• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶೇಷ ವರದಿ: ಕೊರೊನಾ ಮಾರಿಯನ್ನು ದೂರ ಮಾಡಲು ಬಂದ ಆಟಿ ಕಳೆಂಜ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 05: ಜಗತ್ತಿಗೆ ಕಾಡಿದ ಕೊರೊನಾ ಮಾಹಾಮಾರಿ ಮನುಷ್ಯ ಕುಲವನ್ನೇ ಕಂಗಲಾಗಿಸಿದೆ. ಕೊರೊನಾ ಒಂದನೇ ಅಲೆ ಮತ್ತ ಎರಡನೇ ಅಲೆಯಲ್ಲಿ ಲಕ್ಷಾಂತರ ಜೀವವನ್ನು ಬಲಿ ಪಡೆದ ಕೊರೊನಾ ಸದ್ಯ ಮೂರನೇ ಅಲೆಯ ಹೊಸ್ತಿಲಲ್ಲಿದೆ. ಮೂರನೇ ಅಲೆ ಬಾರದಿರಲಿ, ಮತ್ತೆ ಸಾವು- ನೋವು ಸಂಭವಿಸದಿರಲಿ ಅನ್ನುವುದು ಮನುಜ ಕುಲದ ಪ್ರಾರ್ಥನೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊರೊನಾ ಮಹಾಮಾರಿ ದೂರ ಆಗಲಿ ಅಂತಾ ಜನ ಮತ್ತೆ ಹಳೆಯ ಕಾಲದ ಪದ್ಧತಿಗೆ ಮೊರೆ ಹೋಗಿದ್ದಾರೆ. ಈ ಹಳೆಯ ಜಾನಪದೀಯ ಪದ್ಧತಿಯೇ ಆಟಿ ಕಳೆಂಜ. ಮನೆ ಮನೆಗೆ ತೆರಳುವ ಆಟಿ ಕಳೆಂಜೆ ಊರಿಂದ ಊರಿಗೆ ಸಂಚರಿಸಿ, ಊರಿಗೆ ಅಂಟಿರುವ ಮಹಾ ರೋಗವನ್ನು ದೂರ ಮಾಡುತ್ತದೆ ಅನ್ನೋದು ತುಳುವರ ನಂಬಿಕೆಯಾಗಿದೆ.

ಕಲಾ ಪ್ರಕಾರವೊಂದು ಮನೆಮನೆಗೆ ಬರುತ್ತದೆ

ಕಲಾ ಪ್ರಕಾರವೊಂದು ಮನೆಮನೆಗೆ ಬರುತ್ತದೆ

ಆಷಾಢ ಮಾಸದಲ್ಲಿ ಕರಾವಳಿಯಲ್ಲಿ ಯಾವುದೇ ದೈವ- ದೇವರುಗಳ ಕಾರ್ಯಕ್ರಮ ನಡೆಯೋದಿಲ್ಲ. ಕರಾವಳಿಯಲ್ಲಿ ನೆಲೆಯೂರಿರುವ ದೈವಗಳೆಲ್ಲಾ ಘಟ್ಟ ಪ್ರದೇಶಗಳಿಗೆ ತೆರಳುತ್ತದೆ ಅನ್ನೋದು ಜನರ ನಂಬಿಕೆ‌. ಭಾರೀ ಮಳೆ- ಕೆಲಸಕ್ಕೂ ಸಂಕಷ್ಟದ ಸಂದರ್ಭದಲ್ಲಿ ಬಂದ ಮಾರಿ, ಕಷ್ಟಕಾರ್ಪಣ್ಯಗಳನ್ನು ತೊಡೆದು ಹಾಕಲೆಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಷಾಢ ಮಾಸದಲ್ಲಿ "ಆಟಿ ಕಳೆಂಜ' ಎಂಬ ಜನಪದ ಆಚರಣಾತ್ಮಕ ಕಲಾ ಪ್ರಕಾರವೊಂದು ಮನೆಮನೆಗೆ ಬರುತ್ತದೆ. ಈ ಆಟಿ ಕಳೆಂಜನು ಊರಿಗೆ ಬಂದ ಮಾರಿಯನ್ನು, ಮನುಷ್ಯ, ಸಾಕುಪ್ರಾಣಿಗಳು ಮತ್ತು ಬೆಳೆಗಳಿಗೆ ಬಂದ ರೋಗಗಳನ್ನು ಕಳೆಯುವವನು ಎಂದರ್ಥ.

ತುಳುನಾಡಲ್ಲಿ ಆಟಿ ಅಮಾವಾಸ್ಯೆ ಆಚರಣೆ, ಏನಿದು ಆಟಿ ಕಷಾಯ?ತುಳುನಾಡಲ್ಲಿ ಆಟಿ ಅಮಾವಾಸ್ಯೆ ಆಚರಣೆ, ಏನಿದು ಆಟಿ ಕಷಾಯ?

