ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಇಂದು 'ಆಟಿ ಅಮಾವಾಸ್ಯೆ'; ಹಾಲೆ ಕಷಾಯ ಸೇವಿಸಿದ ಕರಾವಳಿಗರು

|
Google Oneindia Kannada News

ಮಂಗಳೂರು, ಆಗಸ್ಟ್ 1: ಕರಾವಳಿಯಲ್ಲಿ ಇಂದು 'ಆಟಿ ಅಮಾವಾಸ್ಯೆ'. ಯಾವುದೇ ಶುಭ ಸಮಾರಂಭ ನಡೆಯದ ಈ ಮಾಸ ರೋಗರುಜಿನ ತರುವ ತಿಂಗಳು ಎಂಬುದು ತುಳುಜನರ ನಂಬಿಕೆ. ಹಾಗಾಗೇ ಕರಾವಳಿಯಾದ್ಯಂತ ಜನರು ಆಟಿ ಕಷಾಯ ಸೇವಿಸುವ ರೂಢಿ ಇದೆ.

ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ಮಾನ್ಯತೆ ಇದೆ. ಆಟಿ ಕಷಾಯಕ್ಕೂ ವಿಶೇಷ ಮೌಲ್ಯವಿದೆ. ಕೃಷಿ ಅವಲಂಬಿತ ಪ್ರಾಚೀನ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ಈ ತಿಂಗಳು, ಬದಲಾಗುವ ಭೂ ವಾತಾವಾರಣ, ನಿರಂತರ ಸುರಿಯುವ ಮಳೆಯನ್ನು ಕಾಣಬಹುದು. ಈ ಕಾರಣದಿಂದ ಈ ಮಾಸದಲ್ಲಿ ಶರೀರದಲ್ಲಿ ಕಂಡುಬರುವ ರೋಗಗಳು ಮನುಷ್ಯನನ್ನು ನಿತ್ರಾಣ ಮಾಡುತ್ತವೆ.

ತುಳುನಾಡಲ್ಲಿ ಆಟಿ ಅಮಾವಾಸ್ಯೆ ಆಚರಣೆ, ಏನಿದು ಆಟಿ ಕಷಾಯ?ತುಳುನಾಡಲ್ಲಿ ಆಟಿ ಅಮಾವಾಸ್ಯೆ ಆಚರಣೆ, ಏನಿದು ಆಟಿ ಕಷಾಯ?

ಆದ್ದರಿಂದ ಈ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ನಡೆದು ಬಂದಿದೆ. ಹಾಲೆ ಮರದ ಕಷಾಯವನ್ನು ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಆಟಿ ತಿಂಗಳ ಅಮಾವಾಸ್ಯೆಯ ನಸುಕಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ. ಈ ಕಷಾಯ ಹಲವು ಔಷಧೀಯ ಗುಣಗಳನ್ನು ಹೊಂದಿರುತ್ತದೆ.

Ati Amavasye Celebration In Karavali

ಹಾಲೆ ಮರದ ತೊಗಟೆಯ ಕಷಾಯ (ಪಾಲೆದ ಕೆತ್ತೆದ ಕಷಾಯ)ವೆಂದೇ ಹೆಸರುವಾಸಿಯಾಗಿರುವ, ರಥದ ಆಕಾರದಲ್ಲಿ ಕೊಂಬೆಗಳು, ಎಲೆಗಳನ್ನು ಹರಡಿ, ಎತ್ತರಕ್ಕೆ ಬೆಳೆಯುವ ಹಾಲೆ ಮರದ ಹಾಲನ್ನು ಕುಡಿದು ಬೆಲ್ಲ ಚಪ್ಪರಿಸುವ ಸಂಭ್ರಮ ಒಂದೆಡೆ. ಕಡುಕಷ್ಟದ ತಿಂಗಳೆಂದೇ ಉಲ್ಲೇಖವಿರುವ ಆಟಿ ಮಾಸದಲ್ಲಿ ಅಮಾವಾಸ್ಯೆ ಹಿಂದಿನ ದಿನ ಸಂಜೆ ಮರಕ್ಕೆ ನೂಲು ಕಟ್ಟಿ 'ನಾಳೆ ಬರುತ್ತೇನೆ ಮದ್ದು ಸಿದ್ಧ ಮಾಡಿಡು' ಎಂದು ವನದೇವತೆಯನ್ನು ಪ್ರಾರ್ಥಿಸಿ ಬರುವ ಕ್ರಮವಿದೆ.

