ಖಾದರ್ ಸಾಹೇಬ್ರೆ, ನಿಮ್ಮೂರಿನ ರಸ್ತೆ ಆರೋಗ್ಯ ಸರಿಪಡಿಸಿ

By: ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
Subscribe to Oneindia Kannada

ನಮ್ಮ ಕರ್ನಾಟಕ ಸರಕಾರದ ಸಚಿವ ಯು ಟಿ ಖಾದರ್ ಅವರನ್ನು ಜನನಾಯಕ, ಅಭಿವೃದ್ಧಿ ವೀರ ಎಂಬ ಅನೇಕ ಬಿರುದುಗಳಿಂದ ಅವರ ಬೆಂಬಲಿಗರು ಕೊಂಡಾಡುತ್ತಾರೆ.

ಸರಕಾರದ ಅತ್ಯಂತ ಕ್ರಿಯಾಶೀಲ ಸಚಿವ ಎಂಬ ಖ್ಯಾತಿ ಹೊಂದಿರುವ ಸಚಿವರು ತಮ್ಮ ತವರು ಕ್ಷೇತ್ರದ ಬಗ್ಗೆ ಹೊಂದಿರುವ ನಿರ್ಲಕ್ಷ್ಯ ಭಾವನೆಯ ಬಗ್ಗೆ ಬೆಳಕು ಚೆಲ್ಲುವ ವರದಿ ಇದು.

ಮಂಗಳೂರು ವಿಶ್ವ ವಿದ್ಯಾನಿಲಯದ ಆಡಳಿತ ಭವನಕ್ಕೆ ಸಾಗುವ ರಸ್ತೆಯಿಂದ ಬಲಕ್ಕೆ , ಸುಮಾರು ಒಂದೂವರೆ ಕಿ.ಮೀ ಉದ್ದದ ರಸ್ತೆಯಲ್ಲಿ ಸಾಗಿದರೆ ಸಿಗುವ ಊರು ಕೊಣಾಜೆಯ ಪುರುಷಕೋಡಿ ಪ್ರದೇಶ . ಈ ಪ್ರದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕುಡುಬಿ ಜನಾಂಗದವರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಸುಮಾರು 500ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಈ ಪ್ರದೇಶಕ್ಕೆ ಬರಲು ಸರಿಯಾದ ರಸ್ತೆಯಿಲ್ಲ, ಇದೇ ಈ ಗ್ರಾಮದ ದೊಡ್ಡ ಸಮಸ್ಯೆ. (ಫೆ6ರಂದು ರಾಷ್ಟ್ರೀಯ ಬಂಟ ಮಹಾಸಮ್ಮೇಳನ)

very bad road condition in Konaje, Purushakodi in Mangaluru outskirt

ಈ ಭಾಗದಲ್ಲಿ ಲಯನ್ಸ್ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಈ ಹಿಂದೆ ಮುಕ್ತಿ ಭೂಮಿಯನ್ನು ನಿರ್ಮಿಸಲಾಗಿತ್ತು. ಕೊಣಾಜೆ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತಿಮಕಾರ್ಯವನ್ನು ಇದೇ ಸ್ಥಳದಲ್ಲಿ ನೆರವೇರಿಸಲಾಗುತ್ತದೆ.

ಆದರೆ ಇಲ್ಲಿಗೆ ಮೃತದೇಹವ ಹೊತ್ತು ಬರುವ ವಾಹನಗಳು ಹಾಗೂ ಸಂಬಂಧಿಗಳ ವಾಹನ ಸವಾರರು ಪಡುವ ಪಾಡಂತೂ ದೇವರಿಗೇ ಪ್ರೀತಿ . ಸುಮಾರು ಹದಿನೈದು ವರುಷಗಳ ಹಿಂದೆ ಧನಂಜಯ ಕುಮಾರ್ ಸಂಸದರಾಗಿದ್ದಾಗ ಡಾಂಬರೀಕರಣಗೊಂಡಿದ್ದ ಈ ರಸ್ತೆಯ ಡಾಂಬರು ಪೂರ್ತಿ ಕಿತ್ತು ಹೋಗಿ ಈ ರಸ್ತೆಯ ಪ್ರಯಾಣವಂತೂ ಸಂಪೂರ್ಣ ನರಕ ಸದೃಶ.

