ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೊಮ್ಮಾಯಿ ಸಂಪುಟಕ್ಕೆ ಸೇರಿದರೂ ಬದಲಾಗದ ಅಂಗಾರ, ಕೋಟಾ ಜೀವನ ಶೈಲಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 04: ಸಿಎಂ ಬಸವರಾಜ ಬೊಮ್ಮಾಯಿಯವರ ನೂತನ ಸಚಿವ ಸಂಪುಟ ಬುಧವಾರ ಅಸ್ತಿತ್ವಕ್ಕೆ ಬಂದಿದೆ. ಬೊಮ್ಮಾಯಿ ಸಂಪುಟಕ್ಕೆ ನೂತನ 29 ಮಂದಿ ಸಚಿವರು ಆಯ್ಕೆಯಾಗಿದ್ದಾರೆ. ರಾಜಭವನದಲ್ಲಿ ನೂತನ ಸಚಿವರುಗಳಾಗಿ 29 ಮಂದಿ ಪ್ರಮಾಣವಚನ ತೆಗೆದುಕೊಂಡಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ.

ರಾಜ್ಯ ಬಿಜೆಪಿ ವರಿಷ್ಠರ ಮನೆ ಮನೆಗೆ ಸುತ್ತಿ ಹಾಕಿ, ಸ್ವಾಮೀಜಿಗಳನ್ನು ಕಾಡಿಬೇಡಿ ಮಂತ್ರಿಯಾದ ಹಲವು ಮಂದಿ ಸಂಪುಟಕ್ಕೆ ಸೇರ್ಪಡೆಯಾದರೆ ಮತ್ತೆ ಕೆಲವರು ಜಾತಿ ಪ್ರಾಬಲ್ಯದಿಂದ ಮಂತ್ರಿ ಹುದ್ದೆಗೇರಿದ್ದಾರೆ. ಆದರೆ ಬೊಮ್ಮಾಯಿ ಸಂಪುಟದ ಇಬ್ಬರು ಸಿಂಪಲ್ ಮಿನಿಸ್ಟರ್‌ಗಳು ಮಾತ್ರ ಯಾವುದೇ ವ್ಯತ್ಯಾಸವಿಲ್ಲದೇ, ಹಮ್ಮುಬಿಮ್ಮು ಇಲ್ಲದೇ, ಕುಟುಂಬಸ್ಥರನ್ನು ಕರೆದುಕೊಂಡು ಹೋಗದೇ, ಸದ್ದು-ಗದ್ದಲವಿಲ್ಲದೇ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಮತ್ತು ಎಸ್.ಅಂಗಾರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸರಳತೆಯಿಂದಲೇ ಪ್ರಸಿದ್ಧಿಯಾಗಿರುವ ಎಸ್.ಅಂಗಾರ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಇಂದೂ ಸರಳತೆ ಮೆರೆದು ಮಾದರಿಯಾಗಿದ್ದಾರೆ.

 ತಮ್ಮ ಬಟ್ಟೆ ತಾವೇ ತೊಳೆಯುವ ಅಂಗಾರ

ತಮ್ಮ ಬಟ್ಟೆ ತಾವೇ ತೊಳೆಯುವ ಅಂಗಾರ

ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಸತತ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮಿತಭಾಷಿಯಾಗಿರುವ ಎಸ್.ಅಂಗಾರ ಅಪ್ಪಟ ಕೃಷಿಕನಾಗಿದ್ದು, ಶಾಸಕರಾದ ಸಂಧರ್ಭದಲ್ಲಿ ಬಿಡುವಿನ ವೇಳೆ ಮನೆಯ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತೋಟದಲ್ಲಿ ಅಡಿಕೆ ಹೆಕ್ಕುವುದು, ಹುಲ್ಲು ಕೊಯ್ಯುವುದನ್ನು ಅಭ್ಯಾಸವನ್ನಾಗಿಸಿಕೊಂಡಿದ್ದಾರೆ. ಅಡಿಕೆ ಸಿಪ್ಪೆ ತಾವೇ ತೆಗೆಯುವ ಮೂಲಕ ಶಾಸಕನಾದರೂ ತಾನು ಕೃಷಿಕನೇ ಅನ್ನೋದನ್ನು ನಿರೂಪಿಸಿದ್ದರು.

