ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪರ್ವ; 300 ಕೋಟಿ ರೂ. ಯೋಜನೆ
ಮಂಗಳೂರು, ಜನವರಿ 10; ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಕ್ಷೇತ್ರಕ್ಕೆ ದೇಶದ ವಿವಿಧ ಭಾಗಗಳಿಂದ ವರ್ಷಕ್ಕೆ ಕೋಟ್ಯಾಂತರ ಭಕ್ತರು ಬರುತ್ತಾರೆ. ಬಂದ ಭಕ್ತರಿಗೆ ಸರಿಯಾಗಿ ತಂಗಲು ವ್ಯವಸ್ಥೆ ಗಳಿಲ್ಲ, ಪಾರ್ಕಿಂಗ್ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ ಎನ್ನುವುದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಪ್ರತಿಯೊಬ್ಬ ಭಕ್ತರ ಅಭಿಪ್ರಾಯವಾಗಿದೆ.
ಆದರೆ ಈ ಸಮಸ್ಯೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 300 ಕೋಟಿ ರೂಪಾಯಿಯ ಬೃಹತ್ ಯೋಜನೆಯನ್ನು ಜಾರಿಗೆ ತರಲಿದೆ. ಕುಕ್ಕೆ ಸುಬ್ರಹ್ಮಣ್ಯದ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನೆ ಭಾಷ್ಯ ಬರೆಯಲಿದೆ.
ಭಕ್ತಾದಿಗಳ ಗಮನಕ್ಕೆ; ಕುಕ್ಕೆ ಸುಬ್ರಮಣ್ಯದಲ್ಲಿ ಸೇವೆಗಳು ಸ್ಥಗಿತ
ಕುಕ್ಕೆ ಸುಬ್ರಹ್ಮಣ್ಯವನ್ನು ಮತ್ತಷ್ಟು ಪ್ರಸಿದ್ಧಗೊಳಿಸುವ ನಿಟ್ಟಿನಲ್ಲಿ ಬೃಹತ್ ಮೊತ್ತದ ಮಾಸ್ಟರ್ ಪ್ಲಾನ್ಗೆ ಚಾಲನೆ ನೀಡಲಾಗುತ್ತಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ. ಯೋಜನೆಯ ಡಿಪಿಆರ್ ಸೇರಿದಂತೆ ಎಲ್ಲವೂ ಸಿದ್ಧವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಗಡುವನ್ನೂ ಹಾಕಿಕೊಳ್ಳಲಾಗಿದೆ.
ಕುಕ್ಕೆ; ಆಶ್ಲೇಷಾ ಬಲಿ ಸೇವೆ ಮಾಡಿಸಿದ ಸುಪ್ರೀಂ ಜಡ್ಜ್ ಅಬ್ದುಲ್ ನಝೀರ್
ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ವಿಶ್ವ ಪ್ರಸಿದ್ಧ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ 180 ಕೋಟಿ ರೂಪಾಯಿ ವೆಚ್ಚದ ಒಂದನೇ ಹಾಗೂ ಎರಡನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಇದೀಗ ಮತ್ತೆ 300 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ಗೆ ಸಿದ್ಧತೆ ಮಾಡಲಾಗಿದೆ.
ವೈಭವದ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮ ರಥೋತ್ಸವ; ಲಕ್ಷಾಂತರ ಭಕ್ತರು ಭಾಗಿ
ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಗೊಂಡಿದ್ದು, ಅಭಿವೃದ್ಧಿಯ ನೀಲ ನಕಾಶೆಯೂ ರೆಡಿಯಾಗಿದೆ. ಸದ್ಯದಲ್ಲೇ ಈ ಮಾಸ್ಟರ್ ಪ್ಲಾನ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಮಾಸ್ಟರ್ ಪ್ಲಾನ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಮುಖ್ಯವಾಗಿ ದೇವಸ್ಥಾನದ ರಥಬೀದಿಯ ಇಕ್ಕೆಲಗಳಲ್ಲೂ ಶಿಲಾಮಯ ಪಾರಂಪರಿಕ ಶೈಲಿಯ ಕಟ್ಟಡಗಳು ತಲೆ ಎತ್ತಲಿದೆ. ಈ ಕಟ್ಟಡಗಳನ್ನು ಮೂರು ಪಾರಂಪರಿಕ ವಿನ್ಯಾಸದಲ್ಲಿ ಕಟ್ಟಲಾಗುತ್ತಿದ್ದು, ಕಟ್ಟಡದ ಮುಂಭಾಗವು ವಿಜಯನಗರ ಶೈಲಿ, ಒಳ ಭಾಗವು ಮೈಸೂರು ಶೈಲಿ ಮತ್ತು ಛಾವಣಿಯು ದಕ್ಷಿಣ ಕನ್ನಡ ಶೈಲಿಯಲ್ಲಿ ನಿರ್ಮಾಣವಾಗಲಿದೆ.
