ಆತ್ಮಹತ್ಯೆಯೋ ಕೊಲೆಯೋ: ಕಾವ್ಯಾ ಪೋಷಕರ ಆರೋಪ, ಆಳ್ವ ಪ್ರತಿಕ್ರಿಯೆ

By: ಐಸಾಕ್ ರಿಚರ್ಡ್
Subscribe to Oneindia Kannada

ಮಂಗಳೂರು, ಜುಲೈ 29: ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಪ್ರಕರಣ ರಾಜ್ಯಾದ್ಯಾಂತ ಸುದ್ದಿ ಮಾಡುತ್ತಿದೆ. ಈ ಮಧ್ಯೆ ಪೋಷಕರು ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವ ಪ್ರತಿಕ್ರಿಯಿಸಿದ್ದಾರೆ.

"ಕಾವ್ಯಾ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ. ಆಕೆಯನ್ನು ಕೊಲೆ ಮಾಡಿದ್ದಾರೆ" ಎಂದು ಆಕೆಯ ಪೋಷಕರು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಳ್ವ, "ಇದನ್ನು ನಾನು ಖಂಡಿತಾ ಒಪ್ಪುವುದಿಲ್ಲ. ಇಂತಹ ಚರ್ಚೆಗಳು ಸತ್ಯಕ್ಕೆ ದೂರವಾದ್ದು. ಆಕೆಯದ್ದು ಖಂಡಿತಾ ಕೊಲೆಯಲ್ಲ ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ" ಎಂದಿದ್ದಾರೆ.

ಆಳ್ವಾಸ್ ಕಾಲೇಜ್ ವಿದ್ಯಾರ್ಥಿನಿ ನಿಗೂಢ ಸಾವಿನ ಸುತ್ತ 'ಅನುಮಾನ'ದ ಹುತ್ತ

ಕಾವ್ಯಾಳ ಪೋಷಕರ ಮನೆ ಸಂಸ್ಥೆಯಿಂದ ಕೇವಲ ಅರ್ಧ ತಾಸು ದೂರದ ಕಟೀಲು ಎಂಬಲ್ಲಿದೆ. ಪೋಷಕರು ಬರುವ ಮುಂಚೆ ಮಗಳ ಶವ ಇಳಿಸಿದ್ದು ಯಾಕೆ ಎಂದು ಆಳ್ವರಲ್ಲಿ ಕೇಳಲಾಯಿತು.

"ಆಕೆ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅಲ್ಲಿ ನೂರಾರು ವಿದ್ಯಾರ್ಥಿಗಳು ಸೇರಿದ್ದರು. ತಕ್ಷಣ ಪೋಷಕರಿಗೆ ತಿಳಿಸಲಾಗಿತ್ತು. ಪರೀಕ್ಷಾ ಸಮಯವಾಗಿರುವುದರಿಂದ ಮಕ್ಕಳಿಗೆ ಮಾನಸಿಕವಾಗಿ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಶವ ಇಳಿಸಿದ್ದಾರೆ. ಮೃತದೇಹವನ್ನು ಆಕೆಯ ಸಹಪಾಠಿಗಳೇ ಇಳಿಸಿ ನಂತರ ಸಂಸ್ಥೆಯ ಆಸ್ಪತ್ರೆಗೆ ಸೇರಿಸಿದ್ದಾರೆ" ಎಂದರು ಆಳ್ವ.

ಆ ನಂತರ ಆಕೆ ಮೃತಪಟ್ಟಿದ್ದಾಳೆ ಎಂದು ಅಧಿಕೃತವಾದ ನಂತರ ಶವಾಗಾರಕ್ಕೆ ಸಾಗಿಸಲಾಗಿದ್ದು, ಅಷ್ಟೊತ್ತಿಗೆ ಪೋಷಕರು ಅಲ್ಲಿಗೆ ತಲುಪಿದ್ದಾರೆ ಎಂದು ಆಳ್ವ ಹೇಳಿದರು.

