ಇದು ಕಂಬಳದ ಅನಭಿಷಕ್ತ ದೊರೆಯ ಇಂಟೆರೆಸ್ಟಿಂಗ್ ಕಥೆ..!

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಜನವರಿ 26: ಇಲ್ಲಿವರೆಗೆ ಅದೆಷ್ಟೋ ಕಂಬಳಗಳು ನಡೆದು ಹೋಗಿವೆ. ಲೆಕ್ಕವಿಲ್ಲದಷ್ಟು ಕೋಣಗಳು ಕೆಸರಿಗಿಳಿದು ತಮ್ಮ ಓಟ ಮುಗಿಸಿ, ಏರು ಹತ್ತಿ ಹೋಗಿವೆ. ಆದರೆ ಕೆಸರಿನಲ್ಲೂ ತನ್ನ ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋದ ಕೀರ್ತಿ ಅಂತ ಇದ್ದರೆ ಅದು 'ಕೋಣ ನಾಗರಾಜ'ನದ್ದು.

ಕರಾವಳಿಯ ಕಂಬಳ ಪ್ರೇಮಿಗಳಿಗೆ ಇವತ್ತಿಗೂ ಕಂಬಳ ಎಂದರೆ ಥಟ್ಟನೆ ನೆನಪಾಗುವುದು ' ಕೋಣ ನಾಗರಾಜ'. ಕಂಬಳದ ಅನಭಿಷಕ್ತ ನಾಗರಾಜನನ್ನು ಕಂಬಳಾಸಕ್ತರು, ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ತನ್ನನ್ನು ಸಾಕಿದ ಒಡೆಯನಿಗೆ ಬದ್ದನಾಗಿದ್ದುಕೊಂಡು ಬದುಕಿದ ಈ ನಾಗರಾಜ, ತನ್ನ ಒಡೆಯನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ತಂದು ಕೊಟ್ಟ. ಅಲ್ಲದೇ ತನ್ನ ಜೀವಿತಾವಧಿಯಲ್ಲಿ ಶಾಶ್ವತ ವರ್ಚಸ್ಸೊಂದನ್ನು ಉಳಿಸಿ ಹೋದ. [ಕಂಬಳ ಉಳಿಸಲು ಬದ್ಧ-ಪ್ರಮೋದ್ ಮಧ್ವರಾಜ್]

The Story of Uncrowned ‘Kambala King’

1985 ರಲ್ಲಿ ಹುಟ್ಟಿ 1988 ರಲ್ಲಿ ನಾಗರ ಪಂಚಮಿ ದಿನ ಬಪ್ಪನಾಡು ದುರ್ಗೆಯ ಆಶೀರ್ವಾದ ಪಡೆದು "ನಾಗರಾಜ" ಎಂಬ ಹೆಸರಿನೊಂದಿಗೆ ಪಯ್ಯೊಟ್ಟು ಮನೆದ. ಅಲ್ಲಿಂದ ತನ್ನ ನಾಲ್ಕನೇ ವಯಸ್ಸಿನಿಂದಲೇ ಕಂಬಳದ ಗದ್ದೆಯಲ್ಲಿ ಓಡಲು ಶುರುವಿಟ್ಟುಕೊಂಡ ಈ ನಾಗರಾಜ.

ಮುಂದಿನದೆಲ್ಲಾ ಇವತ್ತಿಗೆ ಇತಿಹಾಸ. ತಾನು ಆಡಿದ 500 ಕ್ಕೂ ಹೆಚ್ಚು ಕಂಬಳದಲ್ಲಿ 115 ಬಾರಿ ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದ ಈ ಕೋಣ ನಾಗರಾಜ. ನಾಗರಾಜನ ವೇಗವನ್ನು ಮೀರಿಸುವ ಮತ್ತೊಂದು ಕೋಣ ಕಂಬಳದಲ್ಲಿ ಇರಲಿಕ್ಕಿಲ್ಲ. ನಾಗರಾಜ ಕೆಸರು ಗದ್ದೆಯಲ್ಲಿ 100 ಮೀಟರ್ ದೂರವನ್ನು ಕ್ರಮಿಸಲು ತೆಗೆದುಕೊಳ್ಳುತ್ತಿದ್ದುದು ಬರೀ 12 ಸೆಕೆಂಡ್.

