ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಡಿಟೆಕ್ಟಿವ್ ಶ್ವಾನ 'ಲೀನಾ' ನಿಧನ
ಮಂಗಳೂರು, ನವೆಂಬರ್ 22: ದೇಶವನ್ನೇ ತಲ್ಲಣಗೊಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣವನ್ನು ಭೇದಿಸಿದ್ದ ವಿಮಾನ ನಿಲ್ದಾಣದ ಸಿಐಎಸ್ಎಫ್ ಪಡೆಯ ಶ್ವಾನ ಲೀನಾ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ ಎಂಟು ವರ್ಷದಿಂದ ಸಿಐಎಸ್ಎಫ್ ಪಡೆಯೊಂದಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೀನಾ ಸ್ಫೋಟಕ ಪತ್ತೆ ಬಗ್ಗೆ ತರಬೇತಿಯನ್ನು ಪಡೆದಿತ್ತು.
ಲ್ಯಾಬ್ರಡಾರ್ ತಳಿಯ ಶ್ವಾನ ಲೀನಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದ ಭದ್ರತಾ ಸೇವೆಯಿಂದ ಮುಕ್ತವಾಗಿತ್ತು. ಕಳೆದ ಜೂನ್ 1ರಿಂದ ಲೀನಾವನ್ನು ಸೇವೆಯಿಂದ ಮುಕ್ತಗೊಳಿಸಲಾಗಿತ್ತು. ಆ ಬಳಿಕ ಸಿಐಎಸ್ಎಫ್ ಪಡೆಯ ಡಾಗ್ ಸ್ಕ್ವಾಡ್ ಆರೈಕೆಯಲ್ಲಿದ್ದ ಲೀನಾ ನ.21ರ ಭಾನುವಾರ ಸಂಜೆ ಆನಾರೋಗ್ಯದಿಂದ ಕೊನೆಯುಸಿರೆಳೆದಿದೆ.
ಲೀನಾ ಕರ್ತವ್ಯ ಅವಧಿಯಲ್ಲಿ ಬಹುಮುಖ್ಯವಾದ ಪ್ರಕರಣವನ್ನು ಪತ್ತೆ ಹಚ್ಚಿದ ಖ್ಯಾತಿಯನ್ನು ಹೊಂದಿದೆ. 2020ರ ಜನವರಿ 19ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದಿತ್ಯರಾವ್ ಇರಿಸಿದ್ದ ಸಜೀವ ಬಾಂಬ್ನ ಬ್ಯಾಗ್ ಅನ್ನು ಇದೇ ಶ್ವಾನ ಪತ್ತೆ ಹಚ್ಚಿತ್ತು. ಲೀನಾಳ ಸಮಯ ಪ್ರಜ್ಞೆಯಿಂದ ಬಹುದೊಡ್ಡ ಅನಾಹುತ ತಪ್ಪಿತ್ತು.
ಮೊದಲು ಬ್ಯಾಗ್ ತಪಾಸಣೆ ಮಾಡಿದ ಲೀನಾ ಬಾಂಬ್ ಇರುವ ಬಗ್ಗೆ ಸೂಚನೆಯನ್ನು ಕೊಟ್ಟಿತ್ತು. ಬಳಿಕ ಎಚ್ಚೆತ್ತ ಸಿಐಎಸ್ಎಫ್ ಅಧಿಕಾರಿಗಳು ಬ್ಯಾಗ್ ಅನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಾಂಬ್ ನಿಷ್ಕ್ರಿಯ ಮಾಡಿದ್ದರು. ಆಗಬಹುದಾಗಿದ್ದ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದರು.
ಈ ಹಿನ್ನಲೆಯಲ್ಲಿ ಲೀನಾ ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು. ಲೀನಾ ಅನಾರೋಗ್ಯ ಹೊಂದಿದ ಸಂದರ್ಭದಲ್ಲಿ ಲೀನಾಗೆ ಆಹಾರ ಮತ್ತು ಔಷಧ ವೆಚ್ಚಗಳನ್ನು ವಿಮಾನ ನಿಲ್ದಾಣದ ಪ್ರಾಧಿಕಾರವೇ ವಹಿಸಿತ್ತು. ನಿರಂತರವಾಗಿ ವೈದ್ಯರ ನಿಗಾದಲ್ಲಿದ್ದ ಲೀನಾ, ನವೆಂಬರ್ 16ರಿಂದ ಆಹಾರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿತ್ತು. ಕೇವಲ ಗ್ಲೂಕೋಸ್ನಿಂದ ಮಾತ್ರ ಜೀವನ್ಮರಣ ಹೋರಾಟ ಮಾಡುತ್ತಿತ್ತು.