ಬೆಳಗಿನ ಜಾವ ತರಬೇತಿಗೆ ಕರೆದಿದ್ದು ಯಾಕೆ?

ಬೆಳಗಿನ ಜಾವ ತರಬೇತಿಗೆ ಕರೆದಿದ್ದು ಯಾಕೆ?

ಕಾವ್ಯಾ ಜುಲೈ 19ರಂದು ಸಂಜೆ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದು, ನಾನು ಇಲ್ಲಿ ಸಂತಸದಿಂದ ಇದ್ದೇನೆ. ನಾಳೆ ಬೆಳಗಿನ ಜಾವ 4.15ರ ಹೊತ್ತಿಗೆ ತರಬೇತಿ ಇದ್ದು, ಬೆಳಗ್ಗೆ ಎಚ್ಚರವಾಗುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾಳೆ.

ಆದರೆ ಕಾವ್ಯಾಳನ್ನು ಏಕೆ ಬೆಳಗಿನ ಜಾವ ಕರೆದಿದ್ದಾರೆಂದು ಆಕೆ ಪೋಷಕರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಳ್ವ, ನಮ್ಮ ಸಂಸ್ಥೆಯಲ್ಲಿ ಅಷ್ಟು ಬೆಳಗಿನ ಜಾವ ಯಾವುದೇ ಅಭ್ಯಾಸ ಇರುವುದಿಲ್ಲ. ಅವಳು ತಪ್ಪಿ ಬೆಳಗ್ಗೆ ಎಂದು ಹೇಳಿರಬೇಕು. ಆಕೆ 20ರಂದು ಬೆಳಗ್ಗೆ 6 ಗಂಟೆಗೆ ಅಭ್ಯಾಸ ಮಾಡಿದಾಗಿನಿಂದ ಅಂದು ಮಧ್ಯಾಹ್ನ 3.45ರವರೆಗಿನ ಸಿಸಿಟಿವಿ ದೃಶ್ಯಾವಳಿಗಳಿವೆ. 3.45ಕ್ಕೆ ಹಾಸ್ಟೆಲ್ ಹೋದವಳು ಹೆಣವಾಗಿ ಪತ್ತೆಯಾಗಿದ್ದಾಳೆ ಎಂದಿದ್ದಾರೆ ಆಳ್ವ.

ಕೇವಲ ಅರ್ಧ ಅಂಕಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ?

ಕೇವಲ ಅರ್ಧ ಅಂಕಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ?

ಆಳ್ವ: ನನಗೆ ಗೊತ್ತಿಲ್ಲ. ಯಾಕಂದ್ರೆ ಒಬ್ಬರು ಕ್ರೀಡಾ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಅವರು ಅನ್ ಫಿಟ್ ಫಾರ್ ಸ್ಪೋರ್ಟ್ಸ್. ಹೀಗಾಗಿ ನನಗೆ ಅಚ್ಚರಿಯಾಗ್ತಾ ಇದೆ. ಯಾಕೆ ಆಕೆ ಈ ನಿರ್ಧಾರಕ್ಕೆ ಬಂದಿದ್ದಾಳೆ. ನನಗೂ ಅಚ್ಚರಿ ಅಷ್ಟೇ. ಕ್ರೀಡೆ ಇಷ್ಟ ಇಲ್ಲ ಅಂತಂದ್ರೆ ನಾವು ಆಕೆಯನ್ನು ಕಳಿಸಿಕೊಡ್ತಾ ಇದ್ವಿ.

