ಅಡಿ ದೂರದಲ್ಲಿದೆ ಅಪಾಯ, ಬದುಕಿಗೆ ಇಲ್ಲ ಬೇರೆ ಉಪಾಯ!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

'ಆಸೆಯೇ ದುಃಖಕ್ಕೆ ಮೂಲ' ಎಂದು ಭಗವಾನ್ ಬುದ್ಧ ಸಹಸ್ರಾರು ವರ್ಷಗಳ ಹಿಂದೆ ಬುದ್ಧಿ ಹೇಳಿದ್ದರೂ ಮಾನವನ ಆಸೆಗಳಿಗೆ ಮಿತಿಯೇ ಇಲ್ಲ. ಹಲವರಿಗೆ ಬೇಕಾದಷ್ಟು ಆಸ್ತಿಅಂತಸ್ತುಗಳಿದ್ದರೂ ಇನ್ನೂ ಮತ್ತೂ ಮಗದಷ್ಟೂ ಬೇಕನ್ನಿಸುತ್ತಿರುತ್ತದೆ.

ಐಟಿ ದಾಳಿಯಲ್ಲೋ, ಎಸಿಬಿ ದಾಳಿಯಲ್ಲೋ ಸಿಗಾಕ್ಕಿಕೊಂಡಿರುವ ಖದೀಮರ ಜನ್ಮಜಾಲಾಡಿ ನೋಡಿ. ನಾಲ್ಕಾರು ಸೈಟು, ಏಳೆಂಟು ಬಂಗಲೆ, ಒಂದೆರಡು ತೋಟ, ಬಚ್ಚಿಟ್ಟಿರುವ ಲೆಕ್ಕಕ್ಕೆ ಸಿಗದಷ್ಟು ನಗದು, ಜೊತೆಗೆ ಹೆಂಡತಿಯೆಂಬ ಆಕಾರದ ಮೈಮೇಲೆ ಕೆಜಿಗಟ್ಟಲೆ ಬಂಗಾರ. ಆದರೂ ತೃಪ್ತಿಯಿಲ್ಲ!

ಕಷ್ಟಪಟ್ಟು ದುಡಿದು ದುಡ್ಡು ಮಾಡಿಕೊಂಡರೆ, ಏಳೇಳು ಜನ್ಮಕ್ಕಾಗುವಷ್ಟು ಆಸ್ತಿ ಮಾಡಿಕೊಂಡರೆ ಯಾರ ತಕರಾರೂ ಇರುವುದಿಲ್ಲ. ಎಷ್ಟು ಮಾಡಿಟ್ಟುಕೊಂಡರೂ ಮತ್ತಷ್ಟು ಬೇಕು. ಕಾರು, ಬಂಗ್ಲೆ, ಸೈಟು, ಕುಬೇರನನ್ನೂ ನಾಚಿಸುವಷ್ಟು ಬ್ಯಾಂಕ್ ಬ್ಯಾಲೆನ್ಸು, ಬೆಳ್ಳಿಬಂಗಾರ... 'ಮೆರೆ ಪಾಸ್ ಮಾ ಹೈ' ಅನ್ನುವವರು ಕಡಿಮೆಯೆ!

Nothing is greater than life and personal safety

ಇದು ಒಂದು ಬಗೆಯ ಲೈಫ್ ಸ್ಟೈಲ್ ಆದರೆ, ಮತ್ತೊಂದು ವರ್ಗವಿದೆ ನೋಡಿ... ಅವರು ಅಂದು ಮೈಮುರಿ ದುಡಿದರೆ ಮಾತ್ರ ತುತ್ತು ಬಾಯಿಗಿಳಿಯುತ್ತದೆ. ಇಲ್ಲದಿದ್ದರೆ, ಅರ್ಧಲೋಟ ನೀರೇ ಗತಿ. ಎಲ್ಲರ ಜೀವನವೂ ಒಂದೇ ರೀತಿಯಿರುವುದಿಲ್ಲವಲ್ಲ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಂತ ಏನಾದರೂ ಮಾಡುತ್ತಿರಲೇಬೇಕು ಮಂಕುತಿಮ್ಮ.

ಈರೀತಿ ದುಡಿಯುತ್ತಿದ್ದರೂ ಕೆಲ ವೃತ್ತಿಪರರಿಗೆ ಅಪಾಯ ಹೊಂಚಿ ಕುಳಿತಿರುತ್ತದೆ, ಸ್ವಲ್ಪ ಯಾಮಾರಿದರೂ ಕ್ಷಣಾರ್ಧದಲ್ಲಿ ಶಿವನಪಾದ ಸೇರುವುದು ಗ್ಯಾರಂಟಿ. ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಸ್ವಲ್ಪ ಗಮನಿಸಿ. ಮಂಗಳೂರಿನ ಬಲ್ಮಠ ಬಳಿ ಇರುವ ಇಂದ್ರಭವನದಲ್ಲಿ ವಿದ್ಯುತ್ ತಂತಿಗಳ ಬಳಿ ಕುಳಿತು ಬಣ್ಣ ಬಳಿಯುತ್ತಿದ್ದಾನೆ. ಕಟ್ಟಡಕ್ಕೆ ಅಂದ ಮಾಡುವವನ ಅಡಿಗಳ ಹಿಂದೆ ಅಪಾಯ ಕಾದಿದೆ.