ಲೀನಾ ಮೃತವಾದ ಹಿನ್ನಲೆಯಲ್ಲಿ ಮಂಗಳೂರಿನ ಸಿಐಎಸ್ಎಫ್ ಕಚೇರಿ ಆವರಣದಲ್ಲಿ ಡಿಟೆಕ್ಟಿವ್ ಲೀನಾಗೆ ಸಿಐಎಸ್ಎಫ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದ್ದಾರೆ. ಸಿಐಎಸ್ಎಫ್ ಸಕಲ ಸರ್ಕಾರಿ ಗೌರವದೊಂದಿಗೆ ಲೀನಾಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಲೀನಾವನ್ನು ಸಿಐಎಸ್ಎಫ್ ಸಿಬ್ಬಂದಿ ಪ್ರೀತಿಯಿಂದ ಡೋಲಿ ಅಂತಾನೂ ಕರೆಯುತ್ತಿದ್ದರು. ಆದರೆ ಈಗ ಪ್ರೀತಿಯ ಶ್ವಾನ ಮರೆಯಾಗಿರುವುದು ಎಲ್ಲರನ್ನೂ ದುಃಖಿತರನ್ನಾಗಿ ಮಾಡಿದೆ.
ಇತ್ತೀಚೆಗೆ ಜುಲೈನಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯ ಸುಧಾ ಎಂಬ ಶ್ವಾನ ಕ್ಯಾನ್ಸರ್ನಿಂದ ಸಾವಿಗೀಡಾಗಿತ್ತು. ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಒಟ್ಟು 5 ಶ್ವಾನಗಳಿದ್ದು, ಸುಧಾ ಸ್ಥಾನಕ್ಕೆ ರಾಣಿ ಎಂಬ ಶ್ವಾನವನ್ನು ಸೇರಿಸಲಾಗಿತ್ತು. ಸ್ಫೋಟಕ ಪತ್ತೆ ಮಾಡಲೆಂದು ಮಂಗಳೂರು ನಗರ ಪೊಲೀಸ್ ಇಲಾಖೆಗೆ ಹೊಸ ಶ್ವಾನವೊಂದು ಸೇರ್ಪಡೆಗೊಳಿಸಲಾಗಿದೆ.
ರಾಣಿ ಲ್ಯಾಬ್ರಡರ್ ರಿಟ್ರೀವರ್ ತಳಿಯ ಶ್ವಾನ ಮರಿಯಾಗಿದ್ದು, 2020 ಅಕ್ಟೋಬರ್ 10ರಂದು ಹುಟ್ಟಿದೆ. ಸ್ಫೋಟಕ ಪತ್ತೆ ಕರ್ತವ್ಯ ನಿರ್ವಹಿಸುವ ಸಲುವಾಗಿ ಈ ಶ್ವಾನವನ್ನು ಬೆಂಗಳೂರಿನಲ್ಲಿ ತರಬೇತಿಗೆ ನಿಯೋಜಿಸಲಾಗಿತ್ತು. ಸ್ಪೋಟಕ ತರಬೇತಿಯನ್ನು ಪೂರ್ಣಗೊಳಿಸಿ ಮಂಗಳೂರು ನಗರ ಘಟಕದಲ್ಲಿ ಪೊಲೀಸ್ ಇಲಾಖೆಯಲ್ಲಿನ ಸ್ಫೋಟಕ ಪತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮಂಗಳೂರು ನಗರದ ಕುಂಪಲ ಮೂಲದ ಮನೋಜ್ ಶೆಟ್ಟಿ. ಜಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ನಾಗೇಂದ್ರ ಎಂಬ ಇಬ್ಬರು ಶ್ವಾನ ಹ್ಯಾಂಡ್ಲರ್ಗಳು ಬೆಂಗಳೂರಿನಲ್ಲಿ ರಾಣಿಗೆ ಸ್ಫೋಟಕ ಪತ್ತೆಯ ಬಗ್ಗೆ ತರಬೇತಿ ನೀಡಿದ್ದರು. 2021 ಫೆ.16ರಿಂದ ಸೆ.16ರವರೆಗೆ ರಾಣಿಗೆ ತರಬೇತಿ ನೀಡಲಾಗಿದ್ದು, ತರಬೇತಿಯನ್ನು ಪೂರ್ಣಗೊಳಿಸಿ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ಪತ್ತೆ ಕರ್ತವ್ಯದಲ್ಲಿ ಪೊಲೀಸರಿಗೆ ಸಹಕರಿಸುತ್ತಿದ್ದಾಳೆ.