ಬಗೆಹರಿಯಿತು ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಪುತ್ತೂರು, ಮಾರ್ಚ್ 26 : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ವಿವಾದ ಬಗೆಹರಿದಿದೆ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು, 'ಅಪರ ಜಿಲ್ಲಾಧಿಕಾರಿ ಕುಮಾರ್ ಅವರ ಮಾರ್ಗದರ್ಶನದಲ್ಲೇ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ' ಎಂದು ಸ್ಪಷ್ಟನೆ ನೀಡಿದ್ದಾರೆ.

'ಭಕ್ತರು ಹಾಗೂ ಸಾರ್ವಜನಿಕರು ಗೊಂದಲಕ್ಕೆ ಆಸ್ಪದ ನೀಡದೆ ಜಾತ್ರಾ ಮಹೋತ್ಸವವನ್ನು ಶಾಂತಿಯುತವಾಗಿ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ಕೋರುತ್ತೇನೆ. ಜಿಲ್ಲೆಯ ಶಾಂತಿ ಮತ್ತು ಸಾಮರಸ್ಯ ಕಾಪಾಡಬೇಕಾಗಿ ಜಿಲ್ಲಾ ದಂಡಾಧಿಕಾರಿಯಾಗಿ ಮನವಿ ಮಾಡುತ್ತೇನೆ' ಎಂದು ಹೇಳಿದ್ದಾರೆ. [ಜಾತ್ರೋತ್ಸವಕ್ಕೂ ಮುನ್ನ ಪುತ್ತೂರಿನಲ್ಲಿ ಎದ್ದ ಚಪ್ಪರ ವಿವಾದ]

puttur

'ಜಾತ್ರೆ ಆಮಂತ್ರಣ ಪತ್ರಿಕೆ ವಿವಾದದ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಾಗಿದೆ. ಅರ್ಜಿದಾರ ನವೀನ್ ಕುಲಾಲ್ ಪರ ವಕೀಲರು ಹೆಚ್ಚಿನ ಸಮಯ ಕೋರಿದ್ದರು. ಗುರುವಾರವೂ ವಕೀಲರು ಪರಿಷ್ಕೃತ ಅರ್ಜಿ ಸಲ್ಲಿಸಿ ಮತ್ತಷ್ಟು ಸಮಯಾವಕಾಶ ಕೋರಿದ್ದಾರೆ. ಪ್ರಕರಣ ಇತ್ಯರ್ಥಗೊಳ್ಳದೆ ಮುಂದೂಡಲ್ಪಟ್ಟಿದೆ. ಆದ್ದರಿಂದ, ಗೊಂದಲ ನಿವಾರಿಸಲು ಸ್ಪಷ್ಟನೆ ನೀಡಲಾಗಿದೆ' ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. [ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದ ಎಲ್ಲಿಗೆ ಬಂತು?]

ಏ. 10 ರಿಂದ 20ರವರೆಗೆ ಯಶಸ್ವಿಯಾಗಿ ಜಾತ್ರೆ ನಡೆಸಿಕೊಂಡು ಹೋಗಲು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತಾಧಿಕಾರಿಗಳು ದೇವಾಲಯದಲ್ಲಿ ಹಾಜರಿದ್ದು, ಎಲ್ಲಾ ಕಾರ್ಯಗಳನ್ನು ನಡೆಸಲಿದ್ದಾರೆ.[ಮುಸ್ಲಿಂ ಡಿಸಿ ಹೆಸರು ಮತ್ತು ಪುತ್ತೂರು ದೇವಾಲಯದ ವಿವಾದ]

ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ಧಾರ್ಮಿಕ ವಿಧಿವಿಧಾನದಲ್ಲಿ ಜಾತ್ರಾ ಮಹೋತ್ಸವ ನಡೆಸಲು ಸೂಚಿಸಲಾಗಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಮಾರ್ಗದರ್ಶಕರಾಗಿ ಜಾತ್ರಾ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

'ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಾಲಂ(7) ರನ್ವಯ ಉಪ ಆಯುಕ್ತರಾಗಿ ಅಪರ ಜಿಲ್ಲಾಧಿಕಾರಿಯವರನ್ನು ತಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ನೇಮಿಸಿದ್ದು, ಅವರೇ ದೇವಸ್ಥಾನದಲ್ಲಿ ಖುದ್ದು ಹಾಜರಿದ್ದು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ' ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಜೊತೆ ಮಾತುಕತೆ : ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಆರ್‌ಎಸ್‌ಎಸ್ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ತಮಗೆ ಈ ವಿವಾದ ಮುಂದುವರಿಸುವ ಆಸಕ್ತಿ ಇಲ್ಲ. ಆದರೂ ರಾಜ್ಯದ ಕೆಲವೆಡೆ ಮುಸ್ಲಿಂ ಜಿಲ್ಲಾಧಿಕಾರಿಗಳು ಇದ್ದಾಗ ನಡೆದ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕಾಗಿ ಹಾಕಿರುವ ನಿದರ್ಶನಗಳಿವೆ ಎಂದು ಅವರು ವಿವರಣೆ ನೀಡಿದ್ದಾರೆ.

ಏನಿದು ವಿವಾದ? : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು ಹಾಕಲಾಗಿತ್ತು. ಹಿಂದೂಯೇತರರಾದ ಜಿಲ್ಲಾಧಿಕಾರಿಯನ್ನು ಜಾತ್ರೆಗೆ ಕರೆಯುವುದು ಸರಿಯಲ್ಲ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ವಿವಾದಕ್ಕೆ ಕಾರಣವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dakshina Kannada Deputy Commissioner A.B.Ibrahim has issued certain clarifications in connection with objections raised and controversy surrounding the move to print invitations for the annual car festival of Lord Mahalingeshwara temple at Puttur.
Please Wait while comments are loading...