• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅಬಲೆಯಲ್ಲ ಸಬಲೆ' ಮೊಗವೀರ ಮಹಿಳೆಯರ ಸ್ವಾಭಿಮಾನದ ಯಶೋಗಾಥೆ

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ಮಾರ್ಚ್ 29: ಹೆಣ್ಣು ಅಬಲೆಯಲ್ಲ ಸಬಲೆ'; ಈ ಮಾತನ್ನು ಸಾಧಿಸಿ ತೋರಿಸುತ್ತಿದ್ದಾರೆ ಮಹಿಳೆಯರು. ಪುರುಷರಿಗೆ ಸರಿ ಸಮಾನವಾಗಿ ಅಥವಾ ಒಂದು ತೂಕ ಹೆಚ್ಚೇ ಎನ್ನುವಂತೆ ಈಗಿನ ಮಹಿಳೆಯರು ಸಾಧಿಸಿ ಜಗತ್ತು ಗೆಲ್ಲುವ ಹತ್ತು ಹಲವು ನಿದರ್ಶನಗಳು ನಮ್ಮ ಮುಂದಿದೆ.

ಇದೇ ರೀತಿ ಮಹಿಳಾ ಜಗತ್ತು ಮುಂದುವರೆಯುತ್ತಿರುವಂತೆಯೇ ನಾವು ಯಾರಿಗೇನು ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ ಕರಾವಳಿಯ ಮೊಗವೀರ ಸಮುದಾಯದ ಮಹಿಳೆಯರು.[ಮಹಿಳೆಗೆ ಶಾಸಕ ಅಭಯ್‍ಚಂದ್ರ ಜೈನ್ ನಿಂದನೆ, ವಿಡಿಯೋ ವೈರಲ್]

ಮೊಗವೀರ ಸಮಾಜದ ಮೂಲ ಕಸುಬು ಮೀನುಗಾರಿಕೆ. ಮೀನುಗಾರಿಕೆಯಿಂದಲೇ ಇವರ ಬದುಕು. ಗಂಡ ಬೋಟಿನಲ್ಲಿ ದುಡಿದರೆ, ಪತ್ನಿ ಸಮುದ್ರದ ಆಳದಿಂದ ಮೊಗೆದು ತಂದ ಮೀನನ್ನು ಬುಟ್ಟಿ ತುಂಬಾ ಮಾರಾಟ ಮಾಡಿ ಸಂಸಾರದ ನೊಗಕ್ಕೆ ಹೆಗಲು ನೀಡುತ್ತಾಳೆ.

ಮೀನುಗಾರ ಮಹಿಳೆಯರ ಸ್ವಾಭಿಮಾನದ ಕತೆಗಳು ಸಾಕಷ್ಟಿವೆ. ಅವುಗಳಲ್ಲಿ ಕಲಾವತಿ ಪುತ್ರನ್ ಕೂಡಾ ಒಬ್ಬರು. ಮೀನು ಮಾರಾಟವೇ ಇವರ ಕೆಲಸ. ಪತಿಯದ್ದೂ ಮೀನುಗಾರಿಕೆ ವೃತ್ತಿ. ಇಬ್ಬರು ಮಕ್ಕಳು, ವೃದ್ಧ ತಂದೆ ತಾಯಿ ಇರುವ ತುಂಬು ಸಂಸಾರ ಈಕೆಯದ್ದು. ಗಂಡ ನಸುಕಿಗೆ ಎದ್ದು ಬೋಟಿನಲ್ಲಿ ಹೋದರೆ ಮರಳುವುದು ಸಂಜೆ. ಆತನಿಗೆ ಕೆಲವೊಮ್ಮೆ ಕೈ ತುಂಬಾ ದುಡ್ಡು, ಕೆಲವು ಸಲ ಊಟ, ಚಾಹಕ್ಕೂ ತತ್ವಾರ. ಇಂತಹ ಸ್ಥಿತಿಯಲ್ಲಿ ಅವನಿಗೆ ಎಣ್ಣೆ ಹಾಕುವ ಅಭ್ಯಾಸ. ಕೆಲವೊಮ್ಮೆ ಇದು ವಿಪರೀತವಾಗಿ ಮನೆಗೆ ದುಡ್ಡು ನೀಡಿದರೆ ಉಂಟು, ಇಲ್ಲದಿದ್ದರೆ ಇಲ್ಲ.[ಪಿಲಿಕುಳದ ಕೆ. ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ]

