ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಬ್ಬೀ ಸಮುದ್ರದಲ್ಲಿ ನೇವಿ-ಕೋಸ್ಟ್ ಗಾರ್ಡ್ ರೋಚಕ ಕಾರ್ಯಾಚರಣೆ: 9 ಮಂದಿ ರಕ್ಷಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 17: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಒಂಬತ್ತು ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾದಳ ಜಂಟಿ ಕಾರ್ಯಾಚರಣೆ ಮಾಡಿ ರಕ್ಷಿಸಿದೆ.

ಭೋರ್ಗರೆಯುವ ಕಡಲಿನ ಮಧ್ಯೆ ಜೀವವನ್ನು ಕೈಯಲ್ಲಿ ಹಿಡಿದು ಕಳೆದ 38 ಗಂಟೆಗಳಿಂದ ರಕ್ಷಣೆಗಾಗಿ ಕಾದು ಕುಳಿತಿದ್ದ ಕಾರ್ಮಿಕರಿಗೆ ಸೇನೆ ಸಹಾಯಹಸ್ತ ಚಾಚಿದೆ.

ಮೇ 15ರ ರಾತ್ರಿ ಪಡುಬಿದ್ರೆಯ ಕಡಲ ಕಿನಾರೆಯಿಂದ 17 ನಾಟಿಕಲ್ ಮೈಲ್ ದೂರದಲ್ಲಿ ಎಂಆರ್‌ಪಿಎಲ್‌ಗೆ ಸೇರಿದ ಕೋರಮಂಡಲ್-9 ಎಂಬ ಹೆಸರಿನ ಟಗ್, ತೌಕ್ತೆ ಚಂಡಮಾರುತಕ್ಕೆ ತುತ್ತಾಗಿತ್ತು. ಟಗ್ ನಲ್ಲಿ 9 ಮಂದಿ ಕಾರ್ಮಿಕರು ಅಬ್ಬರಿಸುವ ಕಡಲ ಮಧ್ಯೆಯೂ ರಕ್ಷಣೆಗಾಗಿ ಕಾಯುತ್ತಿದ್ದರು. ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆಯೇ ಟಗ್ ನ ಆ್ಯಂಕರ್ ಭಾಗ ತುಂಡಾಗಿ ಅಲೆಗಳ ಅಬ್ಬರಕ್ಕೆ ದಿಕ್ಕುಪಾಲಾಗಿ ಎರಡು ಮೈಲ್ ದೂರಕ್ಕೆ ಸಾಗಿತ್ತು.

ಹೇಗಿತ್ತು ಆಪರೇಷನ್ ಕೋರಮಂಡಲ್-9

ಹೇಗಿತ್ತು ಆಪರೇಷನ್ ಕೋರಮಂಡಲ್-9

ಕಾಪು ಲೈಟ್ ಹೌಸ್ ನಿಂದ 6 ಕಿ.ಮೀ ದೂರದಲ್ಲಿ ಸಮುದ್ರದಲ್ಲಿ ಕಲ್ಲುಗಳ ನಡುವೆ ಸಿಲುಕಿ ಹಾಕಿಕೊಂಡಿದ್ದು, ಕಾರ್ಮಿಕರ ಜಂಘಾಬಲವೇ ಕುಸಿದು ಹೋಗಿತ್ತು. ಕಾರ್ಮಿಕರು ಅಪಾಯದಲ್ಲಿ ಸಿಲುಕಿರುವ ಬಗ್ಗೆ ಕೋಸ್ಟ್ ಗಾರ್ಡ್‌ಗೆ ಮಾಹಿತಿ ಲಭ್ಯವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಐಜಿಎಸ್ ವರಾಹ ನೌಕೆಯನ್ನು ಕಳುಹಿಸಲಾಗಿತ್ತು. ಆದರೆ ಸಮುದ್ರದಲ್ಲಿ ಭಾರೀ ಅಲೆಯ ಅಬ್ಬರ ಇರೋದರಿಂದ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ಸಾಧ್ಯವಾಗದೆ ಕೈ ಚೆಲ್ಲಿತ್ತು. ಅತ್ತ ಕಾರ್ಮಿಕರ ಸ್ಥಿತಿಯೂ ಚಿಂತಾಜನಕವಾಗಿತ್ತು. ಮೇ 16 ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ರಕ್ಷಣೆಗೆ ನೌಕಾ ಸೇನೆಯ ಹೆಲಿಕಾಪ್ಟರ್ ಗಳೊಂದೇ ಪರಿಹಾರ ಎಂದು ತಿಳಿದು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ನೇವಿ ಕಾರ್ಯಾಚರಣೆಗೆ ಮನವಿ ಮಾಡಿತ್ತು.