ಪಾಲೆ ಮರದ ಕಷಾಯ ಕುಡಿದು ಆಟಿ ಅಮಾವಾಸ್ಯೆ ಆಚರಿಸಿದ ಕರಾವಳಿಗರು ಪಾಲೆ ಮರದ ಕಷಾಯ ಕುಡಿದು ಆಟಿ ಅಮಾವಾಸ್ಯೆ ಆಚರಿಸಿದ ಕರಾವಳಿಗರು

ಮರುದಿನ ಸೂರ್ಯ ಹುಟ್ಟುವ ಮುನ್ನ ಗಂಡಸರು ಬೆತ್ತಲೆಯಾಗಿ ಹಾಲೆ ಮರದ ಬಳಿ ಹೋಗಿ, ಕಲ್ಲಿನಿಂದ ಹಾಲೆಯ ತೊಗಟೆಯನ್ನು ಜಜ್ಜಿಕೊಂಡು ಬಂದು, ಅದರ ರಸವನ್ನು ಕರಿಮೆಣಸು, ಜೀರಿಗೆ, ಓಮ, ಬೆಳ್ಳುಳ್ಳಿ ಜೊತೆ ಅರೆದು ಮಿಶ್ರಣ ಮಾಡಿ, ಬೆಣಚು ಕಲ್ಲನ್ನು ಬಿಸಿ ಮಾಡಿ ಮಿಶ್ರಣಕ್ಕೆ ಮುಳುಗಿಸುತ್ತಾರೆ. ನಂತರ ಸಾಸಿವೆ ಒಗ್ಗರಣೆ ಕೊಟ್ಟು ಖಾಲಿ ಹೊಟ್ಟೆಯಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಕಷಾಯವನ್ನು ಕುಡಿಯುತ್ತಾರೆ. ಬಾಯಿಯ ಕಹಿಗೆ ಬೆಲ್ಲ, ಉಷ್ಣಕ್ಕೆ ಮೆತ್ತೆಗಂಜಿ ಸೇವಿಸುತ್ತಾರೆ.

ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೂ ಬಿಡುವ ಈ ಮರದಲ್ಲಿ ಆಟಿ ಅಮಾವಾಸ್ಯೆಯ ದಿನ ಸಾವಿರದ ಒಂದು ಬಗೆಯ ಔಷಧಿಗಳು ಸೇರಿಕೊಂಡಿರುತ್ತವೆ ಎಂಬ ನಂಬಿಕೆ ಇದೆ. ಇದರ ಹೂವಿನ ಪರಿಮಳ ಮತ್ತೇರಿಸುವಂತಹದ್ದು. ಹಾಲೆಮರದ ತೊಗಟೆಯ ರಸ ಸೇವಿಸಿದರೆ ಹೊಟ್ಟೆನೋವು, ಕಫ ಮತ್ತಿತರೆ ಕಾಯಿಲೆಗಳು ಒಂದು ವರ್ಷ ಬರುವುದಿಲ್ಲ ಎಂಬ ನಂಬಿಕೆ ಇದೆ. ಹಾಲೆ ಮರದ ತಾಯಿ ಬೇರು ಕಂಡವರಿಲ್ಲ ಎಂಬ ಮಾತು ಕೂಡ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ.

English summary
People of Tulunadu celebrating Aati Amavase on August 1 with traditional favor. The Aati Amavasya is celebrated in most parts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X