ಮಂಗಳೂರು : ಸಸಿಹಿತ್ಲು ಬೀಚ್‌ನಲ್ಲಿ ಮೇ 27ರಿಂದ ಸರ್ಫಿಂಗ್ ಸ್ಪರ್ಧೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 21 : ಕರಾವಳಿ ಕಡಲ ತೀರದ ಅಲೆಗಳ ನಡುವೆ ದೇಶ ವಿದೇಶದ ಸರ್ಫಿಂಗ್ ಸಾಹಸಿಗರು ಕೌಶಲ್ಯ ತೋರಿಸಲು ಸಿದ್ಧತೆ ಆರಂಭವಾಗಿದೆ. ಮೇ 27 ರಿಂದ 29ರ ವರೆಗೆ 'ಇಂಡಿಯನ್ ಓಪನ್ ಆಫ್ ಸರ್ಫಿಂಗ್' ಸ್ಪರ್ಧೆ ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ.

ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಷನ್ ಹಾಗೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಮಂತ್ರ ಸರ್ಫ್ ಕ್ಲಬ್, ಕೆನರಾ ಸರ್ಫಿಂಗ್ ಅಂಡ್ ವಾಟರ್ ಸ್ಫೋರ್ಟ್‌ ಪ್ರಮೋಷನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. [ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ : ದೇಶಪಾಂಡೆ]

surfing

ಮೇ 27 ರಿಂದ ಪ್ರತಿ ದಿನ ಬೆಳಗ್ಗೆ 7ರಿಂದ ಸಮುದ್ರದ ಅಲೆಗಳನ್ನು ಗಮನದಲ್ಲಿರಿಸಿ ಮಧ್ಯಾಹ್ನದ ವರೆಗೆ ಸ್ಪರ್ಧೆಗಳು ನಡೆಯಲಿದೆ. ಸಂಜೆ 4ರಿಂದ ಮತ್ತೆ ಸ್ಪರ್ಧೆ ಮುಂದುವರಿಯಲಿದೆ. ಸರ್ಫಿಂಗ್ ಫೆಸ್ಟಿವಲ್ ಜೊತೆಗೆ ಕೋಸ್ಟಲ್ ಫುಡ್ ಫೆಸ್ಟಿವಲ್ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]

ಕರಾವಳಿಯ ಬಹುತೇಕ ಬೀಚ್‌ಗಳು ಹಲವು ರೀತಿಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿವೆ. ಆದರೆ, ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಂದ ವಂಚಿತವಾಗಿತ್ತು. ಆದ್ದರಿಂದ ಈ ಬಾರಿ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯನ್ನು ಸಸಿಹಿತ್ಲುವಿನಲ್ಲಿ ಆಯೋಜನೆ ಮಾಡುವ ಮೂಲಕ ಆ ಭಾಗದ ಬೀಚ್ ಅಭಿವೃದ್ದಿಗೆ ವಿಶೇಷ ಗಮನ ನೀಡಲಾಗಿದೆ. [ವಾರಾಂತ್ಯಕ್ಕೆ ಕರ್ನಾಟಕ ಹಬ್ಬವೇ ಅತ್ಯುತ್ತಮ ಆಯ್ಕೆ..ಯಾಕಂದ್ರೆ?]

ಕಳೆದ 2 ವರ್ಷಗಳಿಂದ ಸರ್ಫಿಂಗ್ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಆಯೋಜಿಸುವ ಕುರಿತು ವಿವಿಧ ಸಭೆಗಳು, ಪೂರ್ವಭಾವಿ ತಯಾರಿ ನಡೆದರೂ ಕೊನೆಯ ಹಂತದಲ್ಲಿ ಅದು ರದ್ದುಗೊಳ್ಳುತ್ತಿತ್ತು. ಆರ್ಥಿಕವಾಗಿ ದುಬಾರಿ ಹಾಗೂ ಸಂಘಟನೆಯಲ್ಲಿ ಕೆಲವೊಂದು ವ್ಯತ್ಯಾಸಗಳು ಆದ ಕಾರಣ ಸರ್ಫಿಂಗ್ ಸ್ಪರ್ಧೆ ಮುಂದೂಡಿಕೆಯಾಗಿತ್ತು.

ಎರಡು ದಿನಗಳ ಹಿಂದೆ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು, ಪಿಲಿಕುಳದಲ್ಲಿ ಸರ್ಫಿಂಗ್ ಸ್ಪರ್ಧೆಯ ಲಾಂಛನ ಅನಾವರಣಗೊಳಿಸುವ ಮೂಲಕ ಸ್ಪರ್ಧೆ ನಡೆಯುವುದು ಖಚಿತ ಎಂದ ತಿಳಿಸಿದ್ದಾರೆ. ಈ ಸ್ಪರ್ಧೆಗೆ ಪ್ರವಾಸೋದ್ಯಮ ಇಲಾಖೆಯು 25 ಲಕ್ಷ ರೂ. ಅನುದಾನ ನೀಡುತ್ತಿದೆ.

ಸುನೀಲ್ ಶೆಟ್ಟಿ ಬರ್ತಾರೆ : ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿವೆ. 16ರ ವಯೋಮಿತಿಯ ಒಳಗಿನ ಮಕ್ಕಳು, 17 ರಿಂದ 22 ವಯೋಮಿತಿ, 22-28 ಹಾಗೂ 28 ರಿಂದ ಹೆಚ್ಚಿನ ವಯೋಮಿತಿಯವರಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಬೇರೆ ಬೇರೆ ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಒಟ್ಟು 6 ಲಕ್ಷ ರೂ.ನಗದು ಬಹುಮಾನವನ್ನು ನೀಡಲಾಗುತ್ತಿದೆ. ಪಂದ್ಯದ ತೀರ್ಪುಗಾರರಾಗಿ ಹಾಗೂ ಉಸ್ತುವಾರಿ ನೋಡಿಕೊಳ್ಳಲು ಇಂಡೋನೇಷ್ಯಾ ಆಸ್ಟ್ರೇಲಿಯಾ ಮತ್ತು ಯುಎಸ್ಎನಿಂದ ಅಧಿಕಾರಿಗಳು ಆಗಮಿಸಲಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸೇರಿದಂತೆ ಸುಮಾರು 200 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಫಿಂಗ್ ಸ್ಪೆಷಲಿಸ್ಟ್ ಜಾಂಟಿ ರೋಡ್ಸ್, ಚಿತ್ರನಟ ಸುನಿಲ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಮೂರು ದಿನಗಳ ಕಾಲ ನಡೆಯುವ ಸ್ಪರ್ಧೆ ನೋಡಲು ಆಗಮಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru all set for host Indian Open of Surfing Festival from May 27 to 29, 2016 at Sasihithlu beach. Surfing Federation of India organized three day event in association with Mulki based Mantra Surf Club and Kenara Surfing and Water Sports Promotion Council.
Please Wait while comments are loading...