ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನೆ ಹಾವಳಿ ಬಗ್ಗೆ ಪತ್ರ ಬರೆದ ಸುಳ್ಯ ಬಾಲಕಿಗೆ ಪ್ರಧಾನಿ ಕಚೇರಿ ಸ್ಪಂದನೆ

ಸುಳ್ಯದಲ್ಲಿ ಆನೆ ಹಾವಳಿ ಇದೆ. ಅದನ್ನು ಪರಿಹರಿಸಿ ಎಂದು ಪತ್ರ ಬರೆದ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ನಿಕಿತಾಗೆ ಪ್ರಧಾನಿ ಕಾರ್ಯಾಲಯದಿಂದ ಸ್ಪಂದನೆ ದೊರೆತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಜನರಿಂದ ಮಾಹಿತಿ ಪಡೆದಿದ್ದಾರೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 2: ಸುಳ್ಯದಲ್ಲಿ ಕಾಡಾನೆ ಹಾವಳಿ ಇರುವ ಬಗ್ಗೆ ಆತಂಕ ಹೇಳಿಕೊಂಡು, ಅದರ ತಡೆಗೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನಾಲ್ಕನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದಿದ್ದಳು. ಆ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ.

ಕಳೆದ ವರ್ಷದ ಮಳೆಗಾಲದ ವೇಳೆ ಆನೆಗಳ ಹಿಂಡು ಸುಳ್ಯ ನಗರದವರೆಗೆ ಬಂದಿದ್ದವು. ಆನೆಗಳ ಉಪಟಳದಿಂದ ಕೃಷಿಕರು ಭಾರೀ ನಷ್ಟ ಅನುಭವಿಸಿದ್ದರು. ಅಷ್ಟೇ ಅಲ್ಲ, ಎಷ್ಟೋ ಸಲ ಜನ ವಸತಿ ಪ್ರದೇಶದಲ್ಲಿ ಮಾರ್ಗ ಮಧ್ಯೆ ಆನೆಗಳು ಠಿಕಾಣಿ ಹೂಡಿಬಿಡುತ್ತಿದ್ದವು. ಆಗಂತೂ ದಾರಿಹೋಕರು ಜೀವಭಯದಲ್ಲಿ ಸಂಚರಿಸಬೇಕಾಗಿತ್ತು.[ಸುಳ್ಯದ ಸಂಪಾಜೆ ಅರಣ್ಯದಲ್ಲಿ ಇಪ್ಪತ್ತು ವರ್ಷದ ಗಂಡಾನೆ ಸಾವು]

Wild elephants go on rampage around Sullia, PMO response to 4th standard girl letter

ಜನರೇನೋ ಆನೆ ಓಡಿಸುವ ಪ್ರಯತ್ನ ಮುಂದುವರಿಸಿದರೂ ಶಾಶ್ವತ ಪರಿಹಾರ ಅಂತೇನೂ ಸಿಗಲಿಲ್ಲ. ಈಗಲೂ ಒಮ್ಮೊಮ್ಮೆ ಕಾಡಾನೆ ಹಿಂಡು ವಸತಿ ಪ್ರದೇಶಗಳಿಗೆ ನುಗ್ಗಿ, ಭೀತಿ ಹುಟ್ಟಿಸುತ್ತಿವೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ತವರೂರು ಮಂಡೆಕೋಲಿನಲ್ಲಿ ಕಾಣಿಸಿಕೊಂಡಿರುವ ಆನೆ ಹಾವಳಿ ಬಗ್ಗೆ ಶಾಲಾ ಬಾಲಕಿ ಪ್ರಧಾನಿಗೆ ಬರೆದ ಪತ್ರದಿಂದ ಈ ಸುದ್ದಿಗೆ ಮತ್ತಷ್ಟು ಮಹತ್ವ ಬಂದಿದೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಿತ್ತಿಲದ ನಾರಾಯಣ ಮೂರ್ತಿ ಅವರ ಮಗಳು ಎನ್.ಎಂ.ನಿಕಿತಾ ಪತ್ರ ಬರೆದ ಬಾಲಕಿ. ಪುತ್ತೂರು ತಾಲೂಕಿನ ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿರುವ ನಿಕಿತಾ ಪ್ರಧಾನಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರಕಿದೆ. ಆನೆ ಹಾವಳಿಯಿಂದ ತತ್ತರಿಸಿರುವ ಗ್ರಾಮದಲ್ಲಿ ಇದೀಗ ಚರ್ಚಾ ವಿಷಯವಾಗಿದೆ.[ಅತ್ತೂರು ಚರ್ಚಿನಲ್ಲಿ ಟವರ್ ಸಂಪರ್ಕ: ಫಲಿಸಿದ ಮೋದಿ ಪತ್ರ]

