ಮಂಗಳೂರಲ್ಲಿ ಜಲಕ್ಷಾಮ: ಕುಡಿಯುವ ನೀರು ಪೂರೈಕೆಗೆ ವೇಳಾಪಟ್ಟಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 16: ಏಪ್ರಿಲಿಗೂ ಮೊದಲೇ ಮಂಗಳೂರಲ್ಲಿಯೂ ಜಲಕ್ಷಾಮ ಕಾಣಿಸಿಕೊಂಡಿದೆ. ಬಿಸಿಲ ಬೇಗೆಗೆ ತುಂಬೆ ಅಣೆಕಟ್ಟಿನಲ್ಲಿ ನೇತ್ರಾವತಿ ನದಿ ನೀರಿನ ಒಳಹರಿವು ಸ್ಥಗಿತಗೊಂಡಿದೆ. ಹೀಗಾಗಿ ಮಂಗಳೂರು ಮಹಾನಗರ ಪಾಲಿಕೆ ನೀರಿನ ಪೂರೈಕೆಯಲ್ಲಿ ಕಡಿತ ಮಾಡಲು ಮುಂದಾಗಿದೆ.

ಮಾರ್ಚ್ 20ರಿಂದ ಪ್ರತಿ ಒಂದೂವರೆ ದಿನಕ್ಕೊಮ್ಮೆ ನೀರು ಪೂರೈಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ. ಸದ್ಯ ತುಂಬೆ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರನ್ನು ಮೇ ಅಂತ್ಯದವರೆಗೆ ನಗರದ ಜನರಿಗೆ ಪೂರೈಕೆ ಮಾಡಬೇಕಾಗಿದೆ. ಇದರ ಸಲುವಾಗಿ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. [ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್‌ ಮೇಲೆ ದಾಳಿಗೆ ಯತ್ನ?]

ತುಂಬೆಯ ಎಎಂಆರ್‌ಡ್ಯಾಂನಲ್ಲಿ 6.25 ಮೀಟರ್ ನೀರು ಇದೆ. ಇದು 40 ದಿನಗಳಿಗೆ ಸಾಕಾಗಬಹುದು. ಅಲ್ಲದೆ ತುಂಬೆಯಲ್ಲಿ 4.15 ಮೀಟರ್‌ನಷ್ಟು ನೀರು ಸಂಗ್ರಹವಿದ್ದು 20 ದಿನಕ್ಕೆ ಸಾಕು. ಈಗಾಗಲೇ ಸುಬ್ರಹ್ಮಣ್ಯ, ಸುಳ್ಯ ಭಾಗಗಳಲ್ಲಿ ಮಳೆ ಬಿದ್ದಿದೆ. ಮಳೆ ಇನ್ನಷ್ಟು ಬಿದ್ದು ಮಾರ್ಚ್ 20ರ ಮೊದಲು ಹರಿವು ಹೆಚ್ಚಿದರೆ ಈ ಆದೇಶ ಹಿಂಪಡೆಯುವ ಸಾಧ್ಯತೆ ಇದೆ.

ಕಳೆದ ವರ್ಷ ನೀರು ಸ್ಥಗಿತ ಮಾಡುವಾಗ ತಡವಾಗಿತ್ತು. ಹೀಗಾಗಿ ಕೊನೆಯ ಕೆಲ ದಿನಗಳು ನಗರಕ್ಕೆ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಎದುರಾಗಿತ್ತು. ಹಾಗಾಗಿ ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ನೀರು ನಿಯಂತ್ರಣ ಮಾಡಲಾಗುತ್ತಿದೆ. ಸದ್ಯಕ್ಕೆ ನಿರ್ಮಾಣ ಹಂತದ ಕಟ್ಟಡಗಳಿಗೆ ನೀರು ಸ್ಥಗಿತಗೊಳಿಸಿಲ್ಲ. ಮುಂದೆ ಅಗತ್ಯವಿದ್ದರೆ ಏಪ್ರಿಲ್ ತಿಂಗಳಿಂದ ಅವರಿಗೂ ನೀರು ಸ್ಥಗಿತಗೊಳಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.

ಇನ್ನು ಎಸ್‌ಇಝಡ್ ಹಾಗೂ ಎಂಆರ್‌ಪಿಎಲ್‌ಗೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ ನೀರಿನ ಪೂರೈಕೆ ಕಡಿಮೆ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೂ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ.

ಮುಂದಿನ ನೀರು ಪೂರೈಕೆ ವೇಳಾಪಟ್ಟಿ
ಮಾ.20ರ ಸೋಮವಾರದಿಂದ ಬೆಳಗ್ಗೆ 6ರಿಂದ ಮಂಗಳವಾರ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮಂಗಳವಾರ ಸಂಜೆ 6ರಿಂದ ಗುರುವಾರ ಸಂಜೆ 6ರವರೆಗೆ ಎಲ್ಲಾ ಬಳಕೆದಾರರಿಗೆ ನೀರು ಪೂರೈಕೆಯಾಗಲಿದೆ.

ಗುರುವಾರ ಸಂಜೆ 6ರಿಂದ ಶನಿವಾರ ಬೆಳಗ್ಗೆ 6ರವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಶನಿವಾರ ಬೆಳಗ್ಗೆ 6ರಿಂದ ಸೋಮವಾರ ಬೆಳಗ್ಗೆ 6ರವರೆಗೆ ನೀರು ಪೂರೈಕೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru municipality corporation decided to stop the drinking water once for 1 and half days in a cycle, as water level getting lover in Tumbe vented dam.
Please Wait while comments are loading...