ಭದ್ರತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಟ್ಟಡಗಳ ರಚನೆಯಾಗಲಿದ್ದು, ಮುಂದಿನ 2000 ವರ್ಷಗಳವರೆಗೂ ಕಟ್ಟಡದ ವಿನ್ಯಾಸವನ್ನು ಬದಲಿಸದಂತಹ ರೀತಿಯಲ್ಲಿ ಈ ಕಟ್ಟಡಗಳ ನಿರ್ಮಾಣವಾಗಲಿದೆ. ರಥಬೀದಿಯ ಎರಡೂ ಬದಿಯಲ್ಲಿ ನಿರ್ಮಾಣಗೊಳ್ಳಲಿರುವ ಇವುಗಳು ಒಂದೇ ಅಂತಸ್ತಿಗೆ ಸೀಮಿತವಾಗಿದ್ದು, ಇದನ್ನು ಸೇವಾ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ.
ಹೂವಿನ ಅಂಗಡಿ, ಹಣ್ಣು-ಕಾಯಿ ಅಂಗಡಿ, ವಿಶ್ರಾಂತಿಗೆ ಬೇಕಾದ ವ್ಯವಸ್ಥೆಗಳು, ಅಡಿಯೋ-ವಿಡಿಯೋ ಥಿಯೇಟರ್, ಕ್ಷೇತ್ರ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳ ಕುರಿತ ಮಾಹಿತಿಯೂ ಇದರಲ್ಲಿರಲಿದೆ.
ಆಶ್ಲೇಷ ಬಲಿ ಪೂಜೆಗೆ ಹೊಸ ಆಶ್ಲೇಷ ಬಲಿ ಮಂಟಪವೂ ಸಿದ್ಧಗೊಳ್ಳಲಿದ್ದು, ಒಂದೇ ಬಾರಿಗೆ 250 ಪೂಜೆಗಳನ್ನು ಕುಟುಂಬ ಸಮೇತ ನಡೆಸಲು ಅನುವು ಮಾಡಿಕೊಡುವಂತಹ ನಾಲ್ಕು ಮಂಟಪ ನಿರ್ಮಾಣಗೊಳ್ಳಲಿದೆ. ಈ ಮೂಲಕ ದಿನವೊಂದಕ್ಕೆ 1000 ಪೂಜೆಗಳನ್ನು ನಡೆಸುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಅನ್ನಛತ್ರದ ನಿರ್ಮಾಣವೂ ಈ ಕಾಮಗಾರಿಯಲ್ಲಿ ಒಳಗೊಳ್ಳಲಿದ್ದು, ಒಂದೇ ಬಾರಿಗೆ 3500 ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸುವಂತಹ ಛತ್ರ ನಿರ್ಮಾಣಗೊಳ್ಳಲಿದೆ. ಮಕ್ಕಳು, ವಯೋವೃದ್ಧರು, ವಿಶೇಷ ಸಾಮರ್ಥ್ಯದವರಿಗೂ ಪ್ರತ್ಯೇಕ ಅನ್ನಛತ್ರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ದೇವಸ್ಥಾನದಿಂದ ಅಂಡರ್ ಪಾಸ್ ಮೂಲಕ ಈ ಅನ್ನಛತ್ರಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನೂ ಯೋಜನೆಯಲ್ಲಿ ಹಾಕಿಕೊಳ್ಳಲಾಗಿದೆ.
ಇನ್ನು ಈ ಯೋಜನೆಯಲ್ಲಿ ವಸತಿ ಗೃಹಗಳ ನಿರ್ಮಾಣವೂ ನಡೆಯಲಿದ್ದು, ದೇವಸ್ಥಾನದ ವತಿಯಿಂದ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯವನ್ನು ನಿರ್ಮಾಣಗೊಳ್ಳಲಿದೆ. ಕುಕ್ಕೆ ಸುಬ್ರಹ್ಮಣ್ಯ ನಾಗನಿಗೆ ಸಂಬಂಧಪಟ್ಟ ಕ್ಷೇತ್ರವಾಗಿರುವ ಕಾರಣ ವಿಷ ಜಂತುಗಳ ಕಡಿತಕ್ಕೊಳಗಾದವರ ಚಿಕಿತ್ಸೆಗಾಗಿ ವಿಶೇಷ ಚಿಕಿತ್ಸಾಲಯವನ್ನೂ ಈ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಜೋಡಿಸಲಾಗಿದೆ.
ಒಟ್ಟಾರೆಯಾಗಿ ಕುಕ್ಕೆ ಸುಬ್ರಹ್ಮಣ್ಯವನ್ನು ವಿಶ್ವವಿಖ್ಯಾತ ಕ್ಷೇತ್ರಗಳ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಅತೀ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ಈಗ ಅಭಿವೃದ್ಧಿ ಪರ್ವ ಕಾಣುವ ಭರವಸೆಯನ್ನು ಹೊಂದಿದ್ದು, ನಿರೀಕ್ಷೆ ಯಂತೇ ಎಲ್ಲವೂ ನಡೆದರೆ ಭಕ್ತರಿಗೆ ಅನುಕೂಲವಾಗಲಿದೆ.