 ತಾವೇ ಬಟ್ಟೆಗೆ ಇಸ್ತ್ರಿ ಹಾಕಿ ರಾಜಭವನಕ್ಕೆ ಬಂದರು

ತಾವೇ ಬಟ್ಟೆಗೆ ಇಸ್ತ್ರಿ ಹಾಕಿ ರಾಜಭವನಕ್ಕೆ ಬಂದರು

ಈ ಹಿಂದಿನ ಯಡಿಯೂರಪ್ಪ ಸಂಪುಟದಲ್ಲೂ ಎಸ್.ಅಂಗಾರ ಸಚಿವರಾಗಿದ್ದು, ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ದಕ್ಕಿಸಿಕೊಂಡಿದ್ದಾರೆ. ಲಾಬಿ ಮಾಡದೇ ಸಚಿವ ಸ್ಥಾನ ಪಡೆದ ಎಸ್.ಅಂಗಾರ ಬೆಂಗಳೂರಿನಲ್ಲಿ ಶಾಸಕರ ಭವನದಲ್ಲೇ ಉಳಿದುಕೊಳ್ಳುತ್ತಾರೆ. ‌ತಾನೇ ಸ್ವತಃ ಅಡಿಗೆ ಮಾಡಿ, ಸ್ವತಃ ಬಟ್ಟೆ ತೊಳೆಯುತ್ತಾರೆ. ಎಸ್.ಅಂಗಾರರ ಇಂದಿನ ದಿನಚರಿಯೂ ಅದೇ ರೀತಿಯಿದ್ದು, ಶಾಸಕರ ಭವನದಿಂದಲೇ ರೆಡಿಯಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಶಾಸಕರ ಭವನದಲ್ಲಿ ತಾವೇ ಬಟ್ಟೆಗೆ ಇಸ್ತ್ರಿ ಹಾಕಿ ರಾಜಭವನಕ್ಕೆ ಹೋಗಿ ಮಾದರಿಯಾಗಿದ್ದಾರೆ.

 ಕೋಟಾ ಶ್ರೀನಿವಾಸ ಪೂಜಾರಿ ಮನೆ ಪ್ರಶಾಂತ

ಕೋಟಾ ಶ್ರೀನಿವಾಸ ಪೂಜಾರಿ ಮನೆ ಪ್ರಶಾಂತ

ಇನ್ನು ಸಿಂಪಲ್‌ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಕುಂದಾಪುರ ತಾಲೂಕಿನ ಕೋಟಾದ ಮನೆ ಪರಿಸರದಲ್ಲೂ ಯಾವುದೇ ಜನಜಂಗುಳಿ, ಅಭಿಮಾನಿಗಳು ಕಂಡುಬಂದಿಲ್ಲ. ಯಾವುದೇ ಸದ್ದು ಗದ್ದಲವಿಲ್ಲದೇ ಮನೆ ಎಂದಿನಂತೆ ಪ್ರಶಾಂತತೆ ಹೊಂದಿದೆ. ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಚಿವ ಸ್ಥಾನ ಸಿಕ್ಕಿದಕ್ಕೆ ಶ್ರೀನಿವಾಸ ಪೂಜಾರಿ ಕುಟುಂಬದಲ್ಲಿ ಸಂಭ್ರಮ ಹಂಚಿಕೊಂಡಿದ್ದು, ಸಿಹಿ ಹಂಚಿ ಸಂತಸ ಹಂಚಿಕೊಂಡಿದ್ದಾರೆ.
"ಬೆಂಗಳೂರಿನಲ್ಲಿದ್ದ ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಪತ್ನಿಗೆ ಬೆಳಿಗ್ಗೆ ಕರೆ ಮಾಡಿ ಸಚಿವ ಸ್ಥಾನ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾತನಾಡಿರುವ ಕೋಟಾ ಶ್ರೀನಿವಾಸ ಪೂಜಾರಿ ಪತ್ನಿ ಶಾಂತಾ, ನಾವು ಹಿಂದೆಯೂ ಪ್ರಮಾಣವಚನಕ್ಕೆ ಹಾಜರಾಗಿಲ್ಲ ಅಂತಾ ಹೇಳಿ ಪತಿಗೆ ಸಚಿವ ಸ್ಥಾನ ಸಿಕ್ಕಿದ್ದನ್ನು ನೆನೆದು ಭಾವುಕರಾಗಿದ್ದಾರೆ.‌ ಪತಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ನನಗೆ ನಿರೀಕ್ಷೆ ಇತ್ತು. ಈಗ ನಿರೀಕ್ಷೆಗೆ ಫಲ ಸಿಕ್ಕಿದೆ. ಬೆಳಿಗ್ಗೆ ಕರೆ ಮಾಡಿದಾಗ ನನಗೆ ಸಚಿವ ಸ್ಥಾನ ಸಿಕ್ಕಿದೆ‌ ಅಂತ ಹೇಳಿಕೊಂಡಿದ್ದರು. ಈ ಹಿಂದೆ ಮುಜರಾಯಿ ಇಲಾಖೆಯಲ್ಲಿ ಮಾಡಿದ ಉತ್ತಮ‌ ಕೆಲಸಕ್ಕೆ ದೇವರು ಕೈಹಿಡಿದಿದ್ದಾರೆ. ಮೊದಲು ನಮ್ಮ‌ ಕುಟುಂಬ ಸಿಂಪಲ್‌, ಮುಂದೆಯೂ ಸಿಂಪಲ್,'' ಅಂತಾ ಕೋಟಾ ಶ್ರೀನಿವಾಸ ಪೂಜಾರಿ ಪತ್ನಿ ಶಾಂತ ಪ್ರತಿಕ್ರಿಯಿಸಿದ್ದಾರೆ.

