ಬೀಗ ಹಾಕಬೇಕಿದ್ದ ಕನ್ನಡ ಶಾಲೆ ಉಳಿದು, ಬೆಳೆದ ಕಥೆ!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜೂನ್ 11 : ಕನ್ನಡ ಶಾಲೆ ಮುಚ್ಚಿ ಹೋಗುತ್ತಿದೆ ಎಂದಾಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಸರ್ಕಾರಿ ಶಾಲೆಗೆ ತಂದು ಸೇರಿಸಿದರು. ಶಾಲೆಯನ್ನು ಅಭಿವೃದ್ಧಿಪಡಿಸಿ ಮುಚ್ಚಿ ಹೋಗುತ್ತಿದ್ದ ಶಾಲೆಗೆ 200 ಮಕ್ಕಳನ್ನು ತಂದು ಸೇರಿಸಿ ಜನ ಮೆಚ್ಚುವ ಕಾರ್ಯ ಮಾಡಿದ ಸಾಧಕರು ಮಂಗಳೂರಿನಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ 30 ಮಕ್ಕಳಿದ್ದರು. ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ನಡೆದ ಆಂದೋಲನ ಬಳಿಕ ಶಾಲೆಯಲ್ಲೀಗ 218 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. [ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಬೇಡಿ]

ಕನ್ನಡ ಮಾಧ್ಯಮದ ಈ ಸರ್ಕಾರಿ ಶಾಲೆ ಮುಚ್ಚಿ ಹೋಗುವ ಹಂತಕ್ಕೆ ತಲುಪಿತ್ತು. ಶಾಲೆಗೆ ಭೇಟಿ ನೀಡಿದ್ದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ತಂಡ ಶಾಲೆಯನ್ನು ಹೇಗಾದರೂ ಮಾಡಿ ಉಳಿಸಬೇಕು ಎಂದು ತಿರ್ಮಾನಿಸಿತು.ಶಿಕ್ಷಣ ಇಲಾಖೆ ಜೊತೆ ಮಾತುಕತೆ ನಡೆಸಿ ಈ ಶಾಲೆಯನ್ನು ಕ್ಲಬ್‌ನ ವತಿಯಿಂದ ದತ್ತು ಪಡೆದು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲಾಯಿತು. [ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವ ಆತಂಕ ದೂರ]

school

ಮಕ್ಕಳನ್ನು ತಂದು ಸೇರಿಸಿದರು : ಮೊದಲ ಹಂತದಲ್ಲಿ ಕ್ಲಬ್‌ನ ಹೆಚ್ಚಿನ ಸದಸ್ಯರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸಿದರು. ಬಳಿಕ ಮನೆ-ಮನೆಗೆ ಭೇಟಿ ನೀಡಿ ಸರ್ಕಾರಿ ಶಾಲೆಯಲ್ಲೇ ನಿಮಗೆ ಬೇಕಾದಂತೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ನೀಡುವ ಭರವಸೆ ನೀಡಿದರು. [ಅಮೆರಿಕದಲ್ಲಿ ಕನ್ನಡ ಶಾಲೆಯ 4ನೇ ವಾರ್ಷಿಕೋತ್ಸವ]

ಕ್ಲಬ್‌ನ ವತಿಯಿಂದಲೇ 7 ಶಿಕ್ಷಕರನ್ನು ನೇಮಿಸಲಾಯಿತು. ಶಿಕ್ಷಣ ಇಲಾಖೆಯ ಅನುಮತಿ ಪಡೆದು ಎಲ್‌ಕೆಜಿ, ಯುಕೆಜಿ ಹಾಗೂ 8 ತರಗತಿ ಆರಂಭಿಸಲಾಯಿತು. ಶಾಲೆಗೆ ಸೇರುವ ಎಲ್ಲ ವಿದ್ಯಾರ್ಥಿಗಳಿಗೆ ಬರೆಯಲು ಪುಸ್ತಕಗಳು, ಸಮವಸ್ತ್ರ, ಊಟ, ಶಾಲಾ ಬಸ್ಸು, ದಾಖಲೆ. ಅರ್ಜಿ ಶುಲ್ಕ ಎಲ್ಲವನ್ನು ಕ್ಲಬ್‌ನ ವತಿಯಿಂದ ಪ್ರಕಾಶ್ ಅಂಚನ್ ತುಂಬಿದರು.

1 ಕೋಟಿ ವೆಚ್ಚದಲ್ಲಿ ಕಟ್ಟಡ : ಬೀಳುವಂತಿದ್ದ ಶಾಲೆಯ ಕಟ್ಟಡಕ್ಕೂ ಬದಲಿ ವ್ಯವಸ್ಥೆ ಮಾಡಲಾಯಿತು. ಕ್ಲಬ್‌ನ ಹಾಗೂ ದಾನಿಗಳ ಸಹಕಾರದಿಂದ 1 ಕೋಟಿ ವೆಚ್ಚದಲ್ಲಿ 13 ಕೊಠಡಿಗಳ ಸುಸಜ್ಜಿತ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಮುಂದಿನ ವರ್ಷ ಈ ಕಟ್ಟಡ ಪೂರ್ಣಗೊಳ್ಳಲಿದೆ.

'ಶಾಲೆ ಮುಚ್ಚುತ್ತದೆ ಎಂದಾಗ ಮೊದಲು ಕಾರಿಂಜ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿದ್ದ ನನ್ನ ಇಬ್ಬರು ಮಕ್ಕಳನ್ನು ಇಲ್ಲಿಗೆ ತಂದು ಸೇರಿಸಿದೆ. ಶಾಲೆಗೆ ಮಾಡಿದ ಹಣದ ಖರ್ಚಿನ ಲೆಕ್ಕ ಇಟ್ಟಿಲ್ಲ. ಒಳ್ಳೆಯ ವಿಚಾರಕ್ಕೆ ಖರ್ಚು ಮಾಡಿದ ಲೆಕ್ಕ ಇಡಬಾರದು. ಕ್ಲಬ್‌ನ ಸದಸ್ಯರು ತಮ್ಮ ಜೊತೆ ಕೈ ಜೋಡಿಸಿದ್ದಾರೆ' ಎನ್ನುತ್ತಾರೆ ಪ್ರಕಾಶ್ ಅಂಚನ್.

'ನಾನು ಕಲಿತದ್ದು 7 ನೇ ಕ್ಲಾಸ್' : 'ನನಗೆ ಕಲಿಯಲು ಅವಕಾಶ ಸಿಗಲಿಲ್ಲ. ಇಲ್ಲಿನ ಬಡ ಮಕ್ಕಳಿಗೆ ಆಧಾರ ಆಗಿರೋದು ಈ ಶಾಲೆ, ಇದು ಮುಚ್ಚಿದರೆ ದುಬಾರಿ ಫೀಸ್ ನೀಡಿ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗೆ ಹೋಗುವುದಿಲ್ಲ. ಈ ಕಾರಣಕ್ಕೆ ಶಾಲೆಯನ್ನು ಖಾಸಗಿ ಶಾಲೆಗಳಂತೆ ಅಭಿವೃದ್ಧಿ ಮಾಡಲಾಗಿದೆ' ಎನ್ನುತಾರೆ ಅಂಚನ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada medium school in Bantwal, Dakshina Kannada just escaped being shut down, thanks to the Sri Durga Friends Club, which developed school. Now 218 students studying in school.
Please Wait while comments are loading...