ಸಿಡ್ನಿಯಲ್ಲಿ ಮೇ 13, 14ರಂದು 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
ಮಂಗಳೂರು, ಮೇ 09 : ಆಸ್ಟ್ರೆಲಿಯಾದ ಯುನೈಟೆಡ್ ಕನ್ನಡ ಸಂಘ ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಮೆಲ್ಬರ್ನ್‌ನ ಕಿಂಗ್‌ಸ್ಟನ್ ಆರ್ಟ್ ಸೆಂಟರ್ ಮತ್ತು ಸಿಡ್ನಿಯ ರಿಡೆ ಸಿವಿಕ್ ಹಾಲ್ ನಲ್ಲಿ ಮೇ 13 ಹಾಗೂ 14ರಂದು ನಡೆಯಲಿದೆ.
ಈ ಬಗ್ಗೆ ಮಂಗಳವಾರ (ಮೇ 09 ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಎಜುಕೇಷನ್ ಟ್ರಸ್ಟ್ ನ ಸಂಚಾಲಕ ಎಂ. ಕೆ ಮಂಜುನಾಥ್ ಸಾಗರ್, ಎರಡು ದಿನಗಳ ವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮ ಗೋಷ್ಠಿ, ಅನಿವಾಸಿ ಕನ್ನಡಿಗರ ಗೋಷ್ಠಿ, ಭರತನಾಟ್ಯ, ಜನಪದ ನೃತ್ಯ, ರಸಮಂಜರಿ ಹೀಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.
ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ವಿವರ ಹೀಗಿದೆ:
* ಮೇ 13ರಂದು ಶನಿವಾರ ಮಧ್ಯಾಹ್ನ 3.30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಮೆಲ್ಬರ್ನ್ ನಲ್ಲಿ ನಡೆಯಲಿದ್ದು, ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಸ್ಟ್ರೇಲಿಯಾದ ಮಾನವ ಸೇವೆ ಸಚಿವ ಆಲೆನ್ ಎಂ ಪಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
* ಮೇ 14ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಿಡ್ನಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ ರಮೇಶ್ ವಹಿಸಲಿದ್ದಾರೆ. ಖ್ಯಾತ ಸಂಗೀತ ಮತ್ತು ಜಾನಪದ ತಜ್ಞ ಡಾ. ಹಂಸಲೇಖ, ಡಾ. ಆರತಿ ಕೃಷ್ಣ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಪಿ ಸುವರ್ಣ ಹಾಗೂ ಪ್ರಭು ಎಸ್ ಸುವರ್ಣ ಬರೆದ ''ಗೊಂಚಲು ಕೃತಿ'' ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
ವಿಶೇಷವೆಂದರೆ 13ರಂದು ಈ ಸಮ್ಮೇಳನದಲ್ಲಿ ಮಂಡ್ಯ ರಮೇಶ್ ಮತ್ತು ನವೀನ್ ಡಿ ಪಡೀಲ್ ಅವರಿಂದ ನಗೆ ಹೊನಲು ಕಾರ್ಯಕ್ರಮ ನಡೆಯಲಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.