ವೇಷ ಕಟ್ಟಿ ಕುಣಿಯಲಿದ್ದಾರೆ ಮಂಗಳೂರು ಸುದ್ದಿಮನೆ ಶೂರರು

By: ಶಂಶೀರ್ ಬುಡೋಳಿ, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್ 17 : ಸುದ್ದಿಯ ಬೆನ್ನಟ್ಟಿ ಹೋಗುವ ವರದಿಗಾರರಿಗೆ ಹಾಗೂ ಸುದ್ದಿಮನೆಯಲ್ಲಿರುವ ಪತ್ರಕರ್ತರಿಗೆ ಸುದ್ದಿ ಬಿಟ್ಟರೆ ಅವರಿಗೆ ಮನರಂಜನೆ, ಸಂಭ್ರಮ ಯಾವುದು ಬೇಡ ಎಂಬ ಮಾತಿದೆ. ನೀವು ಎಂದಾದರೂ ಪತ್ರಕರ್ತರು ಯಕ್ಷಗಾನ ಮಾಡಿರುವುದನ್ನ ನೋಡಿದ್ದೀರಾ? ನೋಡಿಲ್ಲ ಅಂದರೆ ನೀವು ನಾಳೆ ತಪ್ಪದೇ ಮಂಗಳೂರಿಗೆ ಬನ್ನಿ.

ಹೌದು. ಮಂಗಳೂರಿನ ಪತ್ರಕರ್ತರು ವೇಷ ಕಟ್ಟಿ ಕುಣಿಯಲಿದ್ದಾರೆ. ಇದು ಮಂಗಳೂರಿನ ಪತ್ರಕರ್ತರ ಪ್ರೆಸ್‌ಕ್ಲಬ್ ಇತಿಹಾಸದಲ್ಲಿಯೇ ಮೊದಲ ಯಕ್ಷಗಾನ ಪ್ರದರ್ಶನ. ಡಿಸೆಂಬರ್ 18ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂ ಬಳಿಯ ಹಿಂದಿ ಪ್ರಚಾರ ಸಮಿತಿ ಎದುರು ಇರುವ ಲಾಲ್‌ಬಾಗ್ ಸ್ಕೌಟ್ಸ್ ಭವನದಲ್ಲಿ ಮಂಗಳೂರು ಪತ್ರಕರ್ತರು ಯಕ್ಷಗಾನ ಪ್ರದರ್ಶಿಸಲಿದ್ದಾರೆ.[ಡಿಸೆಂಬರ್ 23ರಿಂದ ಕರಾವಳಿ ಉತ್ಸವದ ಸಡಗರ]

ಪಾತ್ರಧಾರಿಗಳು ಯಾರು?

ರವಿ ಅಲೆವೂರಾಯ ಮಾರ್ಗದರ್ಶನದ ಈ 'ಮಹಿಷಮರ್ದಿನಿ' ಎಂಬ ಯಕ್ಷಗಾನವನ್ನ ಧೀರಜ್ ಕೊಟ್ಟಾರಿ ನಿರ್ದೇಶಿಸಿದ್ದಾರೆ. ಮಹಿಷಾಸುರನಾಗಿ ವಿಶ್ವವಾಣಿಯ ಕಿಶೋರ್ ಭಟ್ ಕೊಮ್ಮೆ, ಶ್ರೀದೇವಿ ಪಾತ್ರದಲ್ಲಿ ವಿಶ್ವವಾಣಿ ವಿಶೇಷ ವರದಿಗಾರ ಜಿತೇಂದ್ರ ಅಭಿನಯಿಸಲಿದ್ದಾರೆ. ಸುಪಾರ್ಶ್ವಕ ಪಾತ್ರದಲ್ಲಿ ಹೊಸದಿಗಂತ ಹಿರಿಯ ವರದಿಗಾರ ಸುರೇಶ್ ಡಿ. ಪಳ್ಳಿ, ಒಯ್ಯಾರದ ಮಾಲಿನಿಯಾಗಿ ಇಂಡಿಯನ್ ಎಕ್ಸ್ ಪ್ರೆಸ್ ಹಿರಿಯ ವರದಿಗಾರ ಗಣೇಶ್ ಮಾವಂಜಿ ಅಭಿನಯಿಸಲಿದ್ದಾರೆ.

Mangaluru journalists to perform Yakshagana

ಹಾಸ್ಯಗಾರ ದೂತನಾಗಿ ವಿಶ್ವವಾಣಿ ವರದಿಗಾರ ಅಜಿತ ಆರಾಡಿ, ದೇವೇಂದ್ರನ ಪಾತ್ರದಲ್ಲಿ ದಿಗ್ವಿಜಯ ಸುದ್ದಿವಾಹಿನಿಯ ದಿವಾಕರ ಪದ್ಮುಂಜ, ವರುಣನ ಪಾತ್ರದಲ್ಲಿ ಉದಯವಾಣಿಯ ಭರತ್‌ರಾಜ್ ಕಲ್ಲಡ್ಕ, ವಾಯು ಪಾತ್ರದಲ್ಲಿ ಐಸಿರಿ ವಾಹಿನಿಯ ಸಚಿನ್ ಶೆಟ್ಟಿ ನಟಿಸಲಿದ್ದಾರೆ.

ತಡ್ಪೆ‌ಮುಂಡಾಸಿನ ಶಂಖಾಸುರನಾಗಿ ವಿಜಯವಾಣಿ ಹಿರಿಯ ವರದಿಗಾರ ಹರೀಶ್ ಮೋಟುಕಾನ, ದುರ್ಗಾಸುರನಾಗಿ ದಿಗ್ವಿಜಯ ವಾಹಿನಿಯ ವರದಿಗಾರ ಕಿಶನ್ ಶೆಟ್ಟಿ ಹಾಗೂ ಬಿಡಲಾಸುರನಾಗಿ ದಿ ಹಿಂದು ವರದಿಗಾರ ರಾಘವ ಮತ್ತಿಹಳ್ಳಿ ಅಭಿನಯಿಸಲಿದ್ದಾರೆ.

ಅಲ್ಲದೇ ವಿಷ್ಣು ಮತ್ತು ಬ್ರಹ್ಮನ ಅಪರೂಪದ ಜೋಡಿಯಾಗಿ ಉದಯವಾಣಿ ವರದಿಗಾರ್ತಿಯರಾದ ಪ್ರಜ್ಞಾ ಮತ್ತು ಧನ್ಯಾ, ಈಶ್ವರನಾಗಿ ಕೋಸ್ಟಲ್ ಡೈಜೆಸ್ಟ್‌‌ನ ಸುರೇಶ್ ವಾಮಂಜೂರು ನಟಿಸಲಿದ್ದಾರೆ. ಮುರಾರಿಯವರ ಚೆಂಡೆ, ಗಣೇಶ್ ಭಟ್ ನೆಕ್ಕರಮೂಲೆಯವರ ಮದ್ದಲೆ ಇದೆ. ಹಿಮ್ಮೇಳ ಭಾಗವತರಾಗಿ ಭವ್ಯಶ್ರೀ ಮಂಡೆಕೋಲು ಇರಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Journalist of various newspapers, tv channels in Mangaluru are not just known for their journalism skills. They have hidden talent too. They will be performing yakshagana on 18th December at Mangala stadium. This is organized for the first time. Scribes, may you have wonderful day.
Please Wait while comments are loading...