ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ವಳಚ್ಚಿಲ್ ಜಲಪಾತದ ಸೊಬಗು ನೋಡಿದ್ದೀರಾ?

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಆಗಸ್ಟ್ 09 : ನೀರಿನಲ್ಲಿ ಆಟವಾಡುವ ಖುಷಿಯೇ ಬೇರೆ. ಅಂತಹ ಆನಂದವನ್ನು ಪಡೆಯಲು ಜನರು ಸಾವಿರಾರು ರೂ. ಹಣಕೊಟ್ಟು ಆಮ್ಯೂಸ್ಮೆಂಟ್ ಪಾರ್ಕ್‌ಗಳಿಗೆ ಹೋಗುತ್ತಾರೆ. ಇನ್ನೂ ಕೆಲವರು ಕೆರೆ, ಚಿಕ್ಕಪುಟ್ಟ ಜಲಪಾತಗಳಲ್ಲಿ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಸಂತಸ ಪಡುತ್ತಾರೆ.

ಜಲಪಾತ ಎಂದಾಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ಕಣ್ಣ ಮುಂದೆ ಬರುವುದು ಕೊಡಗಿನ ಅಬ್ಬಿ ಫಾಲ್ಸ್, ಶಿವಮೊಗ್ಗದ ಜೋಗ್ ಫಾಲ್ಸ್. ಆದರೆ, ಮಂಗಳೂರು ನಗರದ ಹೃದಯ ಭಾಗದಿಂದ 10 ಕಿ.ಮೀ ದೂರದಲ್ಲಿರುವ ಫರಂಗಿ ಪೇಟೆ ಸಮೀಪದ ವಳಚ್ಚಿಲ್ ಎಂಬಲ್ಲಿರುವ ಜಲಪಾತದ ಕುರಿತು ಜಿಲ್ಲೆಯ ಹೆಚ್ಚಿನ ಜನರಿಗೆ ತಿಳಿದಿಲ್ಲ.[ಮಡಿಕೇರಿಯ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್]

Valachil falls

ಬೇಸಿಗೆಯಲ್ಲಿ ನೀರಿಲ್ಲದೇ ಬೋಳುಬೋಳಾಗಿ ಕಾಣಿಸುವ ವಳಚ್ಚಿಲ್ ಜಲಪಾತ, ಮಳೆಗಾಲದಲ್ಲಿ ಜೀವ ತಳೆದು ಮೈದುಂಬಿ ಹರಿಯುತ್ತದೆ. ಹಸಿರು ಪರಿಸರದ ನಡುವೆ ಕಂಗೊಳಿಸುವ ಜಲಪಾತ ಎತ್ತರದ ಪರ್ವತದಿಂದ ಧುಮುಕಿ ಬಂಡೆಕಲ್ಲುಗಳ ನಡುವೆ ತನ್ನ ಝುಳು ಝುಳು ಶಬ್ದದಿಂದ ನರ್ತಿಸುತ್ತಾ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.[ಪೊಸಡಿಗುಂಪೆ ಬೆಟ್ಟಕ್ಕೆ ಬಂದು ಸೂರ್ಯಾಸ್ತ ನೋಡಿ]

ವಳಚ್ಚಿಲ್ ಬಳಿ ಎರಡು ಜಲಪಾತಗಳಿವೆ. ಒಂದು ವಳಚ್ಚಿಲ್ ಸಮೀಪದ ಪದವು ಗುಡ್ಡದ ಮಧ್ಯ ಪ್ರದೇಶದಲ್ಲಿರುವ ವಳಚ್ಚಿಲ್ ಫಾಲ್ಸ್, ಮತ್ತೊಂದು ಗುಡ್ಡದ ತಪ್ಪಲಿನಲ್ಲಿದೆ. ಗುಡ್ಡದ ತುತ್ತ ತುದಿಯಲ್ಲಿರುವ ಸಣ್ಣ ಸಣ್ಣ ನೀರಿನ ಝರಿಗಳು ಈ ಜಲಪಾತವನ್ನು ಸೃಷ್ಟಿಸಿವೆ. ಇದನ್ನು ಅಡ್ಯಾರ್ ಫಾಲ್ಸ್ ಹಾಗೂ ಖಾನ ಫಾಲ್ಸ್ ಎಂದೂ ಕರೆಯುತ್ತಾರೆ.[ಅರಶಿನಗುಂಡಿ ಜಲಪಾತಕ್ಕೆ ಚಾರಣ ಹೋಗೋಣ ಬನ್ನಿ]

ಸುಮಾರು 40 ಅಡಿ ಎತ್ತರದಿಂದ ಧುಮುಕುವ ನೀರಿನ ಸೊಬಗನ್ನು ನೋಡಲು ಎರಡು ಕಣ್ಣು ಸಾಲದು. ಹೆಚ್ಚಿನ ಜಲಪಾತಗಳು ರಭಸದಿಂದ ಹರಿದು, ಪ್ರಪಾತ ಸೇರುವ ಕೆಲವೊಮ್ಮೆ ಪ್ರವಾಸಿಗರ ಪಾಲಿಗೆ ಅವು ಅಪಾಯಕಾರಿಯಾಗಿರುತ್ತದೆ. ಆದರೆ, ವಳಚ್ಚಿಲ್ ಜಲಪಾತದಲ್ಲಿ ನೀರು ರಭಸವಾಗಿ ಹರಿಯದೆ, ಹಂಸ ನಡಿಗೆಯ ಚೆಲುವೆಯಂತೆ ನಾಜೂಕಾಗಿ, ಶಾಂತವಾಗಿ ಹರಿಯುತ್ತದೆ.

Valachil falls2

ಮೆರ್ಲಪದವು ಸುತ್ತಮುತ್ತಲಿನ ಪ್ರದೇಶದ ಗುಡ್ಡೆಗಳ ಒಸರು ನೀರು ಇಲ್ಲಿ ಜಲಪಾತವಾಗಿ ಧುಮುಕಿ ಅಡ್ಯಾರ್ ನಲ್ಲಿರುವ ನೇತ್ರಾವತಿ ನದಿಗೆ ಸೇರುತ್ತದೆ. ಇಲ್ಲಿನ ಕೆಲವು ಬಂಡೆಕಲ್ಲುಗಳಲ್ಲಿ ಪಾಚಿ ಹಿಡಿಯುವುದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸಬೇಕು.

ಜೂನ್‌ನಲ್ಲಿ ಮಳೆಯೊಂದಿಗೆ ತೆರೆದುಕೊಳ್ಳುವ ಈ ಜಲಪಾತ ನವೆಂಬರ್‌ವರೆಗೂ ವೈಭವದಿಂದ ಧುಮ್ಮಿಕ್ಕುತ್ತದೆ. ಪ್ರವಾಸಿ ಪ್ರಿಯರು ಒಮ್ಮೆ ಜಪಪಾತದತ್ತ ಹೆಜ್ಜೆ ಹಾಕಿ, ಜಲಧಾರೆ ನೋಡಿ ಸಂತಸ ಪಡಬಹುದು.

English summary
Plan a one day outing to Valachil falls also know as Adyar falls, Mangaluru. Valachil falls 10 km away from Mangaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X