ಮನೆ ಖರ್ಚು, ಮಕ್ಕಳ ಓದು, ಬಟ್ಟೆ, ತಂದೆ ತಾಯಿಯ ಔಷಧಿಯ ವೆಚ್ಚಕ್ಕಾಗಿ ಹೆಣಗಾಡಬೇಕಾದ ಸ್ಥಿತಿ ಕಲಾವತಿಯದ್ದು. ಅದಾಗಲೇ ಕಲಾವತಿ ವಯಸ್ಸು 45 ದಾಟಿದೆ. ಮುಂದೇನೂ ಎಂಬ ಪ್ರಶ್ನೆ ಆಕೆಯ ಕಣ್ಣ ಮುಂದಿದೆ.

ಮೀನು ಮಾರಾಟದಲ್ಲೇ ಬದುಕು

ಮೀನು ಮಾರಾಟದಲ್ಲೇ ಬದುಕು

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಲಾವತಿ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರು. ಅದೊಂದ ದಿನ ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಸಾಲ ಮಾಡಿ ಬೆಳಿಗ್ಗೆ ಎದ್ದು ಬುಟ್ಟಿ ಹಿಡಿದುಕೊಂಡು ದಕ್ಕೆಗೆ ಹೋದರು ಕಲಾವತಿ. ನಂತರ ಆಕೆ ತಿರುಗಿ ನೋಡಲಿಲ್ಲ. ಮೀನು ವ್ಯಾಪಾರವೇ ಆಕೆಯ ಸ್ವಾಭಿಮಾನದ ಬದುಕಿನ ಮಂತ್ರವಾಯಿತು. ಈಗ ಆಕೆ ದುಡ್ಡಿಗಾಗಿ ಗಂಡನನ್ನು ನೆಚ್ಚಿಕೊಂಡಿಲ್ಲ. ಆತ ಕೊಟ್ಟರೆ ಅದು ಬೋನಸ್ ಅಷ್ಟೇ. ಮೀನು ಮಾರಿ ಬರುವ ದುಡ್ಡಿನಲ್ಲಿಯೇ ಇಡೀ ಸಂಸಾರವನ್ನು ನಿಭಾಯಿಸುತ್ತಿದ್ದಾರೆ.

ಸ್ವಾಭಿಮಾನದ ಬದುಕು

ಸ್ವಾಭಿಮಾನದ ಬದುಕು

ಇದು ಮೊಗವೀರ ಮಹಿಳೆ ಕಲಾವತಿ ಪುತ್ರನ್ ಅವರಿದ್ದು ಮಾತ್ರವಲ್ಲ. ಕಲಾವತಿಯಂತಹ ನೂರಾರು ಮೀನುಗಾರ ಮಹಿಳೆಯರ ಬದುಕು ಹೀಗಿಯೇ. ಮೀನು ಮಾರಾಟ ಮಾಡಿ ಬರುವ ದುಡ್ಡಿನಿಂದಲೇ ಈ ಗಟ್ಟಿಗಿತ್ತಿ ಮಹಿಳೆಯರು ಸ್ವಾಭಿಮಾನಿ ಬದುಕು ಕಂಡುಕೊಂಡಿದ್ದಾರೆ.