ಇನ್ನು ಈ ಊರಿನಲ್ಲಿ ಯಾರಾದರು ಕಾಯಿಲೆಗೆ ಬಿದ್ದರೆ ಕನಿಷ್ಠ ಪಕ್ಷ ಅಂಬುಲೆನ್ಸ್ ಇಳಿಯದ ಪರಿಸ್ಥಿತಿ ಇದೆ. ಆಟೋ ರಿಕ್ಷಾದವರು ಇಲ್ಲಿಗೆ ಬರಲು ನಿರಾಕರಿಸುತ್ತಾರೆ ಯಾಕೆಂದರೆ ಹದಗೆಟ್ಟಿರುವ ರಸ್ತೆಯಿಂದ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು

ಈ ರಸ್ತೆಯು ಅಷ್ಟರ ಮಟ್ಟಿಗೆ ಅಪಾಯಕಾರಿಯೂ ಆಗಿದೆ. ಕೃಷಿಯನ್ನೇ ನೆಚ್ಚಿರುವ ಅತ್ಯಂತ ಬಡ ಕೃಷಿಕರಿರುವ ಈ ಪ್ರದೇಶದಲ್ಲಿ ರೈತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ವಾಹನಗಳು ಸಿಗುತ್ತಿಲ್ಲ ಯಾಕೆಂದರೆ ರಸ್ತೆಯ ಕಾರಣ ನೀಡಿ ಬಾಡಿಗೆ ವಾಹನ ಚಾಲಕರು ಬರಲು ನಿರಾಕರಿಸುತ್ತಾರೆ.

ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ನೀಡಲಾದ ಮನವಿಗೆ ಸ್ಪಂದಿಸಿ ಅವರು ಬಿಡುಗಡೆ ಮಾಡಿದ ನಾಲ್ಕು ಲಕ್ಷ ರೂಪಾಯಿ ಅನುದಾನದಲ್ಲಿ ಸ್ವಲ್ಪ ಭಾಗಕ್ಕೆ ಕಾಂಕ್ರೀಟು ಹಾಕಲಾಗಿದೆ.

ಆದರೆ ಸಂಸದರಿಗಿಂತ ಜಾಸ್ತಿ ಕಾಳಜಿ ಹೊಂದಿರಬೇಕಾಗಿದ್ದ ಶಾಸಕ ಹಾಗೂ ಆರೋಗ್ಯ ಸಚಿವರಾಗಿರುವ ಖಾದರ್ ಅವರಿಗೆ, ಗ್ರಾಮದ ಹಿರಿಯರಾದ ನರ್ಸುಗೌಡರ ನೇತೃತ್ವದಲ್ಲಿ ಸತತ ಆರು ಬಾರಿ ನೀಡಲಾದ ಮನವಿಗೆ ಒಂದು ಬಾರಿಯೂ ಸ್ಪಂದಿಸಿಲ್ಲ ಅನ್ನುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ. (ಪುತ್ತೂರಿನಲ್ಲಿ ಫೆ6ಕ್ಕೆ ಕುಮ್ಕಿ ರೈತರ ಸಮಾವೇಶ)

very bad road condition in Konaje, Purushakodi in Mangaluru outskirt

ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದ ಖಾದರ್ ಸಾಹೇಬ್ರು ಅವರು ಈ ಭಾಗದ ಜನ ಕೇಳಿದಾಗಲೆಲ್ಲ, ರಸ್ತೆಯನ್ನು ಟೇಪ್ ಹಿಡಿಸಿ ಅಳತೆ ಮಾಡಿಸಿ ,ಶೀಘ್ರದಲ್ಲಿ ರಸ್ತೆ ನಿರ್ಮಾಣ ಆಗುತ್ತೆ ಎಂದು ಹೇಳಿ ಹೋಗಿ ಎರಡು ವರ್ಷ ಕಳೆಯಿತು.

ಇಂತಹ ಆಶ್ವಾಸನೆಗಳಿಂದ ರೋಸಿ ಹೋಗಿ, ಪುರುಷಕೋಡಿ ಪ್ರದೇಶದ ಜನತೆ ಫೆಬ್ರವರಿ ಎಂಟರಂದು ಪ್ರತಿಭಟನೆ ನಡೆಸಲಿದ್ದಾರೆ. ಅದೇ ರೀತಿ ತಮ್ಮ ಸಮಸ್ಯೆಗೆ ಸ್ಪಂದಿಸುವವರೆಗೂ ಈ ಕ್ಷೇತ್ರದ ಜನತೆ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.

ಇನ್ನಾದರೂ ಆರೋಗ್ಯ ಸಚಿವರು ಈ ಪ್ರದೇಶದ ಸಮಸ್ಯೆಗೆ ಸ್ಪಂದಿಸುವ ಮನಸ್ಸು ಮಾಡಿಯಾರೇ? ಭೂತ ಕೋಲ, ಜಾತ್ರೆಗಳಿಗೆ ಹೋಗಿ ಓಲೈಕೆ ಮಾಡಿದ್ದು ಸಾಕು ಸಚಿವರೇ, ಅಭಿವೃದ್ಧಿಯ ಕಡೆಗೆ ಗಮನ ಕೊಡಿ ಎನ್ನುವುದು ಪ್ರಜ್ಞಾವಂತರ ವಿನಂತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Very bad road condition in Konaje, Purushakodi in Mangaluru (Karnataka) outskirt. A request from localite to local MLA and State Health Minister U T Khader to look into this matter.
Please Wait while comments are loading...