ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಭೀಕರ ಹತ್ಯಾಕಾಂಡದ ಪಾತಕಿಗೆ ಬಿಡುಗಡೆ ಭಾಗ್ಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್‌, 05: ಮಂಗಳೂರಿನ ವಾಮಂಜೂರಿನಲ್ಲಿ 1994ರಲ್ಲಿ ನಾಲ್ವರನ್ನು ಹತ್ಯೆಗೈದಿದ್ದ ಪ್ರವೀಣ್‌ ಎಂಬಾತನಿಗೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಇದರಿಂದಾಗಿ ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ವಾಮಂಜೂರಿನ ಹತ್ಯಾಕಾಂಡದ ಪಾತಕಿ, ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲಿ ಸನ್ನಡತೆಯ ಕಾರಣಕ್ಕಾಗಿ ಜೈಲಿನಿಂದ ಬಿಡುಗಡೆಗೊಳ್ಳಲು ಸಜ್ಜಾಗಿದ್ದಾನೆ. ಈ ವಿಚಾರ ಇಡೀ ಮಂಗಳೂರನ್ನು ಧಿಗ್ಭ್ರಮೆಗೊಳಿಸಿದೆ.

ಹಣದ ಆಸೆಗಾಗಿ ನಾಲ್ವರು ಸಂಬಂಧಿಕರನ್ನು ಕೊಲೆ ಮಾಡಿದ್ದ ಟೈಲರ್ ಪ್ರವೀಣ್ ಕುಮಾರ್ ಯಾನೆ ಈಗ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಲಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲು ಅಧಿಕಾರಿಗಳು ಇವನನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಈ ಬಗ್ಗೆ ಪ್ರವೀಣ್ ಬಂಧುಗಳ ಅಭಿಪ್ರಾಯ ತಿಳಿಸಲು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಗೆ ಪತ್ರ ಬರೆದಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿಯಾಗಿರುವ ಪ್ರವೀಣ್ ಕುಮಾರ್ 1994ರ ಫೆಬ್ರವರಿ 23ರಂದು ಮಧ್ಯರಾತ್ರಿ ವಾಮಂಜೂರಿನಲ್ಲಿರುವ ತನ್ನ ಅತ್ತೆ ಅಪ್ಪಿ ಶೇರಿಗಾರ್ತಿ, ಅತ್ತೆ ಮಗ ಗೋವಿಂದ, ಅತ್ತೆ ಮಗಳು ಶಕುಂತಲಾ ಹಾಗೂ ಶಕುಂತಲಾ ಅವರ ಪುತ್ರಿ ದೀಪಿಕಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

 ಕ್ರೂರಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು ಹೇಗೆ?

ಕ್ರೂರಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು ಹೇಗೆ?

ಈ ಪ್ರಕರಣ ಕೆಳ‌ ಹಂತದ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೂ ತಲುಪಿತ್ತು. ಸುಪ್ರೀಂಕೋರ್ಟ್‌ ಕೊಲೆ ವಿಚಾರವಾಗಿ ಪ್ರವೀಣ್ ಕುಮಾರ್‌ಗೆ 2003ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆ ತೀರ್ಪಿನ ಬಗ್ಗೆ ಕ್ಷಮಾದಾನವನ್ನು ನೀಡಬೇಕೆಂದು ಪ್ರವೀಣ್ ಕುಮಾರ್ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ಹತ್ತು ವರ್ಷಗಳ‌ ಕಾಲ ರಾಷ್ಟ್ರಪತಿ ಭವನದಲ್ಲಿ ವಿಲೇವಾರಿ ಆಗದೇ ಉಳಿದಿತ್ತು.

ಇತ್ತೀಚೆಗೆ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರನ್ನು ಸುಪ್ರೀಂಕೋರ್ಟ್ ಮರಣದಂಡನೆಯಿಂದ ಪಾರು ಮಾಡಿದೆ. ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರವೀಣ್ ಕುಮಾರ್ ತನಗೂ ಮರಣದಂಡನೆ ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಮನವಿ ಸಲ್ಲಿಸಿದ್ದ. ಪ್ರವೀಣ್ ಕುಮಾರ್ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಅವರಿಗೆ ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಆದೇಶ ನೀಡಿತ್ತು.