ಕಾರ್ಮಿಕರ ರಕ್ಷಣೆಗೆ ಬಂದ ನೇವಿ ಹೆಲಿಕಾಪ್ಟರ್

ಕಾರ್ಮಿಕರ ರಕ್ಷಣೆಗೆ ಬಂದ ನೇವಿ ಹೆಲಿಕಾಪ್ಟರ್

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಸಮಾಲೋಚನೆ ಮಾಡಿ ಹೆಲಿಕಾಪ್ಟರ್ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದರು. ಗೋವಾ ಮತ್ತು ಕೊಚ್ಚಿನ್ ನಿಂದ ಎರಡು ಹೆಲಿಕಾಪ್ಟರ್ ಗಳು ಮೇ 16ರ ಸಂಜೆಯೇ ಹೊರಡಬೇಕಿತ್ತು. ಆದ್ರೆ ಚಂಡಮಾರುತದ ಅಬ್ಬರ ಹೆಲಿಕಾಪ್ಟರ್ ಗಳ ಹಾರಾಟಕ್ಕೂ ತಡೆಯುಂಟು ಮಾಡಿದ್ದು, ಮೇ 17ರ ಬೆಳಗಿನ ಜಾವ ಕೊಚ್ಚಿನ್ ನಿಂದ ನೇವಿ ಹೆಲಿಕಾಪ್ಟರ್ ಮಂಗಳೂರಿಗೆ ಬಂದಿದೆ.

ಸಮುದ್ರದ ಮಧ್ಯೆ ನೇವಿ-ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ

ಸಮುದ್ರದ ಮಧ್ಯೆ ನೇವಿ-ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ

ನೇವಲ್ ಹೆಲಿಕಾಪ್ಟರ್ ಟಗ್ ಇದ್ದ ಸ್ಥಳಕ್ಕೆ ಬರುತ್ತಿದ್ದಂತೆಯೇ, ಹವಾಮಾನ ಪರಿಸ್ಥಿತಿಯೂ ತಿಳಿಯಾಗಿತ್ತು. ಸ್ಥಳದಲ್ಲೇ ಇದ್ದ ಐಜಿಎಸ್ ವರಾಹದ ಸ್ಪೀಡ್ ಬೋಟ್ ಗಳು ಟಗ್ ನಲ್ಲಿದ್ದ 5 ಕಾರ್ಮಿಕರನ್ನು ರಕ್ಷಣೆ ಮಾಡಿದೆ. ನೇವಲ್ ನ ಹೆಲಿಕಾಪ್ಟರ್ 4 ಕಾರ್ಮಿಕರನ್ನು ಟಗ್ ನಿಂದ ಲಿಫ್ಟ್ ಮಾಡಿ ರಕ್ಷಣೆ ಮಾಡಿದೆ. ಟಗ್ ನಲ್ಲಿದ್ದವರನ್ನು ಪಶ್ಚಿಮ ಬಂಗಾಳ ಮೂಲದ ಮುಲ್ಲಾಖಾನ್, ಗೌರವ್ ಕುಮಾರ್, ಶಂತನು, ಅಹಮ್ಮದ್, ರಾಹುಲ್, ದೀಪಕ್, ಪ್ರಶಾಂತ್, ತುಷಾರ್ ಮತ್ತು ಲಕ್ಷ್ಮೀ ನಾರಾಯಣ ಅಂತಾ ಹೇಳಲಾಗಿದೆ. ಈ ಮೂಲಕ‌ 38 ಗಂಟೆಗಳ ಕಾಲ ಸಮುದ್ರದಲ್ಲಿ ಸಾಕ್ಷಾತ್ ಸಾವಿನ ಕರಾಳತೆ ಅನುಭವಿಸಿದ್ದ ಕಾರ್ಮಿಕರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

