ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳ: ವೀರೇಂದ್ರ ಹೆಗ್ಗಡೆಗೆ ಪದ್ಮ ವಿಭೂಷಣ, ಹಬ್ಬದ ಸಂಭ್ರಮ

By Mahesh
|
Google Oneindia Kannada News

ಬೆಳ್ತಂಗಡಿ, ಜ.26: : ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮುಕುಟಕ್ಕೆ ಮತ್ತೊಂದು ಗರಿ. ಭಾರತ ಸರಕಾರದಿಂದ ನೀಡಲಾಗುವ ಪದ್ಮವಿಭೂಷಣ ಗೌರವ ಸಂದಿದೆ. ಧರ್ಮಸ್ಥಳದಲ್ಲಿ ಭಾನುವಾರದಿಂದ ಎಲ್ಲೆಲ್ಲೂ ಹಬ್ಬದ ವಾತಾವರಣ. ಸಂಭ್ರಮ, ಸಡಗರ.

ಡಾ. ಹೆಗ್ಗಡೆಯವರಿಗೆ ಪದ್ಮವಿಭೂಷಣ ಪ್ರಶಸ್ತಿಯ ಸಂತಸದ ಸುದ್ದಿ ಭಾನುವಾರ ಪ್ರಕಟವಾಗುತ್ತಿದ್ದಂತೆ ದೇವಸ್ಥಾನದ ಸಿಬ್ಬಂದಿ ಹಾಗೂ ಊರ ನಾಗರಿಕರು ಹೆಗ್ಗಡೆಯವರಿಗೆ ಭಕ್ತಿಪೂರ್ವಕ ಅಭಿನಂದನೆ ಸಲ್ಲಿಸಿದರು.

1968ರ ಅ.24ರಂದು ತನ್ನ 21ನೇ ವರ್ಷದಲ್ಲಿ ಧರ್ಮಸ್ಥಳದ 21ನೇ ಧರ್ಮಾಕಾರಿಯಾಗಿ ಕ್ಷೇತ್ರದ ಸಂಪ್ರದಾಯದಂತೆ ಪಟ್ಟಾಭಿಷಿಕ್ತರಾದ ಹೆಗ್ಗಡೆಯವರು ಆರೋಗ್ಯ, ಶಿಕ್ಷಣ, ಧರ್ಮ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹತ್ತು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.

ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಸಂಸ್ಥೆ, ಉಚಿತ ಸಾಮೂಹಿಕ ವಿವಾಹ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಹಾಗೂ ಆಯುರ್ವೇದ ಪದ್ಧತಿಗೆ ವಿಶೇಷ ಪ್ರೋತ್ಸಾಹ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನ ಹೆಗ್ಗಡೆಯವರ ಕಲ್ಪನಾ ಲಹರಿಯಲ್ಲಿ ಮೂಡಿಬಂದ ವಿನೂತನ ಯೋಜನೆಗಳು. [ವೀರೇಂದ್ರ ಹೆಗ್ಗಡೆ, ಬಚ್ಚನ್‌, ಅಡ್ವಾಣಿಗೆ ಪದ್ಮ ವಿಭೂಷಣ]

ಧಾರವಾಡದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದಂತ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಮೈಸೂರಿನ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಹಾಗೂ ಗೌರವಕ್ಕೆ ಪಾತ್ರವಾಗಿದೆ. ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗ ಪ್ರದರ್ಶನ ನೀಡಿದ ಕಾರ್ಯಕ್ರಮ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.

Padma Vibhushan to Veerendra Heggade Dharmasthala Rejoices Over Award

ಹೆಗ್ಗಡೆಯವರಿಗೆ ದೊರೆತ ಇತರ ಪ್ರಶಸ್ತಿಗಳು:
*2000ರಲ್ಲಿ ಭಾರತ ಸರಕಾರದಿಂದ ಪದ್ಮಭೂಷಣ ಪ್ರಶಸ್ತಿ ಪ್ರದಾನ.
*1993ರಲ್ಲಿ ಭಾರತದ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮ ಅವರಿಂದ ರಾಜರ್ಷಿ ಪ್ರಶಸ್ತಿ.
*1985ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
*1994ರಲ್ಲಿ ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
* 1994ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಆಲ್ ಇಂಡಿಯಾ ಯೂನಿಟ್ ಕಾನರೆನ್ಸ್‌ನಲ್ಲಿ ಇಂದಿರಾಗಾಂ ಪ್ರಿಯದರ್ಶಿನಿ ಪ್ರಶಸ್ತಿ.
*2005ರಲ್ಲಿ ಬ್ರಿಟನ್‌ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್, ಗ್ಲಾಸ್ಗೋ ಅವರಿಂದ ಪ್ರಶಸ್ತಿ.
*2005ರ ಜು.13ರಂದು ಎಫ್.ಆರ್.ಸಿ.ಪಿ.ಯಸ್. (ಫೆಲೋಶಿಪ್ ಆಫ್ ದಿ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್) ಪ್ರಶಸ್ತಿ.
*2012ರಲ್ಲಿ ಆಶ್ಡೆನ್ ಯು.ಕೆ. ಗೋಲ್ಡ್ ಅವಾರ್ಡ್