ಆಟಿ ಎಂದೆ ಜಡಿ ಮಳೆ ಬರುವ ಕಾಲ

ಆಟಿ ಎಂದೆ ಜಡಿ ಮಳೆ ಬರುವ ಕಾಲ

ಆಟಿ ಕಳೆಂಜನನ್ನು ರೋಗ ಕಳೆವ ಮಾಂತ್ರಿಕನ ರೀತಿಯಲ್ಲಿ ಆರಾಧನೆ ಮಾಡಲಾಗುತ್ತದೆ. ಆಷಾಢ ಅಥವಾ ಆಟಿ ಎಂದೆ ಜಡಿ ಮಳೆ ಬರುವ ಕಾಲ. ಈ ಸಮಯದಲ್ಲಿ ಕರಾವಳಿಯಲ್ಲಿ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿಯ ಒಂದು ತಿಂಗಳ ಕಾಲ ದೈವಸ್ಥಾನಗಳ ಬಾಗಿಲು ಹಾಕಲಾಗುತ್ತದೆ‌. ಈ ಸಂದರ್ಭದಲ್ಲಿ ಊರಿಗೆ ಬಂದ ಸಂಕಷ್ಟವನ್ನು ಕಳೆಯಲೆಂದೇ ಕಳೆಂಜ ಬರುತ್ತಾನೆ ಎಂಬ ನಂಬಿಕೆಯಿದೆ.

ಕರಾವಳಿ ಕೆಲ ತೀರಾ ಗ್ರಾಮೀಣ ಭಾಗದಲ್ಲಿ ಮಾತ್ರ ಕಂಡುಬರುತ್ತಿದ್ದ ಆಟಿ ಕಳೆಂಜ, ಈಗ ಯುವಕರ ವಿಶೇಷ ಪ್ರಯತ್ನದಿಂದ ನಗರ ಭಾಗದಲ್ಲೂ ಆಟಿ ಕಳೆಂಜ ನಿಮ್ಮ ಮನೆಗೆ ಎಂಬ ನೂತನ ಅಭಿಯಾನದಡಿ ನಗರದಲ್ಲೂ ಕಾಣಿಸಿಕೊಳ್ಳಲಿದೆ. ವಿನಾಯಕ ಫ್ರೆಂಡ್ಸ್ ಕಾಟಿಪಳ್ಳ ಮತ್ತು ಗಗ್ಗರ ದೈವೊಲೆನ ಪದಿನಾಜಿ ಕಟ್ಲೆ ಇದರ ಸಹಯೋಗತ್ವದಲ್ಲಿ ಆಟಿ ಕಳೆಂಜ ಸಂಸ್ಕೃತಿಯನ್ನು ನಗರದಲ್ಲೂ ಜನರಿಗೆ ನೆನಪು ಮಾಡುವಂತಹ ಕೆಲಸ ನಡೆದಿದೆ.

ಆಟಿ ಕಳೆಂಜ ದುಷ್ಟ ಶಕ್ತಿಯನ್ನು ಹೋಗಲಾಡಿಸುತ್ತಾನೆ

ಆಟಿ ಕಳೆಂಜ ದುಷ್ಟ ಶಕ್ತಿಯನ್ನು ಹೋಗಲಾಡಿಸುತ್ತಾನೆ

ಹೀಗೆ ಬಂದ ಆಟಿ ಕಳೆಂಜ ದುಷ್ಟ ಶಕ್ತಿಯನ್ನು ಕುಣಿತ ಹಾಗೂ ನೃತ್ಯದ ಮೂಲಕ ಹೋಗಲಾಡಿಸುತ್ತಾನೆ ಎಂಬ ಆಶಯವಿದೆ. ಈ ಸಾಂಪ್ರದಾಯಿಕ ನೃತ್ಯವನ್ನು ನಲಿಕೆ (ಭೂತಕೋಲದ ವೇಷ ಹಾಕುವವರು) ಸಮುದಾಯದವರು ಮಾಡುತ್ತಾರೆ. ಅವರು ಆಟಿ ಕಳೆಂಜದ ವೇಷವನ್ನು ಹಾಕಿ ಮನೆ ಮನೆಗೆ ಹೋಗುವುದರಿಂದ ಮನೆಯನ್ನು ಸೇರಿಕೊಂಡಿರುವ ಮಾರಿ ಓಡಿ ಹೋಗುತ್ತದೆ ಅನ್ನುವ ನಂಬಿಕೆಯಿದೆ. ಕಳೆಂಜದ ವೇಷವು ತೆಂಗಿನ ಎಳೆಯ ಗರಿಗಳಿಂದ ಹೆಣೆದು ಮಾಡಿದ ಉಡುಗೆ, ಕೆಂಪು ಚಲ್ಲಣ, ಅಡಿಕೆ ಮರದ ಹಾಳೆಯಿಂದ ಮಾಡಿದ ಶಿರಸ್ತ್ರಾಣ, ಗಗ್ಗರವನ್ನು ಧರಿಸುತ್ತಾರೆ. ತೆಂಗಿನ ಗರಿಯಿಂದ ಮಾಡಿದ ತತ್ರ(ಕೊಡೆ) ವನ್ನು ಹಿಡಿದಿರುತ್ತಾರೆ‌.