ನಾಗರಾಜನನ್ನು ಸಾಕಿದ್ದು ಪೊಯ್ಯೊಟ್ಟು ಸದಾಶಿವ ಸಾಲ್ಯಾನ್. ಇವರು ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಮೂಲ್ಕಿ ರಿಕ್ಷಾ ಯೂನಿಯನ್ ನ ಗೌರವಾಧ್ಯಕ್ಷ ಮತ್ತು ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದವರು. ಸಾಲ್ಯಾನ್ ಅವರು ಇದೇ ನಾಗರಾಜನಿಂದಾಗಿ 2013 ರಲ್ಲಿ ಕ್ರೀಡಾ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು. [ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?]

ಜಾನಪದ ಕ್ರೀಡೆ ಕಂಬಳದ ಕೋಣಗಳನ್ನು ವಿಶೇಷ ಮುತುವರ್ಜಿಯಲ್ಲಿ ಸಾಕಿ ಸಲಹಿದ್ದ ಸಾಲಿಯಾನ್ ಅವರ ಕೋಣಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಂಬಳಗಳಲ್ಲಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದವು. ಜನಾನುರಾಗಿಯೂ ಮತ್ತು ಕೃಷಿ ಕ್ಷೇತ್ರದಲ್ಲೂ ತಮ್ಮದೇ ಆದ ಸಾಧನೆ ಮಾಡಿದ್ದ ಸಾಲ್ಯಾನ್, ಜಿಲ್ಲೆಯಲ್ಲಿ ಕಂಬಳ ಕ್ರೀಡೆಯ ಸಂಘಟನೆಯಲ್ಲಿ ವಿಶೇಷ ಪಾತ್ರ ವಹಿಸಿದವರು.

The Story of Uncrowned ‘Kambala King’

ಕಂಬಳದ ರಾಜ
ತನ್ನ ಬದುಕಿನುದ್ದಕ್ಕೂ 'ನಾಗರಾಜ' ಕಂಬಳದಲ್ಲಿ ರಾಜನಾಗಿ ಮೆರೆದಾಡಿದ್ದ. ಇದೇ ಕಾರಣಕ್ಕಾಗಿ ನಾಗರಾಜನ ಚಿತ್ರವನ್ನು ಭಾರತ ಸರ್ಕಾರದ ಅಂಚೆ ಇಲಾಖೆ 5 ಮತ್ತು 10 ರೂಪಾಯಿನ ಸ್ಟಾಂಪಿನಲ್ಲಿಯೂ ಬಳಸಿಕೊಂಡಿತ್ತು. ಅಷ್ಟೇ ಅಲ್ಲದೇ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಂಬಳ ಚಿತ್ರಣದ ಜಾಹೀರಾತಿನಲ್ಲಿಯೂ ಸಾಲ್ಯಾನ್ ಅವರ ನಾಗರಾಜ ಕೋಣದ ಫೋಟೋವನ್ನೇ ಬಳಸಿಕೊಳ್ಳಲಾಗುತ್ತಿದೆ.

ನಾಗರಾಜ ಬದುಕಿದ್ದು 24 ವರ್ಷ. ಇದರಲ್ಲಿ 20 ವರ್ಷ 500 ಕ್ಕೂ ಹೆಚ್ಚು ಕಂಬಳದ ಸ್ಪರ್ಧೆಗಳಲ್ಲಿ ಭಾಗವಹಿಸಿ 115ಕ್ಕೂ ಹೆಚ್ಚು ಪದಕಗಳನ್ನು ಪಡೆದ ಸಾಧನೆ ಈ ಕೋಣ ನಾಗರಾಜನದ್ದು. ಇವತ್ತು ನಾಗರಾಜ ಮತ್ತು ಆತನನ್ನು ಮಗನಂತೆ ಸಾಕಿದ ಪೊಯ್ಯೊಟ್ಟು ಸದಾಶಿವ ಸಾಲ್ಯಾನ್ ನಮ್ಮ ಮಧ್ಯೆ ಇಲ್ಲ. ಆದರೆ ಇವರಿಬ್ಬರ ನೆನಪು ಮಾತ್ರ ಕಂಬಳ ಪ್ರೇಮಿಗಳಲ್ಲಿ ಇಂದಿಗೂ ಅಮರವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Profile of uncrowned king of kambala "Kona Nagaraj" and his owner Sadashiva Salian Poyyottu.
Please Wait while comments are loading...