ಎತ್ತಿನಹೊಳೆಗೆ ವಿರೋಧ, ಮೇ 19ರಂದು ದಕ್ಷಿಣ ಕನ್ನಡ ಬಂದ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 28 : ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿ ಭಾಗದಲ್ಲಿ ಪ್ರತಿಭಟನೆ ಮುಂದುವರೆದಿದೆ. ಮೇ 19 ರಂದು ಸ್ವಯಂಘೋಷಿತ ಜಿಲ್ಲಾ ಬಂದ್ ನಡೆಸಲು ನೇತ್ರಾವತಿ ಸಂರಕ್ಷಣಾ ಸಮಿತಿ ನಿರ್ಧರಿಸಿದೆ.

ಬುಧವಾರ ಮಂಗಳೂರಿನ ಆರ್ಯ ಸಮಾಜ ಸಭಾಂಗಣದಲ್ಲಿ ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳು ಒಂದಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. [ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ : ಸಿದ್ದರಾಮಯ್ಯ]

yettinahole project

ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ, 'ನಾವು ಪಕ್ಷ, ಜಾತಿ, ಭೇದ ಬಾವ ಮರೆತು ಹೋರಾಟ ಮಾಡುತ್ತಿದ್ದೇವೆ. ಆದರೆ, ನಮ್ಮ ಹೋರಾಟದ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ಈ ಬಗ್ಗೆ ನಾವು ಹಸಿರು ನ್ಯಾಯ ಪೀಠಕ್ಕೆ ಅರ್ಜಿ ಹಾಕಿದ್ದೇವೆ. ಏ. 28ರಂದು ತೀರ್ಪು ಬರಲಿದೆ' ಎಂದರು. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]

'ಈ ಯೋಜನೆ ನಮ್ಮ ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಹೋರಾಟದ ಕಾವು ಹೆಚ್ಚಿಸುವುದು ಅನಿವಾರ್ಯವಿದೆ. ಹೋರಾಟವನ್ನು ತೀವ್ರಗೊಳಿಸಿ ಜಿಲ್ಲಾ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕು' ಎಂದು ವಿಜಯ ಕುಮಾರ್ ಶೆಟ್ಟಿ ಕರೆ ನೀಡಿದರು. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]

ಈಶ ವಿಠಲದಾಸ ಸ್ವಾಮೀಜಿಯವರು ಮಾತನಾಡಿ, 'ಹೋರಾಟದ ಬಿಸಿ ಮುಟ್ಟಬೇಕಾದರೆ ಹೆದ್ದಾರಿಗಳನ್ನು ಬಂದ್ ಮಾಡಬೇಕು. ಜಿಲ್ಲಾಧಿಕಾರಿ ಅವರ ಕಚೇರಿಗೆ ಮುತ್ತಿಗೆ ಹಾಕಿ ಅಲ್ಲಿ ಯಾವುದೇ ವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು' ಎಂದರು. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]

ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ 'ಯೋಜನೆಯಿಂದಾಗುವ ನಷ್ಟದ ಬಗ್ಗೆ ತಾಲೂಕುಗಳಿಗೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸಬೇಕು. ನೀರಿನ ಅಗತ್ಯದ ಬಗ್ಗೆ ಮನದಟ್ಟು ಮಾಡುವ ಕೆಲಸವಾಗಬೇಕು' ಎಂದು ಹೇಳಿದರು.

ರಾಜಶೇಖರಾನಂದ ಸ್ವಾಮೀಜಿ, ಫಾ.ವಿಲಿಯಂ, ಮಸೂದ್, ಮೇಘನಾಥ್ ಶೆಟ್ಟಿ, ಎಂ.ಜಿ.ಹೆಗ್ಡೆ, ಯೋಗೀಶ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮುಂತಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Netravati Samrakshana Samiti called for Dakshina Kannada bandh on May 19, 2016 to protest against Yettinahole drinking water project.
Please Wait while comments are loading...