ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ನಗರಕ್ಕೆ ಮೂರು ದಿನದಿಂದ ನೀರು ಸರಬರಾಜಿಲ್ಲ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 3: ಪೈಪ್ ಲೈನ್ ದುರಸ್ತಿ ಕಾರಣಕ್ಕೆ ಮೂರು ದಿನದಿಂದ ಮಂಗಳೂರು ನಗರಕ್ಕೆ ನೀರು ಸರಬರಾಜು ಇಲ್ಲದಂತಾಗಿದೆ. ಈ ಮಧ್ಯೆ ನೀರಿನ ಅಭಾವದಿಂದ ಸಾರ್ವಜನಿಕರು ಸಂಕಷ್ಟಕ್ಕೆ ಈಡಾಗಿದ್ದು, ಖಾಸಗಿ ಟ್ಯಾಂಕರ್ ಗಳ ಮೊರೆ ಹೋಗುವಂತಾಗಿದೆ.

ಅಡ್ಯಾರು ಕಣ್ಣೂರು ಬಳಿ ಮಂಗಳವಾರ ತಡರಾತ್ರಿ ನೀರು ಸರಬರಾಜು ಮಾಡುವ ಪ್ರಮುಖ ಪೈಪ್ ಲೈನ್ ಒಡೆದಿತ್ತು. ಅದನ್ನು ದುರಸ್ತಿ ಮಾಡುವಷ್ಟರಲ್ಲಿ ಅಲ್ಲೇ ಕೇವಲ 20 ಅಡಿ ಅಂತರದಲ್ಲಿ ಮತ್ತೆ ಪೈಪ್‌ಲೈನ್ ವೆಲ್ಡಿಂಗ್ ಬಿಟ್ಟಿತು. ಆ ಕಾರಣಕ್ಕೆ ಸತತ ಮೂರು ದಿನಗಳಿಂದ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ.[ಮಂಗಳೂರು ವಿ.ವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ!]

water crisis

ಮತ್ತೆ ಒಡೆದ ಪೈಪ್‌ಲೈನ್: ಬುಧವಾರ ಮುಂಜಾನೆ ಸುಮಾರು ಒಂದು ಗಂಟೆ ವೇಳೆಗೆ ತುಂಬೆಯಿಂದ ಮಂಗಳೂರಿಗೆ ನೀರು ಸರಬರಾಜು ಮಾಡುವ ಪ್ರಮುಖ ಪೈಪ್‌ಲೈನ್ ನಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ಮುಂಜಾನೆ 3 ಗಂಟೆ ವೇಳೆಗೆ ತುಂಬೆಯಿಂದ ಸರಬರಾಜು ಆಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿ ಪಾಲಿಕೆ ಎಂಜಿನಿಯರಿಂಗ್ ವಿಭಾಗದಿಂದ ದುರಸ್ತಿ ಕಾರ್ಯ ಆರಂಭವಾಗಿತ್ತು.

ಗುರುವಾರ ರಾತ್ರಿ ವೇಳೆಗೆ ದುರಸ್ತಿ ಪೂರ್ಣಗೊಂಡು, ತುಂಬೆಯಿಂದ ಮತ್ತೆ ನೀರು ಸರಬರಾಜು ಆರಂಭಗೊಂಡಿತ್ತು. ಆದರೆ ಇನ್ನೇನು ನೀರು ಸರಬರಾಜು ಆಗುತ್ತದೆ ಎಂದು ಸಾರ್ವಜನಿಕರು ಹಾಗೂ ಪಾಲಿಕೆ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಅಷ್ಟರಲ್ಲಿ ಅದೇ ಪ್ರದೇಶದಲ್ಲಿ ಕೇವಲ 20 ಅಡಿ ಅಂತರದಲ್ಲಿ ಮತ್ತೆ ಪೈಪ್‌ನ ವೆಲ್ಡಿಂಗ್ ಬಿಟ್ಟು, ನೀರು ಸೋರಿಕೆ ಆರಂಭವಾಗಿದೆ.[ಬಾವಿ ನೀರೇನೋ ಆರಿತು, ಆದರೆ ಯಾಕೆ ಹಾಗಾಯಿತು?]

ಪೈಪ್‌ಲೈನ್ ಒಡೆದು ಹೋದ ಪ್ರದೇಶದ ಪೈಪ್ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ತುಂಬಿಸಲಾಗಿದ್ದು, ಜೆಸಿಬಿ ಮೂಲಕ ಪೈಪ್‌ಲೈನ್ ವರೆಗೆ ಮಣ್ಣು ತೆಗೆಯುವ ಕೆಲಸ ಭರದಿಂದ ನಡೆಯುತ್ತಿದೆ. ತಗ್ಗು ಪ್ರದೇಶವಾಗಿರುವುದರಿಂದ ಹೊಂಡದಲ್ಲಿ ತುಂಬಿದ ನೀರನ್ನು ಪಂಪ್ ಮೂಲಕ ಮೇಲಕ್ಕೆತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಪಾಲಿಕೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಲಿಂಗೇಗೌಡ, ಸಹಾಯಕ ಎಂಜಿನಿಯರ್ ನರೇಶ್ ಶೆಣೈ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಶನಿವಾರ ನಗರಕ್ಕೆ ನೀರು ಸರಬರಾಜು ಮಾಡಲು ಯಾವುದೇ ತೊಂದರೆಯಾಗದು ಎಂದು ಎಂಜಿನಿಯರ್ ತಿಳಿಸಿದ್ದಾರೆ.

ನೀರು ಸರಬರಾಜಿನಲ್ಲಿ ವ್ಯತ್ಯಯ: ಕಳೆದ ವರ್ಷ ಇದೇ ಸ್ಥಳದಲ್ಲಿ ಪೈಪ್‌ಲೈನ್ ಒಡೆದು, ವಾರಗಟ್ಟಲೆ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಪೈಪ್‌ಲೈನ್ ಮೇಲೆ ಮಣ್ಣು ಹಾಕಿ ಒತ್ತುವರಿ ಮಾಡಿದ್ದು, ಇದರ ಮೇಲೆ ವಾಹನಗಳು ಚಲಿಸಿ ಒತ್ತಡ ಬಿದ್ದ ಪರಿಣಾಮ ಪೈಪ್‌ಲೈನ್ ಒಡೆದು ಹೋಗಿತ್ತು.[ಬೆಂಗಳೂರಲ್ಲಿ ಉಳ್ಳಾಲದ ಯುವಕ ಸಂಶಯಾಸ್ಪದ ಸಾವು]

ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಒತ್ತುವರಿ ತೆರವಿಗೆ ಸೂಚಿಸಿದ್ದರು. ಇನ್ನೊಮ್ಮೆ ಪೈಪ್‌ಲೈನ್ ಒಡೆದರೆ ಪಾಲಿಕೆ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು.

English summary
There is no water supply to Mangaluru city from last 3 days. Near Adyaru Kannooru pipeline damaged, when it is repaired, another pipe near by got damaged. So, last 3 days no water supply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X