ಸಂಪೂರ್ಣ ತನಿಖೆ ಆಗಲಿ

ಸಂಪೂರ್ಣ ತನಿಖೆ ಆಗಲಿ

"ನಮ್ಮ ಮಗಳನ್ನು ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಒತ್ತಾಯ ಮಾಡಿ ಸೇರಿಸಿದ್ದರು. ಆಕೆಯ ಸಾವಿನ ವಿಷಯವನ್ನು ಆತನೇ ತಿಳಿಸಿದ್ದು. ಆ ನಂತರ ಆತ ನಮಗೆ ಸಿಕ್ಕಿಲ್ಲ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಈ ಬಗ್ಗೆ ಪೊಲೀಸ್ ಆಯುಕ್ತರಿಗೂ ಪತ್ರ ಬರೆದಿದ್ದೇನೆ" ಎಂದು ಒನ್ ಇಂಡಿಯಾಕ್ಕೆ ಪ್ರತಿಕ್ರಿಯಿಸಿರುವ ತಂದೆ ಲೊಕೇಶ್ ತಿಳಿಸಿದ್ದಾರೆ.

ಕೊನೆ ಕ್ಷಣದ ಸಿಸಿಟಿವಿ ದೃಶ್ಯಾವಳಿ ಪತ್ತೆ

ಕೊನೆ ಕ್ಷಣದ ಸಿಸಿಟಿವಿ ದೃಶ್ಯಾವಳಿ ಪತ್ತೆ

ಜುಲೈ 20ರಂದು ಬೆಳಗ್ಗೆ 6 ಗಂಟೆಗೆ 7.30ರವರೆಗೆ ಕಾವ್ಯಾ ಅಭ್ಯಾಸ ನಡೆಸಿ, ಕಾಲೇಜು ಬಸ್ ಮೂಲಕ ತರಗತಿಗೆ ತೆರಳಿದ್ದಾಳೆ. ಮತ್ತೆ ಪುನಃ ಮಧ್ಯಾಹ್ನ 3.30ಕ್ಕೆ ತರಗತಿಯಿಂದ ಕಾಲೇಜು ಬಸ್ ಮೂಲಕ ಹಾಸ್ಟೆಲ್ ಗೆ ತೆರಳಿರುವ ವಿಡಿಯೋ ದೃಶ್ಯಾವಳಿ ಲಭ್ಯವಾಗಿದೆ. ಆ ನಂತರ ಆಕೆ ಹಾಸ್ಟೆಲ್ ರೂಮ್ ನಿಂದ ಹೊರಬಂದಿಲ್ಲ. ಸಂಜೆ ಹೊತ್ತಿಗೆ ಸಹಪಾಠಿಗಳು ರೂಮ್ ಗೆ ತೆರಳಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ.

ಸಂಜೆ ಅಭ್ಯಾಸಕ್ಕೆ ಬರಲಿಲ್ಲ

ಸಂಜೆ ಅಭ್ಯಾಸಕ್ಕೆ ಬರಲಿಲ್ಲ

ಆರೋಪ ಹೊತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಪ್ರತಿಕ್ರಿಯಿಸಿ, ಕಾವ್ಯಾ ಪೂಜಾರಿ ಒಳ್ಳೆಯ ಕ್ರೀಡಾ ವಿದ್ಯಾರ್ಥಿನಿಯಾಗಿದ್ದಳು. ಬೆಳಗ್ಗೆ 6 ಗಂಟೆಗೆ ಆಕೆ ಅಭ್ಯಾಸಕ್ಕೆ ಬಂದವಳು 8 ಗಂಟೆಯವರೆಗೆ ಇದ್ದಳು. ಸಂಜೆ 4.15ಕ್ಕೆ ಮತ್ತೆ ಅಭ್ಯಾಸ ಇತ್ತು. ಆದರೆ ಆಕೆ ಬಂದಿರಲಿಲ್ಲ.