ಇಂದು ಈ ಮೀನುಗಾರ ಮಹಿಳೆಯರ ಬದುಕು ಬದಲಾಗಿದೆ. ತಾವು ದುಡಿದಿದ್ದರಲ್ಲಿಯೇ ಅಲ್ವಸ್ವಲ್ಪ ಉಳಿತಾಯ ಮಾಡಿ ಸ್ವಂತ ಬೋಟ್ ಖರೀದಿಸಿದವರೂ ಇದ್ದಾರೆ; ಸ್ವಂತಕ್ಕೊಂದು ಸೂರು ಮಾಡಿದವರು ಇದ್ದಾರೆ. ಅವರ ಮಕ್ಕಳು ಶಿಕ್ಷಣ ಪಡೆದು ಉನ್ನತ ಸ್ಥಾನಗಳಲ್ಲಿದ್ದಾರೆ.

ನಷ್ಟವಾದರೂ ಇದೇ ಬದುಕು

ನಷ್ಟವಾದರೂ ಇದೇ ಬದುಕು

ಕೆಲವೊಮ್ಮೆ ಮೀನು ಮಾರಾಟದಲ್ಲೂ ನಷ್ಟವಾಗುವುದಿದೆ. ಆದರೂ ಇದರಲ್ಲಿಯೇ ಇವರ ಜೀವನ.

ಮಂಗಳೂರಿನ ದಕ್ಕೆ, ಸ್ಟೇಟ್‍ಬ್ಯಾಂಕ್, ಉರ್ವ, ಉರ್ವಸ್ಟೋರ್, ಬಿಜೈ, ಕದ್ರಿ, ಅಳಕೆ ಹೀಗೆ ನೀವೊಮ್ಮೆ ಸುತ್ತಾಡಿದರೆ ಇಲ್ಲಿ ಸುಮಾರು 600ಕ್ಕೂ ಅಧಿಕ ಮೀನು ಮಾರಾಟ ಮಾಡುವ ಮೊಗವೀರ ಮಹಿಳೆಯರು ಕಾಣಸಿಗುತ್ತಾರೆ. ಇವರದ್ದು ಕಠಿಣ ದುಡಿಮೆ. ದಕ್ಕೆಯಲ್ಲಿ ಮೀನು ಖರೀದಿಸಿ ಮಾರುಕಟ್ಟೆಯಲ್ಲಿ ಸಂಜೆ ತನಕ ಕುಳಿತು ವ್ಯಾಪಾರ ಮಾಡುತ್ತಾರೆ. ಇವರ ಬುಟ್ಟಿ ಮೀನಿನ ವ್ಯಾಪಾರ ಯಾವ ಗಂಡಸಿಗೂ ಕಡಿಮೆ ಇಲ್ಲ.

ಮಾತು ಕಠಿಣ, ಹೃದಯ ಮೃದು

ಮಾತು ಕಠಿಣ, ಹೃದಯ ಮೃದು

ಬಸ್‍ಗಳಲ್ಲಿ ಮೀನಿನ ಬುಟ್ಟಿ ತೆಗೆದುಕೊಂಡು ಹೋಗುವಾಗ ಸ್ವಲ್ಪ ಕಿರಿ ಕಿರಿ. ಇದಕ್ಕಾಗಿಯೋ ಪರ್ಮನೆಂಟ್ ಆಗಿ ಟೆಂಪೋ, ರಿಕ್ಷಾದ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಇವರಿಗೆ ವಿದ್ಯಾಭ್ಯಾಸ ಕಡಿಮೆ ಇರಬಹುದು ಆದರೆ ಇವರು ವ್ಯಾಪಾರ ಮಾಡುವಂತೆ ಎಂಬಿಎ ಪದವೀಧರರಿಗೂ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಮಾತು ಕಠಿಣ, ಹೃದಯ ಮೃದು. ಇವರು ಮೀನುಗಾರ ಮಹಿಳೆಯರು.

