ನೀರಿನ ಕೊರತೆ ನೀಗಿಸಲು ದಕ್ಷಿಣ ಕನ್ನಡದಲ್ಲಿ ಸಾವಿರ ಚೆಕ್ ಡ್ಯಾಂ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 8: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ರಾಜ್ಯ ಸರಕಾರ 'ಬರಪೀಡಿತ ತಾಲೂಕು' ಎಂದು ಘೋಷಿಸಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಏಪ್ರಿಲ್ ನಂತರ ನೀರಿನ ಅಭಾವ ಕಂಡು ಬರುತ್ತಿತ್ತು. ಆದರೆ ಈ ವರ್ಷ ಜನವರಿ ಆರಂಭದಲ್ಲೇ ಜಿಲ್ಲೆಯಲ್ಲಿ ನೀರಿನ ಅಭಾವವುಂಟಾಗಿದೆ.

ತೀವ್ರ ಜಲಕ್ಷಾಮದಿಂದ ಜಿಲ್ಲೆಯ ಜನರು ಪರಿತಪಿಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿನ ಕೊರತೆಯನ್ನು ನೀಗಿಸಲು ರಾಜ್ಯ ಸರಕಾರ ಹೊಸ ಯೋಜನೆ ರೂಪಿಸಿದೆ. ನರೇಗಾ ಮತ್ತು 'ಜಲಧರೆ' ಯೋಜನೆ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯ ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿವಿಧ ಗ್ರಾಮಗಳಲ್ಲಿ ಒಂದು ಸಾವಿರ ಚೆಕ್ ಡ್ಯಾಂ ನಿರ್ಮಿಸಲು ಮುಂದಾಗಿದೆ.[ಭೂಮಿ ಬರಿದು ಮಾಡಿದ ನಮಗೆ ಕೊನೆಗೆ ಉಳಿದಿದ್ದು ಭೀಕರ ಬಿಸಿಲು...]

One thousand checkdam will built in Dakshina Kannada

ಎಲ್ಲೆಲ್ಲಿ ಎಷ್ಟು ಡ್ಯಾಂ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಒಂದು ಸಾವಿರ ಚೆಕ್ ಡ್ಯಾಂ ನಿರ್ಮಿಸಲಾಗುವುದು. ಅದರಲ್ಲಿ ಬಂಟ್ವಾಳ ತಾಲೂಕಿನಲ್ಲಿ 290, ಬೆಳ್ತಂಗಡಿ ತಾಲೂಕಿನಲ್ಲಿ 240, ಮಂಗಳೂರಲ್ಲಿ 275, ಪುತ್ತೂರು ತಾಲೂಕಿನಲ್ಲಿ 205 ಹಾಗೂ ಸುಳ್ಯ ತಾಲೂಕಿನಲ್ಲಿ 140 ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುವುದು.

ಈ ಡ್ಯಾಂ ಮೂಲಕ 191 ಕೋಟಿ ಲೀಟರ್ ನೀರನ್ನು ಸಂಗ್ರಹಿಸಬಹುದು. ಒಂದೊಂದು ಚೆಕ್ ಡ್ಯಾಂ ನಿರ್ಮಾಣಕ್ಕೆ ಕನಿಷ್ಠ 2.32 ಲಕ್ಷ ರುಪಾಯಿಯಿಂದ 5 ಲಕ್ಷದ ತನಕ ಹಣ ಬೇಕಾಗುತ್ತದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸಿಇಒ ಎಂ.ಆರ್.ರವಿ.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]

ಸಚಿವ ರೈ ಹೇಳಿದ್ದೇನು?
ಈ ನೂತನ ಯೋಜನೆ ಕುರಿತು ನಮ್ಮ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ 2018ರ ಮಾರ್ಚ್ ವೊಳಗೆ ಸಾವಿರ ಚೆಕ್ ಡ್ಯಾಂ ನಿರ್ಮಿಸಲು ಸೂಕ್ತ ವ್ಯವಸ್ಥೆ ಮಾಡಲಿದೆ. ಈ ನೂತನ ಯೋಜನೆ ಮೂಲಕ ನೀರಿನ ಲಭ್ಯತೆ ಮತ್ತಷ್ಟು ಹೆಚ್ಚಳ ಮಾಡುವ ಗುರಿ ನಮ್ಮದು ಎಂದರು.[ಮಂಗಳೂರಲ್ಲಿ ಜಲಕ್ಷಾಮ: ಕುಡಿಯುವ ನೀರು ಪೂರೈಕೆಗೆ ವೇಳಾಪಟ್ಟಿ]

ಸಣ್ಣ - ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಜೊತೆಗೆ ಮಳೆ ನೀರು ಸಂಗ್ರಹ ಘಟಕಗಳ ನಿರ್ಮಾಣ, ಜಲಮರುಪೂರಣದಂತಹ ಪರ್ಯಾಯ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ ಈ ಕುರಿತು ಜನಜಾಗೃತಿ ಮೂಡಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಒಟ್ಟಿನಲ್ಲಿ ಈ ನೂತನ ಯೋಜನೆ ಜಿಲ್ಲೆಯ ಜನರಲ್ಲಿ ವಿಶ್ವಾಸ ಮೂಡಿಸಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government plan to built one thousand checkdam in Dakshina Kannada district taluks to solve water problem.
Please Wait while comments are loading...