 ಕೋಟ ಶ್ರೀನಿವಾಸ ಪೂಜಾರಿ ಪರಿಚಯ

ಕೋಟ ಶ್ರೀನಿವಾಸ ಪೂಜಾರಿ ಪರಿಚಯ

59ರ ಹರೆಯದ ಕೋಟ ಶ್ರೀನಿವಾಸ ಪೂಜಾರಿ, ಏಳನೇ ತರಗತಿ ವಿದ್ಯಾರ್ಜನೆ ಮಾಡಿದ್ದು, ಮೂಲದಲ್ಲಿ ಛಾಯಾಗ್ರಾಹಕರಾಗಿ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ ಆರ್‌ಎಸ್‌ಎಸ್ ಸಂಪರ್ಕಕ್ಕೆ ಬಂದು ಹಂತ ಹಂತವಾಗಿ ಜವಾಬ್ದಾರಿ ಪಡೆದು, ಪಕ್ಷ ಸಂಘಟನೆಯಲ್ಲಿ ಗುರುತಿಸಿ ರಾಜಕಾರಣಕ್ಕೆ ಎಂಟ್ರಿ ಪಡೆದಿದ್ದರು. ಸರಳ ಸಜ್ಜನಿಕೆಯ ಕೋಟಾ ಶ್ರೀನಿವಾಸ ಪೂಜಾರಿ ಇಂದಿಗೂ ಹಳೆಯ ಮನೆಯಲ್ಲೇ ವಾಸಿಸುತ್ತಿದ್ದರು, ಸಾದಾ ಪ್ಯಾಂಟ್, ಬಿಳಿ ಅಂಗಿ ಮಾತ್ರ ಧರಿಸುತ್ತಾರೆ.

 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯ

1996ರಲ್ಲಿ ತಾಲೂಕು ಪಂಚಾಯತ್ ಸದಸ್ಯ

1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯನಾಗಿ ಭಾಜಪದಲ್ಲಿ ಗುರುತಿಸಿಕೊಂಡಿದ್ದ ಕೋಟಾ ಶ್ರೀನಿವಾಸ ಪೂಜಾರಿ, 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾದರು. ಆನಂತರ 2005ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ ನಂತರ ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ.

2008ರಲ್ಲಿ ಪ್ರಥಮ ಬಾರಿಗೆ ವಿಧಾನ ಪರಿಷತ್ತಿಗೆ ಸದಸ್ಯರಾಗಿ ನೇಮಕವಾಗಿ, 2012ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಸಚಿವರಾಗಿದ್ದರು. 2016ರಲ್ಲಿ ಮತ್ತೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ, 2018ರಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. 2019ರಲ್ಲಿ ಕರ್ನಾಟಕ ರಾಜ್ಯದ ಸಂಪುಟ ದರ್ಜೇ ಸಚಿವರಾಗಿ ಮುಜರಾಯಿ ಮೀನುಗಾರಿಕೆ, ಒಳನಾಡು ಬಂದರು ಮತ್ತು ಜಲಸಾರಿಗೆ ಸಚಿವರಾಗಿ ಆಯ್ಕೆಯಾಗಿದ್ದರು.

English summary
S. Angara and Kota Srinivasa Poojary have just been sworn in as the new minister in simply manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X