ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?

By: ಐಸಾಕ್ ರಿಚರ್ಡ್
Subscribe to Oneindia Kannada

ಮಂಗಳೂರು, ಜನವರಿ 24: ಕರಾವಳಿ ಕರ್ನಾಟಕದ ಭಾಗದಲ್ಲಿ ಜನಪ್ರಿಯವಾಗಿರುವ ಜಾನಪದ ಕ್ರೀಡೆ ಕಂಬಳ. ಕೋಣವನ್ನು ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಈ ಕಂಬಳ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಈ ಕಂಬಳ ರೈತಾಪಿ ವರ್ಗದವರು ಭತ್ತದ ಕೊಯಿಲಿನ ನಂತರ ಮನೋರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಕ್ರೀಡೆ. ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ ಆರಂಭವಾಗುವ ಈ ಜಾನಪದ ಕ್ರೀಡೆಯನ್ನು, ಮಾರ್ಚ್ ತಿಂಗಳವರೆಗೂ ಅವಳಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಲಾಗುತ್ತದೆ.

ವಿಶೇಷ ಏನಿದೆ ?

ವಿಶೇಷ ಏನಿದೆ ?

ಈ ಕಂಬಳದಲ್ಲಿ ಒಟ್ಟು ಎರಡು ವಿಧವಿದೆ, ಒಂಟಿ ಗೆದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ. ಅಂದಾಜು 100-200 ಮೀಟರ್ ಉದ್ದದ ಓಟದ ಕಣಗಳಲ್ಲಿ ಕಂಬಳ ಸಾಮಾನ್ಯವಾಗಿ ನಡೆಯುತ್ತದೆ. ಗದ್ದೆಯ ಮಣ್ಣಿಗೆ ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಲಾಗುತ್ತದೆ. ಕಂಬಳದ ಅಂಕಣವು ನೆಲ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ. ಈ ಭಾಗದ ಕೆಲವು ಜನಪ್ರಿಯ ಕಂಬಳ ಸ್ಪರ್ಧೆಗಳೆಂದರೆ, ಮೂಡಬಿದರೆ ಮತ್ತು ಪುತ್ತೂರಿನಲ್ಲಿ ನಡೆಯುವ ಕೋಟಿ-ಚೆನ್ನಯ, ವೇಣೂರು, ಶಿರ್ವದಲ್ಲಿ ನಡೆಯುವ ಸೂರ್ಯ-ಚಂದ್ರ, ಮಿಯಾರಿನಲ್ಲಿ ನಡೆಯುವ ಲವ-ಕುಶ, ಉಪ್ಪಿನಂಗಡಿ ಭಾಗದಲ್ಲಿ ನಡೆಯುವ ವಿಜಯ-ವಿಕ್ರಮ, ಐಕಳದಲ್ಲಿ ನಡೆಯುವ ಕಾಂತಬಾರೆ-ಬೂದವಾರೆ ಕಂಬಳ ಸ್ಪರ್ಧೆಗಳು.

ರೈತರ ಮನರಂಜನೆಗೊಂದು ಅವಕಾಶ

ರೈತರ ಮನರಂಜನೆಗೊಂದು ಅವಕಾಶ

ಇಂದು ಆಧುನಿಕ ನಗರದಲ್ಲಿರುವ ಮನುಷ್ಯನಿಗೆ ಮನರಂಜನೆಗೇನೂ ಕೊರತೆಯಿಲ್ಲ. ಸಮಯ ಸಿಗದೆ ಇರುವುದು ಬೇರೆ ವಿಷಯವಾದರೂ ನಮಗೆ ಬೇಕೆಂದಾಗ ಮನರಂಜನೆ ಪಡೆಯುವಷ್ಟು ಸಾಕಷ್ಟು ಅನುಕೂಲತೆಗಳನ್ನು ನಗರಗಳಲ್ಲಿ ನಾವು ಇಂದು ಕಾಣಬಹುದಾಗಿದೆ. ಸಿನೆಮಾ ಮಂದಿರಗಳಾಗಲಿ, ಕ್ರೀಡೆಗಳಾಗಲಿ, ಮನರಂಜನಾ ಉದ್ಯಾನಗಳಾಗಲಿ, ಸಂಗೀತ ಕಚೇರಿಗಳಾಗಲಿ, ವಿವಿಧ ಕಾರ್ಯಕ್ರಮಗಳಾಗಲಿ ಎಲ್ಲವೂ ದೊರೆಯುತ್ತವೆ.


ಆದರೆ ಇದೇ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಅವಕಾಶಗಳಿರುವುದು ತುಸು ಕಷ್ಟವೆ. ರೈತಾಪಿ ವರ್ಗವು ನಮ್ಮಂತೆ ವಾರಕ್ಕೆ ಐದು ದಿನಗಳಂತಲ್ಲದೆ ಎಲ್ಲ ದಿನವೂ ಹೆಚ್ಚು ಕಡಿಮೆ ದಿನವಿಡಿ ದುಡಿಯಲೇಬೇಕು. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಚಟುವಟಿಕೆಗಳು ಹಿಂದಿನ ಕಾಲದಿಂದಲೂ ರೂಪಗೊಂಡು ತಮ್ಮದೆ ಆದ ವೈಶಿಷ್ಟ್ಯತೆಗಳಿಂದ ಕೂಡಿದೆ. ಈ ರೀತಿಯ ಚಟುವಟಿಕೆಗಳು ಕೇವಲ ಮನರಂಜನೆಗಳಿಗೆ ಸೀಮಿತವಾಗಿರದೆ ಸಮಾಜಮುಖಿಯೂ ಸಹ ಆಗಿರುವುದು ವಿಶೇಷ. ಅಂತಹ ಕೆಲ ಗ್ರಾಮೀಣ ಉತ್ಸವಗಳು, ಕ್ರೀಡೆಗಳು ಇಂದಿಗೂ ಕೂಡ ನಮ್ಮ ನಾಡಿನ ಕೆಲ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.