ಹೆಗ್ಗಡೆ ಮನದಾಳದ ಮಾತು: ಪದ್ಮವಿಭೂಷಣ ಪ್ರಶಸ್ತಿ ಬಂತೆಂದು ಭಾನುವಾರ ಮಧ್ಯಾಹ್ನ ನನಗೆ ಸಂದೇಶ ಬಂದಿದೆ. ಕ್ಷೇತ್ರದ ಅಭಿಮಾನಿಗಳು, ಊರಿನವರು ಮತ್ತು ಸಿಬ್ಬಂದಿ ಸಂತಸದಿಂದ ಬಂದು ಅಭಿನಂದಿಸುತ್ತಿದ್ದಾರೆ. ಕಳೆದ 14 ವರ್ಷ ಹಿಂದೆ 1999-2000ದಲ್ಲಿ ಪದ್ಮಭೂಷಣ ಪ್ರಶಸ್ತಿ ಬಂದಿತ್ತು. ಕಳೆದ ಹತ್ತು ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ವಿಸ್ತರಿಸಿದ್ದೇವೆ. ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಇದು ಸರಕಾರದ ಗಮನ ಸೆಳೆದಿದೆ ಎಂದು ನನ್ನ ನಂಬಿಕೆ. ಯಾವತ್ತೂ ಪ್ರಶಸ್ತಿ ಬಂದಾಗ ನಾನು ಸಂತೋಷ ಪಟ್ಟಿದ್ದೇನೆ. ಆದರೆ ಹೆಮ್ಮೆ ಪಟ್ಟುಕೊಂಡಿಲ್ಲ.

ಸಂತೋಷ ಯಾಕೆಂದರೆ ನಮ್ಮ ಸುಮಾರು 20 ಸಾವಿರ ಮಂದಿ ಸಿಬ್ಬಂದಿ ನಾನಾ ಸಂಸ್ಥೆಗಳಲ್ಲಿ ಸಂಘಟನೆಯ ಮೂಲಕ ದುಡಿಮೆ ಮಾಡಿ ಶ್ರೀ ಮಂಜುನಾಥ ಸ್ವಾಮಿಯ ಸೇವೆಯನ್ನು ಮಾಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಕೀರ್ತಿಯನ್ನ ತಂದಿದ್ದಾರೆ. ಹಾಗಾಗಿ ಅವರೆಲ್ಲರೂ ಈ ಪದ್ಮವಿಭೂಷಣ ಪ್ರಶಸ್ತಿಗೆ ಪಾಲುದಾರರು, ಸಹಭಾಗಿತ್ವ ಉಳ್ಳವರು ಎಂದು ಕರೆಯುತ್ತೇನೆ. ಈ ಪ್ರಶಸ್ತಿಯಿಂದ ತನ್ನ ಹೊಣೆಗಾರಿಕೆ ಹೆಚ್ಚಾಗಿದೆ. ಇನ್ನು ಅವಿಶ್ರಾಂತವಾಗಿ ದುಡಿಯಬೇಕೆಂಬ ಮಾರ್ಗದರ್ಶನ ಕೊಡಲೆಂದೇ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹಿಸಿದ್ದಾರೆ ಹಾಗೂ ಸರಕಾರ ತನ್ನ ಸೇವೆಯನ್ನು ಗುರುತಿಸಿದ್ದಾರೆ ಎಂದು ಹೆಗ್ಗಡೆಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
As soon as it was announced that Dharmasthala Dharmadhikari D Veerendra Heggade has been chosen for the Padma Vibhushan on Sunday evening, the temple town witnessed festive moments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X