ಇವರ ಮಕ್ಕಳು ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಅವರಿಗೆ ಇವರ ಬದುಕಿನ ಕಷ್ಟ ಗೊತ್ತಿಲ್ಲ, ಮೀನುಗಾರಿಕೆಯೂ ಬದುಕೂ ಬೇಕಿಲ್ಲ.

ಸರಕಾರದಿಂದ ಭರಪೂರ ಸೌಲಭ್ಯ

ಸರಕಾರದಿಂದ ಭರಪೂರ ಸೌಲಭ್ಯ

ಮಂಗಳೂರಿನಲ್ಲಿ ಮಂಜೇಶ್ವರ, ಕಾಪು, ತೊಕ್ಕೊಟ್ಟು, ಸುರತ್ಕಲ್‍ನಿಂದಲೂ ಬಂದು ಮೀನು ವ್ಯಾಪಾರ ಮಾಡುವವರಿದ್ದಾರೆ. ಸರಕಾರ ಕೂಡಾ ಇವರ ಶ್ರಮವನ್ನು ಗುರುತಿಸುತ್ತಿದೆ. ಸಾಲ ಸೌಲಭ್ಯ, ಕಡಿಮೆ ಬಡ್ಡಿದರದಲ್ಲಿ ಹಣಕಾಸು ನೆರವು ಎಂದೆಲ್ಲಾ ಸರಕಾರದಿಂದ ಸಹಾಯ ಸಿಗುತ್ತಿದೆ. ಸ್ವಸಹಾಯ ಸಂಘದಲ್ಲೂ ಈ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಗಂಡ ಬೋಟಿನಲ್ಲಿ ದುಡಿದರೆ, ಮನೆಯ ಯಜಮಾನಿಕೆ ಇವರದ್ದು.

ಹಾಡು ಮರೆಯಾಗಿದೆ

ಹಾಡು ಮರೆಯಾಗಿದೆ

ಎರಡು ದಶಕಗಳ ಹಿಂದೆ ಹೋದರೆ ಆಗ ಇಂದಿನಂತೆ ಡೀಸೆಲ್ ಇಂಜಿನ್‍ಗಳ ದೋಣಿಗಳಿರಲಿಲ್ಲ. ಆಗ ಮೀನುಗಾರಿಕೆಗೆ ಹೋಗುವ ಗಂಡಸರನ್ನು ಹುರಿದುಂಬಿಸಲು ಈ ಮಹಿಳೆಯರು `ತಿಮ್ಮಪ್ಪ ಹುಟ್ಟು ಹಾಕು, ಧೂಮಪ್ಪ ಹುಟ್ಟು ಹಾಕು..' ಎಂದು ಹಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಲ್ಲವೂ ಯಾಂತ್ರೀಕೃತ ಮೀನುಗಾರಿಕೆ. ಇದರ ಜತೆಗೆ ಮೀನುಗಾರ ಮಹಿಳೆಯರೂ ಬದಲಾಗಿದ್ದಾರೆ. ಈಗ ಮೀನುಗಾರ ಮಹಿಳೆಯರಲ್ಲಿ ಅಸಹಾಯಕತೆ ಇಲ್ಲ, ಬದಲಿಗೆಆತ್ಮವಿಶ್ವಾಸವಿದೆ.

ಕಾರಂತರಿಂದ ಹೊಗಳಿಸಿಕೊಂಡವರು

ಕಾರಂತರಿಂದ ಹೊಗಳಿಸಿಕೊಂಡವರು

"ಗಂಡಸರು ಸಮುದ್ರದ ಆಳದಿಂದ ಮೊಗೆದು ತಂದ ಮೀನನ್ನು ಮಾರಿ ಬದುಕುವ ಇವರು ನಿಜವಾದ ಸ್ತ್ರೀವಾದಿಗಳು," ಎಂದು ಮೀನುಗಾರ ಮಹಿಳೆಯರ ಬಗ್ಗೆ ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How much women are strong? Mangaluru Mogaveer women's prove that they are more capable than men. Read this story to know how they strive hard to save their family.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more