ಟಗ್ ಗುತ್ತಿಗೆದಾರನ ಮೇಲೆ ಎಂಆರ್‌ಪಿಎಲ್ ಆರೋಪ

ಟಗ್ ಗುತ್ತಿಗೆದಾರನ ಮೇಲೆ ಎಂಆರ್‌ಪಿಎಲ್ ಆರೋಪ

ಎಂಆರ್‌ಪಿಎಲ್‌ಗೆ ಬರುವ ತೈಲ ಹಡಗುಗಳಿಗೆ ಆಳ ಸಮುದ್ರದಲ್ಲೇ ತೈಲ ಶುದ್ಧೀಕರಣ ಮಾಡುವ ಪೈಪ್ ಅಳವಡಿಸುವ ಗುತ್ತಿಗೆಯನ್ನು ಅಟ್ಲಾಂಟಿಕ್ ಶಿಫಿಂಗ್ ಕಂಪೆನಿ ಮಾಡುತ್ತಿದ್ದು, ಆ ಕಂಪೆನಿಗೆ ಸೇರಿದ ಟಗ್ ಇದಾಗಿದೆ. ಈ ಕಂಪೆನಿಯ ಅವಧಿ ಕಳೆದ ನಾಲ್ಕು ತಿಂಗಳ ಹಿಂದೆಯೇ ಮುಗಿದರೂ ಟಗ್ ತೆರವಿಗಾಗಿ ಎಂಆರ್‌ಪಿಎಲ್‌ಗೆ ಸಮಯಾಕಾವಾಶ ನೀಡಿತ್ತು. ಆದರೆ ಕಂಪೆನಿ ಮಾತ್ರ ಈ ಸೂಚನೆಯನ್ನು ಮೀರಿತ್ತು. ಚಂಡಮಾರುತದ ಎಚ್ಚರಿಕೆ ಇರುವಾಗಲೂ ಟಗ್ ತೆರವುಗೊಳಿಸಲು ಕಾರ್ಮಿಕರಿಗೆ ಸೂಚಿಸಲಾಗಿತ್ತು. ಆದರೆ ನಮ್ಮ ಸೂಚನೆಯನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ ಅಂತಾ ಎಂಆರ್‌ಪಿಎಲ್ ನ ಅಧ್ಯಕ್ಷ ಟಿ.ವಿ ರಮಣ ಆರೋಪಿಸಿದ್ದಾರೆ.

ಅಲಾಯನ್ಸ್ ಎಂಬ ಹೆಸರಿನ ಇನ್ನೊಂದು ಟಗ್ ಚಂಡಮಾರುತದ ಭೀಕರತೆಗೆ ಸಮುದ್ರದಲ್ಲಿ ಮುಳುಗಿದ್ದು, ಎಂಟು ಮಂದಿ ಕಾರ್ಮಿಕರ ಪೈಕಿ ಮೂರು ಮಂದಿ ಈಜಿಕೊಂಡು ದಡ ಸೇರಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ. ಇನ್ನು ನಾಲ್ವರು ನಾಪತ್ತೆಯಾಗಿದ್ದಾರೆ.

English summary
The Indian Coast Guard and Indian Navy jointly rescued nine people in the Arabian Sea who were stranded in sea at 17 nautical miles off Kaup coast due to cyclone Tauktae.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X