ಇಂತಹ ಸಾಂಪ್ರದಾಯಿಕ ಉತ್ಸವಗಳನ್ನು ಮತ್ತಷ್ಟು ಪ್ರೋತ್ಸಾಹಿಸಿ ಉಳಿಸಿಕೊಂಡು ಹೋಗ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ಲೇಖನವು ಕರ್ನಾಟಕದ ಕರಾವಳಿ ಭಾಗದಲ್ಲಿ ಆಯೋಜಿಸಲ್ಪಡುವ ಕಂಬಳ ಜಾನಪದ ಕ್ರೀಡೆಯ ಕುರಿತು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಭಗವಂತನು ತಮ್ಮ ಜಾನುವಾರಗಳನ್ನು ರಕ್ಷಿಸುತ್ತಿರುವುದರ ಗೌರವಾರ್ಥವಾಗಿಯೂ ಈ ಕಂಬಳ ಉತ್ಸವವನ್ನು ಕೆಲ ಗ್ರಾಮಗಳಲ್ಲಿ ಆಚರಿಸಲಾಗುತ್ತದೆ.

ಭರ್ಜರಿ ಕಂಬಳ

ಭರ್ಜರಿ ಕಂಬಳ

ಸಾಮಾನ್ಯವಾಗಿ ಕಂಬಳವು ಬಿಡುವಾದ ಅಥವಾ ಖಾಲಿಬಿದ್ದ ಗದ್ದೆಗಳಲ್ಲಿ ನಡೆಯುತ್ತದೆ. ಆದರೆ ಇತ್ತೀಚೆಗೆ ಇದಕ್ಕಾಗಿಯೇ ಪ್ರತ್ಯೇಕವಾದ ಕಣಗಳನ್ನು ನಿರ್ಮಿಸಲಾಗಿದೆ.

ಕಂಬಳದ ಕಣವು ನೆಲ ಮಟ್ಟಕ್ಕಿಂತ ಕೆಲವು ಆಡಿಗಳಷ್ಟು ಆಳದಲ್ಲಿ ಇರುತ್ತದೆ. ಕಣದ ಒಂದು ಕೊನೆಯಲ್ಲಿ ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ಇರುತ್ತದೆ. ಈ ಜಾಗದಲ್ಲಿ ಮೇಲೆ ಮಾವಿನ ಎಲೆಗಳ ತೋರಣವನ್ನು ಕಟ್ಟಲಾಗಿರುತ್ತದೆ ಹಾಗೂ ಓಟದ ಆರಂಭದ ಗೆರೆಯನ್ನು ಸೂಚಿಸುತ್ತದೆ. ಕಣದ ಮತ್ತೊಂದು ಇದೇ ರೀತಿಯ ಮಾವಿನ ತೋರಣವಿದ್ದು ಇದು ಮುಕ್ತಾಯದ ಗೆರೆಯನ್ನು ಸೂಚಿಸುತ್ತದೆ. ಮುಕ್ತಾಯದ ಗೆರೆಯ ಕೊಂಚ ಹಿಂದೆ ಏರಿಯೊಂದನ್ನು ನಿರ್ಮಿಸಲಾಗಿರುತ್ತದೆ. ಇದನ್ನು ಮಂಜೊಟ್ಟಿ ಎಂದು ಕರೆಯಲಾಗುತ್ತದೆ. ಪ್ರಾರಂಭದಿಂದ ವೇಗವಾಗಿ ಓಡಿಬರುವ ಕೋಣಗಳು ಈ ಮಂಜೊಟ್ಟಿಯನ್ನು ಏರುತ್ತ ವೇಗವನ್ನು ಕಳೆದುಕೊಂಡು ನಿಧಾನವಾಗಿ ನಿಲ್ಲುತ್ತವೆ.

ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ:

ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ:

ಇಂದಿನ ಕಂಬಳಗಳಲ್ಲಿ ಕೋಣಗಳು ಮಂಜೊಟ್ಟಿಯನ್ನು ಏರಿದ ಮೇಲೆ ಅವುಗಳಿಗೆ ಹೊಡೆಯಬಾರದೆನ್ನುವ ನಿಯಮವೂ ಇದೆ.

ಕೋಣಗಳನ್ನು ವೇಗವಾಗಿ ಓಡಿಸುವ ಉದ್ದೇಶದಿಂದ ನಾಗರ ಬೆತ್ತಗಳಿಂದ ಅವುಗಳಿಗೆ ಹೊಡೆಯುವುದು ಸಾಮಾನ್ಯ. ಈ ಕಾರಣಕ್ಕಾಗಿ ಕಂಬಳವನ್ನು ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ ಹಾಗೂ ಈ ಕ್ರೀಡೆಯನ್ನು ನಿಷೇಧಿಸಬೇಕೆನ್ನುವ ಕೂಗು ಕೇಳಿ ಬಂದದ್ದೂ ಇದೆ. ಆದರೆ ಏಟು ಹೊಡೆದರೂ ಸ್ಪರ್ಧೆಯ ಕೊನೆಗೊಂಡ ನಂತರ ಅವುಗಳನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತದೆ ಎಂಬ ಯಜಮಾನರುಗಳ ಹೇಳಿಕೆಯು ಕಂಬಳವು ಇನ್ನು ಚಾಲ್ತಿಯಲ್ಲಿರುವುದಕ್ಕೆ ಕಾರಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kambala is a traditional sports of farmers, celebrated in the coastal district of Karnataka after the harvesting of paddy.
Please Wait while comments are loading...