Nothing is greater than life and personal safety

ಇವರಿಗೆ ವಿದ್ಯುತ್ ತಂತಿ ಸ್ಪರ್ಶಿಸಿದರೆ ಜೀವಕ್ಕೆ ಅಪಾಯ ತಪ್ಪಿದ್ದಲ್ಲ ಎಂಬ ಅರಿವಿದ್ದರೂ, ಐವತ್ತು ಅಡಿ ಮೇಲಿಂದ ಬಿದ್ದರೆ ಕುಟುಂಬಕ್ಕೆ ಗತಿಯಾರೆಂಬ ಚಿಂತೆ ಮನೆಮಾಡಿದ್ದರೂ ಬೇರೆ ದಾರಿಯೇ ಇಲ್ಲ. ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಮಕ್ಕಳ ಶಾಲೆಗೆ ಫೀಸು ಕಟ್ಟಲು ಸಾಧ್ಯ ಎಂಬ ಚಿಂತೆ ಆತನನ್ನು ಕಾಡುತ್ತಿರುತ್ತದೆ. ಅಪ್ಪ ಅಂದು ವಾಪಸ್ ಮನೆಗೆ ಬಂದರೆ ಅದೇ ಹಬ್ಬ.

ಇತ್ತೀಚೆಗೆ ಬಿಜೈ ಸಮೀಪದ ಉಜ್ಜೋಡಿಯಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದಾಗಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಮನೆಯ ಆಧಾರ ಸ್ಥಂಭವಾಗಿದ್ದವರೇ ಸಾವನ್ನಪ್ಪಿರುವಾಗ ಮಕ್ಕಳು ಅನಾಥರಾಗಿದ್ದಾರೆ. ಹಗ್ಗದ ಮೇಲೆ ಕುಳಿತು ಬಣ್ಣ ಬಳಿಯುವವನ ಸ್ಥಿತಿ ಬೇರೆ ಏನಿರುವುದಿಲ್ಲ.

ಹೀಗೆ ಕ್ಷಣಕ್ಷಣಕ್ಕೂ ಅಪಾಯದೊಂದಿಗೆ ಸರಸವಾಡುತ್ತ ಹಲವಾರು ಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ. ಕೇವಲ ಈತನೊಬ್ಬನ ವಿಚಾರ ಅಲ್ಲ. ಇವನ ಹಾಗೆಯೇ ಅನೇಕರು ಜೀವದ ಹಂಗು ತೊರೆದು ಕಾಯಕವೇ ಕೈಲಾಸ ಎಂಬಂತೆ ವೃತ್ತಿ ಮಗ್ನರಾಗಿರುತ್ತಾರೆ. ಈ ರೀತಿ ವೃತ್ತಿಪರರಾಗಿರುವುದು ತಪ್ಪಲ್ಲ, ಆದರೆ ಜೀವದ ಹಂಗು ತೊರೆದು ಕಾರ್ಯ ಮಗ್ನರಾಗುವುದು ಯಾವ ಮಟ್ಟಿಗೆ ಸರಿ ನೀವೇ ಹೇಳಿ?

ಜೀವನ ಅಂದರೆ ನಮಗಾಗಿ ಜನಿಸಿದವರ ನಿರೀಕ್ಷೆಯೊಂದೇ ಅಲ್ಲ, ನಮಗಾಗಿ ಜೀವಿಸುತ್ತಿರುವವರಿಗಾಗಿ ಜೀವಿಸುವುದು, ಅದರಲ್ಲೂ ಮುಖ್ಯವಾಗಿ ನಮಗಾಗಿಯೇ ಜೀವಿಸುವುದು. ಕಷ್ಟಗಳು ಶ್ರೀಮಂತನಿರಲಿ ಬಡವನಿರಲಿ ಜೀವನದ ಅವಿಭಾಜ್ಯ ಅಂಗ. ಆದರೆ ಜೀವಕ್ಕಿಂತ ಮಿಗಿಲು ಯಾವುದು ಇಲ್ಲ.

ಹೀಗಿರುವಾಗ ಬದುಕಿನ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಕಾರ್ಯ ನಿರ್ವಹಿಸುವುದು ಉತ್ತಮ. ಇಲ್ಲವಾದಲ್ಲಿ ಜೀವನಕ್ಕೆ ಅರ್ಥವೇ ಇರುವುದಿಲ್ಲ. ಎಲ್ಲರು ಮೊದಲಾಗಿ ಬದುಕಿನ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ನಿರ್ಲಕ್ಷ್ಯ ತೋರಿಸಬಾರದು. ಅಜ್ಞಾನವೇ ಅಪಘಾತಕ್ಕೆ ಕಾಣವಾಗುತ್ತದೆ.

ಆದ್ದರಿಂದ ಕಾರ್ಯಮಗ್ನರಾಗುವಾಗ ತಮ್ಮ ಭದ್ರತೆಯ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ನಮ್ಮ ಮುಖ್ಯ ಉದ್ದೇಶವೆಂದರೆ ಯಾರನ್ನು ವೃತ್ತಿ ಬಿಡಲು ಹೇಳುವುದಲ್ಲ. ವೃತ್ತಿ ಧರ್ಮ ಮಾಡುವುದು ಅಗತ್ಯ. ಆದರೆ ಜೀವದ ಬಗ್ಗೆ ಕಾಳಜಿ ಹೊಂದಿರುವುದು ಅತ್ಯಗತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Life is so undertain. We are not here to live for more than 100 years. Some people may not earn lakhs of rupees for their livelyhood, may not construct building, may not have fat bank balance, but their life is also so precious. Just think about their life.
Please Wait while comments are loading...