ಎಲೆ- ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ

ಎಲೆ- ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ

ಕಳೆಂಜನು ಆ ಕೊಡೆಯನ್ನು ತಿರುಗಿಸುತ್ತಾ ಮನೆಮನೆಗೆ ತೆರಳಿ ಪಾಡ್ದನ ಹಾಡುವಾತ ಹೇಳುವ ಪಾಡ್ದನ, ತೆಂಬರೆಯ ನಾದಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಿರುತ್ತಾನೆ. ಆತ ತೆಂಬರೆಯನ್ನು ಬಾರಿಸುತ್ತಾ ಕಳೆಂಜ ಭೇಟಿ ನೀಡುವ ಪ್ರತಿ ಮನೆಯವರು ಅಕ್ಕಿ, ಫಲವಸ್ತುಗಳು, ತೆಂಗಿನ ಕಾಯಿ, ಎಲೆ- ಅಡಿಕೆ, ಹಣವನ್ನು ದಾನವಾಗಿ ನೀಡುತ್ತಾರೆ. ಈ ಮೂಲಕ ಮನೆಗೆ ಸೋಕಿದ ದುಷ್ಟ ಶಕ್ತಿಯನ್ನು ಕಳೆಯುತ್ತಾನೆ. ನಂತರ ತೋಟದಲ್ಲಿ ಬೆಳೆದ ಬಾಳೆಗೊನೆ, ತೆಂಗಿನ ಕಾಯಿಯನ್ನು ಹೇಳದೆ ಕೇಳದೆ ಕೊಂಡೊಯ್ಯುವ ಪದ್ಧತಿ ಇದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಇದರಿಂದ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆ.

ಜನಪದರು ಶ್ರದ್ಧೆಯಿಂದ ಆಚರಿಸುತ್ತಾರೆ

ಜನಪದರು ಶ್ರದ್ಧೆಯಿಂದ ಆಚರಿಸುತ್ತಾರೆ

ಹೀಗೆ ಮನೆಯ ಅಂಗಳಕ್ಕೆ ಬಂದು ಕುಣಿದ ಆಟಿ ಕಳೆಂಜನಿಗೆ ಗೆರಸೆಯಲ್ಲಿ (ತಡ್ಪೆ) ಭತ್ತ ಅಥವಾ ಅಕ್ಕಿ, ಹುಳಿ, ಮೆಣಸು, ಉಪ್ಪು, ಒಂದು ತುಂಡು ಇದ್ದಲು, ಸ್ವಲ್ಪ ಅಟ್ಟದ ಮಸಿ ಇಟ್ಟುಕೊಡುತ್ತಾರೆ. ಅಲ್ಲದೆ ಆತ ಅಂಗಳ ಇಳಿದು ಹೋಗುವಾಗ ಸುಣ್ಣ ಮಿಶ್ರಿತ ಅರಿಶಿಣದ ನೀರಿನಲ್ಲಿ ಆತನಿಗೆ ಆರತಿ ಎತ್ತಿ ಆ ನೀರನ್ನು ದಾರಿಗಡ್ಡವಾಗಿ ಉದ್ದಕ್ಕೆ ಚೆಲ್ಲುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ ಕಳೆಯುತ್ತದೆ ಎಂದು ತುಳುನಾಡ ಜನರ ನಂಬಿಕೆಯಿದೆ. ಇಂದು ಈ ಕುಣಿತ ಪ್ರಕಾರವು ಅಳಿವಿನಂಚಿನಲ್ಲಿದ್ದು, ಅಲ್ಲೊಂದು, ಇಲ್ಲೊಂದು ಕಡೆಗಳಲ್ಲಿ ಈ ಕುಣಿತ ಕಾಣಿಸಿಕೊಳ್ಳುತ್ತಿದೆ. ಜನಪದರು ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದ ಇಂತಹ ಆಚರಣೆಗಳನ್ನು ಉಳಿಸಬೇಕಾಗಿದೆ.

English summary
Aati Kalenja a folk ritual art form comes to the house to house in Ashada Month in Dakshina Kannada District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X