"ಆನೆಗಳಿಂದಾಗಿ ಭಯದ ನೆರಳಿನಲ್ಲಿಯೇ ಬದುಕುವ ಸ್ಥಿತಿ ಉಂಟಾಗಿದ್ದು, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದೂ ಕಷ್ಟವಾಗಿದೆ. ಪ್ರತಿದಿನ ಮಂಡೆಕೋಲಿನಿಂದ ಈಶ್ವರಮಂಗಲ ಸೇರಿದಂತೆ ವಿವಿಧೆಡೆ ವಿದ್ಯಾಭ್ಯಾಸಕ್ಕಾಗಿ ನೂರಾರು ಮಕ್ಕಳು ಬರುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮಂಡೆಕೋಲು ಹಾಗೂ ಇತರ ಪರಿಸರದಲ್ಲಿರುವ ಕಾಡಿನಿಂದ ನಾಡಿನತ್ತ ದಾಂಗುಡಿಯಿಡುವ ಕಾಡಾನೆಗಳ ದಂಡು ರಸ್ತೆಯ ಪಕ್ಕವೇ ಬಿಡಾರ ಹೂಡುತ್ತಿವೆ.

"ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಜೀವಭಯವನ್ನು ತಂದೊಡ್ಡಿವೆ. ಶಾಲೆಗೆ ಹೋಗಲು- ಹಿಂತಿರುಗಿ ಬರಲು ಭಯವಾಗುತ್ತಿದೆ" ಎಂದು ತನ್ನದೇ ಕೈ ಬರಹದಲ್ಲಿ ನಿಕಿತಾ ಕಳೆದ ಅಕ್ಟೋಬರ್ 10ಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಳು.

ಕ್ರಮ ಕೈಗೊಳ್ಳುವಂತೆ ಫೆಬ್ರವರಿ 21ಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪ್ರಧಾನಿ ಕಚೇರಿ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಸುಳ್ಯ ಎಸಿಎಫ್ ಜಗನ್ನಾಥ್ ನೇತೃತ್ವದ ತಂಡ ಮಂಡೆಕೋಲಿಗೆ ಭೇಟಿ ನೀಡಿದೆ. ನಿಕಿತಾಳನ್ನು ಮಾತನಾಡಿಸಿದ ಅಧಿಕಾರಿಗಳ ತಂಡ, ಊರಿನ ಜನತೆ ಜತೆಗೆ ಚರ್ಚೆ ನಡೆಸಿದೆ.

ಕಂದಕಗಳನ್ನು ನಿರ್ಮಿಸಿ ಮತ್ತು ಅಲ್ಲಲ್ಲಿ ಸೋಲಾರ್ ಬೇಲಿಗಳನ್ನು ನಿರ್ಮಾಣ ಮಾಡಿ ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ.

English summary
Wild elephants go on rampage around Sullia by destoying crops. Angry 4th std young girl Nikitha writes a letter to PM Modi and receives immediate action from PMO's office. Sullia villagers are now proud of Nikitha's brainy work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X