೆ ನಿರ್ಮಿಸಬೇಕೆಂದು ಸೂಚನೆ ನೀಡಿದೆ.

ಪ್ರಧಾನಿಯಿಂದ ಉತ್ತರ ಬಂದು ಒಂದು ತಿಂಗಳಾಯಿತು

ಪ್ರಧಾನಿಯಿಂದ ಉತ್ತರ ಬಂದು ಒಂದು ತಿಂಗಳಾಯಿತು

ಆದರೆ ಪ್ರಧಾನಮಂತ್ರಿಯವರ ಉತ್ತರ ಬಂದು ಒಂದು ತಿಂಗಳು ಕಳೆದರೂ ಶಾಸಕ ಭರತ್ ಶೆಟ್ಟಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಎಲ್ಲಾ ವೆಚ್ಚವನ್ನು ಎನ್.ಎಂ.ಪಿ.ಟಿಯೇ ಭರಿಸಬೇಕು ಎನ್ನುವುದು ಶಾಸಕ ಭರತ್ ಶೆಟ್ಟಿಯವರ ವಾದವಾಗಿದೆ. ಆದರೆ ಶಾಸಕರ ಈ ಅಸಡ್ಡೆಯಿಂದ ಜನರು ಮಾತ್ರ ಪ್ರತಿನಿತ್ಯ ಕಷ್ಟಪಡುತ್ತಿದ್ದು, ಶಾಸಕರು ಇನ್ನಾದರೂ ಕಣ್ಣು ತೆರೆದು ಜನ ಸಮಸ್ಯೆಗೆ ಹೆಗಲಾಗಬೇಕಾಗಿದೆ.

English summary
People including women walking under train to cross road to reach Panambur main road In Baikampady at Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X