ಆಕೆಗೆ ಸ್ಪೆಷಲ್ ಕ್ಲಾಸ್ ಇದೆ. ಹೀಗಾಗಿ ನಾನು ಅಭ್ಯಾಸಕ್ಕೆ ಬರೋವಾಗ ತಡವಾಗಬಹುದು ಅಂತ ಆಕೆಯ ಸಹಪಾಠಿಗಳು ಹೇಳಿದ್ದರು. ಆ ದಿನ ಆಕೆ ಅಭ್ಯಾಸಕ್ಕೆ ಬಂದಿಲ್ಲ. ಬಳಿಕ ಆಕೆಯ ಸಹಪಾಠಿಗಳು 7.20ಕ್ಕೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ ಅಂತ ಅವರು ಹೇಳಿದ್ದಾರೆ.

ದಿನಚರಿ ಕಾಣೆಯಾಗಿದೆ

ದಿನಚರಿ ಕಾಣೆಯಾಗಿದೆ

ಈ ಮಧ್ಯೆ ಕಾವ್ಯಾಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಲ್ಲಿ ಹೇಳುವ ಪ್ರಕಾರ, ಕಾವ್ಯಾಳಿಗೆ ಪ್ರತಿದಿನ ದಿನಚರಿ ಬರೆಯುವ ಹವ್ಯಾಸವಿತ್ತು. ಆಕೆ ಪ್ರತಿಯೊಂದು ಅಂಶಗಳನ್ನು ಅದರಲ್ಲಿ ದಾಖಲಿಸುತ್ತಿದ್ದಳು. ಆದರೆ ಆಕೆ ಸಾವಿನ ನಂತರ ಡೈರಿ ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ.

ಎಸಿಪಿ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಶುಕ್ರವಾರ ಸಂಜೆ ವೇಳೆಗೆ ಕಾಲೇಜಿಗೆ ಭೇಟಿ ನೀಡಿದ ಪೊಲೀಸರ ತಂಡ ಆಕೆಯ ಸಹಪಾಠಿಗಳನ್ನು ವಿಚಾರಣೆ ನಡೆಸಿದ್ದಾರೆ. ಶನಿವಾರ ಕೂಡಾ ತನಿಖೆ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ. "ನನ್ನ ಮೇಲೆ ಇರುವ ಎಲ್ಲ ಆರೋಪಗಳು ಸುಳ್ಳು. ಪೊಲೀಸ್ ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ" ಎಂದಿದ್ದಾರೆ ಆಳ್ವ.

ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ

ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ

ಇನ್ನು ವಿದ್ಯಾರ್ಥಿನಿ ಸಾವಿನ ನ್ಯಾಯಕ್ಕಾಗಿ ಇದೀಗ ಪ್ರತಿಭಟನೆಗಳು ಆರಂಭಗೊಂಡಿವೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರಿನ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ಮೋಂಬತ್ತಿ ಉರಿಸಿ ಮೌನ ಪ್ರತಿಭಟನೆ ನಡೆಸಿತು. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ, ಸಾವಿನ ತನಿಖೆಯನ್ನು ಸರಿಯಾಗಿ ನಡೆಸಬೇಕೆಂದು ಒತ್ತಾಯಿಸಿದವು.

ಕಾವ್ಯಾ ಸಾವಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್ ಕೈವಾಡ ಇರುವ ಆರೋಪ ಕೇಳಿಬಂದಿರುವುದರಿಂದ ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದವು. ಇನ್ನು ಕಾವ್ಯಾ ನಿಗೂಢ ಸಾವಿನ ತನಿಖೆಯನ್ನು ಸೂಕ್ತವಾಗಿ ನಡೆಸಬೇಕೆಂದು ಪಿಎಫ್ ಐ ಕಾರ್ಯಕರ್ತರು ಮೂಡುಬಿದ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಬಹರೈನ್ ನಲ್ಲೂ ಪ್ರತಿಭಟನೆ ನಡೆದಿದ್ದು, ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಿಫಾ ಘಟಕ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Death of student Kavya Poojary of Alvas School leaves behind unsolved questions. What has Mohan Alva the founder of Alvas Institutions has to say about the mysterious death of Kavya. Oneindia Kannada Interview.
Please Wait while comments are loading...