 ಬಿಡುಗಡೆ ಪಟ್ಟಿಯಲ್ಲಿ ಪ್ರವೀಣ್‌ ಹೆಸರು

ಬಿಡುಗಡೆ ಪಟ್ಟಿಯಲ್ಲಿ ಪ್ರವೀಣ್‌ ಹೆಸರು

ಸ್ವಾತಂತ್ರೋತ್ಸವ ಅಮೃತಮಹೋತ್ಸವ ಸಂದರ್ಭದಲ್ಲಿ ರಾಜ್ಯದ ಜೈಲುಗಳಲ್ಲಿ ಅಕಾಲಿಕ ಕೈದಿಗಳ ಬಿಡುಗಡೆಗಾಗಿ ಸ್ಥಾಯಿ ಸಲಹಾ ಮಂಡಳಿ ಸಭೆಯ ಮುಂದೆ ವರದಿ ಮಂಡಿಸಿದ್ದರು. ಇದೀಗ ಜೀವಾವಧಿ ಶಿಕ್ಷೆಯನ್ನು ಕ್ಷಮಿಸಿ ಸನ್ನಡತೆಯ ಆಧಾರದಲ್ಲಿಅವಧಿ ಪೂರ್ವ ಬಿಡುಗಡೆಗೆ ನಿರ್ಧರಿಸಲಾಗಿದೆ. ಈ ಪಟ್ಟಿಯಲ್ಲಿ ಪ್ರವೀಣ್ ಹೆಸರು ಕೂಡ ಇದ್ದು, ಈ ಕುರಿತು ಪರಿಶೀಲನೆ ನಡೆಸಿದ್ದರು. ಅಪರಾಧಿಯ ಬಿಡುಗಡೆ ಬಗ್ಗೆ ಕುಟುಂಬಸ್ಥರ ಅಭಿಪ್ರಾಯವನ್ನು ಸಂಗ್ರಹಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಜುಲೈ 23ರಂದು ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಆದೇಶ ನೀಡಿತ್ತು.

 ಪ್ರವೀಣ್‌ ಬಿಡುಗಡೆಗೆ ಕುಟುಂಬಸ್ಥರ ಆಪೇಕ್ಷ

ಪ್ರವೀಣ್‌ ಬಿಡುಗಡೆಗೆ ಕುಟುಂಬಸ್ಥರ ಆಪೇಕ್ಷ

ಪ್ರವೀಣ್ ಕುಟುಂಬಸ್ಥರಿಗೆ ಈ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಅವರು ಆತಂಕಗೊಂಡಿದ್ದಾರೆ. ಅವನು ಜೈಲಿನಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಗೊಳ್ಳಬಾರದು. ಜೈಲು ಅಧಿಕಾರಿಗಳು ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಮಾತನಾಡಿದ ಪ್ರವೀಣ್ ಪತ್ನಿ ಅನುಸೂಯಾ, ನಾಲ್ವರನ್ನು ಕೊಲೆ ಮಾಡಿದ ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಅವರು ಜೈಲಿನಲ್ಲೇ ಇದ್ದು ಮಾಡಿದ ಕರ್ಮ ಅನುಭವಿಸಲಿ ಎಂದು ಅಸಮಾಧಾನ ಹೊರಹಾಕಿದರು.

ಇನ್ನು ಅವರ ಕುಟುಂಬಸ್ಥರೆಲ್ಲ ಒಮ್ಮತದಿಂದ ಈ ಬಗ್ಗೆ ಮಾತನಾಡಿ, ಅವನು ನಮ್ಮ ಪಾಲಿಗೆ ಅಂದೇ ಕೊನೆಯಾಗಿದ್ದಾನೆ. ಈಗ ನಮ್ಮ ಕುಟುಂಬ ನೆಮ್ಮದಿಯಲ್ಲಿದೆ. ಅದನ್ನು ಹಾಳು ಮಾಡುವುದು ಬೇಡ ಎಂದು ಅಸಮಾಧಾನವನ್ನು ಹೊರಹಾಕಿದರು.

 ಅತ್ತೆ ಮನೆಯಲ್ಲಿ ನಾಲ್ವರ ಬರ್ಬರ ಕೊಲೆ

ಅತ್ತೆ ಮನೆಯಲ್ಲಿ ನಾಲ್ವರ ಬರ್ಬರ ಕೊಲೆ

ಪ್ರವೀಣ್ ವೃತ್ತಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದು, ಆತನಿಗೆ ಪತ್ನಿ ಅನುಸೂಯ ಸಹಕಾರ ನೀಡುತ್ತಿದ್ದರು. 1994ರಲ್ಲಿ ಪ್ರವೀಣ್‌ ಒಂದಂಕಿ ಲಾಟರಿ ತೆಗೆದು ಅದರದ್ದೇ ಹುಚ್ಚು ಹಿಡಿಸಿಕೊಂಡಿದ್ದ. ಲಾಟರಿ ತೆಗೆಯಲು ಹಣ ಖಾಲಿಯಾದಾಗ ಕೊನೆಗೆ ತನ್ನ ಪತ್ನಿ ಮನೆಯವರ ಚಿನ್ನವನ್ನೇ ಅಡವಿಟ್ಟಿದ್ದ. 1994, ಫೆಬ್ರವರಿ 23ರ ರಾತ್ರಿ ಅತ್ತೆ ಮನೆಯಲ್ಲಿ ಊಟ ಮಾಡಿ ನಂತರ, ಅತ್ತೆ ಅಪ್ಪಿ ಶೇರಿಗಾರ್ತಿ, ಅತ್ತೆ ಮಗ ಗೋವಿಂದ, ಅತ್ತೆ ಮಗಳು ಶಕುಂತಲಾ, ಶಕುಂತಲಾ ಅವರ ಮಗಳು ದೀಪಿಕಾಗೆ ಮರಾಕಾಸ್ತ್ರದಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದ. ಇದೀಗ ಅವನಿಗೆ ಬಿಡುಗಡೆ ಭಾಗ್ಯ ಸಿಕ್ಕಿರುವುದು ಮಂಗಳೂರು ಜನರಲ್ಲಿ ಆತಂಕ ಮೂಡಿಸಿದೆ.

Recommended Video

Rohit Sharma ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಹೊಸ ನಾಯಕ | *Cricket | OneIndia Kannada

English summary
Karnataka government will release Praveen Kumar on the grounds of good conduct. Praveen Kumar who brutally murdered four members, including his aunt in 1994 at Vamanjoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X